ಕಣ್ಣ ನೀರಿದು ಜಾರುತಾ ಇದೆ. ನೀನು ಇಲ್ಲದೆ ತುಂಬಾ ನೋವಾಗಿದೆ… ಮರೆತು ಬಿಡಲಿ ಹೃದಯ.. ಭಾರ ಇಳಿಸಿ ಎದೆಯ… ಇದು ಕಿಸ್ ಸಿನಿಮಾಗಾಗಿ ಎ.ಪಿ. ಅರ್ಜುನ್ ಬರೆದ ಆರ್ದ್ರ ಪದಗಳು.
ಇಂಥಾ ಸಾಲುಗಳು ಕಿವಿಗೆ ಬೀಳುತ್ತಿದ್ದಂತೇ, ಪ್ರೀತಿಗಾಗಿ ಹಂಬಲಿಸಿ ಜೀವ ಸವೆಸಿದವರ ಕಣ್ಣ ಹನಿಗಳು ಜಾರಲು ಕೆನ್ನೆ ಜೊತೆ ಮಾತುಕತೆ ಆರಂಭಿಸೋದು ಖಂಡಿತಾ.

ಸದ್ಯ ಯೂ ಟ್ಯೂಬಿನಲ್ಲಿ ರಿಲೀಸಾಗಿರುವ ಈ ಲಿರಿಕಲ್ ವಿಡಿಯೋ ಪ್ರೇಮ ವೈಫಲ್ಯಕ್ಕೀಡಾದ ಎಲ್ಲರ ಆತ್ಮಗೀತೆಯಂತಿದ್ದು, ಎಲ್ಲರನ್ನೂ ಸೆಳೆಯುತ್ತಿದೆ. ಕಿಸ್ ಅಂದರೆ ಎಂಥವರಿಗೂ ಪರಿಚಿತ ವಿಚಾರ. ಈ ಪದ ಕ್ಯಾಚಿ ಆಗಿರೋದರಿಂದ, ಬೇಗನೆ ಎಲ್ಲರಿಗೂ ಕನೆಕ್ಟ್ ಆಗೋದರಿಂದ ಈ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಹಾಗಂತ ಕಥೆಗೂ ಕಿಸ್ಸಿಗೂ ಕನೆಕ್ಷನ್ ಇಲ್ಲ ಅಂದುಕೊಳ್ಳುವಂತಿಲ್ಲ. ಈ ಇಡೀ ಕಥೆಯ ಆತ್ಮವೇ ಕಿಸ್. ಯುವ ಹುಮ್ಮಸ್ಸಿನ ಕಥೆ ಹೊಂದಿದೆಯಾದರೂ ನವ ಯುವಕರಿಂದ ಹಿಡಿದು ಹಣ್ಣಣ್ಣು ಮುದುಕರವರೆಗೂ ನೋಡಿ ಎಂಜಾಯ್ ಮಾಡಬಹುದಾದ ಚಿತ್ರವಿದು. ಒಟ್ಟಾರೆ ಚಿತ್ರದಲ್ಲಿ ಯಾವ ಥರದ ವಲ್ಗಾರಿಟಿಯ ಸುಳಿವೂ ಇಲ್ಲ ಎಂಬುದು ಅರ್ಜುನ್ ಭರವಸೆ.
https://youtu.be/oQRLbFMzVh0
ದಶಕಗಳಷ್ಟು ಹಿಂದೆ ಘಟಿಸುತ್ತಿದ್ದ ಲವ್ವು ನಾನಾ ಘಟ್ಟ ದಾಟಿಕೊಂಡು ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರಾಗಿಸುತ್ತಿತ್ತು. ಈ ಹಂತ ತಲುಪಿಕೊಳ್ಳುವುದು ಎಷ್ಟೋ ಸಂದರ್ಭಗಳಲ್ಲಿ ಪಂಚವಾರ್ಶಿಕ ಯೋಜನೆಯಾದದ್ದೂ ಇದೆ. ಆದರೆ ಹಾಗೆ ಕುದುರಿಕೊಂಡ ಪ್ರೀತಿ ಜೀವಮಾನವಿಡೀ ಜೊತೆಯಾಗೇ ಬಾಳಿಸುತ್ತಿತ್ತು. ಆದರೀಗ… ಎಲ್ಲವೂ ಸ್ಪೀಡು. ಬೆಳಗ್ಗೆ ಫೇಸ್ಬುಕ್ಕಲ್ಲಿ ಫ್ರೆಡ್ಸಾದ ಹುಡುಗ ಹುಡುಗಿ ಸಾಯಂಕಾಲದ ಹೊತ್ತಿಗೆಲ್ಲ ಯಾವುದೋ ಕಾಫಿ ಟೇಬಲ್ಲಿನಲ್ಲಿ ಎದುರುಬದುರಾಗಿರುತ್ತಾರೆ. ಆವತ್ತಿನ ಅಹೋರಾತ್ರಿ ಮೆಸೇಜಿನಿಂದ ಬೆಚ್ಚಗಾಗಿ ಮಾರನೇ ದಿನದ ಹೊತ್ತಿಗೆಲ್ಲ ಲವ್ವು. ಒಂದೇ ವಾರದಲ್ಲಿ ಬ್ರೇಕಪ್ಪು ಮತ್ತು ಏನೂ ಘಟಿಸಿಲ್ಲವೆಂಬಂತೆ ಹೊಸಾ ಲವ್ವಿನ ಭೇಟೆ… ಇದು ಈ ಕಾಲಮಾನದ ಲವ್ವಿನ ಪರಿ. ಆದರೆ ಇಂಥಾ ನೂರು ಲವ್ ಸ್ಟೋರಿಗಳಲ್ಲಿ ಒಂದಾದರೂ ಪ್ಯೂರ್ ಲವ್ ಸ್ಟೋರಿ ಇದ್ದೇ ಇರುತ್ತೆ. ಅಂಥಾದ್ದೊಂದು ಪ್ರೇಮ ಕಥಾನಕವನ್ನ ಕಿಸ್ ಚಿತ್ರ ಒಳಗೊಂಡಿದೆ.

ಟೈಂ ಪಾಸ್ ಲವ್ವಿನ ವಿಚಾರ ಬೇರೆ. ಆದರೆ ಪ್ರೇಮಿಗಳ ಪಾಲಿಗೆ ಕಿಸ್ ಅನ್ನೋದೊಂದು ಗಿಫ್ಟು. ಅದು ಮೊದಲು ವಿನಿಮಯವಾಗೋದೊಂದು ಮಧುರಾನುಭೂತಿ. ಅಂಥಾ ನವಿರು ಭಾವಗಳನ್ನು ಹೊತ್ತ ಈ ಚಿತ್ರ ತಮ್ಮ ಇದುವರೆಗಿನ ಚಿತ್ರಗಳಿಗಿಂತಲೂ ಭಿನ್ನ ಅಂತ ಎ ಪಿ ಅರ್ಜುನ್ ಭರವಸೆಯಿಂದಲೇ ಹೇಳುತ್ತಾರೆ. ಇದೇ ಹೊತ್ತಲ್ಲಿ ತಾನು ಯಾಕೆ ಪದೇ ಪದೆ ಲವ್ಸ್ಟೋರಿಗಳನ್ನೇ ಕಟ್ಟಿಕೊಡುತ್ತೇನೆ ಎಂಬುದಕ್ಕೂ ಸ್ಪಷ್ಟೀಕರಣ ನೀಡಿದ್ದಾರೆ. ಪ್ರೇಮಿಸೋ ಮನಸ್ಥಿತಿಗಳು ಬದಲಾದರೂ ಅದರ ಭಾವಗಳೆಂದೂ ಬದಲಾಗೋದಿಲ್ಲ. ಇಂಥಾ ಕಥಾನಕಗಳನ್ನು ಕನ್ನಡ ಪ್ರೇಕ್ಷಕರು ಕೈ ಬಿಟ್ಟ ಉದಾಹರಣೆಗಳೂ ಇಲ್ಲ. ಆದ್ದರಿಂದಲೇ ಕಿಸ್ ಮೂಲಕ ಅರ್ಜುನ್ ಮತ್ತೊಮ್ಮೆ ಪ್ರೀತಿಯ ಪಿಸುಮಾತಿಗೆ ಧನಿಯಾಗಿದ್ದಾರೆ.
ಇನ್ನುಳಿದಂತೆ ಈ ಕಥೆ ಹೇಗೆ ಫ್ರೆಶ್ ಆಗಿದೆಯೋ ನಾಯಕ ನಾಯಕಿಯರೂ ಕೂಡಾ ಅಷ್ಟೇ ಫ್ರೆಶ್ ಫೀಲ್ ಕೊಡಬೇಕೆಂಬುದು ಅರ್ಜುನ್ ಇಂಗಿತವಾಗಿತ್ತು. ಆದ್ದರಿಂದಲೇ ನಾಯಕ ನಾಯಕಿಯರಾಗಿ ಹೊಸಬರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಎಳೇ ವಯಸ್ಸಿನ, ಹೊಸಾ ಹುಮ್ಮಸ್ಸಿನ ತಂಡದೊಂದಿಗೆ ಅಂಥಾದ್ದೇ ಆವೇಗದಿಂದ ಅರ್ಜುನ್ ಕಿಸ್ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ.

ಇನ್ನೇನು ತೆರೆಗೆ ಬರಲಿರುವ ಕಿಸ್ ಚಿತ್ರದ ಒಂದೊಂದು ಹಾಡು ಕೂಡಾ ಹಿಟ್ ಆಗುತ್ತಿವೆ. ಶೀಲಾ ಸುಶೀಲಾ, ನೀನೇ ಮೊದಲು ನೀನೇ ಕೊನೆ. ಈ ಡರಡರಲ್ಲಿ ಒಂದು ಕೇಳುಗರು ಕುಣಿಯುವಂತೆ ಮಾಡಿದರೆ, ಇನ್ನೊಂದು ಬೆಚ್ಚನೆಯ ಫೀಲು ನೀಡಿತ್ತು. ಸದ್ಯ ಬಿಡುಗಡೆಯಾಗಿರುವ ‘ಕಣ್ಣ ನೀರಿದು ಜಾರುತಾ ಇದೆ’ – ಹಾಡು ಎಂಥವರ ಕಣ್ಣಲ್ಲೂ ನೀರುಕ್ಕಿಸುವಂತಿದೆ. ಒಟ್ಟಾರೆ ವಿಧ ವಿಧವಾದ ಹಾಡುಗಳಿಂದಲೇ ಸೆಳೆಯುತ್ತಿರುವ ಕಿಸ್ ಒಳಗೆ ಇನ್ನೆಂಥಾ ಫ್ಲೇವರುಗಳು ಸೇರಿಕೊಂಡವೆಯೋ? ರಿಲೀಸಾದಮೇಲಷ್ಟೇ ಗೊತ್ತಾಗಲಿದೆ.
