ಅದ್ದೂರಿ, ರಾಟೆ, ಐರಾವತ ಸಿನಿಮಾಗಳನ್ನು ನಿರ್ದೇಶಿಸಿದ್ದ ಎ.ಪಿ. ಅರ್ಜುನ್ ಸದ್ಯ ಕಿಸ್ ಎನ್ನುವ ಚಿತ್ರಕ್ಕೆ ಬಂಡವಾಳ ಹೂಡುವ ಜತೆಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ಈಗಾಗಲೇ ಕಿಸ್ ಚಿತ್ರದ ಕುರಿತಾಗಿ ಸಾಕಷ್ಟು ಬಿಸಿ ಬಿಸಿ ಸುದ್ದಿಗಳು ಹರಿದಾಡುತ್ತಿದ್ದು ಹಾಡುಗಳು ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.
ಈ ಮೊದಲು ಬಿಡುಗಡೆಯಾಗಿರುವ ನೀನೆ ಮೊದಲು ಸಾಂಗು ಪ್ರೇಮಿಗಳ ವಾಟ್ಸ್ ಅಪ್ ಸ್ಟೇಟಸ್, ಫೇಸ್ ಬುಕ್ ಸ್ಟೇಟಸ್ ಗಳಲ್ಲಿ ರಾರಾಜಿಸುತ್ತಿದೆ. ಇನ್ನು ಪುನೀತ್ ರಾಜ್ ಕುಮಾರ್ ಹಾಡಿರುವ ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಮ್ಮ ಸಾಂಗು ಸಹ ಸಾಕಷ್ಟು ಕಮಾಲು ಮಾಡುತ್ತಿದೆ. ಈಗಾಗಲೇ ಚಿತ್ರೀಕರಣವನ್ನು ಮುಗಿಸಿಕೊಂಡು ರಿಲೀಸ್ ಗೆ ರೆಡಿಯಾಗಿರುವ ಕಿಸ್ ಸದ್ಯ ಸಿನಿಮಾ ಬಿಡುಗಡೆಗೆ ಮುನ್ನ ಚಿತ್ರದ ಟ್ರೇಲರ್ ಒಂದನ್ನು ಬಿಡುಗಡೆ ಮಾಡಿಕೊಂಡಿದೆ. ವಿಶೇಷವೆಂದರೆ ಈ ಟ್ರೇಲರ್ ನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದಾರೆ.
ಕಿಸ್ ಟ್ರೇಲರ್ ನ್ನು ನೋಡಿದರೆ ಪ್ರೇಮಿಗಳಿಗಾಗಿ ನಿರ್ಮಿಸಿರುವ ಸಿನಿಮಾ ಎಂಬುದು ಸ್ಪಷ್ಟವಾಗಿದ್ದರೂ ಸಹ ಅರ್ಜುನ್ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದರೆ ಅವರು ತಮ್ಮ ಚಿತ್ರಗಳಲ್ಲಿ ಕೌಟುಂಬಿಕ ಟಚ್ ಕೊಡುವ ಪ್ರಯತ್ನ ಮಾಡಿರುವುದು ಮರೆಯುವಂತಿಲ್ಲ. ಮನೆಮಂದಿಯೆಲ್ಲಾ ನೋಡುವಂತಹ ಸಿನಿಮಾಗಳನ್ನು ಮಾಡುತ್ತಲೇ ಬಂದಿರುವ ಎ.ಪಿ. ಅರ್ಜುನ್ ಕಿಸ್ ಚಿತ್ರದಲ್ಲಿಯೂ ಅಂತಹುದೇ ಕಥಾಹಂದರವನ್ನು ಇರಿಸಿರಬಹುದೆಂಬ ನಂಬಿಕೆ ಅಭಿಮಾನಿಗಳಲ್ಲಿದೆ.
ಟ್ರೇಲರ್ ನಲ್ಲಿ ನಾಯಕ ನಾಯಕಿಯನ್ನು ಪ್ರೀತಿಗಾಗಿ ಜತೆಗೊಂದು ಕಿಸ್ ಗಾಗಿ ಪೀಡಿಸುವ, ಲವ್ ಫೇಲ್ಯೂರ್ ಸಾಂಗಿನಲ್ಲಿ ಹೆಜ್ಜೆ ಹಾಕುವ ಸೀನುಗಳು ಸಾಕಷ್ಟು ಹೈಲೈಟ್ ಆಗಿದೆ. ಜತೆಗೆ ಫೈಟಿಂಗ್ ಸೀಕ್ವೆನ್ಸುಗಳು ಹೆಚ್ಚು ಗಮನ ಸೆಳೆಯುವಂತಿದೆ. ಪ್ರಮುಖವಾಗಿ ಟ್ರೇಲರ್ ನಲ್ಲಿ ನಾಯಕ ಮತ್ತು ನಾಯಕಿಯನ್ನು ಪರಿಚಯವನ್ನು ಧ್ರುವ ಸರ್ಜಾ ಮಾಡಿರೋದು ಸಾಕಷ್ಟು ಆಕರ್ಷಕವಾಗಿದೆ. ಚಿತ್ರದ ತಾರಾಗಣದಲ್ಲಿ ವಿರಾಟ್, ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿದ್ದು, ದತ್ತಣ್ಣ, ಸಾಧುಕೋಕಿಲ, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನು ಹರಿಕೃಷ್ಣ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ, ರವಿ ವರ್ಮ ಸಾಹಸ ಸಂಯೋಜನೆ, ಅರ್ಜುನ್ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ.
Leave a Reply
You must be logged in to post a comment.