ಈ ಯುಗಾದಿ ಕನ್ನಡ ಚಿತ್ರರಂಗದ ಪಾಲಿಗೆ ಹೊಸ ವಸಂತವಾಗಲಿದೆ ಅಂತಾ ಜನ ಬಯಸಿದ್ದರು. ಈ ವರ್ಷ ಬಿಡುಗಡೆಯಾದ ಉತ್ತಮ ಚಿತ್ರಗಳನ್ನು ಜನ ಪ್ರೀತಿಯಿಂದಲೇ ಸ್ವೀಕರಿಸುತ್ತಿದ್ದರು. ಆಕ್ಟ್ 1978 ಸಿನಿಮಾದಿಂದ ಆರಂಭಗೊಂಡು, ಪೊಗರು, ರಾಬರ್ಟ್, ಮುಂತಾದ ಸಿನಿಮಾಗಳು ಅತ್ಯುತ್ತಮ ಕಲೆಕ್ಷನ್ ಮಾಡಿದವು. ಕಳೆದ ಹತ್ತು ದಿನಗಳಿಂದ ಮತ್ತೆ ಕೊರೋನಾ ಯಥೇಚ್ಚವಾಗಿ ಹಬ್ಬುತ್ತಿರುವುದು ಮತ್ತು ಸರ್ಕಾರದ ಅವೈಜ್ಞಾನಿಕ ರೂಲ್ಸುಗಳು ಚಿತ್ರರಂಗವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ವಾರದಿಂದೀಚೆಗೆ ಬಸ್ ಚಾಲಕರ ಪ್ರತಿಭಟನೆಯಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಸರ್ಕಾರ ಎಲ್ಲೆಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೋ ಅಲ್ಲೆಲ್ಲಾ ನಿಯಮವನ್ನು ಗಾಳಿಗೆ ತೂರಿದೆ. ಅನಿಷ್ಟಕ್ಕೆಲ್ಲಾ ಶನೇಶ್ವರನೇ ಕಾರಣ ಅನ್ನುವಂತೆ ಕೊರೋನಾಗೂ ಚಿತ್ರಮಂದಿರಕ್ಕೂ ಸಂಬಂಧ ಕಲ್ಪಿಸಿ, ಥೇಟರಿನಲ್ಲಿ 50% ಪ್ರವೇಶ ನಿರ್ಬಂಧಿಸಿದೆ. ಜೊತೆಗೆ ಐಪಿಎಲ್ ಭೂತ ಬೇರೆ ವಕ್ಕರಿಸಿಕೊಂಡಿದೆ.
ಕನ್ನಡ ಚಿತ್ರರಂಗವನ್ನು ಥೇಟರಿಗೆ ಬಂದು ನೋಡುವವರಲ್ಲಿ ಬಹುತೇಕರು ಬಸ್ಸಲ್ಲಿ ಓಡಾಡುವವರು. ತೀರಾ ಅಗತ್ಯ ಸ್ಥಳಕ್ಕೇ ಓಡಾಡಲು ಆಗದಿದ್ದಾಗ, ಮನರಂಜನೆಯ ಮಾತೆಲ್ಲಿ? ಕರ್ನಾಟಕದ ಪ್ರತಿಯೊಂದು ಚಿತ್ರಮಂದಿರದಲ್ಲೂ ಸ್ಯಾನಿಟೈಸ್ ಮಾಡುವ ವ್ಯವಸ್ಥೆಯಿದ್ದರೂ, ಸರ್ಕಾರ ಕೊರೋನಾ ಭೀತಿ ಸೃಷ್ಟಿಸಿರೋದರಿಂದ ಮಲ್ಟಿಪ್ಲೆಕ್ಸ್ ಆಡಿಯನ್ಸ್ ಕೂಡಾ ಚಿತ್ರಮಂದಿರಕ್ಕೆ ಬರಲು ಹಿಂದೇಟಾಕುತ್ತಿದ್ದಾರೆ. ನೈಟ್ ಕರ್ಫ್ಯೂ ಜಾರಿಯಲ್ಲಿರೋದರಿಂದ ಸಂಜೆಮೇಲೆ ಸಿನಿಮಾ ನೋಡಲು ಯಾರು ತಾನೆ ಬಂದಾರು?
ಈ ಎಲ್ಲಾ ಕಾರಣಗಳಿಂದ ಕಳೆದ ಶುಕ್ರವಾರ ತೆರೆಗೆ ಬಂದ ಕೊಡೆಮುರುಗ ಚಿತ್ರವನ್ನು ನಿರ್ಮಾಪಕರು ಚಿತ್ರಮಂದಿರಗಳಿಂದ ತಾವೇ ಹಿಂಪಡೆಯುತ್ತಿದ್ದಾರೆ. ಕೊಡೆಮುರುಗ ಸಿನಿಮಾ ನೋಡಿದವರನ್ನೆಲ್ಲಾ ರಂಜಿಸಿತ್ತು. ಕಂಗಾಲಾಗಿರುವ ಜನರ ಮನರಂಜಿಸುವುದನ್ನೇ ಪ್ರಧಾನ ಉದ್ದೇಶವನ್ನಾಗಿಟ್ಟುಕೊಂಡು ನಿರ್ದೇಶಕ ಸುಬ್ರಮಣ್ಯ ಪ್ರಸಾದ ಕೊಡೆ ಮುರುಗನನ್ನು ರೂಪಿಸಿದ್ದರು. ಅಷ್ಟು ಸುಲಭಕ್ಕೆ ಎಲ್ಲ ಚಿತ್ರಗಳನ್ನೂ ಒಪ್ಪದ ವಿಮರ್ಶಕರೂ ಸಾರಾಸಗಟಾಗಿ ಮೆಚ್ಚಿದ ಸಿನಿಮಾ ಕೊಡೆ ಮುರುಗ. ಚಿತ್ರ ಮೀಡಿಯಾದಲ್ಲಿ ಒಳ್ಳೆ ರೇಟಿಂಗ್ ಪಡೆದಿತ್ತು. ಆರಂಭದ ಮೂರು ದಿನ ಅದ್ಭುತ ಕಲೆಕ್ಷನ್ ಕೂಡಾ ಕಂಡಿತ್ತು.
ಆದರೆ, ಕೊರೋನಾದ ಸೈಡ್ ಎಫೆಕ್ಟ್ ನಿಂದ ಎಲ್ಲಿ ತಮ್ಮ ಸಿನಿಮಾಗೆ ಏಟು ಬಿದ್ದುಬಿಡುತ್ತದೋ? ಒಂದು ವೇಳೆ ಸರ್ಕಾರ ಲಾಕ್ ಡೌನ್ ನಿಯಮವನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದರೆ ಜನ ಥೇಟರಿಗೆ ಬರುತ್ತಾರೋ ಇಲ್ಲವೋ? ಎಲ್ಲರಿಂದ ಪ್ರಶಂಸೆ ಪಡೆದಿರುವ ಕೊಡೆಮುರುಗನನ್ನು ವಿನಾಕಾರಣ ಪರೀಕ್ಷೆಗೊಡ್ಡುವುದು ಬೇಡ. ಹೇಗೂ ತಮ್ಮ ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಈ ಕೊರೋನಾ ಕಾಟ ಕಡಿಮೆಯಾದ ನಂತರ, ಜೂನ್ ಅಥವಾ ಜುಲೈ ತಿಂಗಳಲ್ಲಿ ಮತ್ತೆ ಕೊಡೆಮುರುಗನನ್ನು ಚಿತ್ರಮಂದಿರಕ್ಕೆ ಕರೆತರೋಣ ಅಂತಾ ನಿರ್ಮಾಪಕ ರವಿಕುಮಾರ್ ಮತ್ತು ನಿರ್ದೇಶಕ ಪ್ರಸಾದ್ ನಿರ್ಧರಿಸಿದ್ದಾರೆ.
ಕೊಡೆ ಮುರುಗ ಚಿತ್ರವನ್ನು ತೆರೆಗೆ ತರಬೇಕು ಅಂತಾ ತೀರ್ಮಾನಿಸಿದ ಹೊತ್ತಲ್ಲಿ ಕೊರೋನಾ ಈ ಪರಿ ಬೆದರಿಸುತ್ತದೆ ಅನ್ನೋ ಅಂದಾಜಿರಲಿಲ್ಲ. ಎಲ್ಲವೂ ಸಹಜ ಸ್ಥಿತಿಯಲ್ಲೇ ಇತ್ತು. ಜನ ನೂಕುನುಗ್ಗಲಿನಲ್ಲಿ ಬಂದು ಸಿನಿಮಾಗಳನ್ನು ನೋಡುತ್ತಿದ್ದರು. ಆದರೆ ಏಕಾಏಕಿ ಪರಿಸ್ಥಿತಿ ಬದಲಾಗಿದೆ. ಈ ಸಂದರ್ಭದಲ್ಲಿ ಕೊಡೆಮುರುಗ ತಂಡ ಕೈಗೊಂಡಿರುವುದು ನಿಜಕ್ಕೂ ದೃಢ ನಿರ್ಧಾರವಾಗಿದೆ. ಪಬ್ಲಿಸಿಟಿ ಖರ್ಚು ಮಾಡಿದ ದುಡ್ಡು, ಥೇಟರ್ ಬಾಡಿಗೆ ಹೋಗತ್ತೆ ಅಂತಾ ಸಿನಿಮಾ ಪ್ರದರ್ಶನವನ್ನು ಮುಂದುವರೆಸಿದರೆ, ಆಗುವ ನಷ್ಟಕ್ಕೆ ಯಾರೂ ಹೊಣೆಯಾಗುವುದಿಲ್ಲ. ಯಾವ ಸ್ಟಾರ್ ನಟರಿಲ್ಲದಿದ್ದರೂ ಎಷ್ಟೋ ಚಿತ್ರಮಂದಿರಗಳಲ್ಲಿ ಬಾಡಿಗೆ ಪಡೆಯದೆ ಅಡ್ವಾನ್ಸ್ ಹಣ ಕೊಟ್ಟು ಈ ಚಿತ್ರವನ್ನು ಪಡೆದಿದ್ದರು.
ಯಾರೆಲ್ಲಾ ಕೊಡೆ ಮುರುಗನನ್ನು ನೋಡಿಲ್ಲವೋ ಅವರೆಲ್ಲಾ ಮರುಬಿಡುಗಡೆಯಾದಾಗ ಬಂದು ನೋಡಿ ಎಂಜಾಯ್ ಮಾಡಬಹುದು. ಈಗಾಗಲೇ ಈ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿರೋದರಿಂದ ಓಟಿಟಿ, ಚಾನೆಲ್ಲುಗಳು ಒಳ್ಳೇ ಮೊತ್ತಕ್ಕೆ ಸಿನಿಮಾವನ್ನು ಖರೀದಿಸಿ ಪ್ರಸಾರ ಮಾಡುವ ಸಾಧ್ಯತೆಯೂ ಇದೆ. ತಮ್ಮ ಸಿನಿಮಾವನ್ನು ಜನ ಥೇಟರಿನಲ್ಲೇ ನೋಡಬೇಕು ಅನ್ನೋ ಹಂಬಲ ನಿರ್ಮಾಪಕರದ್ದು. ಹೀಗಾಗಿ ಓಟಿಟಿಗೆ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ!
Leave a Reply
You must be logged in to post a comment.