ಅದೃಷ್ಟ, ದುರಾದೃಷ್ಟಗಳೆಲ್ಲಾ ಅವರವರ ನಂಬಿಕೆಗೆ ಬಿಟ್ಟಿದ್ದು. ಅವನ್ನೆಲ್ಲಾ ಮೀರುವುದು ಮನುಷ್ಯರ ಗುಣ ಮತ್ತು ಅವರ ಸುತ್ತಲಿನ ವಾತಾವರಣ. ಕೆಲವರ ಮುಖ ನೋಡುತ್ತಲೇ ಒಂಥರಾ ಪಾಸಿಟೀವ್ ಫೀಲ್ ಹುಟ್ಟುತ್ತದೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವನ್ನಾಗಿಸುತ್ತಿರುವ ನಿರ್ಮಾಣ ಸಂಸ್ಥೆ ಕ್ರಿಸ್ಟಲ್ ಪಾರ್ಕ್ ಮತ್ತು ಅದರ ಮುಂದಾಳು ಟಿ.ಆರ್. ಚಂದ್ರಶೇಖರ್. ಒಂದೂವರೆ ದಶಕಗಳ ಕಾಲ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡುತ್ತಾ, ಸಿಕ್ಕ ಅವಕಾಶಗಳನ್ನೇ ಮೆಟ್ಟಿಲಾಗಿಸಿಕೊಂಡವರು ಬರಹಗಾರ ಕೆ.ಎಲ್. ರಾಜಶೇಖರ್ ಸಣ್ಣ ಪುಟ್ಟ ಸಿನಿಮಾಗಳಲ್ಲಿ ಕೆಲಸ ಶುರು ಮಾಡಿ, ಮಜಾ ಟಾಕೀಸಿನಂಥಾ ಯಶಸ್ವೀ ಶೋಗೆ ನೂರಾರು ಎಪಿಸೋಡುಗಳ ಡೈಲಾಗು ಬರೆದು, ಅದರ ಜೊತೆಜೊತೆಗೇ ರಾಬರ್ಟ್, ವಿಕ್ಟರಿ2, ಅಮ್ಮ ಐ ಲವ್ ಯು,ತ್ರಿಬಲ್ ರೈಡಿಂಗ್, ಉಪಾಧ್ಯಕ್ಷ – ಹೀಗೆ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ ರಚಿಸಿದವರು ರಾಜಶೇಖರ್. ನಿರ್ದೇಶನ ಮಾಡಲು ಬೇಕಾದ ಎಲ್ಲ ಅರ್ಹತೆ ಪಡೆದು ಈಗ ಕರೆಕ್ಟಾದ ಸಮಯಕ್ಕೆ ಡೈರೆಕ್ಷನ್ ಆರಂಭಿಸಿದ್ದಾರೆ. ಇನ್ನು, ನಟ ಕೋಮಲ್ ಕನ್ನಡ ಚಿತ್ರರಂಗದ ತೀರಾ ಅಪರೂಪದ ಕಾಮಿಟಿ ನಟ. ಅಣ್ಣ ಜಗ್ಗೇಶ್ ಛಾಯೆಯಿಂದ ತಪ್ಪಿಸಿಕೊಂಡು ತನ್ನದೇ ಇಮೇಜು ಸೃಷ್ಟಿಸಿಕೊಂಡ ಪ್ರತಿಭಾವಂತ. ಈ ಎಲ್ಲರೂ ಈಗ ಒಂದೇ ಜಾಗದಲ್ಲಿ ಸೇರಿದ್ದಾರೆ. ಯಾವ 2020 ಹೆಸರು ಕೇಳಿದರೇನೆ ಜಗತ್ತು ಬೆಚ್ಚಿಬೀಳುತ್ತಿದೆಯೋ ಅದೇ 2020 ಸಂಖ್ಯೆಯನ್ನು ತಮ್ಮ ಸಿನಿಮಾದ ಶೀರ್ಷಿಕೆಯನ್ನಾಗಿಸಿಕೊಂಡಿದ್ದಾರೆ.
ಕೋಮಲ್ ಕೈ ಹಿಡಿಯಲಿ 2020 : ತಾನು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರಬೇಕೆನ್ನು ವ್ಯಕ್ತಿ; ಹಠಕ್ಕೆ ಬಿದ್ದರೆ ಥೇಟು ರಾಕ್ಷಸನಂತೆ ಕೆಲಸ ಮಾಡುವ ಮನುಷ್ಯ ಕೋಮಲ್. ಅಣ್ಣನ ಜೊತೆ ಸಣ್ಣ ಪುಟ್ಟ ಕಾಮಿಡಿ ರೋಲುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್ ಮನಸ್ಸಿನಲ್ಲಿ ತಾನೊಬ್ಬ ಪರಿಪೂರ್ಣ ಹಾಸ್ಯ ನಟ ಅನ್ನಿಸಿಕೊಳ್ಳಬೇಕು ಅನ್ನೋ ಬಯಕೆ ಹುಟ್ಟಿತ್ತು. ಕೂಡಲೇ ಅದಕ್ಕೆ ಬೇಕಿರುವ ತಯಾರಿಗಳನ್ನು ಮಾಡಿಕೊಂಡರು, ಒಂದರ ಹಿಂದೊಂದು ಅವಕಾಶ ಪಡೆದು ಕನ್ನಡದ ಯಾವ ಸ್ಟಾರ್’ಗಳಿಗೂ ಕಡಿಮೆಯಿಲ್ಲದಷ್ಟು ವರ್ಚಸ್ಸು ಪಡೆದರು. ಅದೇ ಹೊತ್ತಿಗೆ ‘ಇನ್ನೂ ಎಷ್ಟು ದಿನ ಈ ಕಾಮಿಡಿ ರೋಲ್ ಮಾಡೋದು? ನಾನೂ ಹೀರೋ ಆಗ್ಬೇಕು’ ಅಂತಾ ಯೋಚಿಸಿದ್ದರು ಕೋಮಲ್. ತಕ್ಷಣ ಕಾರ್ಯಪ್ರವೃತ್ತರಾಗಿ ಅದಕ್ಕೆ ಬೇಕಿರುವ ಹೋಂ ವರ್ಕ್ ಮಾಡಿಕೊಂಡು ಹೀರೋ ಆಗಿ ಎಂಟ್ರಿ ಕೊಟ್ಟೇ ಬಿಟ್ಟರು.
ಅಂದುಕೊಂಡಂತೇ ಗೆದ್ದರು ಕೂಡಾ. ಕರೆಕ್ಟಾಗಿ ಮೇಂಟೇನು ಮಾಡಿದ್ದಿದ್ದರೆ ಈ ಹೊತ್ತಿಗೆ ಕೋಮಲ್ ಸೋಲೇ ಇಲ್ಲದೆ ಬದುಕಬಹುದಿತ್ತು. ನಿರ್ದೇಶಕರು ಬಂದು ಕತೆ ಹೇಳಿದಾಗ ‘ನೀನು ಹೇಳಿದ ಕತೆ ಬ್ಯಾಡ ಗುರೂ.. ಈ ಸೀಡಿ ನೋಡಿ ಸ್ಕ್ರಿಪ್ಟು ರೆಡಿ ಮಾಡು’ ಅಂತಾ ಯಾವ್ಯಾವುದೋ ಭಾಷೆಯ ಸಿನಿಮಾಗಳನ್ನು ನಿರ್ದೇಶಕರ ಮೇಲೆ ಕೋಮಲ್ ಹೇರಿದರೋ ಆವತ್ತಿಂದಲೇ ಅವರ ಡೌನ್ ಫಾಲ್ ಕೂಡಾ ಶುರುವಾಯಿತು. ಕಡ ತಂದ ಸಿನಿಮಾಗಳು ಬರಕತ್ತಾಗಲಿಲ್ಲ. ನಿರ್ದೇಶಕರನ್ನು ಪಕ್ಕಕ್ಕೆ ಕೂರಿಸಿ ತಾವೇ ಎಲ್ಲವನ್ನೂ ನಿಭಾಯಿಸಿಕೊಳ್ಳುತ್ತಾರೆ ಅನ್ನೋ ಆರೋಪ ಕೂಡಾ ಕೋಮಲ್ ವಿರುದ್ಧ ಹೆಚ್ಚಾಗಿತ್ತು. ಈ ಹೊತ್ತಿಗೆ ಕೋಮಲ್ ವರ್ಚಸ್ಸೂ ಕಡಿಮೆಯಾಗಿತ್ತು. ಗಾಂಧಿ ನಗರದ ಜನ ಕೂಡಾ ಕೋಮಲ್ ಅವರನ್ನು ಹುಡುಕಿಕೊಂಡು ಹೋಗೋದನ್ನ ಬಿಟ್ಟರು.
ಅದೇ ವೇಳೆಗಾಗಲೇ ಅದ್ಯಾವುದೋ ಸಮಸ್ಯೆಯಾಗಿ ಕೋಮಲ್ ವಿಪರೀತ ಅನ್ನುವಷ್ಟು ದಪ್ಪವಾಗಿಬಿಟ್ಟಿದ್ದರು. ‘ಸ್ಕ್ರೀನ್ ಮೇಲೆ ನೋಡಕ್ಕಾಗಲ್ಲ ಗುರೂ’ ಅಂತಾ ಅವರ ಅಭಿಮಾನಿಗಳೇ ಮಾತಾಡಲು ಆರಂಭಿಸಿದರು. ಇದನ್ನೆಲ್ಲಾ ಗಮನಿಸುತ್ತಿದ್ದ ಕೋಮಲ್ ಎದೆಯಲ್ಲಿ ಸದ್ದಡಗಿ ಕೂತಿದ್ದ ತ್ರಿವಿಕ್ರಮ ಮದ್ದೆ ಎದ್ದು ನಿಂತ. ‘ಆಗಿದ್ದಾಗಲಿ ಈ ಸಾರಿ ನಾನ್ನ ಬಾಡಿಯನ್ನು ಫಿಟ್ ಮಾಡಿ ತೋರಿಸ್ತೀನಿ. ಇನ್ಮುಂದೆ ಕಾಮಿಡಿ ಹೀರೋ ಅಲ್ಲ, ನಾನು ಕಮರ್ಷಿಯಲ್ ಹೀರೋ ಕಣೋ’ ಅಂತಾ ಥೇಟು ಕೆಂಪೇಗೌಡ ಸಿನಿಮಾದ ಆರ್ಮುಗಂ ಶೈಲಿಯಲ್ಲಿ ಅಬ್ಬರಿಸಿದರು ಕೋಮಲ್.
ಎಲ್ಲರೂ ‘ಕೋಮಲು ಕಾಮಿಡಿ ಮಾಡ್ತಾ ಐತೆ’ ಅಂತಾ ನಗಾಡಿದ್ದರು. ಆದರೆ, ಯಾವ ಜನ ಲೇವಡಿ ಮಾಡಿದ್ದರೋ ಅದೇ ಮಂದಿ ಬರೀ ಮೂಗು ಮಾತ್ರವಲ್ಲದೆ ಎಲ್ಲೆಂದರಲ್ಲಿ ಬೆರಳಿಟ್ಟುಕೊಳ್ಳುವ ರೇಂಜಿಗೆ ಕೋಮಲ್ ಬದಲಾಗಿದ್ದರು. ಪೊಲೀಸ್ ಅಧಿಕಾರಿಯ ಗೆಟಪ್ಪಿನಲ್ಲಿ ಬಂದು ನಿಂತು ‘ನಾನು ಎರಡನೇ ಕೆಂಪೇಗೌಡ’ ಅಂತಾ ತೊಡೆ ತಟ್ಟಿದರು. ಸಿನಿಮಾ ಒಂಚೂರು ವಿಳಂಬವಾಯಿತು.
ಕಡೆಗೂ ಒಂದು ದಿನ ರಿಲೀಸೂ ಆಯ್ತು. ದುರಂತವೆಂದರೆ ಇವರು ಫಿಕ್ಸ್ ಮಾಡಿದ್ದ ಡೇಟಿನಲ್ಲಿ ಮೊದಲು ಬೇರೆ ಯಾವುದೂ ಸಿನಿಮಾ ಇರಲಿಲ್ಲ. ಕುರುಕ್ಷೇತ್ರ ಇನ್ನೂ ಒಂದು ವಾರ ಮುಂಚೆಯೇ ಬಿಡುಗಡೆಯಾಗಿರಬೇಕಿತ್ತು. ಕೋಮಲ್ ನಸೀಬು ಕೆಟ್ಟಿತ್ತೋ ಏನೋ ಕುರುಕ್ಷೇತ್ರ ಅಂದುಕೊಂಡಿದ್ದಕ್ಕಿಂತಾ ಒಂದು ವಾರ ಮುಂದೆ ಬಂದುಬಿಟ್ಟಿತು. ಇಡೀ ರಾಜ್ಯ ಭೀಕರ ಮಳೆಯಲ್ಲಿ ಮುಳುಗಿಹೋಗಿತ್ತು. ನೆರೆಯ ನಡುವೆಯೂ ಸಿನಿಮಾ ನೋಡಲು ನಿಂತವರೆಲ್ಲಾ ಹೋಗಿ ಒದ್ದೆ ಸೀಟಿನಲ್ಲಿಯೇ ಕೂತು ಕುರುಕ್ಷೇತ್ರವನ್ನು ನೋಡಿದರು. ಇತ್ತ ಕೋಮಲ್ ಅವರ ಕೆಂಪೇಗೌಡನ ಬಗ್ಗೆ ಒಳ್ಳೇ ಪ್ರತಿಕ್ರಿಯೆಗಳು ಕೇಳಿಬಂದವಾದರೂ ಬಾಕ್ಸಾಫೀಸಿನಲ್ಲಿ ಘೋರ ಸೋಲು ಕಾಣಬೇಕಾಯಿತು. ಆ ಮೂಲಕ ಕುರುಕ್ಷೇತ್ರದ ಕಾವು ಕೆಂಪೇಗೌಡನ ಕನಸನ್ನು ಕಮರುವಂತೆ ಮಾಡಿತು.
ಕೋಮಲ್ ಯಾವತ್ತಿಗೂ ಸೋಲಿಗೆ ಅಂಜಿದವರಲ್ಲ. ನಿಮ್ಮ ಕತೆ ಮುಗಿದೇಹೋಯ್ತು ಅಂತಾ ಜನ ಮಾತಾಡಿಕೊಂಡಾಗಲೆಲ್ಲಾ ಎದ್ದೆದ್ದು ನಿಂತವರು. ಎಂಥವರಿಗೂ 2020 ದುರಾದೃಷ್ಟದ ಸಂಕೇತದಂತೆ ಗೋಚರಿಸುತ್ತಿದೆ. ಆದರೆ ಕೋಮಲ್ಗೆ ಇದೇ ಅಂಕಿ ಕೈ ಹಿಡಿಯುವಂತಾಗಲಿ. ರಾಜಶೇಖರ್ ಟ್ಯಾಲೆಂಟೆಂಡ್ ಮಾತ್ರ ಅಲ್ಲ, ಸಹೃದಯ ಕೂಡಾ. ಈ ಹಿಂದಿನ ಸಿನಿಮಾಗಳಲ್ಲಿ ಕೋಮಲ್ ನಿರ್ದೇಶಕರೊಂದಿಗೆ ಏನೇ ಕಿರಿಕಿರಿ ಮಾಡಿಕೊಂಡಿರಬಹುದು. ಆದರೆ, ಎಲ್ಲರೊಂದಿಗೂ ಹೊಂದಿಕೊಳ್ಳುವ ರಾಜಶೇಖರ್ ಜೊತೆಗಾದರೂ ಅನ್ಯೋನ್ಯವಾಗಿ ಹೆಜ್ಜೆ ಇಡಲಿ. ಖಂಡಿತಾ ಗೆಲುವು ದಕ್ಕುತ್ತದೆ..!
No Comment! Be the first one.