ಚಿರಂಜೀವಿ ಸರ್ಜಾ ನಟನೆಯಲ್ಲಿ ಮೂಡಿಬರುತ್ತಿರುವ `ಕ್ಷತ್ರಿಯ’ ಚಿತ್ರದ ಮುಹೂರ್ತ ಸಮಾರಂಭ ಮಲ್ಲೇಶ್ವರದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಅಣ್ಣ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ಮೊದಲ ದೃಶ್ಯಕ್ಕೆ ಸಹೋದರ ಧುವ ಸರ್ಜಾ ಕ್ಲಾಪ್ ಮಾಡಿದರೆ, ನಿರ್ದೇಶಕ ಸಂತೋಷ್ ಆನಂದರಾಮ್ ಕ್ಯಾಮರಾ ಚಾಲನೆ ಮಾಡಿದರು. ಸಮಾಜದ ಒಳಿತಿಗಾಗಿ ಹೋರಾಡುವ ಒಬ್ಬ ಆಧುನಿಕ ಕ್ಷತ್ರಿಯನ ಪಾತ್ರದಲ್ಲಿ ಚಿರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಕ್ಷತ್ರಿಯದ ಒನ್ ಲೈನ್ ಕೇಳುತ್ತಿದ್ದಂತೆ ನಿರ್ದೆಶಕ ಅನಿಲ್ ಅವರನ್ನು ಕರೆಸಿಕೊಂಡು ಚಿರು ಪೂರ್ತಿ ಕಥೆ ಕೇಳಿದ್ದರಂತೆ. ಅದ್ಬುತವಾದ ಕಥೆ ಇರುವ ಕಾರಣಕ್ಕೆ ಈ ಸಿನಿಮಾದಲ್ಲಿ ನಟಿಸಲೇಬೇಕೆಂದು ಒಪ್ಪಿಕೊಂಡೆ ಎನ್ನುತ್ತಾರೆ ಚಿರುಸರ್ಜಾ.
ಇನ್ನು ನಿರ್ದೇಶಕರ ಬಗ್ಗೆ ಮಾತನಾಡುತ್ತಾ, ಸಾಕಷ್ಟು ನಿರ್ದೇಶಕರ ಜತೆ ಕೆಲಸ ಮಾಡಿ ಅನುಭವ ಪಡೆದಿರುವ ಅನಿಲ್ ಕ್ಷತ್ರಿಯದ ಚಿತ್ರಕಥೆಯನ್ನು ವಿಶೇಷವೆನ್ನುವಂತೆ ಅಚ್ಚುಕಟ್ಟಾಗಿ ಮಾಡಿಕೊಂಡಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಾನು ನಟಿಸುತ್ತಿದ್ದರೂ ಕ್ಷತ್ರಿಯ ಸಿನಿಮಾ ಬೇರೆಯದ್ದೇ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ವಿಶ್ವಾಸದಲ್ಲಿ ಚಿರು ಇದ್ದಾರೆ.
ಕ್ಷತ್ರಿಯ ಚಿತ್ರದಲ್ಲಿ ಅಕ್ಕ ತಮ್ಮನ ನಡುವಿನ ಬಾಂಧವ್ಯದ ಕತೆ ಸಮ್ಮಿಳಿತಗೊಂಡಿದೆ. ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಕಥಾವಸ್ತು ಈ ಚಿತ್ರದಲ್ಲಿರುವುದರಿಂದ ಪ್ರೇಕ್ಷಕರು ಕೂಡಾ ಇಲ್ಲಿನ ಪಾತ್ರಗಳೊಂದಿಗೆ ಕನೆಕ್ಟ್ ಆಗಿಬಿಡುತ್ತಾರೆ. ತೀರಾ ಜವಾಬ್ದಾರಿಯುತ ಅಕ್ಕನಿಗೆ ಒಬ್ಬ ತರ್ಲೆ ತಮ್ಮ ಇದ್ದರೆ ಹೇಗಿರುತ್ತದೆ, ನಂತರ ಆತ ಸಮಾಜದ ಒಳಿತಿಗಾಗಿ ಶ್ರಮಿಸುವಂತವನಾದರೆ ಹೇಗಿರುತ್ತದೆ ಅನ್ನೋದೆ ಚಿತ್ರದ ಎಳೆ.
ಕನ್ನಡ ಚಿತ್ರರಂಗದ ಸಾಕಷ್ಟು ಸ್ಟಾರ್ ಡೈರೆಕ್ಟರುಗಳ ಜೊತೆಗೆ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನಿಲ್ ಮಂಡ್ಯ ಕ್ಷತ್ರಿಯ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ.ವಾಸು, ದಿನಕರ್ ತೂಗುದೀಪ, ತರುಣ್ ಸುಧೀರ್, ಮುಂಗಾರುಮಳೆ ಕೃಷ್ಣ ಮತ್ತು ಸಂತೋಷ್ ಅನಂದರಾಮ್ ಅವರ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಮತ್ತು ರಾಜಕುಮಾರ ಸಿನಿಮಾಗಳಿಗೆ ಕೋ ಡೈರೆಕ್ಟರ್ ಆಗಿದ್ದ ಅನಿಲ್ ಮಂಡ್ಯ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವರು. ಈಗ ಚಿರು ಹೀರೋ ಆಗಿರುವ ಕ್ಷತ್ರಿಯ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. “ನಾಯಕನಟನನ್ನು ಕೇಂದ್ರೀಕರಿಸಿಕೊಂಡು ಬರೆದಿರುವ ಈ ಕಥೆಯ ಮೊದಲಾರ್ಧದಲ್ಲಿ ಸೆಂಟಿಮೆಂಟ್ ಕಥಾವಸ್ತುವಿದ್ದರೆ, ದ್ವಿತೀಯಾರ್ಧದಲ್ಲಿ ಪಕ್ಕಾ ಕಮರ್ಷಿಯಲ್ ಅಂಶಗಳಿಂದ ಒಳಗೊಂಡಿದೆ. ಬೆಂಗಳೂರು, ಮೈಸೂರು, ಬಾಂಬೆ ಸೇರಿದಂತೆ ಹಲವು ಲೊಕೇಶನ್ನುಗಳಲ್ಲಿ ಸರಿ ಸುಮಾರು ಐವತ್ತೈದು ದಿನಗಳ ಶೂಟಿಂಗ್ ಪ್ಲ್ಯಾನ್ ಹಾಕಿಕೊಂಡಿದ್ದೇವೆ. ನಾಯಕಿಯ ಪಾತ್ರಕ್ಕಾಗಿ ಮಾತುಕತೆ ನಡೆಯುತ್ತಿದ್ದು ಇನ್ನೂ ಅಂತಿಮವಾಗಿಲ್ಲ. ದೇವರಾಜ್, ಸುಧಾರಾಣಿ, ಸಾಧುಕೋಕಿಲಾ ಸೇರಿದಂತೆ ಹಲವಾರು ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೇ ಈವರೆಗೂ ಕನ್ನಡಕ್ಕೆ ಬಂದಿರದ ಬಾಂಬೆಯ ಹೆಸರಾಂತ ವಿಲನ್ ಒಬ್ಬರು ಕೂಡಾ `ಕ್ಷತ್ರಿಯ’ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ. ನನ್ನ ಹೆಸರಲ್ಲೇ ಮಂಡ್ಯದ ಹೆಸರಿದೆ. ಇಂದು ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬದ ದಿನದಂದೇ ನನ್ನ ನಿರ್ದೇಶನದ ಮೊದಲ ಚಿತ್ರ ಮುಹೂರ್ತ ಆಚರಿಸಿಕೊಂಡಿರುವುದು ನನ್ನ ಪಾಲಿನ ಅದೃಷ್ಟ ಎಂದೇ ಭಾವಿಸಿದ್ದೇನೆ’’ ಎಂದು ನಿರ್ದೇಶಕ ಅನಿಲ್ ಮಂಡ್ಯ ತಿಳಿಸಿದರು.
“ಅನಿಲ್ ಸಿದ್ಧಪಡಿಸಿಕೊಂಡಿದ್ದ ಸಬ್ಜೆಕ್ಟಿಗೆ ಹೊಂದುವ ಶೀರ್ಷಿಕೆಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಕ್ಷತ್ರಿಯ ಎನ್ನುವ ಟೈಟಲ್ ಚಿತ್ರಕ್ಕೆ ಹೇಳಿಮಾಡಿಸಿದಂತಿದ್ದರೂ ಅದು ಮತ್ತೊಬ್ಬ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಅವರ ಬಳಿ ಇತ್ತು. ನಿರ್ಮಾಪಕ ಜಯಣ್ಣ ಅನಿಲ್ ಅವರಿಗೆ ಆತ್ಮೀಯರಾಗಿದ್ದು ಕ್ಷತ್ರಿಯ ಟೈಟಲ್ ಬೇಕು ಎಂದು ವಿನಂತಿಸಿದ್ದರು. ಜಯಣ್ಣ ಒಂದು ಮಾತು ಕೇಳುತ್ತಿದ್ದಂತೇ ಕೆ.ಪಿ. ಶ್ರೀಕಾಂತ್ ಪ್ರೀತಿಯಿಂದಲೇ ಶೀರ್ಷಿಕೆ ನೀಡಿದ್ದಾರೆ. ನಮಗಾಗಿ ತಮ್ಮ ಬ್ಯಾನರಿನಲ್ಲಿದ್ದ ಶೀರ್ಷಿಕೆಯನ್ನು ಬಿಟ್ಟುಕೊಟ್ಟಿರುವ ಶ್ರೀಕಾಂತ್ ಅವರ ಸಿನಿಮಾ ಪ್ರೀತಿ ಮತ್ತು ಜಯಣ್ಣ ಅವರ ಮಾತಿನ ಮೇಲೆ ಅವರಿಟ್ಟಿರುವ ಗೌರವ ನಿಜಕ್ಕೂ ದೊಡ್ಡದು.’’ ಎನ್ನುವುದು ನಿರ್ಮಾಪಕ ಎ.ವೆಂಕಟೇಶ್ ಅವರ ಮಾತಾಗಿತ್ತು.
ಅಂದಹಾಗೆ ಕ್ಷತ್ರಿಯ ಸಿನಿಮಾವನ್ನು ಈ ಹಿಂದೆ ಇದೇ ಚಿರು ನಟನೆಯ ಸಂಹಾರ ಚಿತ್ರವನ್ನು ನಿರ್ಮಿಸಿದ್ದ ವೈಷ್ಣವಿ ಮನು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎ.ವೆಂಕಟೇಶ್, ಕಿಶೋರ್ ಮಂಗಳವಾರಪೇಟೆ, ಎಂ.ವಿ.ಮನೀಶ್ ಮತ್ತು ಎಂ.ಜೆ. ವಿಷ್ಣುವರ್ಧನ್ ಸೇರಿ ನಿರ್ಮಿಸುತ್ತಿದ್ದಾರೆ. ಧರ್ಮವಿಶ್ ಸಂಗೀತಲ್ಲಿ ಐದು ಹಾಡುಗಳು ಮೂಡಿಬರುತ್ತಿದ್ದು ಯೋಗರಾಜ್ ಭಟ್, ಡಾ. ವಿ ನಾಗೇಂದ್ರ ಪ್ರಸಾದ್ ಮುಂತಾದವರು ಸಾಹಿತ್ಯ ರಚಿಸುತ್ತಿದ್ದಾರೆ. ಡಾ. ಕೆ. ರವಿವರ್ಮ ಸಾಹಸವಿರುವ ಈ ಚಿತ್ರಕ್ಕೆ ಬಹದ್ದೂರ್ ಚೇತನ್ ಕುಮಾರ್ ಸಂಭಾಷಣೆ ರಚಿಸುತ್ತಿದ್ದಾರೆ. ರವಿ.ವಿ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.
No Comment! Be the first one.