ಸ್ಟಾರ್ಗಳನ್ನು ಹಾಕಿಕೊಂಡು ಸಿನಿಮಾ ಮಾಡುವುದು, ಪ್ರ್ರೊಫೆಷನಲ್ ನಟರುಗಳಿಗೆ ತಕ್ಕ ಕತೆ ಬರೆದು ಸಿನಿಮಾ ಮಾಡೋದು ಮಾಮೂಲಿ. ಆದರೆ ಕಪ್ಪಗಿರುವ, ತಲೆಯಲ್ಲಿ ಕೂದಲಿಲ್ಲದ, ಜೋತು ಬೀಳುವಂತೆ ಮೀಸೆ ಬಿಟ್ಟ ವ್ಯಕ್ತಿಯನ್ನೇ ಕೇಂದ್ರವನ್ನಾಗಿಟ್ಟುಕೊಂಡು, ಅವರಿಗೆ ತಕ್ಕಂತಾ ಕತೆ ಸೃಷ್ಟಿಸಿ, ಅದನ್ನು ಅಷ್ಟೇ ಗುಣಮಟ್ಟದಲ್ಲಿ ಚಿತ್ರೀಕರಿಸೋದಿದೆಯಲ್ಲಾ? ನಿಜಕ್ಕೂ ಸವಾಲಿನ ಕೆಲಸವದು.
ಈ ನಿಟ್ಟಿನಲ್ಲಿ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಹಂತ ಹಂತದಲ್ಲೂ ಗೆಲ್ಲುತ್ತಾ ಬರುತ್ತಿದ್ದಾರೆ. ಈ ಚಿತ್ರದ ಟ್ರೇಲರು ಬಿಟ್ಟಾಗಲೇ ಮೊದಲ ಹಂತದ ಯಶಸ್ಸು ದೊರೆತಿತ್ತು. ನಂತರ ಬಂದ ಪೋಸ್ಟರುಗಳು, ಹಾಡುಗಳು ಕೂಡಾ ಈ ಚಿತ್ರದಲ್ಲಿ ಏನೋ ಇದೆ ಅನ್ನೋದನ್ನ ಸಾರಿ ಸಾರಿ ಹೇಳುತ್ತಿವೆ. ಕೊಡೆಮುರುಗ ಇದೇ ಏಪ್ರಿಲ್ 9ಕ್ಕೆ ಥೇಟರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮಜಬೂತಾದ ಟ್ರೇಲರನ್ನು ಹೊರಬಿಟ್ಟಿದ್ದಾರೆ.
ಸಿನಿಮಾರಂಗಕ್ಕೆ ಸಂಭಂದಪಟ್ಟಂತ ಒಂದು ಹಾಸ್ಯ ಭರಿತ ಕಥೆಯನ್ನು ಕೊಡೆಮುರುಗ ಚಿತ್ರ ಒಳಗೊಂಡಿದೆ. ಸದಾ ಅವಮಾನಗಳನ್ನು ಎದುರಿಸುತ್ತಲೇ ನಾಯಕನಾಗುವ ಕೊಡೆಮುರುಗನ ಕಥೆಯಿದು.. ಮೊದಲು ಮುನಿಕೃಷ್ಣ ಅವರನ್ನು ನಾಯಕನನ್ನಾಗಿ ಮಾಡುತ್ತೇವೆ ಎಂದಾಗ ಅಷ್ಟೊಂದು ಬರಗೆಟ್ಟಿದ್ದೀಯಾ, ನಿನ್ನ ತೆಲೆಯಲ್ಲಿ ಮೆದುಳು ಇದೆಯೇ ಎಂದು ಕೇಳಿದವರು ಈಗ ಪರವಾಗಿಲ್ಲ ಡೈರೆಕ್ಟ್ರು ಇಂಟಲಿಜೆಂಟು ಅಂತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವ್ಯಕ್ತಿಗಿಂತ ಚಿತ್ರದಲ್ಲಿ ಕಥೆ ಮುಖ್ಯ. ಆ ಕೆಲಸವನ್ನು ನಾವು ಮಾಡಿದ್ದೇವೆ ಎಲ್ಲರಿಗೂ ಇಷ್ಟವಾಗುವ ಹಾಸ್ಯಭರಿತ ಕಥೆ ಈ ಚಿತ್ರದಲ್ಲಿದೆ ಅನ್ನೋದು ನಿರ್ದೇಶಕರ ಅಭಿಪ್ರಾಯ. ನಟ ಮುನಿಕೃಷ್ಣ ಜೋಡಿಯಾಗಿ ಪಲ್ಲವಿ ಗೌಡ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕರಾದ ರವಿಕುಮಾರ್ ಅವರಿಗೆ ಇದೊಂದು ಯಶಸ್ವೀ ಚಿತ್ರವಾಗಲಿದೆ ಅನ್ನೋದರಲ್ಲಿ ಸಂಪೂರ್ಣ ನಂಬಿಕೆ ಇದೆ
ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ, ಸ್ಯಾಂಡಲ್’ವುಡ್ಡಿನಲ್ಲಿ ತಮ್ಮ ಇರುವಿಕೆಯನ್ನು ತೋರಿರುವವರು ಮ್ಯೂಸಿಕ್ ಡೈರೆಕ್ಟರ್ ಎಂ.ಎಸ್. ತ್ಯಾಗರಾಜ್. ಕೊಡೆಮುರುಗ ತ್ಯಾಗರಾಜ್ ಅವರ ಕೆಲಸವನ್ನು ಬೇರೆಯದ್ದೇ ಲೆವೆಲ್ಲಿನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಈ ಚಿತ್ರದಿಂದ ತ್ಯಾಗರಾಜ್ ಮುಂಚೂಣಿ ಸಂಗೀತ ನಿರ್ದೇಶಕರ ಸಾಲಿಗೆ ಬಂದು ನಿಲ್ಲೋದು ಗ್ಯಾರೆಂಟಿ. ಹಾಡುಗಳು ಸದ್ದು ಮಾಡುವುದರೊಂದಿಗೆ ಸಿನಿಮಾ ಕೂಡಾ ಗೆಲುವು ಕಂಡರೆ ಸಂಗೀತ ನಿರ್ದೇಶಕರ ಪಾಲಿಗೆ ಭಾಗ್ಯದ ಬಾಗಿಲು ತೆರೆದಂತೆ. ಕೊಡೆ ಮುರುಗ ಚಿತ್ರದ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಸೇರಿದಂತೆ ಸಾಕಷ್ಟು ಜನ ಪ್ರತಿಭಾವಂತರು ಇಲ್ಲಿ ಒಂದಾಗಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದ ಪುಸ್ತಕದಲ್ಲಿ ಗೆಲುವಿನ ಮೊಹರು ಒತ್ತುವ ಎಲ್ಲ ಸೂಚನೆಗಳನ್ನೂ ನೀಡಿದ್ದಾರೆ.
ಸದ್ಯ ಬಿಡುಗಡೆಗೊಂಡಿರುವ ಟ್ರೇಲರ್ ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ಸೆಳೆಯುತ್ತಿದೆ. ಈಗಾಗಲೇ ಕರ್ನಾಟಕದ ಎಲ್ಲ ಸಿನಿಮಾ ಪ್ರೇಕ್ಷಕರಿಗೂ ಕೊಡೆ ಮುರುಗ ಪರಿಚಯವಾಗಿರುವುದರಿಂದ ಹೊಸ ಟ್ರೇಲರಿನಲ್ಲಿ ಏನಿರಬಹುದು ಎಂಬ ಕುತೂಹಲವಿತ್ತು. ಈಗ ಹೊಸ ಟ್ರೇಲರ್ ಜನರನ್ನು ಸಖತ್ತಾಗಿ ರಂಜಿಸುತ್ತಿದೆ. ಇನ್ನು ಸಿನಿಮಾ ಹೇಗಿರಬಹುದು ಲೆಕ್ಕ ಹಾಕಿ…
No Comment! Be the first one.