ಯಾವ ಸೂಪರ್ ಸ್ಟಾರ್ ಸಿನಿಮಾವನ್ನೂ ಮೀರಿಸುವಂತೆ ಸೌಂಡು ಮಾಡುತ್ತಿರುವ ಏಕೈಕ ಸಿನಿಮಾ ಎಂದರೆ ಕೊಡೆ ಮುರುಗ. ಈ ಚಿತ್ರದ ಹೆಸರು ಕೇಳಿದ ದಿನದಿಂದ ಜನ ಒಂದಲ್ಲಾ ಒಂದು ಕಾರಣಕ್ಕೆ ಕೊಡೆ ಮುರುಗನ ಬಗ್ಗೆ ಕುತೂಹಲ ಇರಿಸಿಕೊಂಡಿದ್ದಾರೆ. ಅಂತಿಮವಾಗಿ ಈ ವಾರ ಕೊಡೆ ಮುರುಗ ತೆರೆ ಮೇಲೆ ಬರುತ್ತಿದ್ದಾನೆ.
ಈ ಸಿನಿಮಾದ ಟೀಸರು ಟ್ರೇಲರುಗಳ ಜೊತೆಗೆ ಹಾಡುಗಳು ಸಹಾ ಸಾಕಷ್ಟು ಸೌಂಟು ಮಾಡಿವೆ. ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಅವರೇ ಬರೆದಿದ್ದ ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದ್ರೆ ತಿಪ್ಪೆ ಕೆದ್ರೋದ್ ಬಿಟ್ಟಿತಾ? ಅನ್ನೋ ಹಾಡು ಬಿಡುಗಡೆಯಾಗಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಜೊತೆಗೆ ಯೋಗರಾಜ್ ಭಟ್ ಬರೆದು, ವಿಜಯ ಪ್ರಸಾದ್ ಹಾಡಿರುವ ಮುರುಗ ನಾನು ಮುರುಗಿ ನೀನು ಎನ್ನುವ ಹಾಡು ಕೂಡಾ ಮಜವಾಗಿತ್ತು.
ಸ್ಟಾರ್ಗಳನ್ನು ಹಾಕಿಕೊಂಡು ಸಿನಿಮಾ ಮಾಡುವುದು, ಪ್ರ್ರೊಫೆಷನಲ್ ನಟರುಗಳಿಗೆ ತಕ್ಕ ಕತೆ ಬರೆದು ಸಿನಿಮಾ ಮಾಡೋದು ಮಾಮೂಲಿ. ಆದರೆ ಕಪ್ಪಗಿರುವ, ತಲೆಯಲ್ಲಿ ಕೂದಲಿಲ್ಲದ, ಜೋತು ಬೀಳುವಂತೆ ಮೀಸೆ ಬಿಟ್ಟ ವ್ಯಕ್ತಿಯನ್ನೇ ಕೇಂದ್ರವನ್ನಾಗಿಟ್ಟುಕೊಂಡು, ಅವರಿಗೆ ತಕ್ಕಂತಾ ಕತೆ ಸೃಷ್ಟಿಸಿ, ಅದನ್ನು ಅಷ್ಟೇ ಗುಣಮಟ್ಟದಲ್ಲಿ ಚಿತ್ರೀಕರಿಸೋದಿದೆಯಲ್ಲಾ? ನಿಜಕ್ಕೂ ಸವಾಲಿನ ಕೆಲಸವದು. ಈ ನಿಟ್ಟಿನಲ್ಲಿ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಹಂತ ಹಂತದಲ್ಲೂ ಗೆಲ್ಲುತ್ತಾ ಬರುತ್ತಿದ್ದಾರೆ. ಈ ಚಿತ್ರದ ಟ್ರೇಲರು ಬಿಟ್ಟಾಗಲೇ ಮೊದಲ ಹಂತದ ಯಶಸ್ಸು ದೊರೆತಿತ್ತು. ನಂತರ ಬಂದ ಪೋಸ್ಟರುಗಳು, ಹಾಡುಗಳು ಕೂಡಾ ಈ ಚಿತ್ರದಲ್ಲಿ ಏನೋ ಇದೆ ಅನ್ನೋದನ್ನ ಸಾರಿ ಸಾರಿ ಹೇಳಿದ್ದಾಯ್ತು. ಈಗ ಕೊನೆಯದಾಗಿ ಕೊಡೆ ಮುರುಗ ಥೇಟರಿಗೂ ಬರುತ್ತಿದ್ದಾನೆ.
ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ, ಸ್ಯಾಂಡಲ್’ವುಡ್ಡಿನಲ್ಲಿ ತಮ್ಮ ಇರುವಿಕೆಯನ್ನು ತೋರಿರುವವರು ಮ್ಯೂಸಿಕ್ ಡೈರೆಕ್ಟರ್ ಎಂ.ಎಸ್. ತ್ಯಾಗರಾಜ್. ಕೊಡೆಮುರುಗ ತ್ಯಾಗರಾಜ್ ಅವರ ಕೆಲಸವನ್ನು ಬೇರೆಯದ್ದೇ ಲೆವೆಲ್ಲಿನಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ.
ಈ ಚಿತ್ರದಿಂದ ತ್ಯಾಗರಾಜ್ ಮುಂಚೂಣಿ ಸಂಗೀತ ನಿರ್ದೇಶಕರ ಸಾಲಿಗೆ ಬಂದು ನಿಲ್ಲೋದು ಗ್ಯಾರೆಂಟಿ. ಸಾಕಷ್ಟು ಬಾರಿ ಅತ್ಯುತ್ತಮ ಸಂಗೀತವಿದ್ದರೂ, ಹಾಡುಗಳು ಗೆದ್ದರೂ ಸಿನಿಮಾದ ಸೋಲು ಸಂಗೀತ ನಿರ್ದೇಶಕರ ಶ್ರಮವನ್ನೆಲ್ಲಾ ನಿವಾಳಿಸಿ ಬಿಸಾಕಿರುತ್ತದೆ. ಹಾಡುಗಳು ಸದ್ದು ಮಾಡುವುದರೊಂದಿಗೆ ಸಿನಿಮಾ ಕೂಡಾ ಗೆಲುವು ಕಂಡರೆ ಸಂಗೀತ ನಿರ್ದೇಶಕರ ಪಾಲಿಗೆ ಭಾಗ್ಯದ ಬಾಗಿಲು ತೆರೆದಂತೆ. ಕೊಡೆ ಮುರುಗ ಚಿತ್ರದ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಸೇರಿದಂತೆ ಸಾಕಷ್ಟು ಜನ ಪ್ರತಿಭಾವಂತರು ಇಲ್ಲಿ ಒಂದಾಗಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದ ಪುಸ್ತಕದಲ್ಲಿ ಗೆಲುವಿನ ಮೊಹರು ಒತ್ತುವ ಎಲ್ಲ ಸೂಚನೆಗಳನ್ನೂ ನೀಡಿದ್ದಾರೆ. ವರ್ಷಗಟ್ಟಲೆ ತಪಸ್ಸಿನಂತೆ ಕೂತು ಸೃಜನಶೀಲ ಸಂಗೀತ ಹೊಮ್ಮಿಸುತ್ತಿರುವ ತ್ಯಾಗರಾಜ್ ಪಾಲಿಗೂ ಮುರುಗನ ಕೊಡೆ ಗೆಲುವಿನ ನೆರಳು ನೀಡಲಿ…!
No Comment! Be the first one.