ಈ ವರ್ಷದ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ ಕಿಸ್ ಸಿನಿಮಾ ಕೂಡಾ ಒಂದು. ಆದರೆ ಇದು ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದೂ ದೊಡ್ಡ ಮಟ್ಟದಲ್ಲಿ ಗೆದ್ದಿದೆ ಅನ್ನೋದು ವಿಶೇಷ!
ಇವತ್ತಿನ ದಿನಗಳಲ್ಲಿ ಚಿತ್ರ ಪ್ರೇಕ್ಷಕರನ್ನು ‘ಸಿನಿಮಾ ಚನ್ನಾಗಿದೆ ನೋಡಬನ್ನಿ ಅಂದ ಕೂಡಲೇ ಅವರು ಬಂದು ಕೂರೋದಿಲ್ಲ. ಹಂತ ಹಂತವಾಗಿ ರುಚಿ ಹತ್ತಿಸಿ, ಈ ಸಿನಿಮಾವನ್ನು ನೋಡಲೇಬೇಕು ಅಂತಾ ಅನ್ನಿಸೋ ಮಟ್ಟಿಗೆ ತಯಾರು ಮಾಡಬೇಕು. ಆಗ ರೆಗ್ಯುಲರ್ ಆಗಿ ಥಿಯೇಟರಿಗೆ ಬರುವವರು ಆಗಮಿಸುತ್ತಾರೆ. ಅವರು ಇಷ್ಟಪಟ್ಟಮೇಲೇನೆ ಸ್ಟೂಡೆಂಟ್ಸ್ ಮತ್ತು ಫ್ಯಾಮಿಲಿ ಆಡಿಯನ್ಸು ಥಿಯೇಟರಿನತ್ತ ಸುಳಿಯೋದು. ಈ ಸೂತ್ರ ತಿಳಿದ ನಿರ್ದೇಶಕರಿಗೆ ಮಾತ್ರ ಉತ್ತಮ ಸಿನಿಮಾವನ್ನೂ ಕೊಟ್ಟು, ಜನರನ್ನು ಮೆಚ್ಚಿಸುವ ತಂತ್ರ ಗೊತ್ತಿರುತ್ತದೆ.
ಈ ನಿಟ್ಟಿನಲ್ಲಿ ನೋಡಿದರೆ ನಿರ್ದೇಶಕ ಎ.ಪಿ. ಅರ್ಜುನ್ ಪಕ್ಕಾ ಕಸುಬುದಾರ ನಿರ್ದೇಶಕ. ಇವರಿಗೆ ಯಾವ ಸಂದರ್ಭದಲ್ಲಿ ಎಂಥಾ ಚಿತ್ರ ಮಾಡಬೇಕು? ಟ್ರೆಂಡ್ ಹುಟ್ಟುಹಾಕುವಂಥಾ ಟ್ಯೂನುಗಳನ್ನು ಹೆಕ್ಕೋದು ಹೇಗೆ? ಅದನ್ನು ತೀರಾ ಹೊಸದೆನ್ನುವಂತೆ ದೃಶ್ಯರೂಪದಲ್ಲಿ ಕಟ್ಟಿಕೊಡುವ ಬಗೆ ಯಾವುದು? ಅನ್ನೋದು ಕರಾರುವಕ್ಕಾಗಿ ತಿಳಿದಿದೆ. ಮುಖ್ಯವಾಗಿ ಕಾಲೇಜು ಹುಡುಗ ಹುಡುಗಿಯರನ್ನು ಸೆಳೆಯುವ ಮಾಂತ್ರಿಕ ವಿದ್ಯೆ ಅರ್ಜುನ್ ಅವರಿಗೆ ಸಿದ್ಧಿಸಿದೆ. ಇವರ ಆರಂಭದ ಸಿನಿಮಾ ಅಂಬಾರಿಯಿಂದ ಹಿಡಿದು ಇವತ್ತಿನ ಕಿಸ್ ತನಕ ಮೊದ ಮೊದಲಿಗೆ ಕೈ ಹಿಡಿಸು ಗೆಲ್ಲಿಸಿದ್ದೇ ಕಾಲೇಜು ವಿದ್ಯಾರ್ಥಿಗಳು ಮತ್ತು ಮಹಿಳಾ ಪ್ರೇಕ್ಷಕರು.
ಕಿಸ್ ಸಿನಿಮಾವನ್ನು ನೋಡಿದವರಲ್ಲಿ ಕೂಡಾ ಅತಿ ಹೆಚ್ಚು ಜನ ಇದೇ ವರ್ಗಕ್ಕೆ ಸೇರಿದವರೇ. ನೀನೆ ಮೊದಲು ನೇನೇ ಕೊನೆ ಅನ್ನೋ ಹಾಡೊಂದು ಎಳೇ ಹುಡುಗರ ಎದೆಗೆ ಬಾಣದಂತೆ ನಾಟಿಕೊಂಡಿತ್ತು. ಶೀಲ ಸುಶೀಲ ಹಾಡನ್ನು ತೆರೆ ಮೇಲೆ ಯಾವಾಗ ನೋಡ್ತೀವೋ ಅಂತಾ ಪಡ್ಡೆ ಹುಡುಗರು ಮೈ ಕುಣಿಸಿಕೊಂಡು ಕಾಯುತ್ತಿದ್ದರು. ನಿರೀಕ್ಷೆಯಂತೇ ಚಿತ್ರ ಥಿಯೇಟರಿಗೆ ಬಂದ ಕೂಡಲೇ ನುಗ್ಗಿ ನೋಡಿದರು. ಈ ಎಲ್ಲದರ ಪ್ರತಿಫಲವೆನ್ನುವಂತೆ ಕಿಸ್ ಈಗ ಐವತ್ತು ದಿನವನ್ನು ಪೂರೈಸಿ ಎಪ್ಪತ್ತೈದನೇ ದಿನದತ್ತ ದಾಪುಗಾಲಿಡುತ್ತಿದೆ. ಕನಿಷ್ಟ ೭-೮ ಸೆಂಟರುಗಳಲ್ಲಾದರೂ ಕಿಸ್ ಹಂಡ್ರೆಡ್ ಡೇಸ್ ಪೂರೈಸೋದು ಗ್ಯಾರೆಂಟಿ. ಆ ದಿನ ಕಣ್ಮುಂದೆ ಬರಲಿ. ೧೦೦ ದಿನದ ವಿಜಯೋತ್ಸವದಲ್ಲಿ ಅರ್ಜುನ ಪತಾಕೆ ಹಾರಾಡಲಿ….