ಸತತ ನಾಲ್ಕು ವರ್ಷಗಳಿಂದ ಕಾಯಿಸಿ, ಕೊನೇ ಕ್ಷಣದ ತನಕ ಕಾಡಿಸಿ ಕಡೆಗೂ ಕೋಟಿಗೊಬ್ಬ ತೆರೆಗೆ ಬಂದಿದ್ದಾನೆ.

ಕಳೆದೆರಡು ವರ್ಷಗಳಿಂದ ಸುದೀಪ್‌ ನಟನೆಯ ಯಾವ ಸಿನಿಮಾ ಕೂಡಾ ರಿಲೀಸ್‌ ಆಗಿರಲಿಲ್ಲ. ಈ ಕಾರಣಕ್ಕಾಗಿ ಕಿಚ್ಚನ ಅಭಿಮಾನಿಗಳು ಕೋಟಿಗೊಬ್ಬ-3ಗಾಗಿ ಕಾತರದಿಂದ ಕಾಯುತ್ತಿದ್ದರು. ಹಲವಾರು ಅಡ್ಡಿ, ಆತಂಕಗಳ ನಡುವೆಯೂ ಚಿತ್ರವೀಗ ರಿಲೀಸ್‌ ಆಗಿದೆ.

ಈಡೀ ಮನುಷ್ಯ ಸಂಕುಲವನ್ನು ಕಿತ್ತು ತಿನ್ನುತ್ತಿರುವ, ಭವಿಷ್ಯಕ್ಕೂ ಕಂಟಕಪ್ರಾಯವಾಗಿರುವ ಮೆಡಿಕಲ್‌ ಮಾಫಿಯಾ ಸುತ್ತ ಕೋಟಿಗೊಬ್ಬನ ಕತೆ ಆವರಿಸಿಕೊಂಡಿದೆ. ಥೇಟು ಕಂಪ್ಯೂಟರ್‌ ಗೆ ಸಾಫ್ಟ್‌ ವೇರ್‌ ಅಳವಡಿಸಿ ಪ್ರೋಗ್ರಾಮಿಂಗ್‌ ಮಾಡುವಂತೆ, ತಾಯಿಯ ಗರ್ಭದಲ್ಲಿರುವ ಮಗುವಿಗೇ ಇಂಜೆಕ್ಟ್‌ ಮಾಡಿ, ಆ ಮಗು ಹೊರಬಂದು, ಬೆಳೆದು ಬಾಳುವ ತನಕ ಔಷಧಗಳ ಮೇಲೆ ಅವಲಂಭಿತವಾಗುವಂತೆ ನೋಡಿಕೊಳ್ಳುವ ಕಬಂಧ ಬಾಹುವದು. ಮನುಷ್ಯನಿಗೆ ಯಾವ ಯಾವ ವಯಸ್ಸಿನಲ್ಲಿ ಎಂತೆಂತಾ ರೋಗ ಬರಬೇಕು? ಯಾವೆಲ್ಲಾ ವೈರಸ್ಸುಗಳು ಅಟ್ಯಾಕ್‌ ಮಾಡಬೇಕು ಅನ್ನೋದೆಲ್ಲಾ ಮೊದಲೇ ನಿರ್ಧಾರಿತವಾಗಿರುತ್ತದೆ. ಹಾಗೆ ಅಟಕಾಯಿಸಿಕೊಂಡ ರೋಗದಿಂದ ಜೀವ ಉಳಿಸಿಕೊಳ್ಳಲು ಜನ ಹಣ ಖರ್ಚು ಮಾಡಬೇಕು. ಆ ಮೂಲಕ ತಾವು ಲಾಭ ಮಾಡಿಕೊಳ್ಳಬೇಕು ಎಂದು ಬಯಸುವ ದೇವೇಂದ್ರ ಹೆಸರಿನ ಧೂರ್ತ. ಅವನು ಕಟ್ಟಿ ಬೆಳೆಸಿದ ಕಂಪೆನಿಯ ಹೆಸರು ದೇವ್‌ ಫಾರ್ಮಾ. ದೇವೇಂದ್ರನ ಸಾಮ್ರಾಜ್ಯವನ್ನು ಬೇರುಸಹಿತ ನಿರ್ನಾಮ ಮಾಡುವುದು ಕೋಟಿಕೊಬ್ಬನ ಟಾರ್ಗೆಟ್ಟು!

ಈ ಹಿಂದಿನ ಕೋಟಿಗೊಬ್ಬ-೨ ಚಿತ್ರದ ಮುಂದುವರೆದ ಒಂದಿಷ್ಟು ಪಾತ್ರ, ದೃಶ್ಯ ಮತ್ತು  ದ್ವಂದ್ವಗಳು ಇಲ್ಲೂ ಮುಂದುವರೆದಿದೆ. ನಡೆಯುವ ಘಟನಾವಳಿಗಳ ಹಿಂದಿರೋದು ಸತ್ಯಾನಾ? ಶಿವಾನಾ? ಇಬ್ಬರೂ ಬೇರೆಯಾ ಅಥವಾ ಒಬ್ಬನೇ ವ್ಯಕ್ತಿ ಎಲ್ಲರನ್ನೂ ಗೊಂದಲ್ಲಕ್ಕೀಡು ಮಾಡುತ್ತಿದ್ದಾನಾ ಎನ್ನುವ ವಿಚಾರವೇ ಇಲ್ಲೂ ಮರುಕಳಿಸುತ್ತದೆ. ದೇವೇಂದ್ರನೆಂಬ ವಿಷವೃಕ್ಷದ ಒಂದೊಂದು ಕೊಂಬೆ, ಕಾಂಡಕ್ಕೆ ಏಟು ಬಿದ್ದಾಗಲೂ ಇದನ್ನು ಮಾಡಿದ್ದುಅವನಾ? ಇವನಾ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಎಲ್ಲ ಗೊಂದಲಗಳು ಬಗೆಹರಿಯೋದು ಸಿನಿಮಾದ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ. ಆ ಕಾರಣಕ್ಕೇ ಇಡೀ ಚಿತ್ರದ ಗೋಜಲುಗಳನ್ನೆಲ್ಲಾ ನೋಡುವ ಮನಸ್ಸುಗಳು  ಸಹಿಸಿಕೊಳ್ಳಲೇಬೇಕು.

ಮೊದಲ ಭಾಗ ನೋಡುಗರಿಗೆ ವಿಪರೀತ ಕನ್ಫ್ಯೂಸ್‌ ಮಾಡಿ ಕಾಟ ಕೊಡುತ್ತದೆ. ಅದ್ಭುತ ತಾಂತ್ರಿಕತೆ, ರೋಚಕ ಫೈಟುಗಳಿದ್ದರೂ ತಾಯಿ ಪಾತ್ರ ಎಂಟ್ರಿ ಕೊಡುವ ತನಕ ಕೋಟಿಗೊಬ್ಬ ಚಿತ್ರದ ವಿಲನ್ನಿಗೆ ಕೊಟ್ಟಂತೆ ಕೂತು ನೋಡುವ ಪ್ರೇಕ್ಷಕನಿಗೂ ಕಾಟ ಕೊಡೋದು ಅಕ್ಷರಶಃ ʻಸತ್ಯʼ!

ಸ್ವತಃ ತುಂಬು ಗರ್ಭಿಣಿಯಾಗಿದ್ದು, ಹೆಣ್ಮಕ್ಕಳ ಸಂಕಷ್ಟಕ್ಕೆ ಮಿಡಿಯುವ ನಿಷ್ಟಾಂವತ ಐ.ಎ.ಎಸ್‌ ಅಧಿಕಾರಣಿ ಪಾತ್ರದ ಕಲ್ಪನೆಯೇ ಸುಂದರವಾಗಿದೆ. ಹಣ ಮಾಡಲೆಂದೇ ನಿಂತ ಮಾಫಿಯಾಗಳು ಸರ್ಕಾರಿ ಅಧಿಕಾರಿಗಳನ್ನೂ ಕೊಂದು ಕೆಡವುತ್ತವೆ ಅನ್ನೋ ನಿಜವನ್ನಿಲ್ಲಿ ತೋರಿಸಿದ್ದಾರೆ.

ಮದುವೆ ಮತ್ತು ನಂತರದ ಭಾಗ್ಯಗಳನ್ನು ಕೊಡಮಾಡಿರುವ ಸರ್ಕಾರ ಬಾಣಂತನದ ಭಾಗ್ಯವನ್ನೂ ರೂಪಿಸಬಹುದು ಎನ್ನುವ ಕೋಟಿಗೊಬ್ಬನ ಸಲಹೆಯನ್ನು ಅಧಿಕಾರದಲ್ಲಿರುವವರು ಧಾರಾಳವಾಗಿ ಸ್ವೀಕರಿಸಬಹುದು. ಮಕ್ಕಳನ್ನು ಒಡಲಲ್ಲಿಟ್ಟುಕೊಂಡ ತಾಯಿ ʻಸರ್ವಂ ಸಮಂಜಸಂ. ಲೋಕಾ ಸಮಸ್ತ…ʼ ಮಂತ್ರ ಹೇಳುತ್ತಿರುತ್ತಾಳೆ. ಅದರಂತೆ ಗರ್ಭಚೀಲದಲ್ಲೇ ಮಗು ರಕ್ಷಿಸುವ ಗುಣವನ್ನೂ  ಪಡೆದಿರುತ್ತದೆ…!

ʻʻಹೊಟ್ಟೆಯಲ್ಲಿರುವ ಮಗು ಐದೂವರೆ ತಿಂಗಳು ದಾಟಿದ ನಂತರ ತಾಯಿಯ ಮಾತು, ಭಾಷೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತವೆʼʼ ಎನ್ನುವ ಅಂಶವನ್ನೂ ಕೋಟಿಗೊಬ್ಬ ನಿರೂಪಿಸಿದ್ದಾನೆ!!

ಸಂಬಂಧ, ರಿವೇಂಜು, ಮೆಡಿಕಲ್‌ ಮಾಫಿಯಾದ ಸುತ್ತ ಕಥೆ ಕಟ್ಟಿ, ಕೋಟಿಗೊಬ್ಬನ ರೂಪದಲ್ಲಿ ತೆರೆಗೆ ತಂದಿದ್ದಾರೆ. ಸುದೀಪ್‌  ಹೆಸರಿನ ಹಿಂದೆ ಅಭಿನಯ ಚಕ್ರವರ್ತಿ ಎನ್ನುವ ಬಿರುದೇ ಇದೆ. ಅದಕ್ಕೆ ತಕ್ಕಂತೆ ನಟಿಸಿದ್ದಾರೆ. ರವಿಶಂಕರ್‌ ಒಂದಿಷ್ಟು ಮನರಂಜಿಸುತ್ತಾರೆ. ತಬಲಾನಾಣಿ  ಪಾತ್ರಕ್ಕೆ ತಾಳ, ಮೇಳ ಯಾವುದೂ ಇಲ್ಲ. ಮಡೋನಾ ಸೆಬಾಸ್ಟಿಯನ್‌ ಗೆ ಹೋಲಿಸಿದರೆ ಶ್ರದ್ದಾ ದಾಸ್‌ ಹೆಚ್ಚು ಸೆಳೆಯುತ್ತಾಳೆ. ಆಶಿಕಾ ರಂಗನಾಥ್‌ ಹಾಡೊಂದರಲ್ಲಿ ಕುಣಿದು ಕಾಣೆಯಾಗುತ್ತಾಳೆ. ಅರ್ಜುನ್‌ ಜನ್ಯಾ ಹಾಡಿಗೆ ಕೊಟ್ಟಷ್ಟು ಗಮನ ಹಿನ್ನೆಲೆಗೆ ಕೊಟ್ಟಿಲ್ಲವಾ? ಎನ್ನುವಷ್ಟರಮಟ್ಟಿಗೆ ಅಬ್ಬರಗೊಂಡು ಗೊಬ್ಬರವಾಗಿದೆ.

ಕೊರೋನಾ ಅವಾಂತರ ಸೃಷ್ಟಿಸಿರುವ ಕಾಲಘಟ್ಟವಿದು. ಈ ಸಮಯದಲ್ಲಿ ಮೆಡಿಕಲ್‌ ಮಾಫಿಯಾದ ಮೂಲ ಧಾತುವನ್ನಿಟ್ಟುಕೊಂಡು ಇನ್ನೂ ಉತ್ತಮ ಕಂಟೆಂಟ್‌ ನೀಡಬಹುದಿತ್ತು. ಈ ಕೊರಗಿನ ನುವೆಯೂ  ಕೋಟಿಗೊಬ್ಬ ತೀರಾ ಕಳಪೆಯಾಗಿಲ್ಲ ಅನ್ನೋದೇ ಸಮಾಧಾನ!

ಒಟ್ಟಾರೆಯಾಗಿ ಕೋಟಿಗೊಬ್ಬ-೩ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾನೆ ಅನ್ನೋದನ್ನು ಕಿಚ್ಚನ ಅಭಿಮಾನಿಗಳೇ ನಿರ್ಧರಿಸಬೇಕು!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸಲಗ ಸಿನಿಮಾ ಹೆಂಗೈತೆ ಗೊತ್ತಾ?

Previous article

ಜಂಗ್ಲಿ ವಿಜಿ ಎದ್ದು ನಿಂತಿದ್ದು ಹೀಗೆ!

Next article

You may also like

Comments

Leave a reply

Your email address will not be published.