ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಇತ್ತೀಚಿಗಷ್ಟೇ ವೃಷಭಾದ್ರಿ ಪ್ರೊಡಕ್ಷನ್ ನ ಮಾಲೀಕ ಮುನಿರತ್ನ ಅವರು ಕುರುಕ್ಷೇತ್ರ ಸಿನಿಮಾದ ರಿಲೀಸ್ ದಿನಾಂಕವನ್ನು ಅನೌನ್ಸ್ ಮಾಡಿದ್ದರು. ಈ ಮಧ್ಯೆ ಕುರುಕ್ಷೇತ್ರ ಸಿನಿಮಾದ ಆಡಿಯೋ ರಿಲೀಸ್ ಗೂ ಮುಹೂರ್ತ ಫಿಕ್ಸ್ ಆಗಿದ್ದು, ಜುಲೈನಲ್ಲಿ ಸಿನಿಮಾದ ಹಾಡುಗಳು ಬಿಡುಗಡೆಯಾಗಲಿದೆ. ಇನ್ನು ವರಮಹಾಲಕ್ಷ್ಮೀ ಹಬ್ಬದ ಉಡುಗೊರೆಯಾಗಿ ಆಗಸ್ಟ್ 9ರಂದು ಸಿನಿಮಾ ಥಿಯೇಟರ್ ಗೆ ಅಪ್ಪಳಿಸಲಿದೆ.
ಮುನಿರತ್ನ ಹೇಳಿಕೊಂಡಿರುವಂತೆ ಬರೋಬ್ಬರಿ 50 ರಿಂದ 60 ಕೋಟಿ ವೆಚ್ಚದಲ್ಲಿ ಕುರುಕ್ಷೇತ್ರ ನಿರ್ಮಾಣವಾಗಿದ್ದು, ನಾಗಣ್ಣ ಸೇರಿದಂತೆ ನಿರ್ದೇಶಕರ ತಂಡವೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಕುರುಕ್ಷೇತ್ರದ ಬಳಗದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಶ್ರೀನಾಥ್, ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ, ಮೇಘನಾ ರಾಜ್, ಪವಿತ್ರಾ ಲೋಕೇಶ್ ನಟಿಸಿದ್ದಾರೆ. ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸಿ ಅಬ್ಬರಿಸಿದ್ದರು. ಆ ಚಿತ್ರವನ್ನು ನಾಗಣ್ಣ ಅವರೇ ನಿರ್ದೇಶನ ಮಾಡಿದ್ದರು.
No Comment! Be the first one.