ಅಜೇಯ್ ರಾವ್ ನಟನೆಯ ಇಪ್ಪತ್ತೇಳನೇ ಸಿನಿಮಾವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣ ಮಾಡಲಿದೆ. ಸದ್ಯದಲ್ಲಿಯೇ ಶೂಟಿಂಗ್ ಶುರುವಾಗಲಿದ್ದು, ನಾಯಕಿಯಾಗಿ ಕರಿಯಪ್ಪನ ಸೊಸೆ ಸಂಜನಾ ಆನಂದ್ ಆಯ್ಕೆಯಾಗಿದ್ದಾರೆ. ಹೌದು, ಸಂಜನಾ ಆನಂದ್ ಆಯ್ಕೆಯಾಗಿರುವ ಕುರಿತು ಚಿತ್ರತಂಡದವರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಸಂಜನಾ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿ ನಟಿಸಿದ್ದರು. ಗ್ರಾಮೀಣ ಸೊಗಡಿನ ಕಥೆಗೆ ಸೂಕ್ತವಾದ ನಾಯಕಿಗಾಗಿ ಹುಡುಕಾಟ ನಡೆಸುವಾಗ ಚಿತ್ರತಂಡಕ್ಕೆ ಸಂಜನಾ ಆಯ್ಕೆಯಾಗಿರುವುದು ಸಂತಸ ತಂದಿದೆ.
ಅಂದ ಹಾಗೆ ಇನ್ನೂ ಹೆಸರಿಡದ ಈ ಚಿತ್ರವು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನ ಏಳನೇ ಚಿತ್ರ ಆಗಿದ್ದು, ಜೂನ್ ತಿಂಗಳ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಉಳಿದಂತೆ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದು, ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಜಾಕಿ ಎಂಬುವವರು ಇದೇ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಮಂಡ್ಯ , ಚೆನ್ನಪಟ್ಟಣ, ಹಾಗೂ ಮದ್ದೂರಿನಲ್ಲಿ ಚಿತ್ರೀಕರಣ ಮಾಡಲು ತಂಡ ಸಿದ್ಧತೆ ನಡೆಸುತ್ತಿದೆ. ಹಾಗೆಯೇ ಈ ನಿರ್ಮಾಣ ಸಂಸ್ಥೆಯ ನಾಲ್ಕನೆಯ ಸಿನಿಮಾ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ‘ ರಿಲೀಸ್ ಗೆ ರೆಡಿಯಾಗಿದೆ.