ಲವರ್ ಬಾಯ್ ಇಮೇಜಿನಿಂದ ಹೊರಬಂದು ಇದೇ ಮೊದಲಬಾರಿಗೆ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ಕೃಷ್ಣ ಅಜಯ್ರಾವ್ ಕಾಣಿಸಿಕೊಂಡಿದ್ದಾರೆ. ವಿಜಯಾನಂದ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹೆಸರು ಕೃಷ್ಣ ಟಾಕೀಸ್. ನೈಜಘಟನೆಯನ್ನು ಆಧರಿಸಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ವಿಜಯಾನಂದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಗೋಕುಲ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಗೋವಿಂದ್ರಾಜು ಆಲೂರ್ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ, ಈ ಚಿತ್ರದ ಟ್ರೈಲರ್ ಹಾಗೂ ಎರಡು ಹಾಡುಗಳ ಪ್ರದರ್ಶನ ಕಾರ್ಯಕ್ರಮ ಚಾಮರಾಜಪೇಟೆಯ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ನಿರ್ದೇಶಕ ವಿಜಯಾನಂದ್ ಮಾತನಾಡುತ್ತ ಈ ಚಿತ್ರ ನಮ್ಮೆಲ್ಲರ 3 ವರ್ಷಗಳ ಶ್ರಮ, 2 ವರ್ಷಗಳ ಬೆವರು. ಕರೋನಾ ಭಯಕಳೆದು ಜನ ಈಗ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ, ಹಾಗಾಗಿ ಏಪ್ರಿಲ್ 19ರಂದು ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ. ಈಗ ಟ್ರೈಲರ್ ರಿಲೀಸ್ ಮಾಡುತ್ತಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಜಾನರ್ನಲ್ಲೇ ಇದೊಂದು ಹೊಸ ಪ್ರಯತ್ನ. ಚಿತ್ರದಲ್ಲಿ ಹಾರರ್ ಕೂಡ ಇದ್ದು, ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್, ಎಮೋಷನ್ ಇದೆ. ಅಲ್ಲದೆ ಅಜಯರಾವ್ ಅವರು ತಮ್ಮ ಸಿನಿಮಾ ಕೆರಿಯರ್ನಲ್ಲೇ ಮೊದಲಬಾರಿಗೆ ಈ ಥರದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು.
ಈ ಚಿತ್ರದಲ್ಲಿ ನಟ ಅಜಯ್ರಾವ್ ಒಬ್ಬ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತನ್ನ ಪಾತ್ರದ ಕುರಿತು ಮಾತನಾಡುತ್ತ ಇಲ್ಲಿ ನಾನೊಬ್ಬ ಜರ್ನಲಿಸ್ಟ್, ಈ ಥರದ ಪಾತ್ರವನ್ನು ಹಿಂದೆಂದೂ ಮಾಡಿಲ್ಲ, ಇದು ನನ್ನ 26ನೇ ಚಿತ್ರ ಎಂದು ಹೇಳಿದರು. ಹಿಂದೆ ರವಿಚಂದ್ರನ್ ಅವರ ಚಿತ್ರದಲ್ಲಿ ನಟಿಸಿದ್ದ ಅಪೂರ್ವ ಹಾಗೂ ಸಿಂಧೂ ಲೋಕನಾಥ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಟಿ ಅಪೂರ್ವ ತನ್ನ ಪಾತ್ರದ ಕುರಿತಂತೆ ಮಾತನಾಡುತ್ತ ಇದು ಸಸ್ಪೆನ್ಸ, ಹಾರರ್ ಚಿತ್ರವಾದರೂ ಅಭಿನಯಕ್ಕೆ ತುಂಬಾ ಅವಕಾಶವಿತ್ತು ಎಂದು ಹೇಳಿದರು. ನಟಿ ಸಿಂಧೂ ಲೋಕನಾಥ್ ಮುಗ್ಧ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಅಪೂರ್ವ ಸಿಟಿ ಲೈಫ್ನಲ್ಲಿರೋ ಹುಡುಗಿಯ ಪಾತ್ರ ಮಾಡಿದ್ದಾರೆ.
ನಂತರ ಚಿಕ್ಕಣ್ಣ ಮಾತನಾಡಿ ನಾನು, ಅಜಯ್ ತುಂಬಾ ದಿನಗಳಿಂದ ಸ್ನೇಹಿತರಾದರೂ ಒಟ್ಟಿಗೇ ಅಭಿನಯಿಸುವ ಅವಕಾಶ ಸಿಕ್ಕಿರಲಿಲ್ಲ, ನನ್ನದು ಇಂಟರೆಸ್ಟಿಂಗ್ ಪಾತ್ರ ಎನ್ನುತ್ತಾ ಒಂದು ಹಾಡಿಗೆ ಸ್ಟೆಪ್ ಸಹ ಹಾಕಿದರು. ನಿರ್ಮಾಪಕ ಗೋವಿಂದರಾಜ್ ಮಾತನಾಡುತ್ತ ಒಳ್ಳೇ ಸಿನಿಮಾ ಮಾಡಿದ್ದೇವೆ, ಚಿತ್ರ ನಿರ್ಮಾಣ ನನಗೆ ಪ್ಯಾಷನ್, ಈ ಚಿತ್ರದ ಕಂಟೆಂಟ್ ಇಷ್ಟಪಟ್ಟು ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದು ಹೇಳಿಕೊಂಡರು. ಕಾರ್ಯಕ್ರಮದಲ್ಲಿ ನಿರ್ಮಾಪಕ ಗೋವಿಂದರಾಜ್ ಅವರ ಶ್ರೀಮತಿಯವರು ಈ ಚಿತ್ರದ ಟ್ರೈಲರನ್ನು ಲಾಂಚ್ ಮಾಡಿದರು.
ಶ್ರೀಧರ್ ವಿ.ಸಂಭ್ರಮ್ ಅವರ ಸಂಗೀತ ಸಂಯೋಜನೆ, ಅಭಿಷೇಕ್ ಜಿ.ಕಾಸರಗೋಡು ಅವರ ಛಾಯಾಗ್ರಹಣ, ವಿಕ್ರಂ ಅವರ ಸಾಹಸ ನಿರ್ದೇಶನ, ಶ್ರೀಕಾಂತ್ ಅವರ ಚಿತ್ರಕ್ಕಿದೆ. ವಿಜಯಾನಂದ್ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.
No Comment! Be the first one.