ಕೆ. ಮಂಜು ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಿನಿಮಾ ಸೇರಿದಂತೆ ಸುದೀಪ್, ಯಶ್ ತನಕ ಕನ್ನಡದ ಬಹುತೇಕ ಸ್ಟಾರ್ ನಟರ ಚಿತ್ರಗಳನ್ನು ಈವರೆಗೆ ನಿರ್ಮಿಸಿದ್ದಾರೆ. ಇಂಥಾ ಕೆ. ಮಂಜು ಮಗ ಶ್ರೇಯಸ್ ನಟನೆಯ ಮೊದಲ ಸಿನಿಮಾ ಪಡ್ಡೆಹುಲಿಯನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದರು. ಈಗ ಎರಡನೇ ಚಿತ್ರಕ್ಕೆ ಸ್ವತಃ ಮಂಜು ಹೂಡಿಕೆ ಮಾಡುತ್ತಿದ್ದಾರೆ. ವಿಷ್ಣುಪ್ರಿಯ ಹೆಸರಿನ ಈ ಸಿನಿಮಾವನ್ನು ಕೇರಳದ ಖ್ಯಾತ ನಿರ್ದೇಶಕ ವಿ.ಕೆ. ಪ್ರಕಾಶ್ ನಿರ್ದೇಶಿಸಿದ್ದಾರೆ. ಈ ಚಿತ್ರ ಮಲಯಾಳಂನಲ್ಲಿ ಕೂಡಾ ತಯಾರಾಗುತ್ತಿದೆ. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಈ ಚಿತ್ರದ ನಾಯಕಿ. ಸ್ಟುಡಿಯೋ ರಿಪೋರ್ಟುಗಳ ಪ್ರಕಾರ ʻವಿಷ್ಣುಪ್ರಿಯʼ ಅದ್ಭುತವಾಗಿ ಮೂಡಿಬಂದಿದೆಯಂತೆ..!
ಇದೀಗ ಬಂದಿರುವ ಸುದ್ದಿಯ ಪ್ರಕಾರ ಕೊಬ್ರಿ ಮಂಜು ತಮ್ಮ ಮಗನನ್ನು ನೇರವಾಗಿ ಕೇರಳಕ್ಕೆ ಪರಿಚಯಿಸುವ ಪ್ಲಾನು ಮಾಡಿದ್ದಾರಂತೆ. ಅಲ್ಲಿನ ಅನೇಕ ನಿರ್ದೇಶಕರ ಮಾತುಕತೆಗಳು ನಡೆದಿದ್ದು, ಈಗ ಬಹುತೇಕ ಫೈನಲ್ ಕೂಡಾ ಆಗಿದೆಯಂತೆ. ಧಮಾಕಾ, ಒರು ಆಡಾರ್ ಲವ್, ಹ್ಯಾಪಿ ವೆಡ್ಡಿಂಗ್ ನಂತಾ ಸಿನಿಮಾಗಳನ್ನು ನಿರ್ದೇಶಿಸಿ ಮಲಯಾಳಂನಲ್ಲಿ ಹೆಸರು ಮಾಡಿರುವ ಡೈರೆಕ್ಟರ್ ಉಮರ್ ಲುಲು. ಶ್ರೇಯಸ್ʼಗಾಗಿ ಒಂದು ಮಲಯಾಳಂ ಸಿನಿಮಾ ನಿರ್ದೇಶಿಸಿ ಕೊಡಿ ಅಂತಾ ಮಂಜಣ್ಣ ಉಮರ್ʼಗೆ ದುಂಬಾಲು ಬಿದ್ದಿದ್ದಾರಂತೆ.
ಕನ್ನಡದಲ್ಲಿ ನಿರ್ದೇಶಕರಿಲ್ಲ ಅಂತಾನಾ? ಶ್ರೇಯಸ್ʼನನ್ನು ಕನ್ನಡದವರು ಒಪ್ಪುತ್ತಾರೋ ಇಲ್ಲವೋ ಅನ್ನುವ ಅನುಮಾನವಾ? ಕೇರಳದವರು ಇಷ್ಟಪಡಬಹುದು ಎನ್ನುವ ಅಂದಾಜೋ ಗೊತ್ತಿಲ್ಲ. ಒಟ್ಟಿನಲ್ಲಿ ಕೊಬ್ರಿ ಮಂಜುಗೆ ಈಗ ಮಲಯಾಳಂ ಮೇಲೆ ಲವ್ವಾಗಿರೋದಂತೂ ನಿಜ. ಕೇರಳದ ಒಬ್ಬ ನಿರ್ದೇಶಕನಿಂದ ಈಗ ʻವಿಷ್ಣುಪ್ರಿಯʼ ಪೂರ್ಣಗೊಳಿಸಿದ್ದಾರೆ. ಅಲ್ಲಿಂದಲೇ ನಾಯಕಿಯನ್ನೂ ಕರೆತಂದಿದ್ದಾರೆ. ಈಗ ನೋಡಿದರೆ ಮಗನಿಗೆ ಗಂಟು ಮೂಟೆ ಕಟ್ಟಿಸಿ ಕೇರಳಕ್ಕೇ ಶಿಫ್ಟ್ ಮಾಡಿಸುವ ಪ್ಲಾನು ರೂಪಿಸಿದ್ದಾರೆ…
ಮಲಯಾಳಂ ಮಾತ್ರವಲ್ಲದೆ, ಭವಿಷ್ಯದಲ್ಲಿ ಕೊಬ್ರಿ ಪುತ್ರ ಶ್ರೇಯಸ್ ಕೊರಿಯನ್, ಜಪಾನಿ ಸೇರಿದಂತೆ ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳಲ್ಲೂ ನಟಿಸಿ ಹೆಸರು ಮಾಡುವಂತಾಗಲಿ…!
Leave a Reply
You must be logged in to post a comment.