ಪೊಲೀಸು ಅನ್ನೋ ಪದ ಕಿವಿಗೆ ಬೀಳುತ್ತಿದ್ದಂತೇ ಕೆರಳುವ ಹೀರೋ. ಅದಕ್ಕೆ ಕಾರಣ ತೀರಾ ಸಣ್ಣ ವಯಸ್ಸಿಗೇ ಪೊಲೀಸರಿಂದಾದ ದ್ರೋಹ. ಇಂಥ ಹುಡುಗ ಏರಿಯಾವೊಂದರಲ್ಲಿ ಕೇಬಲ್ ಆಪರೇಟರ್ ಕೆಲಸ ಮಾಡಿಕೊಂಡಿರುತ್ತಾನೆ. ಸಮಾಜದ ವಕ್ರಗಳೆಲ್ಲಾ ಕಣ್ಣ ಮುಂದೆಯೇ ಘಟಿಸುತ್ತಿರುತ್ತದೆ.
“ನಿನ್ನ ಮನಸ್ಸಿಗೆ ಯಾವುದು ತಪ್ಪು ಅನಿಸುತ್ತದೋ ಅದನ್ನು ಮಾಡಬೇಡ. ಸರಿ ಅನಿಸಿದ್ದನ್ನು ಮಾತ್ರ ಮಾಡದೇ ಇರಬೇಡ” ಅಂತಾ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದ ಹಳೆಯ ಸಂದೇಶವೊಂದು ಮತ್ತೆ ಮತ್ತೆ ಮಾರ್ದನಿಸುತ್ತದೆ. ಆ ನಂತರವೂ ಸುಮ್ಮನೇ ಇದ್ದರೆ ಆತ ಹೀರೋ ಆಗಲು ತಾನೆ ಹೇಗೆ ಸಾಧ್ಯ? ಭೂ ಮಾಫಿಯಾದ ವಿರುದ್ಧ ತಿರುಗಿಬೀಳುತ್ತಾನೆ. ಆ ಮೂಲಕ ಶಾಸಕನ ಆದಿಯಾಗಿ ದುಷ್ಟರೆಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಪಡಬಾರದ ಕಷ್ಟ ಅನುಭವಿಸಿದರೂ ಜನಪರ ಕೂಗನ್ನು ಮಾತ್ರ ನಿಲ್ಲಿಸುವುದಿಲ್ಲ.
ಖಾಕಿಉ ಸಿನಿಮಾ ಮಾಮೂಲಿ ಕಮರ್ಷಿಯಲ್ ಫಾರ್ಮುಲಾ ಮಾದರಿಯಲ್ಲಿದೆ ಅನ್ನಿಸುತ್ತದೆ. ಆದರೆ, ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಂಟೆಂಟು ಅಷ್ಟು ಸುಲಭಕ್ಕೆ ಪ್ರೇಕ್ಷಕರಿಗೆ ದಾಟಿಸೋದು ಕಷ್ಟ ಅನ್ನೋದೂ ನಿಜ. ತನ್ನ ಸಮೂಹ, ಆಶಯಗಳನ್ನು ಉಳಿಸಿಕೊಳ್ಳಲು ಒಂದಿಡೀ ದುಷ್ಟಕೂಟವನ್ನೇ ಎದುರುಹಾಕಿಕೊಳ್ಳೋದು, ಅವರ ಹೂಡುವ ತಂತ್ರಕ್ಕೆ ಪ್ರತಿತಂತ್ರ, ಯುದ್ಧಕ್ಕೆ ನಿಲ್ಲು ಪೌರುಷಗಳೆಲ್ಲವನ್ನೂ ರೋಚಕವಾಗಿ ತೋರಿಸಿದ್ದಾರೆ. ಚಿರಂಜೀವಿ ಸರ್ಜಾ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತ ಭಿನ್ನವಾಗಿ ಕಾಣುವುದು ಮಾತ್ರವಲ್ಲ, ನಟನೆಯಲ್ಲೂ ಹೊಸತನ ತೋರಿದ್ದಾರೆ. ತಾನ್ಯಾ ಹೋಪ್ ಕೂಡಾ ಚಿರು ಜೊತೆ ಜಿದ್ದಿಗೆ ಬಿದ್ದಂತೆ ನಟಿಸಿದ್ದಾರೆ, ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ನಟನಾಗಿ ಬ್ಯುಸಿಯಾಗಿರುವ ಶಿವಮಣಿ ಅವರಿಗೆ ಈ ಸಿನಿಮಾದಿಂದ ಮತ್ತಷ್ಟು ಸಿನಿಮಾಗಳಲ್ಲಿ ಅವಕಾಶ ಸಿಗೋದು ಗ್ಯಾರೆಂಟಿ. ಆ ಮಟ್ಟಕ್ಕೆ ಭಯ ಹುಟ್ಟಿಸುವಂತೆ ನಟಿಸಿದ್ದಾರೆ.
ನವೀನ್ ರೆಡ್ಡಿಯವರಿಗೆ ತಳವರ್ಗದ ಸಂಕಟಗಳನ್ನು ಕಮರ್ಷಿಯಲ್ ಹಡಿತ ತಪ್ಪದಂತೆ ರೂಪಿಸುವ ವಿದ್ಯೆ ಸಿದ್ದಿಸಿದೆ. ಖಾಕಿ ಧರಿಸಿದರೆ ಮಾತ್ರ ಪೊಲೀಸ್ ಅಲ್ಲ ಸಮಾಜವನ್ನು ಕಾಯುವ ಯಾರೇ ಆದರೂ ಆತ ಪೊಲೀಸಿದ್ದಂತೆ ಅನ್ನೋದನ್ನು ಇಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಪರ್ಯಾಯ ಪೊಲೀಸ್ ವ್ಯವಸ್ಥೆ ಅನ್ನೋದು ಇವತ್ತಿನ ಪರಿಸ್ಥಿತಿಯಲ್ಲಿ ಕಾಲ್ಪನಿಕ ಅನ್ನಿಸಿದರೂ ನಿಜವೆನ್ನುವಂತೆ ರೂಪಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ಚಿತ್ರಕತೆ ಇನ್ನೊಂಚೂರು ಬಿಗಿಯಾಗಿದ್ದಿದ್ದರೆ ಸಿನಿಮಾವನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ಯಬಹುದಿತ್ತು. ಆದರೆ ಚಿತ್ರಕ್ಕೆ ಅಪಾರ ಬಂಡವಾಳ ಹೂಡಲಾಗಿದೆ ಅನ್ನೋದು ತೆರೆ ಮೇಲೆ ಗೊತ್ತಾಗುತ್ತಿದೆ. ತರುಣ್ ಶಿವಪ್ಪ ನಿರ್ಮಾಣದ ಈ ಸಿನಿಮಾ ಕಮರ್ಷಿಯಲ್ ಪ್ರೇಕ್ಷಕರಿಗೆ ಇಷ್ಟವಾಗುವುದು ಮಾತ್ರವಲ್ಲ ಫ್ಯಾಮಿಲಿ ಆಡಿಯನ್ಸ್’ಗೆ ಕೂಡಾ ಹತ್ತಿರವಾಗುವಂತಿದೆ. ಒಂದ್ಸಲ ನೋಡ್ಕಂಡ್ ಬಬನ್ನಿ!