ಇವರು ಈ ವರೆಗೆ ನಿರ್ದೇಶನ ಮಾಡಿರುವ ಮೂರೂ ಚಿತ್ರಗಳೂ ಮ್ಯೂಸಿಕಲ್ ಹಿಟ್ ಲಿಸ್ಟಿಗೆ ಸೇರಿಕೊಂಡಿವೆ. ಒಂದು ಚಿತ್ರದಿಂದ ಮತ್ತೊಂದಕ್ಕೆ ಭಿನ್ನವಾದ ಆಲೋಚನಾ ಕ್ರಮ, ನವಿರಾದ ಕಥಾ ಹಂದರದ ಮೂಲಕವೇ ನಿರ್ದೇಶಕರಾಗಿ ನೆಲೆ ಕಂಡುಕೊಂಕೊಂಡಿದ್ದ ಅವರೀಗ ಅಖಂಡ ಮೂರು ವರ್ಷಗಳ ನಂತರ ಮತ್ತೆ ಬಂದಿದ್ದಾರೆ. ಹೀಗೊಂದು ತಣ್ಣಗಿನ ಅಬ್ಬರದ ಮೂಲಕ, ಚೆಂದದ ಹಾಡುಗಳ ಹಿಮ್ಮೇಳದೊಂದಿಗೆ ಯಾರಿಗೆ ಯಾರುಂಟು ಚಿತ್ರದ ಮೂಲಕ ಮರಳಿರುವವರು ನಿರ್ದೇಶಕ ಕಿರಣ್ ಗೋವಿ!

ಪಯಣ ಕಿರಣ್ ಗೋವಿ ನಿರ್ದೇಶನದ ಮೊದಲ ಚಿತ್ರ. ಗೆಲುವು ಕಂಡಿದ್ದ ಈ ಚಿತ್ರದ ನವಿರಾದ ಹಾಡುಗಳು ಈವತ್ತಿಗೂ ಕನ್ನಡಿಗರ ಮನದಲ್ಲಿದೆ. ಆ ನಂತರ ಸಂಚಾರಿ, ಪಾರು ವೈಫ್ ಆಫ್ ದೇವದಾಸ್ ಚಿತ್ರಗಳ ಮೂಲಕ ಗೆಲುವಿನ ಪರ್ವವನ್ನು ಹಾಗೆಯೇ ಕಾಪಾಡಿಕೊಂಡಿದ್ದ ಗೋವಿ ಅದೇಕೋ ಮೂರು ವರ್ಷಗಳ ಕಾಲ ಸುದೀರ್ಘ ವಿರಾಮ ತೆಗೆದುಕೊಂಡಿದ್ದರು. ಆದರದು ಅವರ ಪಾಲಿಗೆ ವಿರಾಮವಲ್ಲ. ಬದಲಾಗಿ ಕಥೆಯೊಂದು ಊಟೆಯೊಡೆದು ಅದು ಚಿತ್ರ ರೂಪ ಧರಿಸಿದ ಪರ್ವ ಕಾಲ. ಅದರ ಫಲವಾಗಿಯೇ ಯಾರಿಗೆ ಯಾರುಂಟು ಚಿತ್ರ ಸಿದ್ಧಗೊಂಡಿದೆ.

ಈ ಚಿತ್ರದ ಮೂಲಕ ಇದುವರೆಗೂ ಮಾಸ್ ಪಾತ್ರಗಳಲ್ಲಿ ಮಿಂಚಿದ್ದ ಒರಟ ಪ್ರಶಾಂತ್ ಅವರನ್ನು ಭಿನ್ನವಾದ ಪಾತ್ರವಾಗಿಸಿರೋದು ಕಿರಣ್ ಗೋವಿ ಕನಸುಗಾರಿಕೆ. ಇದೊಂದು ಪಕ್ಕಾ ಫ್ಯಾಮಿಲಿ ಬೇಸಿನ ಕಥನ. ಓರ್ವ ಇನೋಸೆಂಟ್ ಹುಡುಗನ ಸುತ್ತ ಮೂವರು ಹುಡುಗೀರು, ಆತನ ಸುತ್ತಲೇ ಕದಲುತ್ತಾ ಬೇರೇನೋ ಹೇಳ ಬಯಸೋ ರೋಚಕ ಕಥಾ ಹಂದರ ಹೊಂದಿರೋ ಈ ಚಿತ್ರಕ್ಕೆ ಬಿಗ್‌ಬಾಸ್ ಖ್ಯಾತಿಯ ಕೃತಿಕಾ ರವೀಂದ್ರ, ರೇಖಾ ಚಂದ್ರ ಮತ್ತು ಅದಿತಿ ರಾವ್ ನಾಯಕಿಯರಾಗಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿಯೂ ಹಾಡುಗಳಿಗೆ ಹೆಚ್ಚು ಒತ್ತು ನೀಡಿದ್ದ ಕಿರಣ್ ಗೋವಿ ಈ ಚಿತ್ರದಲ್ಲಿಯೂ ಹಾಡುಗಳಿಗೆ ಪ್ರಾಧಾನ್ಯತೆ ನೀಡಿದ್ದಾರೆ. ಭರತ್ ಬಿ ಜೆ ಸಂಗೀತ ನೀಡಿರೋ ಎರಡು ಲಿರಿಕಲ್ ವೀಡಿಯೋಗಳು ಈಗಾಗಲೇ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.

ಹೆಸರಲ್ಲಿಯೇ ಅನೂಹ್ಯವಾದುದೇನನ್ನೋ ಧ್ವನಿಸುವಂತಿರುವ ಈ ಚಿತ್ರದ ನಿರ್ದೇಶಕ ಕಿರಣ್ ಗೋವಿ ಬಹುಮುಖ ಪ್ರತಿಭೆ. ತುಮಕೂರಿನವರಾದ ಕಿರಣ್ ಬೆಳೆದದ್ದೆಲ್ಲವೂ ಬೆಂಗಳೂರಿನಲ್ಲಿರೇ. ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಬಿಎಸ್‌ಸಿ ಎಲೆಕ್ಟ್ರಾನಿಕ್ಸ್ ಪದವಿ ಪಡೆದಿದ್ದ ಕಿರಣ್ ಅವರಿಗೆ ಕಾಲೇಜು ದಿನಗಳಲ್ಲಿಯೇ ಓದಿಕೊಂಡಿದ್ದಕ್ಕೆ ತಧ್ವಿರುದ್ಧವಾದ ಕಲೆಗಳು ಕೈ ಹಿಡಿದಿದ್ದವು. ಹಾಡುಗಳೆಂದರೆ ವಿಪರೀತ ಹುಚ್ಚಿದ್ದ ಅವರಿಗೆ ಮಿಮಿಕ್ರಿ ಮಾಡೋ ಹವ್ಯಾಸವಿತ್ತು. ನೃತ್ಯಕ್ಕೂ ಸೈ, ನಟನೆಗೂ ಸೈ ಎಂಬಂಥಾ ವ್ಯಕ್ತಿತ್ವದ ಕಿರಣ್ ಅವರಿಗೆ ಕಾಲೇಜು ವಾತಾವರಣದಲ್ಲಿ ಪೂರಕ ಉತ್ತೇಜನವೇ ಸಿಕ್ಕಿತ್ತು. ಅದುವೇ ಕಾಲೇಜಿನ ರಂಗತಂಡದೊಂದಿಗೂ ಗುರುತಿಸಿಕೊಳ್ಳುವಂತೆ ಮಾಡಿತ್ತು. ಕಾಲೇಜು ಮಟ್ಟದ ನಾಟಕಗಳಲ್ಲಿ ಕಿರಣ್ ನಟನಾಗಿ ಮಿಂಚಿದ್ದರು.

ಈ ದೆಸೆಯಿಂದ ಸಿಕ್ಕ ಸಂಪರ್ಕಗಳೇ ಅವರನ್ನು ಕಾಲೇಜು ಮುಗಿಯುತ್ತಲೇ ಕಮರ್ಷಿಯಲ್ ಜಾಹೀರಾತಿನ ಮಾಯಾಲೋಕ ಸೆಳೆದುಕೊಂಡಿತ್ತು. ಇದುವರೆಗೂ ಕಿರಣ್ ಅವರು ನೂರಕ್ಕೂ ಹೆಚ್ಚು ಕಮರ್ಷಿಯಲ್ ಜಾಹೀರಾತುಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ನಂತರ ಎ.ಆರ್. ಬಾಬು ಅವರ ಸಾಹಚರ್ಯ ಪಡೆದುಕೊಂಡ ಕಿರಣ್ ಅವರ ಕಾರಣದಿಂದಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ ಜೊತೆ ಸಹ ನಿರ್ದೇಶಕನಾಗಿ ಒಂದಷ್ಟು ಚಿತ್ರಗಳಲ್ಲಿ ಕಾರ್ಯ ನಿರ್ವಹಿಸಿ ನಂತರ ಉಮಾಕಾಂತ್ ಅವರ ಜೊತೆಗೂ ಕೆಲಸ ಮಾಡೋ ಮೂಲಕ ನಿರ್ದೇಶನದ ಪಾಠಗಳನ್ನು ಕಲಿತುಕೊಂಡಿದ್ದರು. ಇವರಿಬ್ಬರನ್ನು ಕಿರಣ್ ಗೀವಿ ತಮ್ಮ ಸಿನಿಮಾ ಗುರುಗಳೆಂದೇ ಪರಿಗಣಿಸಿದ್ದಾರೆ.

ಅಸೋಸಿಯೇಟ್ ಆಗಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಕಿರಣ್ ಗೋವಿ ಅನೇಕ ಕಿರುಚಿತ್ರ, ಡಾಕ್ಯುಮೆಂಟರಿ, ಕಾರ್ಪೋರೇಟ್ ಆಡ್ ಮುಂತಾದವುಗಳನ್ನು ಮಾಡಿದ್ದಾರೆ. ಧಾರಾವಾಹಿಗಳ ನಿರ್ದೇಶನ ವಿಭಾಗದಲ್ಲಿಯೂ ದುಡಿದಿದ್ದಾರೆ. ಆದರೆ ರಂಗಭೂಮಿಯಲ್ಲಿ ನಟನಾಗಿದ್ದ ಕಿರಣ್ ಚಿತ್ರರಂಗಕ್ಕೆ ಬರುವಾಗಲೂ ನಟನಾಗಬೇಕೆಂಬ ಕನಸು ಹೊತ್ತಿದ್ದರು. ಆದರೆ ಆ ಬಳಿಕ ಅವರ ಆಸಕ್ತಿ ಕೇಂದ್ರೀಕರಿಸಿದ್ದು ನಿರ್ದೇಶನದತ್ತ. ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿ ಅನುಭವ ಹೊಂದಿದ್ದ ಕಿರಣ್ ಪಯಣ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಮೊದಲ ಚಿತ್ರದಲ್ಲಿಯೇ ಗೆದ್ದ ಅವರ ಪಾಲಿಗೆ ಯಾರಿಗೆ ಯಾರುಂಟು ನಾಲಕ್ಕನೇ ಚಿತ್ರ.

ಈಗ ನಿರ್ದೇಶಕರಾಗಿ ಕಿರಣ್ ಗೋವಿ ಯಶಸ್ವಿಯಾಗಿದ್ದಾರೆ. ಯಾರಿಗೆ ಯಾರುಂಟು ಚಿತ್ರವೂ ಗೆಲುವು ಕಾಣುತ್ತದೆ ಎಂಬ ತುಂಬು ಭರವಸೆಯೂ ಅವರಲ್ಲಿದೆ. ಆದರೆ ಚಿತ್ರರಂಗಕ್ಕೆ ಅಡಿಯಿರಿಸುವಾಗ ಎದೆಯಲ್ಲಿದ್ದ ನಟನಾಗೋ ಹಂಬಲ ಈಗಲೂ ಹಾಗೆಯೇ ಉಳಿದುಕೊಡಿದೆ. ಈ ಹಿಂದೆ ಆಸುಪಾಸಿನವರು ಚೆಂದಗೆ ಕಥೆ ಹೇಳುತ್ತಾರೆಂಬ ಮೆಚ್ಚುಗೆ ಸೂಚಿಸಿದಾಗ ಉತ್ತೇಜನಗೊಂಡು ಕಥೆ ಬರೆದು ನಿರ್ದೇಶಕರಾದವರು ಕಿರಣ್. ಈಗ ನಿರ್ದೇಶನ ಮಾಡುವಾಗ ನಟಿಸಿ ತೋರಿಸೋ ಅವರ ಕಲೆಯ ಬಗ್ಗೆ ಮೆಚ್ಚುಗೆ ಬಂದಾಗ ಅವರೊಳಗಿನ ನಟ ಮಿಸುಕಾಡುತ್ತಾನೆ. ಮುಂದಿನ ದಿನಗಳಲ್ಲಿ ನಟನಾಗಿಯೂ ಅವತರಿಸಬೇಕೆಂಬ ಇರಾದೆ ಹೊಂದಿರೋ ಕಿರಣ್ ಗೋವಿ ಪಾಲಿಗೆ ಯಾರಿಗೆ ಯಾರುಂಟು ಚಿತ್ರ ನಿರ್ದೇಶನದಲ್ಲಿ ಮೈಲಿಗಲ್ಲಾಗುತ್ತದೆ ಎಂಬ ನಿರೀಕ್ಷೆ ಇದೆ.

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಫ್ಯೂಷನ್ ನೈಟ್‌ಗೆ ಮಾದಕ ಸ್ಪರ್ಶ!

Previous article

ಆ ದಿನ ಜೈಲಿನಲ್ಲಿ ಏನಾಗಿತ್ತು ಗೊತ್ತಾ?

Next article

You may also like

Comments

Leave a reply

Your email address will not be published. Required fields are marked *