ಬಹುಕೋಟಿ ವೆಚ್ಚ, ಬಹು ತಾರಾಂಗಣ, ಬಹು ಭಾಷೆಗಳಲ್ಲಿ ಬಿಡುಗಡೆ ಇತ್ಯಾದಿ ಬಹಳಷ್ಟು ವಿಚಾರಗಳಿಂದ ಭಾರತದಾದ್ಯಂತ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ ಕುರುಕ್ಷೇತ್ರ. ಚಾಲೆಂಜಿಂಗ್ ದರ್ಶನ್ ಅವರ 50ನೇ ಸಿನಿಮಾ ಇದಾಗಿದ್ದು, ಬಿಡುಗಡೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಟೀಸರ್, ಆಡಿಯೋಗಳಿಂದಲೂ ಮೋಡಿ ಮಾಡಿದ್ದ ಕುರುಕ್ಷೇತ್ರ ಅದ್ಯಾಕೋ ಟ್ರೇಲರ್ ಕಟ್ ಮಾಡುವುದರಲ್ಲಿ ಕೊಂಚ ಎಡವಿತ್ತು. ಅಭಿಮಾನಿಗಳು ನಿರಾಸೆಗೂ ಒಳಗಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಡಿ ಬಾಸ್ ಅಭಿಮಾನಿಗಳು ದೊಡ್ಡ ಹೋರಾಟವನ್ನೇ ನಡೆಸಿದ್ದರು. ಕಡೆಗೂ ಅಭಿಮಾನಿಗಳ ಹೋರಾಟಕ್ಕೆ ತಲೆ ಬಾಗಿರುವ ಚಿತ್ರತಂಡ ಕುರುಕ್ಷೇತ್ರದ ಮತ್ತೊಂದು ಟ್ರೇಲರ್ ನ್ನು ಬಿಡುಗಡೆ ಮಾಡಿದೆ.
ಮೊದಲ ಟ್ರೇಲರ್ ಗೆ ಹೋಲಿಸಿದರೆ ಸದ್ಯ ರಿಲೀಸ್ ಆಗಿರುವ ಟ್ರೇಲರ್ ಅತ್ಯದ್ಭುತವಾಗಿದೆ. ಬಹಳಷ್ಟು ಪಾತ್ರಗಳ ಪರಿಚಯ, ವೈಭವ, ಅಟ್ಟಹಾಸದ ಪರಿಚಯವೂ ಈ ಟ್ರೇಲರ್ ನಲ್ಲಾಗುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಥೇಟ್ ಭಕ್ತ ಪ್ರಹ್ಲಾದದ ಡಾ|| ರಾಜ್ ಕುಮಾರ್ ರಂತೆ ಕಂಗೊಳಿಸಿದ್ದಾರೆ. ಪರಭಾಷೆಗಳ ನಟರು ಕುರುಕ್ಷೇತ್ರದಲ್ಲಿ ಅಭಿನಯಿಸಿದ್ದು, ಅವರಿಗೆ ಕನ್ನಡದ ನಟರು ಧ್ವನಿಯನ್ನು ನೀಡಿದ್ದಾರೆ. ಅದೆಲ್ಲೋ ಈ ಟ್ರೇಲರ್ ನಲ್ಲಿ ಮಿಸ್ ಆಗಿದ್ದು, ಲಿಪ್ ಸಿಂಕ್ ಸರಿಯಾಗಿ ಆದಂತೆ ಕಾಣುತ್ತಿಲ್ಲ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಬೇರೆಯವರು ಧ್ವನಿ ನೀಡಿದ್ದು, ಡೈಲಾಗ್ ಡೆಲೆವರಿಗೂ ಧ್ವನಿಗೂ ಕೊಂಚ ಮಿಸ್ ಆದಂತೆ ಕಾಣುತ್ತಿದೆ. ಅದನ್ನು ಬಿಟ್ಟರೇ ಟ್ರೇಲರ್ ಬಗೆಗೆ ತುಟಿ ಎರಡು ಮಾಡುವಂತಿಲ್ಲ. ಚಿತ್ರದಲ್ಲಿ ಅಂಬರೀಷ್, ಅರ್ಜುನ್ ಸರ್ಜಾ, ಶ್ರೀನಿವಾಸ್ ಮೂರ್ತಿ, ಶಶಿಕುಮಾರ್, ರವಿಶಂಕರ್, ನಿಖಿಲ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವಿದ್ದು ಆಗಸ್ಟ್ 2ಕ್ಕೆ ವಿಶ್ವದಾದ್ಯಂತ ತೆರೆಕಾಣಲಿದೆ. ಈ ಚಿತ್ರವನ್ನು ಮುನಿರತ್ನ ನಿರ್ಮಾಣ ಮಾಡಿದ್ದು, ನಾಗಣ್ಣ ಸೇರಿದಂತೆ ಮತ್ತಿತ್ತರರು ನಿರ್ದೆಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
Comments