ಎಲ್ಲರೂ ಅಚ್ಚರಿಗೊಳ್ಳುವ ರೇಂಜಿಗೆ ಸಣ್ಣಗಾಗಿರುವ ಖುಷ್ಬೂ ತಮ್ಮ ಮೈಮಾಟದಿಂದ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ರಮ್ಯಕೃಷ್ಣ ಥರ ಖುಷ್ಬೂ ಕೂಡಾ ಸಿನಿಮಾರಂಗದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸುವ ಎಲ್ಲ ಸೂಚನೆಗಳೂ ಕಾಣುತ್ತಿವೆ.
1980ರ ಸುಮಾರಿಗೆ ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು, ನಂತರ ನಾಯಕಿಯಾಗಿ ಭಾರತದ ಬಹುತೇಕ ಎಲ್ಲ ಭಾಷೆಗಳ ಚಿತ್ರಗಳಲ್ಲಿ ನಟಿಸಿದವಳು ಖುಷ್ಬೂ. ಕನ್ನಡದಲ್ಲಿ ರಣಧೀರ, ಅಂಜದ ಗಂಡು, ಯುಗ ಪುರುಷ ಸಿನಿಮಾಗಳಲ್ಲಿ ಕ್ರೇಜ಼ಿಸ್ಟಾರ್ ಜೊತೆ ನಟಿಸಿ ಮೋಡಿ ಮಾಡಿದ್ದವಳು. ಈವರೆಗೆ ಖುಷ್ಬೂ ನಟಿಸಿದ ಕನ್ನಡ ಸಿನಿಮಾಗಳ ಸಂಖ್ಯೆಯೇ ಇಪ್ಪತ್ತಿರಬಹುದು. ಇನ್ನು ತೆಲುಗು, ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ಬಹುತೇಕ ಎಲ್ಲ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾಳೆ. ಒಂದು ಕಾಲದಲ್ಲಿ ತಮಿಳುನಾಡಿನಲ್ಲಿ ಖುಷ್ಬೂ ಅಂದರೆ ಅಲ್ಲಿ ಜನ ಯಾವ ಮಟ್ಟಿಗೆ ಹುಚೆದ್ದಿದ್ದರೆಂದರೆ ಈಕೆಯ ಹೆಸರಿನಲ್ಲಿ ದೇವಾಲಯವನ್ನೇ ಕಟ್ಟಿದ್ದರು. ಮುಸ್ಲಿಂ ಹೆಣ್ಣುಮಗಳನ್ನು ದಕ್ಷಿಣ ಭಾರತದವರು ಈ ಮಟ್ಟಿಗೆ ಮೆರೆಸಿದ್ದು ನಿಜಕ್ಕೂ ಪವಾಡ. ಸಿನಿಮಾಗೆ ಯಾವ ಜಾತಿ, ಧರ್ಮ, ಭಾಷೆಗಳ ಬೇಲಿ ಇಲ್ಲ ಅನ್ನೋದಕ್ಕಿದು ಸ್ಪಷ್ಟ ಉದಾಹರಣೆ ಕೂಡಾ ಹೌದು!
ತಮಿಳಿನ ಖ್ಯಾತ ನಿರ್ದೇಶಕ ಸುಂದರ್ ಸಿ ರನ್ನು ಮದುವೆಯಾದ ನಂತರ ಧಾರಾವಾಹಿ ಕ್ಷೇತ್ರಕ್ಕೂ ಕಾಲಿಟ್ಟು ಗೆದ್ದಳು. ರಾಜಕೀಯಕ್ಕೂ ಕಾಲಿಟ್ಟಳು. ಎಲ್ಲ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಬೆಳೆಯುತ್ತಿದ್ದ ಖುಷ್ಬೂ ದೇಹ ಕೂಡಾ ವಿಪರೀತ ಬೆಳೆದುಕೊಂಡಿತ್ತು. ಒಂದು ಕಾಲದಲ್ಲಿ ಸೂಪರ್ ಸ್ಟಾರ್ಗಳ ಜೊತೆ ಬಳುಕುತ್ತಿದ್ದ ಖುಷ್ಬೂ ಕ್ರಮೇಣ ದಢೂತಿ ಆಂಟಿಯಾಗಿಬಿಟ್ಟಳು. ಈ ಕೊರೋನಾ ಲಾಕ್ ಡೌನು ಖುಷ್ಬೂವಿನ ದೇಹತೂಕವನ್ನೂ ಡೌನ್ ಮಾಡಿಸಿದೆ. ಯೋಗ, ವ್ಯಾಯಾಮ ಮತ್ತು ಮಿತವಾದ ಆಹಾರದ ಡಯೆಟ್ ಪಾಲಿಸಿ ಖುಷ್ಬೂ ಸಣ್ಣಗಾಗಿದ್ದಾರಂತೆ.
ಎಲ್ಲರೂ ಅಚ್ಚರಿಗೊಳ್ಳುವ ರೇಂಜಿಗೆ ಸಣ್ಣಗಾಗಿರುವ ಖುಷ್ಬೂ ತಮ್ಮ ಮೈಮಾಟದಿಂದ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ರಮ್ಯಕೃಷ್ಣ ಥರ ಖುಷ್ಬೂ ಕೂಡಾ ಸಿನಿಮಾರಂಗದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸುವ ಎಲ್ಲ ಸೂಚನೆಗಳೂ ಕಾಣುತ್ತಿವೆ. ಇಷ್ಟರಲ್ಲೇ ಆ ಬಗ್ಗೆ ಸುದ್ದಿ ಹೊರಬೀಳಲಿದೆ…