nageshkumar

ಕಳೆದ ನಾಲ್ಕು ದಶಕಗಳಿಂದೀಚೆಗೆ ಸಿನಿಮಾ ಪತ್ರಿಕೆ ಮತ್ತು ಪುರವಣಿಗಳನ್ನು ಓದುತ್ತಾ ಬಂದವರು “ಚಿತ್ರಗಳು – ಕೆ.ಎನ್. ನಾಗೇಶ್ ಕುಮಾರ್ (ಕೆಎನ್ ಎನ್) ಎನ್ನುವ ಸಾಲನ್ನು ಗಮನಿಸಿಯೇ ಇರುತ್ತಾರೆ.

ಆಗೆಲ್ಲಾ ಇವತ್ತಿನಂತೆ ಡಿಜಿಟಲ್ ಕ್ಯಾಮೆರಾಗಳು, ಮೆಮರಿ ಚಿಪ್ಪು, ಈ ಮೇಲು, ವಾಟ್ಸಾಪು ಯಾವುದೂ ಇರಲಿಲ್ಲವಲ್ಲಾ? ಇವತ್ತಿನಂತೆ ಟೀ ವಿ ಮೀಡಿಯಾ ಕೂಡಾ ಇರಲಿಲ್ಲ. ಜನ ಸಿನಿಮಾ ಕುರಿತ ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ, ವಾರಕ್ಕೊಂದು ಪುರವಣಿಗೆ ಕಾದು ಕೂರಬೇಕಿತ್ತು. ವಾರ ಪತ್ರಿಕೆ, ಮಾಸ ಪತ್ರಿಕೆಗಳಲ್ಲಿನ ಸಿನಿಮಾ ಸುದ್ದಿಗಳನ್ನು ಓದಲು ಜನ ಕಾತರಿಸುತ್ತಿದ್ದರು. ಅದರಲ್ಲಿ ಬರುತ್ತಿದ್ದ ಫೋಟೋಗಳನ್ನು ಕತ್ತರಿಸಿಟ್ಟುಕೊಳ್ಳುತ್ತಿದ್ದರು.

ತಾವು ಆರಾಧಿಸುವ ನಟರ ಫೋಟೋಗಳನ್ನು ಕಟ್ ಮಾಡಿ ಅಂಟಿಸಿಕೊಳ್ಳುವ ಮಟ್ಟಕ್ಕೆ ಚೆಂದಗೆ ಸೆರೆ ಹಿಡಿಯುತ್ತಾ ಬಂದವರಲ್ಲಿ ನಾಗೇಶ್ ಕುಮಾರ್ ಪ್ರಮುಖರು. ಪತ್ರಿಕೋದ್ಯಮದಲ್ಲೇ ತೀರಾ ಚಿಕ್ಕ ವಿಭಾಗ ಮನರಂಜನೆಯದ್ದು. ಸಿನಿಮಾ ಎಲ್ಲರ ಆಸಕ್ತಿಯ ವಿಚಾರ. ಯಾರೇ ಆಗಲಿ ಪತ್ರಿಕೆಯನ್ನು ಓದಲು ಆರಂಭಿಸೋದು ಅದರ ಹಿಂದಿನ ಪುಟದ ಸಿನಿಮಾ ಸುದ್ದಿಗಳ ಮೂಲಕ. ಆದರೆ ಕನ್ನಡದಲ್ಲಿ ಸಿನಿಮಾ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಜರಡಿ ಹಿಡಿದರೆ ಬರೆಯೋರ ಸಂಖ್ಯೆ ತೀರಾ ವಿರಳ. ಇನ್ನು ಸಿನಿಮಾ ಫೋಟೋ ಜರ್ನಲಿಸ್ಟುಗಳನ್ನು ನಿಲ್ಲಿಸಿ ಎಣಿಸಿದರೆ  ಮೂವರ ಜೊತೆಗೆ ಮತ್ತೊಬ್ಬ ಕೂಡಾ ಸಿಗೋದಿಲ್ಲ!

ಕೆ.ಎನ್. ನಾಗೇಶ್ ಕುಮಾರ್ ಹೆಸರಿಗಷ್ಟೇ ಸೀನಿಯರ್ ಫೋಟೋ ಜರ್ನಲಿಸ್ಟ್. ಇವರ ಉತ್ಸಾಹ, ಕ್ರಿಯಾಶೀಲತೆ ಈ ಕ್ಷಣಕ್ಕೂ ಶುದ್ದವಾಗಿ ಉಳಿದುಕೊಂಡುಬಂದಿದೆ. ಡಾ. ರಾಜ್ ಅವರ ಮನಸ್ಸಿನಲ್ಲಿ ಅದೇನಿತ್ತೋ ಗೊತ್ತಿಲ್ಲ. ನಾಗೇಶ್ ಕುಮಾರ್ ಎದುರಾದ ಕೂಡಲೇ ನಿಂತು ಸೆಲ್ಯೂಟ್ ಹೊಡೆಯುತ್ತಿದ್ದರು. ಅಂಬರೀಶ್ ಥರದ ಘಾಟಿ ಮನುಷ್ಯ ಕೂಡಾ ನಾಗೇಶ್ ಅವರ ಮುಂದೆ ಪ್ರೀತಿಯಿಂದ ತಲೆ ಬಾಗುತ್ತಿದ್ದರು.

ಸಾಮಾನ್ಯಕ್ಕೆ ಅಂಬಿಯಂಥಾ ಹೀರೋಗಳು ಬಂದಾಗ ನೆರೆದಿದ್ದವರೆಲ್ಲಾ ಅವರತ್ತ ದಾವಿಸುವುದು ವಾಡಿಕೆ. ಆದರೆ ಅಂಬಿಯೇ ನಾಗೇಶ್ ಕುಮಾರ್ ಇದ್ದಲ್ಲಿಗೆ ಬಂದು ನಿಲ್ಲುತ್ತಿದ್ದರು. ಪ್ರೀತಿಯಿಂದ ಅಪ್ಪಿ, ಮುದ್ದು ಮಾಡುತ್ತಿದ್ದರು.

ಸಿನಿಮಾ ವಲಯದಲ್ಲಿ ನಾಗೇಶ್ ಕುಮಾರ್ ಹಲವರ ಕಣ್ಣಿಗೆ ಜಗಳಗಂಟನಾಗಿ ಕಂಡಿರಬಹುದು. ಆದರೆ, ನಾಗಣ್ಣನ ಮನಸ್ಸು ಎಳೇ  ಕಂದಮ್ಮನಷ್ಟು ಮುಗ್ದ. ಪತ್ರಿಕಾಛಾಯಾಗ್ರಾಹಕರು ಪ್ರತಿಯೊಬ್ಬ ನಟರ ಆರಂಭದ ದಿನಗಳನ್ನು ಕಂಡಿರುತ್ತಾರೆ. ಬರೆಯುವ ಪತ್ರರ್ತರಿಗಿಂತಾ ಹೆಚ್ಚು ಸಲುಗೆ, ನಂಟು ಈ ಫೋಟೋ ಜರ್ನಲಿಸ್ಟುಗಳ ಜೊತೆಗಿರುತ್ತದೆ. ಬೆಳೆದ ಮೇಲೆ ಹೆಸರಿನ ಹಿಂದೆ ಸ್ಟಾರು, ಓಡಾಡಲು ಕಾರುಗಳೆಲ್ಲಾ ಬಂದಮೇಲೆ ಅನೇಕರ ನಡೆ ನುಡಿ ಕೂಡಾ ಬದಲಾಗಿರುತ್ತದೆ. ಆದರೆ, ಹಳೇದನ್ನು ಅವರಿಗೆ ನೆನಪಿಸುವ ಕೆಲಸವನ್ನು ನಾಗೇಶ್ ಕುಮಾರ್ ನಿಯತ್ತಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ಎದುರಿಗಿದ್ದವರು ಎಷ್ಟೇ ದೊಡ್ಡ ಸ್ಟಾರ್ ಆದರೂ ಇದ್ದಿದ್ದನ್ನು ಇದ್ದಂತೇ ಹೇಳಿಬಿಡುವ ಅವರ ನೇರವಂತಿಕೆ ನಾಗೇಶ್ ಕುಮಾರ್ ಅವರ ಪಾಲಿಗೆ ವರವಾಗಿದ್ದಕ್ಕಿಂತಾ ಮುಳ್ಳಾಗಿರೋದೇ ಹೆಚ್ಚು.

ನಟ ಜಗ್ಗೇಶ್, ರಮೇಶ್ ಅರವಿಂದ್, ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಇವತ್ತಿನ ಹೀರೋಗಳ ತನಕ ಎಲ್ಲೋ ಇದ್ದವರನ್ನು ತಾವೇ ಕರೆದು ಫೋಟೋ ತೆಗೆದು ಪತ್ರಿಕೆಗಳಿಗೆ ಹಂಚಿದವರು ಕೆ ಎನ್ ಎನ್. ನಾಗೇಶ್ ಕುಮಾರ್ ತೆಗೆದ ಫೋಟೋವನ್ನು ಹಿಡಿದುಕೊಂಡೇ ಛಾನ್ಸು ಪಡೆದ ಹೀರೋಗಳೂ ಇದ್ದಾರೆ. ಸಾಕಷ್ಟು ಜನ ಇವತ್ತಿಗೂ ನಾಗೇಶ್ ಮಾಡಿದ ಉಪಕಾರವನ್ನು ಮನಸಾರೆ ನೆನೆಯುತ್ತಾರೆ.

ಸಿನಿಮಾ ನಟರು ಮಾತ್ರವಲ್ಲದೆ, ಸಾಹಿತಿ, ಪತ್ರಕರ್ತರೊಂದಿಗೂ ಬಾಂಧವ್ಯ ಹೊಂದಿದ ಅಪರೂಪದ ಛಾಯಾಗ್ರಾಹಕ ನಾಗೇಶ್ ಕುಮಾರ್. ಲಂಕೇಶರಂಥಾ ಮೇರು ಸಾಹಿತಿ, ಪತ್ರಕರ್ತರ ಕೃತಿಗಳ ಮುಖಪುಟಗಳಿಗೆ ಬಳಸಿರುವ ಬಹುತೇಕ ಫೋಟೋಗಳನ್ನು ತೆಗೆದಿದ್ದು ಇದೇ ನಾಗೇಶ್.

ಚಿತ್ರರಂಗ ಮತ್ತು ಪತ್ರಿಕೋದ್ಯಮದ ಜೊತೆಗೆ ಬಾಂಧವ್ಯ ಬೆಸೆದುಕೊಂಡಿರುವ ನಾಗೇಶ್ ಈಗ ಅರವತ್ತರ ಹೊಸ್ತಿಲಲ್ಲಿದ್ದಾರೆ. ನಾಗೇಶ್ ಕುಮಾರ್ ಅವರ ಮೂಲ ಶಿವಮೊಗ್ಗವಾದರೂ, ಬದುಕು ನೆಲೆಗೊಂಡಿರೋದು ಬೆಂಗಳೂರಲ್ಲೇ. ಇಂಥ ಕೆ.ಎನ್. ನಾಗೇಶ್ ಕುಮಾರ್ ಅವರ ವಯಸ್ಸಷ್ಟೇ ಅರವತ್ತು. ಅವರ ಉತ್ಸಾಹಕ್ಕಿನ್ನೂ ಹದಿನಾರರ ಎಳೆಯ ಪ್ರಾಯ…

ಅರುಣ್ ಕುಮಾರ್

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮನೋಜ-ರಂಜನಿ ಮೋಡಿ!

Previous article

ರವಿ ಬೋಪಣ್ಣನ ಮಗಳು!

Next article

You may also like

Comments

Leave a reply

Your email address will not be published. Required fields are marked *