ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಂಡ ಅತಿ ಹೆಚ್ಚು ಬಜೆಟ್ಟಿನ ಸಿನಿಮಾ, ಚಾಲೆಂಜಿಂಗ್ ಸ್ಟಾರ್ ನಟನೆಯ ಐವತ್ತನೇ ಚಿತ್ರ, ಮಲ್ಟಿಸ್ಟಾರರ್ ಸಿನಿಮಾ, 3ಡಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪೌರಾಣಿಕ ಕಥಾ ಹಂದರ ಚಿತ್ರ… ಹೀಗೆ ಸಾಕಷ್ಟು ಕಾರಣಗಳಿಗೆ ಕುತೂಹಲ ಕೆರಳಿಸಿಕೊಂಡೇ ಬಂದಿದ್ದ ಕುರುಕ್ಷೇತ್ರ ಇಂದು ಬಿಡುಗಡೆಯಾಗಿದೆ.

ಮಹಾಭಾರತ ಮಹಾಕಾವ್ಯದಲ್ಲಿ ಕೌರವರು ಮತ್ತು ಪಾಂಡವರ ನಡುವಿನ ನಡುವೆ ಏರ್ಪಡುವ ದ್ವೇಷ, ಯುದ್ಧ, ಕುತಂತ್ರ, ಬಾಂಧವ್ಯಗಳು ಮತ್ತು ವಾರ್ ಎಪಿಸೋಡುಗಳನ್ನು ಮುನಿರತ್ನರ `ಕುರುಕ್ಷೇತ್ರ’ದಲ್ಲಿ ಪ್ರಧಾನವಾಗಿ ಬಳಸಿಕೊಳ್ಳಲಾಗಿದೆ. ಅಜಾನುಬಾಹು ಸುಯೋಧನನಾಗಿ ದರ್ಶನ್ ಅದ್ವಿತೀಯವಾಗಿ ನಟಿಸಿದ್ದಾರೆ. ಇಡೀ ಸಿನಿಮಾವನ್ನು ನೋಡಿಸಿಕೊಂಡು ಹೋಗುವುದು ಶಕುನಿ ಪಾತ್ರದಲ್ಲಿ ನಟಿಸಿರುವ ರವಿಶಂಕರ್ ಮತ್ತು ಕರ್ಣನಾಗಿ ಅರ್ಜುನ್ ಸರ್ಜಾ. ಈ ಇಬ್ಬರೂ ಮನೋಜ್ಞವಾಗಿ ಪಾತ್ರ ನಿಭಾಯಿಸಿದ್ದರೂ ಭೀಮ, ಅರ್ಜುನನ ಪಾತ್ರಧಾರಿಗಳ ಪೇವಲ ಅಲ್ಲಲ್ಲಿ ಸಿನಿಮಾವನ್ನು ಸಪ್ಪೆಯನ್ನಾಗಿಸಿದೆ. ಸಿನಿಮಾ ಜಗತ್ತು ತಾಂತ್ರಿಕವಾಗಿ ಸಾಕಷ್ಟು ಅಪ್ಡೇಟ್ ಆಗಿದ್ದರೂ `ಕುರುಕ್ಷೇತ್ರ’ದಲ್ಲಿ ಬಳಸಿರುವ ಕಾಸ್ಟೂಮ್’ಗಳು ರಾಜ ಪೋಷಾಕುಗಳಿನ್ನೂ ತೀರಾ ಹಿಂದಿನ ಮಾದರಿಯಲ್ಲಿರುವುದು, ಕೆಲವು ಸೆಟ್‍ಗಳು ಅತಿ ಬಣ್ಣದಿಂದ ಕೂಡಿರುವುದು ಕಣ್ಣು ಕುಕ್ಕುತ್ತವೆ. ರಾಜದರ್ಬಾರಿನಲ್ಲಿ ನಡೆಯುವ ವಾದ ವಿವಾದಗಳ ದೃಶ್ಯಗಳೇ ಹೆಚ್ಚಾಗಿ ತುಂಬಿರುವುದು, ಅಲ್ಲಿ ಬರೀ ಮಾತಿಗಷ್ಟೇ ಪ್ರಾಮುಖ್ಯತೆ ಕೊಟ್ಟಿರೋದು ನೋಡುಗರನ್ನು ಕಷ್ಟಕ್ಕೀಡು ಮಾಡುತ್ತದೆ. ಆದರೆ, ನಿಖಿಲ್ ಕುಮಾರ್ ಅಭಿನಯದ ದೃಶ್ಯಗಳು, ಅದರ ಹಿನ್ನೆಲೆ, ಮೇಕಿಂಗ್ ಸ್ಟೈಲ್ ಎಲ್ಲವೂ ಬೇರೆ ದೃಶ್ಯಗಳಿಗಿಂತಾ ಭಿನ್ನವಾಗಿಯೂ, ಕ್ಲಾಸಿಕ್ ಆಗಿಯೂ ಮೂಡಿಬಂದಿರೋದು ಸಮಾಧಾನ ಹುಟ್ಟಿಸುತ್ತದೆ. ನಿಖಿಲ್ ಬಳಸಿರುವ ಉಡುಗೆ-ತೊಡುಗೆಗಳು, ವೇಷ ಭೂಷಣಗಳಲ್ಲೂ ಒಂದಿಷ್ಟು ಬದಲಾವಣೆಗಳಿವೆ. ನಿಖಿಲ್ ನಿರ್ವಹಿಸಿರುವ ಸನ್ನಿವೇಶಗಳ ಸಂಭಾಷಣೆ ಈವತ್ತಿನ ರಾಜಕೀಯ ಮತ್ತು ನಿಖಿಲ್ ಅವರ ಖಾಸಗೀ ಬದುಕಿಗೆ ಹತ್ತಿರವಾಗಿರುವುದರಿಂದ ನೋಡುಗರಿಗೆ ಬೇಗ ಕನೆಕ್ಟ್ ಆಗುತ್ತದೆ.

ಇನ್ನುಳಿದಂತೆ ದರ್ಶನ್ ಅವರ ಮೇಕಪ್ಪು ಅತಿಯೆನಿಸುತ್ತದೆ. ಮೀಸೆ ಅಂಟಿಸಿರೋದು ಗೊತ್ತಾಗುವಷ್ಟರ ಮಟ್ಟಿಗೆ ಕೃತಕವಾಗಿದೆ. ದರ್ಶನ್ ರಂಥಾ ಸ್ಟಾರ್ ಯಾಕೆ ಈ ಬಗ್ಗೆ ಹೆಚ್ಚು ಗಮನ ಕೊಟ್ಟಿಲ್ಲ ಅನ್ನೋದೇ ನೋಡುಗರ ಮನಸ್ಸಿನಲ್ಲುಳಿಯುವ ದೊಡ್ಡ ಪ್ರಶ್ನೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಕೃಷ್ಣನ ಪಾತ್ರಕ್ಕೆ ಸರಿಹೊಂದಿರೋದೇನೋ ಸರಿ. ಆದರೆ ಅವರ ದನಿಯ ಬದಲಾಗಿ ಬೇರೆ ಯಾರದ್ದೋ ಡಬ್ಬಿಂಗ್ ಮಾಡಿಸಿರೋದು ಕಿರಿಕಿರಿ ಉಂಟು ಮಾಡುತ್ತದೆ. ಹಾಡುಗಳಲ್ಲಿ ಕುಣಿದು ಹೋಗುವ ಹರಿಪ್ರಿಯಾ ಮತ್ತು ಮೇಘನಾ ರಾಜ್ ಮುದ್ದಾಗಿ ಕಾಣುತ್ತಾರೆ. ದ್ರೌಪದಿಯ ಪಾತ್ರದಲ್ಲಿ ನಟಿಸಿರುವ ಸ್ನೇಹಾ ಯಾಕೋ ಡಲ್ ಅನಿಸುತ್ತಾರೆ. ಈ ಎಲ್ಲದರ ನಡುವೆ ದ್ವಿತೀಯಾರ್ಧದಲ್ಲಿ ತೆರೆ ಮೇಲೆ ದುರ್ಯೋಧನನ ದರ್ಶನ ಭಾಗ್ಯ ಸಿಗೋದೇ ಕಡಿಮೆ.  ಮಹಾ ಭಾರತದ ಕಥೆಯೇ ಹಾಗಿರೋದರಿಂದ ದರ್ಶನ್ ಅಭಿಮಾನಿಗಳ ಬೇಸರಕ್ಕೂ ಅಲ್ಲಿ ಜಾಗವಿಲ್ಲ!

ಇನ್ನೊಂದಿಷ್ಟು ಪೂರ್ವ ತಯಾರಿಗಳು, ತಾಳ್ಮೆ, ಜಾಗೃತಿ ವಹಿಸಿದ್ದಿದ್ದರೆ `ಕುರುಕ್ಷೇತ್ರ’ದಲ್ಲಾಗಿರುವ ಕಸಿವಿಸಿಗಳನ್ನು ತಪ್ಪಿಸಬಹುದಿತ್ತೇನೋ? ಏನೇ ಆಗಲಿ, ಲಾಟು ಲಾಟು ಕಲಾವಿದರು, ಸ್ಟಾರ್ ನಟರ ದಂಡು, ಮಣ ಭಾರದ ಧಿರಿಸುಗಳು, ಎರಡು ವರ್ಷದ ಪರಿಶ್ರಮ, ಪರದಾಟಗಳ ಹಿನ್ನೆಲೆಯಲ್ಲಿ ನೋಡಿದಾಗ ಕನ್ನಡದ ಮಟ್ಟಿಗೆ `ಮುನಿರತ್ನ ಕುರುಕ್ಷೇತ್ರ’ವನ್ನು ಸಾಧನೆಯೆಂದೇ ಪರಿಗಣಿಸಬೇಕು. ಈ ಕಾರಣಕ್ಕಾದರೂ ಒಮ್ಮೆ `ಕುರುಕ್ಷೇತ್ರವನ್ನು ನೋಡಬೇಕು’. ಆ ಮೂಲಕ ಧೀಮಂತ ನಿರ್ಮಾಪಕನ ಧೈರ್ಯಕ್ಕೆ, ಕಲಾವಿದ, ತಂತ್ರಜ್ಞರ ಶ್ರಮಕ್ಕೆ ನ್ಯಾಯ ಸಲ್ಲಿಸಬೇಕು!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಉದಯ ಟಿವಿಯಲ್ಲಿ ನಾನು ನನ್ನ ಕನಸು ಧಾರವಾಹಿ!

Previous article

ಮತ್ತೆ ಒಂದಾಗಲಿದೆ ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ!

Next article

You may also like

Comments

Leave a reply

Your email address will not be published. Required fields are marked *