ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ನಡೆಯುತ್ತಿದೆ ಆನ್ ಲೈನ್ ಕ್ರೈಮ್!

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅರೆಸ್ಟ್ ಆಗಿ ಒಂದು ತಿಂಗಳು ಕಳೆದಿದೆ. ದರ್ಶನ್ ಅವರ ನಿಜವಾದ ಅಭಿಮಾನಿಗಳು ತಮ್ಮ ಆರಾಧ್ಯ ನಟ ಮತ್ತು ಅವರ ಗ್ಯಾಂಗ್ ಮಾಡಿದ ಕೃತ್ಯವನ್ನು ಕಂಡು ಮರುಕ ಪಟ್ಟಿದ್ದಾರೆ. ʻಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದ್ದ ಒಬ್ಬ ನಟ ಹೀಗೆ ದೃಷ್ಕೃತ್ಯದ ಪಾಲುದಾರನಾಗಿ ಜೈಲು ಸೇರಿದರಲ್ಲಾʼ ಅಂಥಾ ಕೊರಗಿದ್ದಾರೆ. ಆದರೆ ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಕೆಲವು ಪರೋಡಿಗಳು ಮಾಡಬಾರದ ಕೆಲಸಗಳನ್ನೆಲ್ಲಾ ಮಾಡುತ್ತಿದ್ದಾರೆ. ದರ್ಶನ್ ಮಾಡಿರುವ ಕೆಲಸವನ್ನು ಸಮರ್ಥಿಸಿಕೊಂಡು, ಇನ್ನಿತರೆ ನಟರ ಮತ್ತು ಅವರ ಕುಟುಂಬದವರ ಬಗ್ಗೆ ಅವಹೇಳನಕಾರಿ ಪೋಸ್ಟ್ಗಳನ್ನು ಆನ್ಲೈನಲ್ಲಿ ಹರಿಯಬಿಡುತ್ತಿದ್ದಾರೆ.

ಫೇಕ್ ಐಡಿಗಳ ಮೇಲೆ ಪೊಲೀಸರ ಕಣ್ಣು!

ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಸಾಕಷ್ಟು ಫೇಕ್ ಐಡಿಗಳು ಕ್ರಿಯೇಟ್ ಆಗಿವೆ. ಇದನ್ನು ಸ್ವತಃ ದರ್ಶನ್ ಅಭಿಮಾನಿಗಳೇ ಮಾಡುತ್ತಿದ್ದಾರಾ ಅಥವಾ ಅವರ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ನಡೆಯುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ನಕಲಿ ಸರ್ದಾರರ ಬುಡಕ್ಕೆ ಬಿಸಿನೀರು ಕಾಯಿಸಲು ಪೊಲೀಸ್ ಇಲಾಖೆ ಸಿದ್ದವಾಗುತ್ತಿದೆ ಎನ್ನಲಾಗುತ್ತಿದೆ. ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಆನ್ ಲೈನ್ ಭಯೋತ್ಪಾದನೆ ಮಾಡಲು ಆರಂಭಿಸಿರುವ ಸಮಾಜಘಾತುಕರು ಬಹುಮುಖ್ಯವಾಗಿ ಕಿಚ್ಚ ಸುದೀಪ್ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಜೊತೆಗೆ ಡಾಲಿ ಧನಂಜಯ, ಧೃವಾ ಸರ್ಜಾ ಅವರ ಬಗ್ಗೆ ಕೂಡಾ ತೀರಾ ಕೀಳು ದರ್ಜೆಯ ಕಮೆಂಟು, ಪೋಸ್ಟುಗಳು ಹಾಕುತ್ತಿದ್ದಾರೆ. ಇವತ್ತು ಸೋಷಿಯಲ್ ಮೀಡಿಯಾದಲ್ಲಿ ನಖಲಿ ಖಾತೆಗಳನ್ನು ಸೃಷ್ಟಿಸಿ ಯಾರ ಬಗ್ಗೆ ಏನು ಬೇಕಾದರೂ ಮಾತಾಡಬಹುದು ಅನ್ನೋದು ಕೇವಲ ಮೂರ್ಖರ ನಂಬಿಕೆ. ಕೊಲೆ ಕೇಸಲ್ಲಿ ದರ್ಶನ್ ಥರದ ಸ್ಟಾರ್ ನಟ ಭಾಗಿಯಾಗಿರೋದನ್ನೇ ಇಂಚಿಂಚೂ ಕಲೆ ಹಾಕಿದ ಪೊಲೀಸ್ ಇಲಾಖೆಗೆ ಪುಟಗೋಸಿ ಫೇಕ್ ಐಡಿ ಕ್ರಿಯೇಟ್ ಮಾಡಿ ಹಲ್ಕಾ ಕೆಲಸ ಮಾಡುತ್ತಿರುವವರನ್ನು ಹುಡುಕಿ ಹೆಡೆಮುರಿ ಕಟ್ಟೋದು ಕಷ್ಟದ ಕೆಲಸವಲ್ಲ.

ಕಿಚ್ಚ ಸುದೀಪ್ ಅವರ ಮೇಲೆ ಫೇಕ್ ಪಟಿಂಗರು ಯದ್ವಾತದ್ವಾ ಪೋಸ್ಟ್ ಹಾಕಿ ಮೆರೆಯುತ್ತಿದ್ದಾರೆ. ಮೂಲಗಳ ಪ್ರಕಾರ ಯಾರೆಲ್ಲಾ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಅನಾಚಾರದ ಕೆಲಸ ಮಾಡುತ್ತಿದ್ದಾರೋ, ಕೆಟ್ಟಾಕೊಳಕು ಕಮೆಂಟುಗಳನ್ನು ಮಾಡುತ್ತಿದ್ದಾರೋ ಅಂಥವರ ಐಡಿಗಳನ್ನು ಪಟ್ಟಿ ಮಾಡಿ ಸ್ವತಃ ಕಿಚ್ಚ ಸುದೀಪ್ ಅವರ ತಂಡದಿಂದಲೇ ಅಫಿಷಿಯಲ್ ಆಗಿ ದೂರು ನೀಡಲಾಗಿದೆಯಂತೆ.

ಐಪಿ ಅಡ್ರಸ್ಗಳನ್ನು ಬದಲಿಸಿ ಅಕೌಂಟುಗಳನ್ನು ಕ್ರಿಯೇಟ್ ಮಾಡಿ ತಪ್ಪು ಸಂದೇಶಗಳನ್ನು ರವಾನಿಸುತ್ತಿರುವವರು ಜಗತ್ತಿನ ಯಾವ ಮೂಲೆಯಲ್ಲಿ ಕುಂತಿದ್ದರೂ ಬಿಡದೆ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ. ಸಿಕ್ಕಿಕೊಂಡಮೇಲೆ ದಮ್ಮಯ್ಯಾ ಅನ್ನುವ ಬದಲು ಈಗಲೇ ಫೇಕ್ ಐಡಿಗಳನ್ನು ಡಿಲೀಟು ಮಾಡಿದರೆ ಒಳ್ಳೇದು. ಇಲ್ಲದಿದ್ದಲ್ಲಿ ಮಾಡಿದ ಕೆಲಸಕ್ಕೆ ತಮ್ಮ ಮನೆ ಮಂದಿಯವರ ಮರ್ಯಾದೆಯನ್ನೂ ಹರಾಜು ಹಾಕಿಸಿಕೊಳ್ಳಬೇಕು.

‌ಈ ದೇಶದಲ್ಲಿ ಕಾನೂನಿಗಿಂತಾ ದೊಡ್ಡವರು ಯಾರೂ ಇಲ್ಲ. ತಮ್ಮ ಪ್ರತಿಭೆ ಮಾತ್ರದಿಂದಲೇ ಅಭಿಮಾನಿಗಳನ್ನು ಪಡೆದಿರುವ ಕಲಾವಿದರ ಹೆಸರಿಗೆ ಮಸಿ ಬಳಿಯುವ ವ್ಯರ್ಥ ಪ್ರಯತ್ನ ಮಾಡುತ್ತಿರುವವರು ಖಂಡಿತಾ ಅದರ ಪ್ರತಿಫಲವನ್ನು ಉಣ್ಣಲೇಬೇಕಾಗುತ್ತದೆ.

 

Comments

Leave a Reply