ಒಂದೇ ದಿನದಲ್ಲಿ ಎರಡ್ಮೂರು ಸಿನಿಮಾಗಳು ರಿಲೀಸ್ ಆಗುತ್ತದೆ ಎಂದರೆ ಥಿಯೇಟರ್ ಗಳ ಸಮಸ್ಯೆ ಸರ್ವೇ ಸಾಧಾರಣವಾಗಿ ಉದ್ಭವಿಸುತ್ತದೆ. ಅದೇ ಸಮಸ್ಯೆ ಕುರುಕ್ಷೇತ್ರ ಚಿತ್ರಕ್ಕೂ ಎದುರಾಗಿದ್ದು, ಕೆಂಪೇಗೌಡ 2 ಸಲೀಲಾಗಿ ಥಿಯೇಟರ್ ಗಳನ್ನು ಪಡೆದುಕೊಂಡಿದೆ. ಮೇಲಾಗಿ ಮುನಿರತ್ನ ಮತ್ತು ರಾಕ್ ಲೈನ್ ವೆಂಕಟೇಶ್ ಅವರ ವ್ಯಾಪಾರ ನೀತಿ ಸಾಕಷ್ಟು ಚಿತ್ರಮಂದಿರ ಮಾಲೀಕರಿಗೆ ಸರಿಹೊಂದದೇ ಕುರುಕ್ಷೇತ್ರಕ್ಕಾಗಿ ಅಷ್ಟೇನು ತಲೆಕೆಡಿಸಿಕೊಂಡಿಲ್ಲ.
ಇತ್ತೀಚಿಗಷ್ಟೇ ಕೆಂಪೇಗೌಡ 2 ಚಿತ್ರದ ಸುದ್ದಿಗೋಷ್ಟಿಯಲ್ಲಿ ಕೋಮಲ್ ಗೆ ಥಿಯೇಟರ್ ಸಮಸ್ಯೆಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೋಮಲ್ “ನಮ್ಮ ಚಿತ್ರಕ್ಕೆ ಥಿಯೇಟರ್ ಸಮಸ್ಯೆಯೇನಿಲ್ಲ. ನಾವೇ ಬೇಡ ಎಂದು ಅನೇಕ ಥಿಯೇಟರ್ ಗಳನ್ನು ರಿಜೆಕ್ಟ್ ಕೂಡ ಮಾಡಿದ್ದೇವೆ. ಬೇರೊಬ್ಬ ಸ್ಟಾರ್ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ಸಮಸ್ಯೆ ಬಿಟ್ಟರೆ ಮಿಕ್ಕಂತೆ ಕೆಂಪೇಗೌಡ 2 ಎಳ್ಳಷ್ಟು ಸಮಸ್ಯೆಯಿಲ್ಲ ಎಂದು ಹೇಳಿದ್ದರು. ಆದರೆ ಸದ್ಯ ಬಂದ ಮಾಹಿತಿ ಪ್ರಕಾರ ಕುರುಕ್ಷೇತ್ರ ಚಿತ್ರಕ್ಕೆ ಥಿಯೇಟರ್ ಸಮಸ್ಯೆ ಎದುರಾಗಿದೆಯಂತೆ.
ಯೆಸ್.. ಸಾಕಷ್ಟು ದಿನಾಂಕ ಬದಲಾವಣೆಗಳ ನಂತರ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರತಂಡವು ಘೋಷಣೆ ಮಾಡಿತ್ತು. ಇದಕ್ಕೂ ಮೊದಲೇ ಅಂತಿಮ ದಿನಾಂಕವನ್ನು ಪ್ರಕಟಗೊಳಿಸಿದ್ದ ಕೆಂಪೇಗೌಡ 2 ಸಿನಿಮಾ ಕೂಡ ಅಂದೇ ಬಿಡುಗಡೆಯಾಗಲಿತ್ತು. ಇದಕ್ಕೆ ಕಳವಳವನ್ನೂ ವ್ಯಕ್ತಪಡಿಸಿದ್ದ ಕೋಮಲ್ ಕುರುಕ್ಷೇತ್ರದ ದಿಢೀರ್ ಬದಲಾವಣೆಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಆದರೆ ಸದ್ಯ ಬಂದ ಮಾಹಿತಿ ಪ್ರಕಾರ ಮುನಿರತ್ನ ಕುರುಕ್ಷೇತ್ರ ಸಿನಿಮಾಕ್ಕೆ ಕಡಿಮೆ ಚಿತ್ರಮಂದಿರ ಲಭ್ಯವಾಗುತ್ತಿದ್ದು, ಕುರುಕ್ಷೇತ್ರ ಚಿತ್ರಕ್ಕಿಂತ ಕೆಂಪೇಗೌಡ 2 ಸಿನಿಮಾ ಹೆಚ್ಚಿನ ಚಿತ್ರಮಂದಿರಗಳನ್ನು ಪಡೆದುಕೊಂಡಿದೆ. ಪಂಚಭಾಷೆಗಳಲ್ಲಿ ಕುರುಕ್ಷೇತ್ರ ಬಿಡುಗಡೆಯಾಗುತ್ತಿದ್ದರೂ ಕರ್ನಾಟಕದಲ್ಲಿ ಕಡಿಮೆ ಚಿತ್ರಮಂದಿರಗಳ ಕೊರತೆ ಎದ್ದುಕಾಣುತ್ತಿದೆ.
ಕರ್ನಾಟಕದಲ್ಲಿ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 3ಡಿ ಹಾಗೂ 2ಡಿ ವರ್ಷನ್ ಬಿಡುಗಡೆ ಆಗುತ್ತದೆ ಎಂಬ ಲೆಕ್ಕಾಚಾರ ಈಗ ತಲೆಕೆಳಕಾಗುತ್ತಿದೆ. ಏಕೆಂದರೆ ಚಿತ್ರಮಂದಿರಗಳು ‘ಕುರುಕ್ಷೇತ್ರ’ ಸಿನಿಮಾ ಪಡೆಯ ಬೇಕಾದರೆ ಎಂದಿಗಿಂತ 3 ಪಟ್ಟು ಹೆಚ್ಚು ಹಣ ಕೊಡಬೇಕು. ಅಂದರೆ ಒಂದು ಚಿತ್ರಮಂದಿರ 5 ಲಕ್ಷ ನೀಡುವ ಬದಲು 15 ಲಕ್ಷ ಮೊದಲೇ ನೀಡಿ ಚಿತ್ರವನ್ನು ಪಡೆಯಬೇಕಂತೆ. ನಿರ್ಮಾಪಕ ಮುನಿರತ್ನ ನಾಯ್ಡು ಹಾಗೂ ರಾಕ್ಲೈನ್ ವೆಂಕಟೇಶ್ ಅನುಸರಿಸಿರುವ ಈ ನೀತಿ ಪ್ರದರ್ಶಕ ವಲಯಕ್ಕೆ ಕಷ್ಟ ಎನಿಸಿದೆ. ಒಂದು ವಾರಕ್ಕೆ 5 ಲಕ್ಷ ಬದಲು 15 ಲಕ್ಷ ನೀಡುವುದು ಹೊರೆಯಾಗಿದೆ. ಹಾಗಾಗಿ ಅನೇಕ ಚಿತ್ರಮಂದಿರಗಳು ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದ್ದರಿಂದ 200 ಕ್ಕೂ ಹೆಚ್ಚು ಚಿತ್ರಮಂದಿರಗಳು ಸಲೀಸಾಗಿ ಕೋಮಲ್ ಕುಮಾರ್ ಅವರ ಕೆಂಪೇಗೌಡ 2 ಸಿನಿಮಾಕ್ಕೆ ದೊರೆತಿದೆ.