ಸ್ಯಾಂಡಲ್ ವುಡ್ ಗೆ ಈಗೀಗ ಹೊಸ ಹೊಸ ಮುಖಗಳು ನವ ನವೀನ ಕಾನ್ಸೆಪ್ಟ್ ಗಳ ಜತೆ ಜತೆಗೆ ಎಂಟ್ರಿ ಕೊಡುತ್ತಿದ್ದಾರೆ. ಇಂತಹ ಸಿನಿಮಾಗಳಲ್ಲೂ ಹೊಸತನವನ್ನು ಹುಡುಕುವ ವರ್ಗವೂ ಸೃಷ್ಟಿಯಾಗಿರೋದರಿಂದ ಸಿನಿಮಾಗಳಿಗೇನು ಬರವಿಲ್ಲ.ಮನರಂಜನೆಗೂ ಏನು ಕಡಿಮೆಯೂ ಇಲ್ಲ. ಅಂತಹುದೇ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆ ಖನನ.

ಖನನ ಬಹುತೇಕ ಅಜಯ್ (ಆರ್ಯವರ್ಧನ್), ನಯನಾ (ಖರಿಷ್ಮಾ) ದಂಪತಿ ಮತ್ತು ನಯನಾಳ ಬಾಯ್ ಫ್ರೆಂಡ್ ಆಗಿರುವ ಡಾಕ್ಟರ್ (ಯುವ ಕಿಶೋರ್ ) ಈ ಮೂರು ಪಾತ್ರಗಳ ಸುತ್ತಲೇ ತಿರುಗುತ್ತದೆ. ಬಾಯ್ ಫ್ರೆಂಡ್ ನ ಸಲುವಾಗಿ ತನ್ನ ಪತಿಯನ್ನೇ ಕೊಲ್ಲುವುದಕ್ಕೂ ಹೇಸದ ನಯನಾ, ತನ್ನ ಗಂಡನನ್ನು ಕೊಂದು ಹಾಕುತ್ತಾಳೆ. ಅತಿಯಾಗಿ ಪ್ರೀತಿಸುವ ತನ್ನ ಗಂಡನನ್ನು ಯಾಕೆ ಕೊಂದಳು ಎನ್ನುವುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.
ರೊಮ್ಯಾಂಟಿಕ್‌ ದೃಶ್ಯದೊಂದಿಗೆ ಶುರುವಾಗುವ ಕಥೆಯಲ್ಲಿ ಪ್ರೀತಿ, ಅನೈತಿಕ ಸಂಬಂಧ, ಕೊಲೆ, ತನಿಖೆ ಹೀಗೆ ನಾನಾ ತಿರುವುಗಳು ಸಿಗುತ್ತವೆ. ಅದರೊಂದಿಗೆ ತಾಳ್ಮೆ ಕಳೆದುಕೊಳ್ಳುವಂತಹ ದೃಶ್ಯಗಳು ಅಲ್ಲಲ್ಲಿ ಇಣುಕುತ್ತಾ ಮೊದಲರ್ಧ ಮಂದಗತಿಯಲ್ಲಿ ಸಾಗುವ ಚಿತ್ರ, ದ್ವಿತಿಯಾರ್ಧ ಕೊಂಚ ವೇಗವನ್ನು ಪಡೆದುಕೊಳ್ಳುತ್ತದೆ. ಸಣ್ಣ ಸಣ್ಣ ತಪ್ಪುಗಳಿಗೆ ತಲೆ ಕೆಡಿಸಿಕೊಳ್ಳದೇ ಸಿನಿಮಾ ನೋಡುವುದಾದರೆ ಚಿತ್ರದಲ್ಲಿ ಹೊಸತನ, ಚುರುಕುತನವೆ. ಆ ಹೊಸತನಕ್ಕೆ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮೆರುಗು ನೀಡಿದೆ.

ಜೊತೆಗೆ ಒಂದೇ ಮನೆಯಲ್ಲೇ ಅರ್ಧ ಸಿನಿಮಾ ಮಾಡಿ ಗೆದ್ದಿರುವ ನಿರ್ದೇಶಕರ ಬಜೆಟ್ ಕ್ಯಾಲ್ಕುಲೇಷನ್ ಗೆ ಜೈ ಅನ್ನಲೇಬೇಕು. ಇಂತಹ ಕಥೆಗಳಿಗೆ ಬೇಕಾಗುವಂತಹ ಮನೆಯ ಲೊಕೇಶನನ್ನು ಬುದ್ದಿವಂತಿಕೆಯಿಂದ ಹುಡುಕಿ ರಾಧಾ ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಮನೆಯೂ ಖನನದಲ್ಲೊಂದು ಪಾತ್ರ ನಿರ್ವಹಿಸಿದೆ ಎಂದರೂ ತಪ್ಪಿಲ್ಲ. ಸಿನಿಮಾವನ್ನು ಸಿನಿಮಾವಾಗಿ ನೋಡದೇ ಲಾಜಿಕ್ ಹುಡುಕಲು ಹೋದರೆ, ಕೊಲೆಯಾದ ಗಂಡನನ್ನು ಮಣ್ಣಿನೊಳಗೆ ಹೂತು ಹಾಕಿ ಸಂಜೆ ಕಳೆದರೂ ಅವನು ಆ ಗೋರಿಯಿಂದ ಹೇಗೆ ಮೇಲೆದ್ದು ಬರುತ್ತಾನೆ ಎನ್ನುವುದಕ್ಕೆ ಕಾರಣವನ್ನು ಊಹಿಸಲು ಸಾಧ್ಯವಿಲ್ಲ. ಆದರೂ ದ್ವಿತಿಯಾರ್ಧದಲ್ಲಿ ಸಿಗುವ ಕೆಲವೊಂದು ಟ್ವಿಸ್ಟ್ ಗಳು ಸಿನಿಮಾಗೆ ಸಿಗಬಹುದಾದ ಸ್ಟ್ರೆಂಥ್ ಎನ್ನಬಹುದು.

ಆರ್ಯವರ್ಧನ್ ಮುಂದೊಬ್ಬ ಭರವಸೆಯ ನಾಯಕನಾಗುವ ಎಲ್ಲ ಲಕ್ಷಣಗಳಂತೂ ಖನನದಲ್ಲಿ ಗೋಚರಿಸಿರುವುದನ್ನು ತಳ್ಳಿಹಾಕುವಂತಿಲ್ಲ. ಇನ್ನು ಅಸ್ಸಾಂ ಹುಡುಗಿ ಕರಿಷ್ಮಾ ಮತ್ತು ಯುವ ಕಿಶೋರ್ ನಟನೆಯಲ್ಲಿ ಮತ್ತಷ್ಟು ಮಾಗಬೇಕಿತ್ತು ಎನ್ನಿಸುತ್ತದೆ. ಪೊಲೀಸ್ ಅಧಿಕಾರಿಯಾಗಿ ಅವಿನಾಶ್, ಡಾಕ್ಟರ್ ಆಗಿ ಬ್ಯಾಂಕ್ ಜನಾರ್ಧನ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರಕಥೆಯಲ್ಲಿ ಚೂರು ಗಟ್ಟಿತನ, ದೃಶ್ಯ ಕಟ್ಟುವಲ್ಲಿ ಜಾಣ್ಮೆ ಮತ್ತು ತಾಂತ್ರಿಕವಾಗಿ ಇನ್ನಷ್ಟು ಕೆಲಸಗಳನ್ನು ನಿರ್ದೇಶಕ ರಾಧಾ ಮಾಡಬೇಕಿತ್ತು. ಆಗ ಪಾತ್ರಗಳಿಗೆ ಮತ್ತಷ್ಟು ಚೈತನ್ಯ ಇರುತ್ತಿತ್ತು. ಖನನ ಹೊಸಬರ ಸಿನಿಮಾ. ತಮ್ಮ ಇತಿಮಿತಿಗಳಲ್ಲೇ ತಮ್ಮೊಳಗಿನ ಕನಸುಗಳನ್ನು ಹೇಳಲು ಹೊರಟಿರುವ ಚಿತ್ರತಂಡದಿಂದ ಸ್ಯಾಂಡಲ್ ವುಡ್ ನ ಬತ್ತಳಿಕೆಗೆ ಮತ್ತಷ್ಟು ಅಚ್ಚುಕಟ್ಟಾದ ಸಿನಿಮಾಗಳು ಬರುವುದರಲ್ಲಿ ಸಂಶಯವಿಲ್ಲ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮತ್ತೆ ನಗ್ನಳಾದ ಆದಾ ಶರ್ಮ!

Previous article

ರಾಕಿಂಗ್ ಸ್ಟಾರ್ ಹೊಸ ಲುಕ್ಕು!

Next article

You may also like

Comments

Leave a reply

Your email address will not be published. Required fields are marked *