ಕಿಸ್ ಸಿನಿಮಾ ಕಾಲೇಜು ಹುಡುಗ ಹುಡುಗಿಯರು ನೋಡುವಂಥಾ ಚಿತ್ರವಿರಬೇಕು ಅಂತಾ ಮೊದಲು ಅಂದುಕೊಂಡಿದ್ದೆ. ಆದರೆ ಇದು ಪ್ರೀತ್ಸೋ ಮನಸ್ಸಿರುವ ಪ್ರತಿಯೊಬ್ಬರೂ ನೋಡಬೇಕಿರುವ ಸಿನಿಮಾ. ಪ್ರೀತಿ ಇಲ್ಲದೆ ಬದುಕಿಲ್ಲ. ಪ್ರೀತಿ ಇಲ್ಲದೆ ಜಗವಿಲ್ಲ. ಹೀಗಾಗಿ ಕಿಸ್ ನೋಡಲು ವಯಸ್ಸಿನ ಅಂತರ ಬೇಕಿಲ್ಲ.. ಹಾಡುಗಳು ಎಷ್ಟು ಮುದ್ದಾಗಿವೆಯೋ ಸಿನಿಮಾ ಕೂಡಾ ಅಷ್ಟೇ ಕ್ಯೂಟ್ ಆಗಿದೆ.. ನಾನಂತೂ ಹಬ್ಬದ ರಜೆಗೆ ನನ್ನ ಕುಟುಂಬದ ಸಮೇತ ಹೋಗಿ ಕಿಸ್ ನೋಡಿ ಎಂಜಾಯ್ ಮಾಡಿದ್ದೇನೆ.
– ಹರೀಶ್ ಕೆ.ಆರ್., ಪ್ರೇಕ್ಷಕ
ಅಪರೂಪಕ್ಕೆ ಸಿಕ್ಕ ದೀರ್ಘ ರಜೆ, ಹಬ್ಬದ ಸಂಭ್ರಮ, ಧಾರಾಳವಾಗಿ ಕೈಗೆಟುಕಿರುವ ಬಿಡುವು… ಇಷಷ್ಟೆಲ್ಲಾ ಇದ್ದಮೇಲೆ ಕಾಲೇಜು ಹುಡುಗರು ಇನ್ನೇನು ತಾನೆ ಮಾಡಲು ಸಾಧ್ಯ? ‘ಕಿಸ್ ಬಿಡುಗಡೆಯಾಗಿರುವ ಯಾವ ಥಿಯೇಟರಿನ ಮುಂದೆ ನೋಡಿದರೂ ಕಾಲೇಜು ವಿದ್ಯಾರ್ಥಿಗಳದ್ದೇ ದಂಡು. ಜೊತೆಗೆ ನಾವೇನು ಕಡಿಮೆ ಎನ್ನುವಂತೆ ಫ್ಯಾಮಿಲಿ ಆಡಿಯನ್ಸೂ ಜೊತೆಯಾಗಿಬಿಟ್ಟಿದ್ದಾರೆ!
ಯಾವತ್ತು ನಿರ್ದೇಶಕ ಎ.ಪಿ. ಅರ್ಜುನ್ ‘ಕಿಸ್ ಅನ್ನೋ ಶೀರ್ಷಿಕೆ ಇಟ್ಟು ಅದರ ಕೆಳಗೆ ‘ತುಂಟ ತುಟಿಗಳ ಆಟೋಗ್ರಾಫ್ ಎನ್ನುವ ಅಡಿಬರಹ ಬರೆದರೋ ಆವತ್ತೇ ನಿರ್ಧಾರವಾಗಿತ್ತು ಈ ಸಿನಿಮಾಗೆ ಹದಿಹರೆಯ ವಯಸ್ಸಿನ ಪ್ರೇಕ್ಷಕರು ಮುತ್ತಿಕೊಳ್ಳುತ್ತಾರೆ ಅಂತಾ. ಅದಕ್ಕೆ ತಕ್ಕಂತೆ ‘ನೀನೆ ಮೊದಲು ನೀನೇ ಕೊನೆ… ಹಾಡು ರಿಲೀಸಾಯ್ತೋ ಆಗ ಇನ್ನೂ ಗ್ಯಾರೆಂಟಿಯಾಗಿಹೋಯ್ತು ಇದು ಹುಡುಗರ ಪಾಲಿನ ಹಾಟ್ ಫೇವರಿಟ್ ಸಿನಿಮಾವಾಗುತ್ತದೆ ಅಂತಾ.
ಆ ಊಹೆಗಳೆಲ್ಲಾ ಈಗ ನಿಜವಾಗಿದೆ. ಅಗಣಿತ ಹುಡುಗ, ಹುಡುಗಿಯರ ಮೊಬೈಲ್ ಟ್ಯೂನಿನಲ್ಲೂ ಈಗ ‘ಕಿಸ್ ಸಿನಿಮಾ ಹಾಡುಗಳು ಕಂಪಿಸುತ್ತಿವೆ. ಯೂಥ್ಸ್ ಬಂದು ಒಂದು ಸಲ ನೋಡಿದರೆ ಸಿನಿಮಾ ಹಿಟ್ ಎನ್ನುವ ಮಾತಿದೆ. ಆದರೆ ಯಾವಾಗ ಅವರು ಮತ್ತೆ ಮತ್ತೆ ಸಿನಿಮಾ ನೋಡಲು ಬರುತ್ತಾರೋ ಆಗ ಆ ಚಿತ್ರ ಮೆಗಾ ಹಿಟ್ ಆಗುತ್ತಾ ಬಂದಿರುವುದು ಕಾಲಾಂತರಗಳಿಂದಲೂ ರುಜುವಾತಾಗಿದೆ. ಈಗ ‘ಕಿಸ್ ಸಿನಿಮಾ ಕೂಡಾ ಅದೇ ಹಾದಿಯಲ್ಲಿದೆ.
ಥಿಯೇಟರಿನ ಬಳಿ ಹೋಗಿ ‘ಯಾಕೆ ಈ ಸಿನಿಮಾ ನೋಡಲು ಬಂದಿದ್ದೀರ? ಅಂತಾ ಅಲ್ಲಿರುವವರಲ್ಲಿ ಒಂಟಿಯಾಗಿರುವ ಹುಡುಗರನ್ನು ಪ್ರಶ್ನಿಸಿದರೆ, ‘ಶ್ರೀ ಲೀಲಾ ಸಖತ್ತಾಗಿದಾಳೆ. ಹುಡುಗಿ ಮೇಲೆ ಲವ್ವಾಗಿದೆ ಎನ್ನುತ್ತಾರೆ. ಹೆಣ್ಮಕ್ಕಳನ್ನು ಕೇಳಿದರೆ ‘ವಿರಾಟ್ ಡ್ಯಾನ್ಸ್ ನೋಡಕ್ಕೆ ಅಂತಾರೆ. ಇನ್ನು ಬಹುತೇಕರು ‘ಹಾಡುಗಳು ಸಖತ್ ಇಷ್ಟ ಆಗಿತ್ತು. ಅದಕ್ಕೇ ಒಂದು ಸಲ ನೋಡಿದ್ವಿ. ಈಗ ಸಿನಿಮಾ ಕೂಡಾ ತುಂಬಾ ಲೈಕ್ ಆಗಿರೋದರಿಂದ ಮತ್ತೆ ಮತ್ತೆ ನೋಡುತ್ತಿದ್ದೇವೆ ಎನ್ನುವ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಪ್ರೀತಿಗೆ ಸಂಬಂಧಿಸಿದ ಕಥಾವಸ್ತುವನ್ನು ಕಾಡುವಂತೆ ಕಟ್ಟಿಕೊಟ್ಟಾಗಲೆಲ್ಲಾ ಅದು ಗೆದ್ದಿದೆ. ಈಗ ಕಿಸ್ಗೆ ಜನ ಮುತ್ತಿಕ್ಕುತ್ತಿರುವುದೂ ಅದೇ ಕಾರಣಕ್ಕೆ!