ಕಳೆದೊಂದು ವರ್ಷದಿಂದ ಈಗ ಬಂತು, ಆಗ ಬಂತು ಅಂತಾ ಬರೀ ಸುದ್ದಿಯಲ್ಲಿದ್ದ ಕುರುಕ್ಷೇತ್ರ ಈ ಬಾರಿ ಅಂದುಕೊಂಡಂತೇ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಇತ್ಯಾದಿ ಖ್ಯಾತಿಯ ದರ್ಶನ್ ಅವರ ನಟನೆಯನ್ನು ಅವರ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಸುಯೋಧನನಾಗಿ ದರ್ಶನ್ ತುಂಬಾ ಆಕರ್ಷಕವಾಗಿ ಕಂಡಿದ್ದಾರೆ. ದರ್ಶನ್ ಅಭಿಮಾನಿಗಳು ‘ಕುರುಕ್ಷೇತ್ರವನ್ನು ಕೊಂಡಾಡುತ್ತಿದ್ದಾರೆ. ಮಿಕ್ಕಂತೆ ಚಿತ್ರದ ಕುರಿತಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೋಡಿದವರ ಅನಿಸಿಕೆ ಏನೇ ಆದರೂ ಕನ್ನಡದ ಮಟ್ಟಿಗೆ ಈ ಚಿತ್ರ ದೊಡ್ಡ ಸಾಧನೆ ಅನ್ನೋದರಲ್ಲಿ ಯಾವ ಡೌಟೂ ಇಲ್ಲ.
ಹತ್ತಾರು ಜನ ಸ್ಟಾರ್ ನಟರು, ಸಾವಿರಾರು ಜನ ತಂತ್ರಜ್ಞರನ್ನು ಸೇರಿಸಿಕೊಂಡು, ದೂರದ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಸಿ, ಭಾರತದಲ್ಲಿರುವ ಅಷ್ಟೋ ಸ್ಟುಡಿಯೋಗಳಲ್ಲಿ ತಾಂತ್ರಿಕ ಕೆಲಸಗಳನ್ನು ಮಾಡಿಸಿ, ಪ್ರಚಾರ ಮಾಡಿ ರಿಲೀಸು ಮಾಡೋದು ಸುಮ್ಮನೇ ಮಾತಲ್ಲ. ಮುನಿರತ್ನರಂಥ ಗಂಟು-ಗುಂಡಿಗೆ ಗಟ್ಟಿ ಇರುವವರು ಮಾತ್ರ ಮಾಡಬಲ್ಲ ಸಿನಿಮಾ ಇದು.
ಮಲ್ಟಿ ಸ್ಟಾರರ್ ಸಿನಿಮಾ ಮಾಡೋದೆಂದರೆ ನಿಂತಲ್ಲಿ ನಿಲ್ಲದೇ ಎಗರುವ ಕಪ್ಪೆಗಳನ್ನೆಲ್ಲಾ ಒಂದೇ ಬುಟ್ಟಿಗೆ ಸೇರಿಸುವಂಥಾ ಕೆಲಸ. ಒಂದನ್ನು ತಂದು ನಿಲ್ಲಿಸುವಷ್ಟರಲ್ಲಿ ಇನ್ನೊಂದು ಜಂಪು ಮಾಡಿರುತ್ತದೆ. ಕುರುಕ್ಷೇತ್ರ ಸಿನಿಮಾದ ವಿಚಾರವನ್ನೇ ತೆಗೆದುಕೊಳ್ಳಿ. ಇಲ್ಲಿರೋದು ಒಬ್ಬಿಬ್ಬರು ಸ್ಟಾರ್ ನಟರಾ? ರೆಬೆಲ್ ಸ್ಟಾರ್ ಅಂಬರೀಶ್ ರಿಂದ ಹಿಡಿದು ಯುವರಾಜ ನಿಖಿಲ್ ತನಕ ಎಣಿಸಿದರೆ ಹೀರೋಗಳೇ ಎರಡು ಡಜನ್ನು ಸಿಗುತ್ತಾರೆ.
ನಿರ್ಮಾಪಕ ಮುನಿರತ್ನ ರಾಜಕಾರಣಿಯೂ ಆಗಿದ್ದಾರೆ. ಕುರುಕ್ಷೇತ್ರ ಶುರುವಾದ ಮೇಲೆ ಕರ್ನಾಟಕದಲ್ಲಿ ಎರಡೆರಡು ಚುನಾವಣೆಗಳೂ ನಡೆದಿವೆ. ಇಲ್ಲಿ ತೊಡಗಿಸಿಕೊಂಡಿರುವ ನಟರ ಪೈಕಿಯೇ ನಾಲ್ಕಾರು ಪಕ್ಷದವರಿದ್ದಾರೆ. ರಾಜಕೀಯಗಳೆಲ್ಲಾ ಏನೇ ಇದ್ದರೂ ಸಿನಿಮಾಗಾಗಿ ಎಲ್ಲರನ್ನೂ ಒಂದು ಕಡೆ ಸೇರಿಸಿ ‘ಕುರುಕ್ಷೇತ್ರವನ್ನು ಮುಗಿಸಿದ ಮುನಿರತ್ನ ಪಾಲಿಗಿದು ಯುದ್ದವನ್ನು ಜಯಿಸಿದಷ್ಟೇ ಆಯಾಸವಾಗಿರುತ್ತದೆ.
ಇಷ್ಟೆಲ್ಲಾ ಕಷ್ಟಪಟ್ಟು ಸಿನಿಮಾ ಬಿಡುಗಡೆ ಮಾಡಲು ಡೇಟೂ ಫಿಕ್ಸು ಮಾಡಿ ಕಾದು ಕುಂತರೆ ಹೀಗಾಗಿ ಬಿಡೋದಾ? ಮುಕ್ಕಾಲು ಕರ್ನಾಟಕ ನೀರಿನಲ್ಲಿ ನೆಂದು ಕೂತಿದೆ. ಎಷ್ಟೋ ಭಾಗ ತೀರಾ ಮುಳುಗಡೆಯ ಹಂತ ತಲುಪಿದೆ.
ಕನ್ನಡ ಸಿನಿಮಾಗಳ ಪಾಲಿಗೆ ಜೀವಳಾದಂತಿರುವ ಉತ್ತರ ಕರ್ನಾಟಕವೇ ಈಗ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸುತ್ತಿದೆ. ಇಂಥಾ ಪರಿಸ್ಥಿತಿಯಲ್ಲಿ ಜನ ಥಿಯೇಟರಿಗೆ ಬಂದು ಸಿನಿಮಾ ನೋಡಲು ತಾನೆ ಹೇಗೆ ಸಾಧ್ಯ? ಸ್ಟಾರ್ ಸಿನಿಮಾಗಳು ಬಿಡುಗಡೆಯಾದ ಮೊದಲ ನಾಲ್ಕು ವಾರದಲ್ಲಿ ಎಷ್ಟು ಕಲೆಕ್ಷನ್ ಮಾಡಿದರೂ ನಿರ್ಮಾಪಕ ಸೇಫ್ ಆದಂತೆ. ಆದರಿಲ್ಲಿ ಬೆಂಗಳೂರು, ಮೈಸೂರು, ತುಮಕೂರು (ಬಿಕೆಟಿ) ಮುಂತಾದ ಕೆಲವೇ ಏರಿಯಾ ಬಿಟ್ಟಿರೆ ಮಿಕ್ಕೆಲ್ಲಾ ಜಾಗದಲ್ಲಿ ವರುಣನ ‘ಮುನಿಸು ಜೋರಾಗೇ ಇದೆ.
ಕುರುಕ್ಷೇತ್ರವನ್ನು ಆರಂಭಿಸಿದ ದಿನದಂದಲೂ ಮುನಿರತ್ನ ಒಂದಲ್ಲಾ ಒಂದು ಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಈಗ ತೀರಾ ಸಿನಿಮಾ ಬಿಡುಗಡೆಯ ಸಂದರ್ಭದಲ್ಲೂ ಪರಿಸ್ಥಿತಿ ಯಾಕೆ ಅವರನ್ನು ಹೀಗೆ ಕಾಡಿಸುತ್ತಿದೆಯೋ ಗೊತ್ತಿಲ್ಲ. ಆದಷ್ಟು ಬೇಗ ಈ ಮಳೆಯ ಆರ್ಭಟ ಕಡಿಮೆಯಾಗಿ, ಕರ್ನಾಟಕ ಕ್ಷೇಮವಾಗಲಿ. ಆ ಮೂಲಕ ಜನ ಥಿಯೇಟರಿಗೆ ಬಂದು ಕುರುಕ್ಷೇತ್ರವನ್ನು ನೋಡುವಂತಾಗಲಿ…
No Comment! Be the first one.