ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ಶ್ರೀನಗರ ಕಿಟ್ಟಿ ಪ್ರಮುಖರು. ತೀರಾ ಸಣ್ಣ ವಯಸ್ಸಿಗೇ ನಟನಾವೃತ್ತಿಗಿಳಿದ ಕಿಟ್ಟಿ ರಂಗಭೂಮಿ, ಕಿರುತೆರೆಗಳನ್ನು ಧಾಟಿ ಸಿನಿಮಾಗೆ ಬಂದವರು. ಆರಂಭದ ದಿನಗಳಲ್ಲಿ ಖಳನಟನಾಗಿ ಕಾಣಿಸಿಕೊಂಡ ಕಿಟ್ಟಿ ಹೀರೋ ಆಗದೇ ಉಳಿದಿದ್ದರೆ ಈ ಹೊತ್ತಿಗೆ ಬರೀ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಬಿಡುವಿರದ ನಟನಾಗಿರುತ್ತಿದ್ದರು. ಹಾಗೆಂದು ಕಿಟ್ಟಿ ಹೀರೋ ಆಗಿ ಸೋತಿಲ್ಲ. ನಾಯಕನಟನಾಗಿ ಮೇಲಿಂದ ಮೇಲೆ ಅವಕಾಶ ಸಿಗುತ್ತಾ ಹೋದಾಗ, ಆ ಒತ್ತಡದಲ್ಲಿ ಕಿಟ್ಟಿ ಯಾವುದನ್ನು ಒಪ್ಪುವುದು ಯಾವುದನ್ನು ಬಿಡುವುದು ಅನ್ನೋ ಗೊಂದಲದಲ್ಲಿ ಆಯ್ಕೆಯಲ್ಲಿ ಎಡವಿದ್ದು ನಿಜ. ಇಂತಿ ನಿನ್ನ ಪ್ರೀತಿಯ ಭಿನ್ನ ಸಿನಿಮಾ, ‘ಸವಾರಿ’ಯ ಥರದ ಕ್ಲಾಸಿಕ್ ಚಿತ್ರ, ಸಂಜು ವೆಡ್ಸ್ ಗೀತಾ ದಂಥ ಸೂಪರ್ ಹಿಟ್ ಚಿತ್ರ ಕೊಟ್ಟವರು ಕಿಟ್ಟಿ. ಯಾವತ್ತಿಗೂ ಇಂಥದ್ದೇ ಪಾತ್ರ ಬೇಕು ಅಂತಾ ಇಮೇಜಿಗೆ ಅಂಟಿಕೊಂಡು ಕುಂತವರಲ್ಲ. ಇಂಥ ಕಿಟ್ಟಿಯನ್ನು ನಮ್ಮ ಚಿತ್ರರಂಗದವರು ಸರಿಯಾಗಿ ಬಳಸಿಕೊಳ್ಳಲಿಲ್ಲ ಅಷ್ಟೇ.


ಹೆಚ್ಚೂಕಮ್ಮಿ ಧನಂಜಯ್ ಪರಿಸ್ಥಿತಿ ಕೂಡಾ ಹೀಗೇ ಆಗಿತ್ತು. ಆದರೆ, ಟಗರು ಅನ್ನೋ ಒಂದು ಚಿತ್ರ ಧನಂಜಯ್ ಇಮೇಜನ್ನೇ ಬದಲಿಸಿ ಡಾಲಿಯನ್ನಾಗಿ ರೂಪಾಂತರಗೊಳಿಸಿದೆ. ಹಾಗೆ ನೋಡಿದರೆ, ಶ್ರೀನಗರ ಕಿಟ್ಟಿ ಹೀರೋ ಆಗಿದ್ದ ಕಾಲದಿಂದಲೂ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದವರು. ಈಗ ಸಿಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಚಿತ್ರದಲ್ಲಿ ವಾಮಾಚಾರ ಮಾಡುವ ಮಂತ್ರವಾದಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ಈ ಚಿತ್ರ ಬಿಡುಗಡೆಯಾದಮೇಲೆ ಕಿಟ್ಟಿ ಅವರ ಪಾತ್ರದ ಬಗ್ಗೆ ಜನ ಮಾತಾಡುವಂತಾಗುತ್ತದೆ ಅನ್ನೋದು ಖುದ್ದು ನಿರ್ದೇಶಕ ಸುನಿ ಅಭಿಪ್ರಾಯ. ಕಿಟ್ಟಿಯಂಥಾ ಅಪ್ಪಟ ನಟನ ಪಾಲಿಗೆ ಅಂತಾ ಪವಾಡವೊಂದು ನಡೆಯಬೇಕಾದ ಜರೂರತ್ತಿದೆ. ಯಾವುದೋ ಒಂದು ಬಗೆಯ ಪಾತ್ರಕ್ಕೆ ಸೀಮಿತವಾಗದೆ ಜನ ಊಹಿಸಲೂ ಸಾಧ್ಯವಾಗದಂಥ ರೋಲುಗಳು ಕಿಟ್ಟಿಗೆ ದಕ್ಕಬೇಕು. ಅದು ಘಟಿಸಬೇಕಾದರೆ ಅವತಾರ್ ಪುರುಷ ರಿಲೀಸಾಗಬೇಕು!

CG ARUN

ಕಂಗಾಲಾಗಿ ಕೂತಿದ್ದಾರಾ ಕಲಾಸಾಮ್ರಾಟ್?

Previous article

“ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ”ಗೆ ಚಾಲನೆ

Next article

You may also like

Comments

Leave a reply

Your email address will not be published. Required fields are marked *