ಕುರಿ ಬಾಂಡ್ ಎನ್ನುವ ಟೀವಿ ಶೋ ಮೂಲಕ ಖ್ಯಾತಿ ಪಡೆದು, ಇವತ್ತಿಗೆ ಸಿನಿಮಾ ರಂಗದಲ್ಲಿ ಭರಪೂರ ಅವಕಾಶ ಪಡೆದಿರುವ ನಟ ಕುರಿ ರಂಗ. ಇತ್ತೀಚೆಗೆ ಉದಯ ಟೀವಿಯಲ್ಲಿ ಬರುವ ‘ಸವಾಲ್‌ಗೆ ಸೈ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಂಗಣ್ಣ ಚೆನ್ನೈನ ಸನ್ ಟಿವಿ ಸ್ಟುಡಿಯೋಗೆ ಹೋಗಿದ್ದರು. ಸವಾಲ್’ಗೆ ಸೈ ಪ್ರೋಗ್ರಾಮು ಚಿತ್ರೀಕರಣಗೊಳ್ಳುತ್ತಿದ್ದ ಸೆಟ್ಟಿನಲ್ಲೇ ತಮಿಳು ನಟ ಸೂರ್ಯ ಅವರ ‘ಕಾಪ್ಪಾನ್’ ಚಿತ್ರದ ಪ್ರಮೋಷನ್ನಿಗೆ ಸಂಬಂಧಿಸಿದ ಕಾರ್ಯಕ್ರಮ ಕೂಡಾ ಶೂಟ್ ಆಗುತ್ತಿತ್ತು. ಆಗ ಕಾರ್ಯಕ್ರಮದ ಆಯೋಜಕರೊಬ್ಬರು ‘ಕರ್ನಾಟಕದಿಂದ ಸಿನಿಮಾ ಕಲಾವಿದರುಗಳು ಬಂದಿದ್ದಾರೆ’ ಎಂದು ಹೇಳುತ್ತಿದ್ದಂತೇ ಖುದ್ದು ಸೂರ್ಯ ಕನ್ನಡದ ಕಲಾವಿದರ ಬಳಿ ಬಂದು ಕುಶಲೋಪರಿ ವಿಚಾರಿಸಿದ್ದಾರೆ. ‘ನನಗೆ ಕರ್ನಾಟಕವೆಂದರೆ ಬಲು ಇಷ್ಟ. ಬೆಂಗಳೂರು ಮತ್ತು ಮೈಸೂರಿಗೆ ಬಂದಾಗ ಅಲ್ಲಿನ ಜನ ತೋರುವ ಪ್ರೀತಿ ದೊಡ್ಡದು’ ಎಂದರಂತೆ. 

ಈ ಹೊತ್ತಿನಲ್ಲಿ ಅಲ್ಲಿದ್ದ ಕುರಿ ರಂಗ “ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರೋದಿಲ್ಲ. ಕನ್ನಡದಲ್ಲೇ ಮಾತಾಡುತ್ತೀನಿ” ಎನ್ನುತ್ತಾ “ನಾನು ಸರಿಸುಮಾರು ಎರಡು ಸಾವಿರದ ಮುನ್ನೂರು ಟೀವಿ ಎಪಿಸೋಡುಗಳಲ್ಲಿ ಜನರನ್ನು ಕುರಿ ಮಾಡಿದ್ದೀನಿ. ಸಾರ್ವಜನಿಕವಾಗಿ ನಡೆಯುವ ಈ ಶೋನಲ್ಲಿ ನಾನು ಬಕರಾ ಮಾಡಿದಾಗ ಜನ ಅಟ್ಟಾಡಿಸಿಕೊಂಡು ಬರುತ್ತಾರೆ. ಆಗ ನಾನು ಓಡುವ ರೀತಿಯನ್ನು ನೋಡಿ ಅನೇಕರು ‘ಸಿಂಗಂ ಥರಾ ಓಡ್ತೀಯ’ ಅಂತಾರೆ. ಆಗೆಲ್ಲಾ ನಾನು ನಿಮ್ಮನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇನೆ” ಅಂದರಂತೆ. ರಂಗಣ್ಣ ಹೇಳೋದನ್ನೆಲ್ಲಾ ಗಮನವಿಟ್ಟು ಕೇಳಿದ ಸೂರ್ಯ ‘ಓಹ್ ಗ್ರೇಟ್! ಸ್ಮಾಲ್ ಸ್ಕ್ರೀನ್’ಗೆ ಟೂ ಥೌಸೆಂಡ್ ಎಪಿಸೋಡಿಗಿಂತಾ ಹೆಚ್ಚು ಶೋ ಕೊಡೋದು ಸುಲಭದ ಕೆಲಸವಲ್ಲ. ಜೊತೆಗೆ ನಿಮ್ಮ ಕಾರ್ಯಕ್ರಮದ ಮಧ್ಯೆಯೂ ನನ್ನನ್ನು ನೆನಪು ಮಾಡಿಕೊಳ್ತೀರ ಅಂದರೆ ನಿಜಕ್ಕೂ ಸಂತೋಷವಾಗುತ್ತದೆ’ ಅಂತಾ ಆತ್ಮೀಯ ಮಾತುಗಳನ್ನಾಡಿದರಂತೆ.


ಸಾಮಾನ್ಯಕ್ಕೆ ಪರಭಾಷಾ ಸ್ಟಾರ್’ಗಳು ಎದುರಾದಾಗ, ಭಾಷೆ ಗೊತ್ತಿಲ್ಲದಿದ್ದರೂ ಅವರನ್ನು ಖುಷಿ ಪಡಿಸಲು ಅವರದ್ದೇ ಭಾಷೆಯಲ್ಲಿ ಮಾತಾಡುವ ಪ್ರಯತ್ನ ಮಾಡೋರೇ ಹೆಚ್ಚು. ಆದರೆ ನಮ್ಮ ರಂಗಣ್ಣ ಎದುರಿಗಿದ್ದವರು ಎಷ್ಟೋ ದೊಡ್ಡ ಸ್ಟಾರ್ ಆದರೂ ‘ನಾನು ಕನ್ನಡಿಗ. ನಾನು ಕನ್ನಡದಲ್ಲೇ ಮಾತಾಡ್ತೀನಿ’ ಎಂದು ಹೇಳಿ ನಮ್ಮ ಭಾಷೆಯಲ್ಲೇ ಅವರಿಗೆ ಅರ್ಥ ಮಾಡಿಸಿಬಂದಿರೋದು ಮತ್ತು ರಂಗಣ್ಣನ ಕನ್ನಡದ ನುಡಿಯನ್ನು ನಗುನಗುತ್ತಾ ಕೇಳಿ, ಅದಕ್ಕೆ ಸ್ಪಂದಿಸಿದ ನಟ ಸೂರ್ಯ ಇಬ್ಬರನ್ನೂ ಅಭಿನಂದಿಸೋಣ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬಾಲಿವುಡ್ ಗೆ ವಿಜಯ್ ಸೇತುಪತಿ ಎಂಟ್ರಿ!

Previous article

ಒಬ್ಬೊಬ್ಬರಿಗೆ ಒಂದೊಂದು ರೀತಿ ನನ್ನನ್ನು ನೋಡುವಾಸೆ!

Next article

You may also like

Comments

Leave a reply

Your email address will not be published. Required fields are marked *