ರಾಷ್ಟ್ರಕೂಟ ಫಿಲಂಸ್ ಬ್ಯಾನರಿನಡಿ ವಿ. ರವಿಕುಮಾರ್ ನಿರ್ಮಾಣ ಮಾಡಿರುವ ಸಿನಿಮಾ ಕಿಸ್. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ಕಿಸ್ ತಂಡವೀಗ ಪತ್ರಿಕಾಗೋಷ್ಟಿಯ ಮೂಲಕ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ಒಟ್ಟಾರೆ ಚಿತ್ರದ ಬಗ್ಗೆ ನಿರ್ದೆಶಕ ಎ.ಪಿ ಅರ್ಜುನ್ ರೋಚಕವಾದ ಒಂದಷ್ಟು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಕಿಸ್ ಎಂಥಾ ಕಥೆ ಹೊಂದಿದೆ ಎಂಬುದೂ ಸೇರಿದಂತೆ ಪ್ರೇಕ್ಷಕರಲ್ಲಿದ್ದ ಒಂದಷ್ಟು ಪ್ರಶ್ನೆಗಳಿಗೂ ಈ ಮೂಲಕ ಉತ್ತರ ಸಿಕ್ಕಿದೆ.
ದಶಕಗಳಷ್ಟು ಹಿಂದೆ ಘಟಿಸುತ್ತಿದ್ದ ಲವ್ವು ನಾನಾ ಘಟ್ಟ ದಾಟಿಕೊಂಡು ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರಾಗಿಸುತ್ತಿತ್ತು. ಈ ಹಂತ ತಲುಪಿಕೊಳ್ಳುವುದು ಎಷ್ಟೋ ಸಂದರ್ಭಗಳಲ್ಲಿ ಪಂಚವಾರ್ಶಿಕ ಯೋಜನೆಯಾದದ್ದೂ ಇದೆ. ಆದರೆ ಹಾಗೆ ಕುದುರಿಕೊಂಡ ಪ್ರೀತಿ ಜೀವಮಾನವಿಡೀ ಜೊತೆಯಾಗೇ ಬಾಳಿಸುತ್ತಿತ್ತು. ಆದರೀಗ… ಎಲ್ಲವೂ ಸ್ಪೀಡು.
ಬಳಗ್ಗೆ ಫೇಸ್ಬುಕ್ಕಲ್ಲಿ ಫ್ರೆಂಡ್ಸಾದ ಹುಡುಗ ಹುಡುಗಿ ಸಾಯಂಕಾಲದ ಹೊತ್ತಿಗೆಲ್ಲ ಯಾವುದೋ ಕಾಫಿ ಟೇಬಲ್ಲಿನಲ್ಲಿ ಎದುರುಬದುರಾಗಿರುತ್ತಾರೆ. ಆವತ್ತಿನ ಅಹೋರಾತ್ರಿ ಮೆಸೇಜಿನಿಂದ ಬೆಚ್ಚಗಾಗಿ ಮಾರನೇ ದಿನದ ಹೊತ್ತಿಗೆಲ್ಲ ಲವ್ವು. ಒಂದೇ ವಾರದಲ್ಲಿ ಬ್ರೇಕಪ್ಪು ಮತ್ತು ಏನೂ ಘಟಿಸಿಲ್ಲವೆಂಬಂತೆ ಹೊಸಾ ಲವ್ವಿನ ಭೇಟೆ… ಇದು ಈ ಕಾಲಮಾನದ ಲವ್ವಿನ ಪರಿ. ಆದರೆ ಇಂಥಾ ನೂರು ಲವ್ ಸ್ಟೋರಿಗಳಲ್ಲಿ ಒಂದಾದರೂ ಪ್ಯೂರ್ ಲವ್ ಸ್ಟೋರಿ ಇದ್ದೇ ಇರುತ್ತೆ. ಅಂಥಾದ್ದೊಂದು ಪ್ರೇಮ ಕಥಾನಕವನ್ನ ಕಿಸ್ ಚಿತ್ರ ಒಳಗೊಂಡಿದೆ.
ಟೈಂ ಪಾಸ್ ಲವ್ವಿನ ವಿಚಾರ ಬೇರೆ. ಆದರೆ ಪ್ರೇಮಿಗಳ ಪಾಲಿಗೆ ಕಿಸ್ ಅನ್ನೋದೊಂದು ಗಿಫ್ಟು. ಅದು ಮೊದಲು ವಿನಿಮಯವಾಗೋದೊಂದು ಮಧುರಾನುಭೂತಿ. ಅಂಥಾ ನವಿರು ಭಾವಗಳನ್ನು ಹೊತ್ತ ಈ ಚಿತ್ರ ತಮ್ಮ ಇದುವರೆಗಿನ ಚಿತ್ರಗಳಿಗಿಂತಲೂ ಭಿನ್ನ ಅಂತ ಎ ಪಿ ಅರ್ಜುನ್ ಭರವಸೆಯಿಂದಲೇ ಹೇಳುತ್ತಾರೆ. ಇದೇ ಹೊತ್ತಲ್ಲಿ ತಾನು ಯಾಕೆ ಪದೇ ಪದೆ ಲವ್ಸ್ಟೋರಿಗಳನ್ನೇ ಕಟ್ಟಿಕೊಡುತ್ತೇನೆ ಎಂಬುದಕ್ಕೂ ಸ್ಪಷ್ಟೀಕರಣ ನೀಡಿದ್ದಾರೆ. ಪ್ರೇಮಿಸೋ ಮನಸ್ಥಿತಿಗಳು ಬದಲಾದರೂ ಅದರ ಭಾವಗಳೆಂದೂ ಬದಲಾಗೋದಿಲ್ಲ. ಇಂಥಾ ಕಥಾನಕಗಳನ್ನು ಕನ್ನಡ ಪ್ರೇಕ್ಷಕರು ಕೈ ಬಿಟ್ಟ ಉದಾಹರಣೆಗಳೂ ಇಲ್ಲ. ಆದ್ದರಿಂದಲೇ ಕಿಸ್ ಮೂಲಕ ಅರ್ಜುನ್ ಮತ್ತೊಮ್ಮೆ ಪ್ರೀತಿಯ ಪಿಸುಮಾತಿಗೆ ಧನಿಯಾಗಿದ್ದಾರೆ.
ಇನ್ನುಳಿದಂತೆ ಈ ಕಥೆ ಹೇಗೆ ಫ್ರೆಶ್ ಆಗಿದೆಯೋ ನಾಯಕ ನಾಯಕಿಯರೂ ಕೂಡಾ ಅಷ್ಟೇ ಫ್ರೆಶ್ ಫೀಲ್ ಕೊಡಬೇಕೆಂಬುದು ಅರ್ಜುನ್ ಇಂಗಿತವಾಗಿತ್ತು. ಆದ್ದರಿಂದಲೇ ನಾಯಕ ನಾಯಕಿಯರಾಗಿ ಹೊಸಬರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಎಳೇ ವಯಸ್ಸಿನ, ಹೊಸಾ ಹುಮ್ಮಸ್ಸಿನ ತಂಡದೊಂದಿಗೆ ಅಂಥಾದ್ದೇ ಆವೇಗದಿಂದ ಅರ್ಜುನ್ ಕಿಸ್ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಈ ಪ್ರೇಮಕಾವ್ಯ ಪ್ರೇಮಿಗಳ ದಿನದ ಹೊತ್ತಿಗೆ ಬಿಡುಗಡೆಯಾಗಬಹುದಾ ಎಂಬ ಕಾತರ ಪ್ರೇಕ್ಷಕರಲ್ಲಿದೆ. ಇಷ್ಟರಲ್ಲಿಯೇ ಬಿಡುಗಡೆಯ ನಿಖರ ದಿನಾಂಕ ಹೊರ ಬೀಳಲಿದೆ.
#
No Comment! Be the first one.