ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಅವರು ನಿರ್ಮಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿರುವ ‘ಖಾಕಿ’ ತೆರೆಗೆ ಬರಲು ತಯಾರಾಗುತ್ತಿದೆ. ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಖಾಕಿ ಸೌಂಡು ಮಾಡುತ್ತಲೇ ಇದೆ. ಚಿತ್ರದ ಪೋಸ್ಟರು ಮೊದಲುಗೊಂಡು ಟೀಸರ್ ಹಾಗೂ ವಿಡಿಯೋ ಸಾಂಗ್ ಕೂಡಾ ಜನಮನ ಗೆದ್ದಿವೆ.
ಇದೇ ತಿಂಗಳ ೮ರಂದು ರಿಲೀಸಾಗುವ ಖಾಕಿ ಚಿತ್ರದ ಟ್ರೇಲರನ್ನು ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡಲಿದ್ದಾರೆ. ಚಿರಂಜೀವಿ ಸರ್ಜಾ ಅಭಿನಯದ ಈ ವರೆಗಿನ ಸಿನಿಮಾಗಳಿಗಿಂತಾ ಖಾಕಿ ತೀರಾ ಭಿನ್ನವಾಗಿ ಮೂಡಿಬಂದಿದೆ ಎನ್ನುವ ಮಾತುಗಳು ಚಿತ್ರರಂಗದಲ್ಲೆಲ್ಲಾ ಹರಿದಾಡುತ್ತಿದೆ. ಖಾಕಿ ಚಿತ್ರದ ಟ್ರೇಲರ್ ಕೂಡಾ ಅಷ್ಟೇ ಅದ್ಭುತವಾಗಿದೆ, ಇದನ್ನು ನೋಡಿದ ಯಾರಿಗೇ ಆದರೂ ಸಿನಿಮಾವನ್ನು ನೋಡಲೇಬೇಕು ಅಂತಾ ಅನ್ನಿಸದೇ ಇರಲಾರದು ಅನ್ನೋದು ಸ್ಟುಡಿಯೋ ರಿಪೋರ್ಟ್!
ತರುಣ್ ಶಿವಪ್ಪ ನಿರ್ಮಾಣದ ಚಿತ್ರಗಳೆಂದಮೇಲೆ ಇಂಥ ಅಭಿಪ್ರಾಯಗಳು ಕೇಳಿಬರಲೇಬೇಕು. ಈ ಹಿಂದೆ ತರುಣ್ ಟಾಕೀಸ್’ನಿಂದ ಹೊರಬಂದಿರುವ ಸಿನಿಮಾಗಳು ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿದ್ದವು. ತಮ್ಮ ನಿರ್ಮಾಣ ಸಿನಿಮಾಗಳಿಗೆ ಏನೆಂದರೆ ಏನೂ ಕೊರತೆಯಾಗದಂತೆ ನೋಡಿಕೊಳ್ಳುವ ತರುಣ್ ಇನ್ನೂ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸುತ್ತಿದ್ದು, ಈಗ ಖಾಕಿ ರಿಲೀಸಿಗೆ ರೆಡಿಯಾಗಿದೆ.
ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರಿತ್ವಿಕ್ ಸಂಗೀತ ನೀಡಿದ್ದಾರೆ. ಬಾಲಾ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಧನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯಾಗಿ ತಾನ್ಯ ಹೋಪ್ ನಟಿಸಿದ್ದಾರೆ. ದೇವ್ ಗಿಲ್, ಶಿವಮಣಿ, ಶಶಿ, ನವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
No Comment! Be the first one.