ಕೃಪಾ ಜಿ.ಪಿ. ಅಪ್ಪಟ ಕನ್ನಡದ ಹೆಣ್ಣು ಮಗಳು. ಭಾರತೀಯ ಥ್ರೋ ಬಾಲ್ ತಂಡದ ನಾಯಕಿಯಾಗಿ ಈ ನೆಲದ ಕೀರ್ತಿಯನ್ನು ಜಗತ್ತಿನಾದ್ಯಂತ ಬೆಳಗುತ್ತಿರುವವರು. ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಹುಟ್ಟಿ ಬೆಳೆದು, ನಂತರ ಬೆಂಗಳೂರು ಸೇರಿ, ಇಂಗ್ಲಿಷ್ ಕಾರಣಕ್ಕಾಗಿ ಅನುಭವಿಸಿದ ಯಾತನೆ, ಅವಮಾನ ಅಷ್ಟಿಷ್ಟಲ್ಲ. ಕನ್ನಡವನ್ನೇ ಶಕ್ತಿಯನ್ನಾಗಿಸಿಕೊಂಡ ಕೃಪಾ ಅವರ ಬದುಕಿನ ಹಾದಿ, ಸಾಧನೆಯ ವಿವರಗಳನ್ನು ಅವರ ಮಾತಲ್ಲೇ ಇಲ್ಲಿ ಕಟ್ಟಿಕೊಡಲಾಗಿದೆ. ಈ ದೀರ್ಘ ಲೇಖನವನ್ನೊಮ್ಮೆ ಮನಸಿಟ್ಟು ಓದಿ. ಇತರರಿಗೂ ಶೇರ್ ಮಾಡಿ…

ನ್ನ ಹೆಸರು ಕೃಪಾ ಜಿ.ಪಿ ಅಂತ. ಮೂಲತಃ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಗಿರಿಯಾಪುರ ಗ್ರಾಮದವಳು. ನನ್ನ ತಂದೆ ಜಿ.ಎಂ. ಪ್ರಸಾದ್. ತಾಯಿ ಸಾವಿತ್ರಿ. ನನ್ನ ಈ ಇಡೀ ಧೈರ್ಯಕ್ಕೆ ನನ್ನ ತಂದೆ ಕಾರಣ. ನನ್ನ ಈ ಪೌಷ್ಟಿಕತೆ, ಆರೋಗ್ಯಕ್ಕೆ ನನ್ನ ತಾಯಿ ಕಾರಣ. ಇದನ್ನು ನಾನು ಯಾವಾಗ್ಲು ಹೇಳುವುದಕ್ಕೆ ಇಷ್ಟಪಡುತ್ತೇನೆ.  ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನಾನು ಗಿರಿಯಾಪುರದಲ್ಲಿಯೇ ಪಡೆದದ್ದು. ಅದಾದ ಮೇಲೆ ನಮ್ಮ ತಂದೆ ಬೆಂಗಳೂರಿಗೆ ಕರೆತಂದು ಶೇಷಾದ್ರಿಪುರಂ ಕಾಲೇಜಿನಲ್ಲಿ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಸಿ ಸೇರಿಸಿದರು. ಅದಾದ ಮೇಲೆ ನಮ್ಮ ಅತ್ತೆಯ ಮನೆಯಲ್ಲಿದ್ದುಕೊಂಡು 5 ವರ್ಷ ಪಿಯುಸಿ, ಪದವಿ ಮುಗಿಸಿದೆ. ಅದಾದ ಮೇಲೆ ಕೆಲಸಕ್ಕೆ ಸೇರಿಕೊಂಡೆ. ಶಾಲೆಯಲ್ಲಿ ಓದುವಾಗಲೇ ನಾನು ಟ್ರ್ಯಾಕ್ ಈವೆಂಟ್ ನಲ್ಲಿದ್ದೆ. ಪ್ರತಿಯೊಂದು ಟ್ರ್ಯಾಕ್ ಈವೆಂಟ್ಸ್ ಗಳಲ್ಲಿಯೂ ಚಾಂಪಿಯನ್ ಶಿಪ್ ಗಳಿಸಿದ್ದೇನೆ. 100 ಮೀಟರ್, 200 ಮೀಟರ್, 400 ಮೀಟರ್, 800 ಮೀಟರ್, ಲಾಂಗ್ ಜಂಪ್, ಹೈ ಜಂಪ್, ಯಾವೆಲ್ಲ ಏಕವ್ಯಕ್ತಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಬಹುಮಾನವನ್ನು ಗಳಿಸುತ್ತಿದ್ದೆ. ಎಂಟು, ಒಂಬತ್ತು, ಹತ್ತನೇ ತರಗತಿಗಳಲ್ಲಿ ನಾನೇ ಚಾಂಪಿಯನ್ ಕೂಡ.

ಅದಾದ ಮೇಲೆ ಕಾಲೇಜಿಗೆ ಬಂದೆ. ನಾನು ಚಿಕ್ಕವಯಸ್ಸಿನಿಂದ ಕನ್ನಡ ಮೀಡಿಯಂನಲ್ಲಿ ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದಿದ್ದೆ. ನಾನು ಹಠಾತ್ ಇಂಗ್ಲೀಷ್ ಮೀಡಿಯಂಗೆ ಬಂದಾಗ ಬಹಳಷ್ಟು ಕಷ್ಟಪಡಬೇಕಾಯಿತು. ಬೆಂಗಳೂರಿನಲ್ಲಿ ಬಹುಭಾಷೆಗಳನ್ನು ಮಾತನಾಡುವ ಜನರಿರುತ್ತಾರೆ. ತಮಿಳು, ತೆಲುಗು, ಹಿಂದಿ ಇತ್ಯಾದಿ. ನಮ್ಮ ಶೇಷಾದ್ರಿ ಪುರಂ ಕಾಲೇಜಿನಲ್ಲಿ ಹೇಗೆ ಅಂದರೆ ಕನ್ನಡ ಮಾತನಾಡುವವರ ಸಂಖ್ಯೆ ಬಹಳ ಕಡಿಮೆ. ಹಾಗಾಗಿ ನನಗೆ ಫಸ್ಟ್ ಪಿಯುಸಿ, ಸೆಕೆಂಡ್ ಪಿಯುಸಿನಲ್ಲಿ ಸ್ನೇಹಿತರೇ ಇರಲಿಲ್ಲ. ಇಂಗ್ಲೀಷಿನ ಪರಿಜ್ಞಾನವಿಲ್ಲದೆಯೇ ನಾನು ಬೆಂಗಳೂರಿಗೆ ಬಂದಿದ್ದೆ. ಪ್ರಾರಂಭದಲ್ಲಿ ಮೂರು ತಿಂಗಳು ಕಾಮರ್ಸ್ ತೆಗೆದುಕೊಂಡಿರುವ ಸೆನ್ಸ್ ಕೂಡ ಇಲ್ಲದೇ ಹೋಗುತ್ತಿದೆ. ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ಕನ್ನಡ ಲೆಕ್ಚರರ್ ಬಂದ್ರೆ ತುಂಬಾ ಖುಷಿ ಪಡುತ್ತಿದ್ದೆ. ಬೇರೆ ಲೆಕ್ಚರರ್ಸ್ ಬಂದ್ರೆ ಮಾಡಿದ ಪಾಠ ಯಾವುದೂ ನನ್ನ ತಲೆಗೆ ಹೋಗುತ್ತಿರಲಿಲ್ಲ. ಸದ್ಯ 93% ಬಂದ್ರೂ ಅಯ್ಯೋ ನನಗೆ ಕಡಿಮೆ ಬಂದಿದೆ ಅಂತ ಹೇಳಿಕೊಂಡು ಓಡಾಡುವ ವಿದ್ಯಾರ್ಥಿಗಳಿದ್ದಾರೆ. ನೋವನ್ನು ಪಡುವ ವಿದ್ಯಾರ್ಥಿಗಳಿದ್ದಾರೆ. 96% ಬಂತು ಅಂತ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳೂ ಇದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ನನ್ನ ಸಂದೇಶ ಏನಂದ್ರೆ ಆ ದಿನಗಳಲ್ಲಿ ನಾನು 12 ಅಂಕ ಪಡೆದದ್ದು ಇದೆ.

ನಮ್ಮ ತಂದೆ ಥಿಯರಿ ಓದೋ ಸಬ್ಜೆಕ್ಟ್ ಕಡಿಮೆ ಇರುತ್ತದೆ ಎಂದು ಮ್ಯಾಕ್ಸ್, ಸ್ಟ್ಯಾಟಿಸ್ಟಿಕ್ಸ್ ಕಾಂಬಿನೇಷನ್ ಕೊಡಿಸಿದ್ದರು. ರೂಪಸಿ ಮೇಡಂ ಅಂತ ಒಬ್ಬರಿದ್ದರು. ಅವರು ಮ್ಯಾಕ್ಸ್ ಹೇಳಿಕೊಡುತ್ತಿದ್ದರು. ನಮ್ಮ ಕ್ಲಾಸಿನಲ್ಲಿ ಅಂದಾಜು 134 ವಿದ್ಯಾರ್ಥಿಗಳಿದ್ದರು. ಒಮ್ಮೆ ನನ್ನನ್ನು ಕ್ಲಾಸಿನಲ್ಲಿ ರೂಪಸಿ ಎಬ್ಬಿಸಿದ್ದರು. ನಮ್ಮ ರಿಸಲ್ಟ್ ಕಡಿಮೆ ಮಾಡುವುದಕ್ಕೆ ಕನ್ನಡ ಮೀಡಿಯಂ ನಿಂದ ಯಾಕೆ ಬರ್ತೀರ. ನೀವೆಲ್ಲ ಯಾಕೆ ಸರ್ಕಾರಿ ಕಾಲೇಜುಗಳಿಗೆ ಸೇರಬಾರದು. ಹೊಟ್ಟೆಗೆ ಏನ್ ತಿಂತೀರಾ. ಹಾಗೇ ಹೀಗೆ ಅಂತ ಚೆನ್ನಾಗಿ ಬೈದರು. ಅದು ನನಗೊಂಥರಾ ಅವಮಾನನೋ! ನನ್ನ ಬಗೆಗಿನ ಅರಿವಾಗೋ ರೀತಿ ಆಯ್ತು. ಏನಾಯ್ತು ಗೊತ್ತಿಲ್ಲ ಆ ದಿನ. ಎಷ್ಟು ಗೊಂದಲಗಳು. ಫುಲ್ ಬ್ಲಾಂಕ್ ಆಗೋಗಿದ್ದೆ. ಕಾಲೇಜು 2.50ಕ್ಕೆ ಬಿಟ್ಟರೆ ನಾನು ಮನೆಗೆ ಹೋಗಿದ್ದು 4.30 ಸಾಮಾನ್ಯವಾಗಿ ನಮ್ಮ ಮನೆಗೆ ಹೋಗೋಕೆ 10 ರಿಂದ 15 ನಿಮಿಷ ಆಗ್ತಿತ್ತು. ಆ ದಿನ ನನಗೆ ಮರೆಯುವುದಕ್ಕೆ ಸಾಧ್ಯವಿಲ್ಲ. ಬಹುಶಃ ಅವತ್ತೇ ನಾನು ಕಣ್ತುಂಬ ನಿದ್ದೆ ಮಾಡಿದ್ದು. ಯಾವಾಗ್ಲು ನಾನು 3 ಗಂಟೆಗೆ ಏಳುತ್ತಿದ್ದೆ. 3 ರಿಂದ 6 ರವರೆಗೂ ಓದುತ್ತಿದ್ದೆ. 6 ಗಂಟೆಯಿಂದ ನಮ್ಮತ್ತೆಗೆ ಅಡುಗೆಗೆ ಸಹಾಯ ಮಾಡುತ್ತಿದ್ದೆ. 8 ಗಂಟೆಗೆ ಕಾಲೇಜಿಗೆ ಹೋಗುತ್ತಿದ್ದೆ. ನನ್ನ ಎಸ್ ಎಸ್ ಎಲ್ ಸಿ ಮುಗಿಯುವ ದಿನಗಳಲ್ಲಿ ಕೂತುಕೊಂಡು ಓದ್ಲೇಬೇಕು ಅನ್ನೋ ಆಲೋಚನೆ ಇರಲಿಲ್ಲ. ನಾನಿಷ್ಟೆಲ್ಲಾ ಚೆನ್ನಾಗಿ ಓದಬೇಕು ಅಂತಾನೂ ಇರಲಿಲ್ಲ. ಎಸ್ ಎಸ್ ಎಲ್ ಸಿಯಲ್ಲಿ ನಾನು ಸೆಕೆಂಡ್ ಕ್ಲಾಸ್ ಪಾಸ್ ಆಗಿದ್ದು ಅಷ್ಟೇ. ಈಗ್ಲೂ ನೆನಪಿಲ್ಲ. ಇಂಗ್ಲೀಷ್, ಹಿಂದಿ ಹೇಗೆ ಪಾಸಾದೆ ಅಂತ.

ನನ್ನ ಲೈಫ್ ಪೂರ್ತಿ ಆಟವೇ ಆಗಿತ್ತು. ಆಟವೇ ಜೀವನವಾಗಿತ್ತು. ನಾನು ನಮ್ಮ ತಂದೆಯ ಬಳಿ ಹೊಡೆಸಿಕೊಳ್ಳುತ್ತಿದ್ದದ್ದು, ಬೈಸಿಕೊಳ್ಳುತ್ತಿದ್ದದ್ದು ಮನೆಗೆ ಲೇಟಾಗಿ ಹೋಗುತ್ತಿದ್ದೆ ಅನ್ನೋ ಕಾರಣಕ್ಕಷ್ಟೇ. ಬರೀ ಮೈದಾನದಲ್ಲಿ ಆಟ ಆಡಿಕೊಂಡೇ ಇರುತ್ತಿದ್ದೆ. ಆ ರೀತಿ ಇದ್ದ ಹುಡುಗಿ ಬೆಂಗಳೂರಿಗೆ ಬಂದ ಮೇಲೆ ಬರೀ ಪುಸ್ತಕದ ಜೀವನವಾಗಿ ಹೋಗಿತ್ತು. ಫಸ್ಟ್ ಪಿಯುಸಿ, ಸೆಕೆಂಡ್ ಪಿಯುಸಿ ನಲ್ಲಿ ನಾನು ದಿನನಿತ್ಯ ಆಟ ಆಡುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಆದರೆ ಸ್ಪೋಟ್ಸ್ ಡೇ ಬರುತ್ತಲ್ಲಾ ಒಂದೇ ದಿನ ಆಟ ಆಡಿದ್ರೂ ಸಹ ಸಾಕಷ್ಟು ಟ್ರೋಫಿ, ಚಾಂಪಿಯನ್ ಶಿಪ್ ನಮ್ಮನೆಗೆ ಬರುತ್ತಿತ್ತು. ನನ್ನ ಆಟವನ್ನು ಮಾತ್ರ ನಾನು ಬಿಡುವುದಕ್ಕೆ ಆಗಲಿಲ್ಲ. ಸೆಕೆಂಡ್ ಪಿಯುಸಿ ಆದಮೇಲೆ ನನ್ನ ಸೀನಿಯರ್ ಒಬ್ಬರು ಬಂದು ಥ್ರೋಬಾಲ್ ಟೀಮ್ ಸೆಲೆಕ್ಟ್ ಮಾಡುತ್ತಿದ್ದೇವೆ ಅಂತ ಬಂದರು. ಅವರು ನನಗೆ ಆಪ್ಷನ್ ಕೊಡಲಿಲ್ಲ. ನೀನು ಬಾ ಅಂತಷ್ಟೇ ಕರೆದಿದ್ರು. ಆಗ ನನಗೆ ನಿಜವಾಗಿ ಥ್ರೋಬಾಲ್ ಪರಿಚಯವಾಗಿದ್ದು. ಅಲ್ಲಿವರೆಗೂ ನಾನು ಥ್ರೋ ಬಾಲ್ ಆಡಿರಲಿಲ್ಲ. ಥ್ರೋ ಬಾಲ್ ಪರಿಚಯವಿರಲಿಲ್ಲ. ಅಲ್ಲಿಂದ ನನ್ನ ಥ್ರೋಬಾಲ್ ಆಟ ಪ್ರಾರಂಭವಾಯಿತು.

ಅದಾದಮೇಲೆ ಶೇಷಾದ್ರಿಪುರಂ ಕಾಲೇಜಿನಲ್ಲಿ ಫೈನಲ್ ಇಯರ್ ಡಿಗ್ರಿ ಇರೋವಾಗ ನಾನು ಟೀಮ್ ಕ್ಯಾಪ್ಟನ್ ಆಗಿದ್ದೆ. ಒಳ್ಳೆ ಟೀಮಿತ್ತು. ವಲಯ, ತಾಲ್ಲೂಕು, ಡಿಸ್ಟಿಕ್, ಇಂಟರ್ ಕಾಲೇಜ್ ಕಾಂಪಿಟೇಷನ್ ನಲ್ಲಿ ನಾನು ಆಡಿದ್ದೆ. ಯೂನಿವರ್ಸಿಟಿ ಲೆವೆಲ್ ಆಡಿದ್ದರೂ ನನಗೆ ಗೆದ್ದ ನೆನಪೇ ಇಲ್ಲ. ರನ್ನರ್ಸ್, ಮೂರನೇ ಸ್ಥಾನಕ್ಕಷ್ಟೇ ತೃಪ್ತಿಪಡಬೇಕಿತ್ತು. ಪ್ರತಿಸಲ ಸೋತಾಗಲೂ ಹೊಸದೊಂದು ಕಲಿಕೆ ಆಗುತ್ತಲೇ ಇತ್ತು. ಅದಾದಮೇಲೆ ಡಿಗ್ರಿ ಮುಗೀತು. ಸಿಎ ಮಾಡ್ಬೇಕು ಅಂತ ಯೋಚನೆ ಬಂತು. ಕಾರಣಾಂತರಗಳಿಂದ ಕೆಲಸಕ್ಕೆ ಸೇರಬೇಕಾಗಿ ಬಂತು.ಕಾನ್ಸನ್ ರೈಟರ್ಸ್ ಸೇರಿಕೊಂಡೆ. ಅಲ್ಲಿ ಮತ್ತೆ ಆಟ ಅನ್ನೋದು ಶುರುವಾಯಿತು. ವೀಕೆಂಡ್ ಗಳಲ್ಲಿ ಬಹಳಷ್ಟು ಬೆಂಗಳೂರು ಈವೆಂಟ್ ಗಳಾಗುತ್ತಿದ್ದವು. ಡಿಫರೆಂಟ್ ಡಿಫರೆಂಟ್ ಕಾರ್ಪೋರೇಟರ್ ಈವೆಂಟ್ ಗಳಾಗುತ್ತಿದ್ದವು. ನಾನು ಕಾನ್ಸನ್ ರೈಟರ್ಸ್ ಪರವಾಗಿ ಆಡುತ್ತಿದ್ದೆ. 30ಕ್ಕೂ ಹೆಚ್ಚು ಕಾರ್ಪೋರೇಟ್ ಟೂರ್ನಮೆಂಟ್ ಆಡಿದ್ದೇನೆ. ಯಾರೆಲ್ಲಾ ಕರೆಯುತ್ತಿದ್ದರೋ ಆ ಎಲ್ಲ ಕಂಪನಿಗಳ ಪರವಾಗಿ ಆಡುತ್ತಿದ್ದೆ. ಸಾಕಷ್ಟು ಆಸ್ಪತ್ರೆಗಳೂ ಥ್ರೋಬಾಲ್ ತರಬೇತಿ ನೀಡುವಂತೆ ಕೇಳಿಕೊಂಡಿದ್ದರು. ನಾನು ಅವರಿಗೂ ಕೋಚ್ ಮಾಡಿರೋದು ಹೌದು. ಅದಾದ ಮೇಲೆ ಬಿಡಿಟಿ ಅನ್ನೋರು ಸ್ಟೇಟ್ಸ್ ಗೆ, ನ್ಯಾಷನಲ್ಸ್ ಗೆಲ್ಲಾ ಸೆಲೆಕ್ಷನ್ ಇದೆ ಬನ್ನಿ ಅಂತ ಒಂದು ಬಾರಿ ಕರೆದರು. ಅಲ್ಲಿ ಸೆಲೆಕ್ಟ್ ಆದೆ.

ಅದಾದ ಮೇಲೆ ಅಲ್ಲಿಂದ ಫೆಡರೇಷನ್ ಗೆ ಕನೆಕ್ಟ್ ಆಯ್ತು. ಫೆಡರೇಷನ್ ಅವರು ಇಂಡಿಯಾ ಟೀಮಿಗೆ ಸೆಲೆಕ್ಷನ್ ನಡೀತಿದೆ. ಯಾರಿಗೆಲ್ಲಾ ಆಸಕ್ತಿ ಇದೆ ಬಂದು ಭಾಗವಹಿಸಬಹುದು ಅಂತ ಹೇಳಿದ್ದರು. 12 ರಿಂದ 15 ದಿನ ಆ ಸೆಲೆಕ್ಷನ್ ಪ್ರೋಸಸ್ ನಡೆದದ್ದು. ಸಾಕಷ್ಟು ಎಕ್ಸಾಂ ಗಳಿರುತ್ತದೆ. ಅವೆಲ್ಲವನ್ನೂ ಪಾಸ್ ಮಾಡಿ ಅಷ್ಟೂ ಜನದಲ್ಲಿ ನಾನು ಸೆಲೆಕ್ಟ್ ಆದೆ. ಅದಾದದ್ದು 2008ರಲ್ಲಿ. 2008ರಿಂದ ಇಲ್ಲಿಯವರೆಗೂ ಇಂಡಿಯಾ ಟೀಮಿನಲ್ಲಿದ್ದೇನೆ. ಇವಾಗ್ಲೂ ಆಟವಾಡುತ್ತಿದ್ದೇನೆ. 2008ರಲ್ಲಿ ಸೆಲೆಕ್ಟ್ ಆಗಿ 2009ರಲ್ಲಿ ಇಂಡೋ ದುಬೈ ಆಡಿದೆ. 2010ರಲ್ಲಿ ಇಂಡೋ ಚೈನಾ. ಅದಾದಮೇಲೆ ನನಗೆ ಹಿಮಾಲಯ ಸುತ್ತಮುತ್ತ ಟ್ರಕ್ಕಿಂಗ್ ಮಾಡ್ಬೇಕು ಅನ್ನೋ ಹುಚ್ಚಿತ್ತು. ಅದಕ್ಕೆ 2011ನಲ್ಲಿ ಯಾವ ಟೂರ್ನಮೆಂಟ್ ಆಡಿರಲಿಲ್ಲ. 2011 ಅಕ್ಟೋಬರ್ ನಲ್ಲಿ ನನ್ನ ಮದುವೆ ಫಿಕ್ಸ್ ಆಯ್ತು. ನಾನು ಪೂರ್ಣ ಚಂದ್ರ ತೇಜಸ್ವಿ ಟ್ರೇನಿಂಗ್ ಅಂಡ್ ಡೆವಲಪ್ ಮೆಂಟ್ ಕೋರ್ಸ್‍ನಲ್ಲಿ ಅವರನ್ನು ಭೇಟಿ ಮಾಡ್ದೆ. ಅದು 6 ರಿಂದ 6ವರೆ ತಿಂಗಳು ಕೋರ್ಸ್ ಇತ್ತು. ನಾವು ನಮ್ಮ ಅತ್ತೆ ಮಾವ, ತಂದೆ ತಾಯಿ ಎಲ್ಲರನ್ನೂ ಒಪ್ಪಿಸಿ ಮದುವೆಯಾದೆವು.

ಇನ್ನು ನನ್ನ ಕೋಚ್ ಬಂದು ಸಂತೋಷ್ ಸರ್. ನನ್ನ ಟ್ಯಾಲೆಂಟ್ ನ ಪರಿಚಯಿಸಿದ್ದು ನರಸಿಂಹ ರೆಡ್ಡಿ ಸರ್ ಅಂತ. ನನ್ನ ಆಸಕ್ತಿಯನ್ನು ಮತ್ತಷ್ಟು ಬೆಳೆಸುತ್ತಿರೋದು ನಮ್ಮ ಜನರಲ್ ಸೆಕ್ರೇಟರಿ ಆಗಿರುವ ರಾಮನಾಥ್ ಸರ್. ನಮ್ಮ ಪಿಆರ್‍ಓಗಳು, ಆಸೋಸಿಯೇಟ್ಸ್‍ಗಳು, ಈ ಗೇಮನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ದಿರುವ ವ್ಯಕ್ತಿಗಳು ಆಕ್ಯೂಬ್ ಸರ್, ಗೋವಿಂದರಾಜು ಸರ್ ಪ್ರಮುಖರು. 2013ರಲ್ಲಿ ನನಗೆ ಮಗಳು ಹುಟ್ಟಿದಳು. ಅವಳ ಸಲುವಾಗಿ ನಾನು ಒಂದೂವರೆ ವರ್ಷ ಮುಡಿಪಾಗಿಡಬೇಕೆಂದು ಯೋಚನೆ ಮಾಡಿದ್ದೆ.

ಅಬ್ಬಬ್ಬ ನಾನು ಕನ್ನಡ ಮೀಡಿಯಂನಿಂದ ಬಂದು ಎಷ್ಟು ಕಷ್ಟಪಟ್ಟೆ… ಆ ಮೇಡಂ ಬೈದ ಮೇಲೆ ನಾನು ಮಾಡಿದ ಮೊದಲ ಕೆಲಸ ಇಂಗ್ಲೀಷ್ ಮತ್ತು ಕನ್ನಡ ನಿಘಂಟು ತೆಗೆದುಕೊಂಡು ಈ ವರ್ಡ್‍ಗೆ ಏನ್ ಅರ್ಥ  ಅಂತ ಓದಿಕೊಳ್ಳುವುದಕ್ಕೆ ಪ್ರಾರಂಭ ಮಾಡಿದೆ. ನಮ್ಮ ಅತ್ತೆ ಬಾಡಿಗೆ ಮನೆಯಲ್ಲಿದ್ದರು. ನನ್ನ ಎಫರ್ಟ್ ನೋಡಿ ಪಕ್ಕದಲ್ಲೇ ಇದ್ದ ಭೀಮ್ ರಾವ್ ಅಂಕಲ್ ಅವರ ಮನೆಗೆ  ಥಿಯರಿ ಕಲಿಯುವುದಕ್ಕೆ ಕಳುಹಿಸಿದರು. ಅವರ ಮಗ ನನಗೆ ಸ್ಟ್ಯಾಟಿಟಿಕ್ಸ್ ಹೇಳಿಕೊಡುತ್ತಿದ್ದರು. ಅವರ ಸೊಸೆ ನನಗೆ ಅಕೌಂಟ್ಸ್ ಹೇಳಿಕೊಡುತ್ತಿದ್ದರು. ನನ್ನ ಪ್ರತಿಯೊಂದು ಹೆಜ್ಜೆಗೆ, ಬೆಳವಣಿಗೆಗೆ ಕಾರಣಕರ್ತರವರು. ನನಗೆ ಅವರು ಯಾವಾಗ್ಲು ಹೇಳುತ್ತಿದ್ದರು. ಎಲ್ಲೇ ಹೋಗು ಏನೇ ಮಾಡು. ಆದರೆ ಪಿಜಿ ಮುಗಿಸಲೇಬೇಕು. ಆ ಗಿಫ್ಟ್ ನನಗೆ ಅಂತ ಹೇಳುತ್ತಿದ್ದರು. ನನ್ನ ಮಗಳು ಹುಟ್ಟಿದ ಮೇಲೆ ನನಗೆ ಅದು ನೆನಪಾಯಿತು. ಎಂಕಾಂ ತೆಗೆದುಕೊಂಡೆ. ಆಗ ನನ್ನ ಮಗಳಿನ್ನು ಎಂಟು ತಿಂಗಳಿನವಳಾಗಿದ್ದಳು. ಅವಳು ದೊಡ್ಡವಳಾಗುವಷ್ಟರಲ್ಲಿ ಎಂಕಾಂ ತೆಗೆದುಕೊಂಡು ಅದನ್ನು ಮುಗಿಸಿದೆ.

2014ನಲ್ಲಿ ನನಗೆ ಏಷ್ಯನ್ ಗೇಮ್ ನಡೀತಿದೆ. ಆಡ್ತೀರಾ ಅಂತ ಫೋನ್ ಮಾಡಿದ್ದರು. ಆಗಷ್ಟೇ ನಾನು ನನ್ನ ಮಗಳನ್ನು ಬೆಳೆಸುವಲ್ಲಿ ನಿರತಳಾಗಿದ್ದೆ. ಮತ್ತೆ ಕರೆದದ್ದಕ್ಕೆ ಪುನಃ ನಾನು ಥ್ರೋಬಾಲ್ ಆಡೋಣ ಅಂತ ನಿರ್ಧಾರ ಮಾಡಿದೆ. ಆಗ ನನಗೆ ಫಿಟ್‍ನೆಸ್ ಮುಖ್ಯ ಅನ್ನೋದು ತಿಳಿದು ಬಂತು. ಆಗ ನನ್ನ ವರ್ಕ್ ಔಟ್ ಗಳನ್ನು ಸ್ಟಾರ್ಟ್ ಮಾಡಿದೆ. 2015ರಲ್ಲಿ ಪೆಂಟ್ಯಾಗಲ್ ಸಿರೀಸ್ ಆಯ್ತು. ಇಂಡಿಯಾ, ಬಾಂಗ್ಲಾದೇಶ, ಮಲೇಶಿಯಾ, ಶ್ರೀಲಂಕಾ ರಾಷ್ಟ್ರಗಳಿದ್ದವು. ಪಾಕಿಸ್ತಾನವೂ ಇತ್ತು. ಆದರೆ 2015ರಲ್ಲಿ ಯಾಕುಬ್ ಮೆಮೂನ್ ಎಂಬ ಭಯೋತ್ಪಾದಕನಿಗೆ ಭಾರತ ಗಲ್ಲುಶಿಕ್ಷೆ ವಿಧಿಸಿತ್ತು. ಆ ಕಾರಣಕ್ಕಾಗಿ ಪಾಕಿಸ್ತಾನದವರಿಗೆ ವೀಸಾ ಕೊಡಲು ನಿರಾಕರಿಸಿತು. ಮಗುವಾದ ಮೇಲೆ ನನಗೆ ನನ್ನದೇ ಆದ ನೋಷನ್ಸ್ ಇತ್ತು. ಅಯ್ಯೋ ಸ್ಟಾಮಿನಾ ಹೋಗಿರುತ್ತೇನೋ, ನಾನು ಮತ್ತೆ ಆಟ ಆಡೋದಿಕ್ಕೆ ಆಗಲ್ವೇನೋ, ಆ ಗೇಮ್ ನನಗೆ ಗ್ರಿಪ್ ಇದ್ಯಾ ಇಲ್ವಾ ಅನ್ನೋ ಡೌಟ್ ಇತ್ತು. ಆದರೆ ಆ ಪೆಂಟ್ಯಾಗಲ್ ಸಿರೀಸ್ ನಲ್ಲಿ ಗೆದ್ದದ್ದು ನನಗೆ ಮತ್ತಷ್ಟು ಕಾನ್ಪಿಡೆನ್ಸ್ ಪಡೆದುಕೊಳ್ಳೊದಕ್ಕೆ ಕಾರಣವಾಯಿತು. ಅದಾದಮೇಲೆ ಶ್ರೀಲಂಕಾ ಮೇಲೆ ಆಡಿದೆ. ಇಂಡೋ ಥೈಲ್ಯಾಂಡ್, ಇಂಡೋ ಬ್ಯಾಂಕಾಕ್, ಇಂಡೋನೇಷ್ಯಾ, ಇವೆಲ್ಲವೂ ಎರಡು ರಾಷ್ಟ್ರಗಳ ಮಧ್ಯೆ ನಡೆದ ಬೈಲ್ಯಾಂಡರಲ್ ಸಿರೀಸ್ ಆಗಿತ್ತು. 2018ರಲ್ಲಿ ಬಾಂಗ್ಲಾದಲ್ಲಿ ಇಂಡಿಯಾ, ಬಾಂಗ್ಲಾ, ನೇಪಾಳದ ನಡುವೆ ಟ್ರೈನೇಶ್ ಅಂತ ಆಯ್ತು.

ನಾನು ಇಂಡಿಯಾ ಪರವಾಗಿ ಆಡುವುದಕ್ಕೆ ಪ್ರಾರಂಭಿಸಿದ ಮೇಲೆ ಸೋತಿರೋದೆ ನೆನಪಿಲ್ಲ. ಎಲ್ಲವೂ ಚಿನ್ನವೇ ಗೆದ್ದದ್ದು. ಅದೊಂದು ಪ್ರೌಡ್ ಮೂಮೆಂಟ್ ಅಂತ ಹೇಳಬಹುದು. ಈ ಆಟ ನಮ್ಮ ದೇಶದಲ್ಲಿ ಇಂಡೀಜೀನಿಯಸ್ ಗೇಮ್ ಆಗಿರುವುದರಿಂದ ಇಂಡಿಯಾದಲ್ಲಿ ತುಂಬಾ ಒಳ್ಳೆಯ ಆಟಗಾರರಿದ್ದಾರೆ. ನಾನು ಕೇಳುವುದಿಷ್ಟೇ ಫಂಡರ್ಸ್ ಆಗಿರಬಹುದು, ಸ್ಪಾನ್ಸರರ್ಸ್ ಆಗಿರಬಹುದು, ಇನ್ವೆಸ್ಟರ್ಸ್ ಆಗಿರಬಹುದು ದಯವಿಟ್ಟು ಈ ಗೇಮನ್ನು ತೆಗೆದುಕೊಳ್ಳಿ. ದೊಡ್ಡ ಮಟ್ಟಕ್ಕೆ ಈ ಆಟವನ್ನು ಬೆಳೆಸಬಹುದು. ಖಂಡಿತವಾಗಿ ಈ ಗೇಮನ್ನು ಆಯ್ಕೆ ಮಾಡಿಕೊಂಡದ್ದೇ ಆದಲ್ಲಿ ಒಳ್ಳೆಯ ಬೆಳವಣಿಗೆಗಳಾಗುವ ಲಕ್ಷಣಗಳಿವೆ.

2016ರಲ್ಲಿ ಇಂಡೋ ಇಂಡೋನೇಷ್ಯಾ ಆಯ್ತು. ಅದೇ ಮೊದಲ ಬಾರಿಗೆ ಯವನಿಕಾಗೆ ಕರ್ನಾಟಕ ಪೊಲೀಸ್ ಇಲಾಖೆಯವರು ಪೋನ್ ಮಾಡಿದ್ದರಂತೆ. ಅವರ ಸ್ಪೋಟ್ಸ್ ಮೀಟ್ ಗೆ ಅಲ್ಲಿ ಐಪಿಎಸ್ ಆಫೀಸರ್ ಭಾಸ್ಕರ್ ರಾವ್ ಕಡೆಯಿಂದ ನಾನು ಚೀಪ್ ಗೆಸ್ಟ್ ಆಗಿ ಹೋಗಿದ್ದೆ. ಇಷ್ಟೆಲ್ಲ ಸಾಧನೆ ಮಾಡಿದಕ್ಕೆ ನನಗೆ ಅವತ್ತು ಸಿಕ್ಕ ಗೌರವ ಅದ್ಬುತವಾಗಿತ್ತು. ಅದು ನನಗೆ ಸಾರ್ಥಕತೆಯ ದಿನವಾಗಿತ್ತು. ಅಲ್ಲಿಂದ ಶುರುವಾಗಿ ನಂತರ ಸ್ವಾತಂತ್ರ್ಯ ದಿನಾಚರಣೆಗೆ ಸ್ವಾತಂತ್ರ್ಯ ಸಂಭ್ರಮ ಅಂತ ಯುವ ಬ್ರಿಗೇಡ್ ನೋರು ರಾಮ ರಾಜ್ಯ ಅಂತ ಹಂಪಿಯಲ್ಲಿ ಉತ್ಸವವನ್ನು ಮಾಡಿದ್ದರು. ಅಲ್ಲಿಯೂ ಚೀಫ್ ಗೆಸ್ಟ್ ಆಗಿ ಹೋಗಿದ್ದೆ. ಅಂದಾಜು 4000 ಜನ ಸೇರಿದ್ದರು. ಇನ್ನೂ ವಿಜಯನಗರ ಸಾಮ್ರಾಜ್ಯದ ರಾಜ ಮಾತೆ ಇದ್ದಾರೆ. ಕೃಷ್ಣದೇವರಾಯ 19 ಇನ್ನೂ ಇದ್ದಾರೆ. ನಾನು ಅವರನ್ನು ಭೇಟಿ ಆಗಿದ್ದೆ. ಅರಮನೆಗೆ ಕರೆದುಕೊಂಡೂ ಹೋಗಿದ್ದರು. ಎಷ್ಟು ಖುಷಿಯಾಗಿತ್ತು ಅಂದ್ರೆ ಅದು ನನಗೆ ಸಾರ್ಥಕತೆಯ ಎರಡನೇ ದಿನ ಅಂತ ಹೇಳಬಹುದು.

ಅದಾದಮೇಲೆ ಅವಳ ಹೆಜ್ಜೆ ಅಂತ ಬ್ಲಾಗ್ ಇದೆ. ಶಾಂತಲಾ ಧಾಮ್ಲೆ ಅವರು ಅದನ್ನು ನಡೆಸುತ್ತಿದ್ದಾರೆ. ಅವಳ ಹೆಜ್ಜೆ ಬಗ್ಗೆ ಹಿಸ್ ಸ್ಟೋರೀಸ್ ಹರ್ಡ್ ಹರ್ ಸ್ಟೋರೀಸ್ ನಾಟ್ ಹರ್ಡ್ ಎಂಬ ಉದ್ದೇಶದಿಂದ ಅವಳ ಹೆಜ್ಜೆ ಅನ್ನೋ ಬ್ಲಾಗ್ ಓಪನ್ ಮಾಡಿದ್ದರು. ನನ್ನ ಜತೆ ಅಕ್ಷತಾ ರಾವ್ ಅವರೂ ಇದ್ದರು. ಈ ನಿಟ್ಟಿನಲ್ಲಿ ಬಹಳಷ್ಟು ಸಾಧಕಿಯರನ್ನು ಭೇಟಿ ಮಾಡುವ ಅವಕಾಶ ದೊರೆಯಿತು. ನಿಮ್ಮ ಮೂಲಕ ಮತ್ತಷ್ಟು ವ್ಯಕ್ತಿತ್ವಗಳನ್ನು ಭೇಟಿ ಮಾಡಲು ಬಯಸುತ್ತೇನೆ.

ಫಂಡಿಂಗ್ ಇಲ್ಲ ಅಂದ್ರೂ ನಮ್ಮ ಫೆಡರೇಷನ್ ಅವರು ಇಷ್ಟೆಲ್ಲಾ ಈವೆಂಟ್ ಗಳನ್ನು ಮಾಡುತ್ತಿದ್ದಾರೆಂದರೆ ರಿಯಲಿ ಗ್ರೇಟ್. ವರ್ಷದಲ್ಲಿ ಏನಿಲ್ಲವೆಂದರೂ ಮೂರು ನಾಲ್ಕು ಟೂರ್ನಮೆಂಟ್ ಖಂಡಿತ ಮಾಡುತ್ತಿದ್ದಾರೆ. 9 ರಿಂದ 14 ದೇಶಗಳು ಈ ಆಟವನ್ನು ಆಡುತ್ತಿದ್ದಾರೆ. ಗರ್ಲ್ ಪವರ್ ಸಮಿಟ್ ನಲ್ಲಿ ನನಗೆ ಸ್ಪೋಟ್ಸ್ ಎಕ್ಸಲೆಂಟ್ ಅವಾರ್ಡ್ ಬಂತು. ಅದಾದಮೇಲೆ ನಕ್ಷತ್ರ 2018 ಅವಾರ್ಡ್ ಬಂತು. ಇತ್ತೀಚಿಗೆ ಮ್ಯಾರಥಾನ್ ಒಂದಕ್ಕೆ ಮುಖ್ಯ ಅತಿಥಿಯೂ ಆಗಿದ್ದೆ. ಅಲ್ಲಿ ವಂಡರ್ ವುಮೆನ್ ಅವಾರ್ಡ್ ಫಂಕ್ಷನ್ ನಲ್ಲಿ ನನ್ನ ಹೆಸರು ನಾಮಿನೇಟ್ ಆಗಿತ್ತು. ವಂಡರ್ ವುಮೆನ್ ಅವಾರ್ಡ್ ಕೂಡ ನನಗೆ ಬಂದಿದೆ. 2019ನಲ್ಲಿ ಸ್ಪೋಟ್ಸ್ ಕ್ಯಾಟಗೆರಿಯಲ್ಲಿ ನನಗೆ ಸುಗ್ಗಿ ಅವಾರ್ಡ್ ಕೂಡ ಬಂದಿದೆ.

ನಾನು ಯಾವ ಯಾವ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಎಲ್ಲರೂ, ಮತ್ತೆ ನನ್ನ ಸಂಬಂಧಿಗಳು, ಹಿತೈಷಿಗಳು, ಸ್ನೇಹಿತರು ಎಲ್ಲರೂ ನೀವ್ಯಾಕೆ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಡಬಾರದು ಅಂತ ಕೇಳುತ್ತಲೇ ಇದ್ದರು. ಅಲ್ಲಿವರೆಗೂ ನನಗೆ ಬೇಕು ಅಂತಾನೂ ಅನ್ನಿಸಿರಲಿಲ್ಲ. ಮೂರು ನಾಲ್ಕು ವರ್ಷಗಳ ಹಿಂದೆ ನನಗೆ ಸರ್ಕಾರಿ ಕೆಲಸ ಬೇಕು ಅಂತ ಅನ್ನಿಸಿತ್ತು. ಯಾಕೆ ಪ್ರಯತ್ನ ಪಡಬಾರದು. ರಜನೀಶ್ ಗೋಯರ್ ಅವರನ್ನು ಹೋಗಿ ಭೇಟಿ ಮಾಡಬೇಕೆಂದು ನನ್ನ ಎಲ್ಲ ಡಾಕ್ಯುಮೆಂಟ್ ಜತೆಗೆ ಹೋದೆ. ನನಗೆ ಕೆಲಸ ಮಾಡುವುದಕ್ಕೆ ನಮ್ಮ ದೇಶಕ್ಕೆ ಇನ್ನೇನಾದರೂ ಸೇವೆ ಸಲ್ಲಿಸಬೇಕೆಂಬ ಬಯಕೆ ಇತ್ತು. ರಜನೀಶ್ ಗೋಯಲ್ ಅವರು ನನಗಾಗಿ ಒಂದು ನಿಮಿಷವೂ ಅವಕಾಶ ಕೊಡಲಿಲ್ಲ. ನನ್ನ ಎಲ್ಲ ಡಾಕ್ಯುಮೆಂಟ್ ಗಳನ್ನು ನೋಡಿ ಯಾವ್ ಗೇಮಮ್ಮ.. ಥ್ರೋಬಾಲಾ.. ಅದು ಒಲಂಪಿಕ್ಸ್ ನಲ್ಲಿ ಇಲ್ಲ. ನಾವೇನೂ ಮಾಡೋದಕ್ಕೆ ಆಗೋಲ್ಲ ಅಂತ ಹೇಳಿದ್ದರು. ಆ ದಿನ ನನಗೆ ತುಂಬಾ ಬೇಜಾರು ಆಯ್ತು. ಎಲ್ಲ ಗೇಮ್ ಗಳಿಗೂ ಅದರದೇ ಆದ ಕ್ರೈಟೀರಿಯಾಗಳಿರುತ್ತದೆ ನಾನು ಇಲ್ಲ ಅಂತ ಹೇಳಲ್ಲ. ಆದರೆ ಒಬ್ಬ ವ್ಯಕ್ತಿ ಆಟ ಆಡುತ್ತಿದ್ದಾನೆ ಅಂದ್ರೆ ಯಾಕೆ ಪರಿಗಣಿಸುವುದಿಲ್ಲ. ಒಲಂಪಿಕ್ಸ್ ನಲ್ಲಿ ಕ್ರಿಕೆಟ್ ಸಹ ಇಲ್ಲ. ಆದ್ರೆ ಎಷ್ಟು ಪ್ಲೇಯರ್ ಗಳಿಗೆ ಎಷ್ಟೆಲ್ಲ ದೊಡ್ಡ ದೊಡ್ಡ ಹುದ್ದೆಗಳನ್ನು ನೀಡಿದ್ದಾರೆ. ಆದರೆ ಅವರು ಕೊಟ್ಟ ಕಾರಣ ನನಗೆ ಬಹಳಷ್ಟು ಬೇಸರವನ್ನು ಉಂಟು ಮಾಡಿತ್ತು.

ನಾನು ಹೇಳೋದಿಷ್ಟೇ. ಎಷ್ಟೋ ಜನ ಪೇರೆಂಟ್ಸ್ ಅವರ ಮಕ್ಕಳಿಗೆ ಏನು ಆಟ ಆಡ್ತ್ಯಾ. ಇದರಿಂದ ಏನು ಉಪಯೋಗ ಇದೆ ಅಂತ ನಿಲ್ಲಿಸಿ ಎಷ್ಟೋ ಆಟಗಾರರು ಆಟ ಆಡದೇ ಉಳಿದದ್ದು ಇದೆ. ಇಂತಹ ಎಷ್ಟೊಂದು ಆಟಗಾರರು ತಮ್ಮ ಆಟಗಳನ್ನು, ಆಸಕ್ತಿಯನ್ನು ನಿಲ್ಲಿಸಿರೋದು ಹೌದು. ಈ ನಿಟ್ಟಿನಲ್ಲಿ ನಾನೆಷ್ಟು ಪುಣ್ಯವಂತೆ ಅಂದ್ರೆ. ನಮ್ಮ ಕುಟುಂಬ ನನಗೆ ಫ್ಯಾಷಲ್ ಗೋಸ್ಕರ ಆಟವಾಡುವುದಕ್ಕೆ ಬಿಟ್ಟಿದ್ದಾರೆ. ಯಾವ ಅವಾರ್ಡಿಗೆ, ಮಾನಿಟರಿ ಬೆನೀಫಿಟ್ ಬಯಸಿದವರಲ್ಲ ಅವರು. ಅದರಿಂದ ಏನು ಬರುತ್ತೆ. ಏನು ಬರಲ್ಲಾ ಅಂತ ಯಾವತ್ತು ಕೇಳಿದವರಲ್ಲ. 2011ನಲ್ಲಿ ಹೇಳಿದಹಾಗೆ ನನ್ನ ಮದುವೆಯಾಯಿತು. ಪೂರ್ಣ ಚಂದ್ರ ತೇಜಸ್ವಿ. ಅವರು ನಟ ಮತ್ತು ನಿರ್ದೇಶಕ. ಈಗ ಸುವರ್ಣ ವಾಹಿನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ನಮ್ಮಪ್ಪ ಅಮ್ಮ ಹೇಗೆ ನನ್ನ ಧೈರ್ಯಕ್ಕೆ, ಪೌಷ್ಟಿಕತೆಗೆ ಕಾರಣರಾದರೋ, ಹಾಗೆ ಪ್ರತಿಯೊಬ್ಬ ಮಹಿಳೆಗೆ ಮದುವೆ ಅಂತ ಆದಮೇಲೆ ಎಲ್ಲವೂ ಅವರ ಅತ್ತೆ ಮಾವನೇ ಆಗಿರುತ್ತಾರೆ. ನಾನು ಮದುವೆಯಾಗಿ ಬಂದ ಮೇಲೆ ನನಗೆ ಯಾವತ್ತು ಗೇಮ್ ನ ಮುಂದುವರೆಸೋದಕ್ಕೆ ಆಗಲ್ವೇನೋ ಎಂದು ಅನ್ನಿಸಲೇ ಇಲ್ಲ. ಸದ್ಯ ಪ್ರತಿಯೊಂದಕ್ಕೂ ನೀನು ಮಾಡ್ತ್ಯಾ ಮಾಡು ಅಂತ ಹುರುಪು ತುಂಬುವ ಗಂಡ. ಇನ್ನು ನಮ್ಮ ತಾಯಿನೇ ಇಷ್ಟೊಂದು ಮೆಡಲ್ ತರ್ತಾರೆ. ನಾನು ಮುಂದೆ ಇಂತಹುದೇ ಸಾಧನೆ ಮಾಡಬೇಕು ಅನ್ನೋ ಛಲವನ್ನು ತುಂಬಿಕೊಂಡಿರುವ ಮಗಳು ವಂಶಿತಾ. ನಾನು ತುಂಬಾ ಲಕ್ಕಿ ಅಂದ್ಕೊಂತೀನಿ.

ಪ್ರತಿ ಬಾರಿನೂ ನಾನು ಹೊರದೇಶಕ್ಕೆ ಹೋಗಬೇಕಾದಾಗಲೂ ನನ್ನ ಮಗಳನ್ನು ನನಗಿಂತ ಹೆಚ್ಚು ನನ್ನತ್ತೆ ನೋಡಿಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ನಾನು ಹೇಳೋದಿಷ್ಟೆ. ಇಟ್ಸ್ ನಾಟ್ ಎಬೌಟ್ ಯೇಜ್. ಇಟ್ಸ್ ಇಸ್ ಎಬೌಟ್ ಯುವರ್ ಏಜ್. ವಾಟ್ ಮ್ಯಾಟರ್. ವಾಟ್ ಸ್ಕಿಲ್ಸ್ ರಿಯಲಿ ವಾಂಟು ಗ್ರೋ.. ವಾಟ್ ಆಂಕ್ಸಿಂಟ್ ಯು ಆರ್ ಫಿಟ್. ಫಾರ್ ಯೂ ಟು ಬಿ ಫಿಟ್. ವಾಟ್ ಮೀನ್ಸ್ ಟು ಬಿ ಡನ್. ಅದನ್ನೆಲ್ಲ ಮಾಡಿಕೊಂಡು ಹೋದರೆ ಯಾವುದೂ ಅಡ್ಡ ಬರಲ್ಲ. ಇಲ್ಲಿವರೆಗೂ ಯಾರನ್ನೆಲ್ಲ ಭೇಟಿ ಮಾಡುತ್ತೇನೋ.. ಈ ಗೇಮ್ ಮಾನ್ಯತೆ ಗಳಿಸುವಂತೆ ಮಾಡಿ. ಮೋದಿಯವರನ್ನು ಭೇಟಿ ಮಾಡುವ ಅವಕಾಶ ಕೊಡಿಸಿ. ಈ ಗೇಮ್ ಬಗ್ಗೆ ತಿಳಿಸಿ. ಇದಕ್ಕೆ ಅದರದೇ ಆದ ಸ್ಥಾನ ಸಿಗಬೇಕು. ಪ್ರತಿಯೊಬ್ಬ ಪ್ಲೇಯರ್ ಗೆ ಅದರದೇ ಆದ ಗೌರವ ಸಿಗಬೇಕು. ಮನ್ನಣೆ ಬೇಕೇ ಬೇಕು. ಪ್ರತಿಯೊಬ್ಬರಿಗೂ. ಕರ್ನಾಟಕ ಸರ್ಕಾರದವರಿಗೂ ಕಳಕಳಿಯ ಮನವಿ ಏನಂದ್ರೆ ಈ ಆಟವನ್ನು ದಯವಿಟ್ಟು ಬೆಳೆಸಿ. ಬಹುಶಃ ಅದರ ಪರಿಚಯ ನಿಮಗೂ ಆಗಬಹುದು. ಪ್ರಾರಂಭದಲ್ಲಿ ಯಾವ ಆಟಗಳ ಮೇಲೂ ಆಸಕ್ತಿ ಇರುವುದಿಲ್ಲ. ಹೋಗ್ತಾ ಹೋಗ್ತಾ ಅದರ ರೂಲ್ಸ್, ವೈಖರಿ ಗೊತ್ತಾದ ಮೇಲೆ ಕ್ರಿಕೆಟ್, ಕಬಡ್ಡಿ ಆಟದ ಬಗ್ಗೆ ಆಸಕ್ತಿ ಬೆಳೆದದ್ದು. ಥ್ರೋಬಾಲನ್ನು ಕೂಡ ಅದೇ ಮಟ್ಟಕ್ಕೆ ಬೆಳೆಸಿ.

 

CG ARUN

ಒರಟ ಶ್ರೀ ಒಂಟಿಯಾಗಿ ಬಂದಿದ್ದಾರೆ!

Previous article

ಸಂಗೀತಾಸಕ್ತರಿಗೊಂದು ಸುವರ್ಣಾವಕಾಶ!

Next article

You may also like

Comments

Leave a reply

Your email address will not be published. Required fields are marked *