ಕೊರೋನಾದ ಕರಿ ನೆರಳು ಜಗತ್ತಿನ ಮೇಲೆ ಆವರಿಸದೇ ಇದ್ದಿದ್ದರೆ ಕೆಲವು ಸಿನಿಮಾಗಳು ಬಿಡುಗಡೆಯಾಗಿ ವರ್ಷ ಪೂರೈಸಬೇಕಿತ್ತು. ಮಠ ಗುರುಪ್ರಸಾದ್, ಚಂದನ್ ಗೌಡ, ಸಂಜನಾ ಆನಂದ್ ಮುಂತಾದವರು ನಟಿಸಿರುವ ಕುಷ್ಕ ಸಿನಿಮಾ ರಿಲೀಸಿಗೆ ಸಕಲ ರೀತಿಯ ತಯಾರಿ ನಡೆಸಿತ್ತು. ಅದೇ ಹೊತ್ತಿಗೆ ವಕ್ಕರಿಸಿಕೊಂಡಿತು ನೋಡಿ ಕೊರೋನಾ ವೈರಸ್ಸು. ತೆರೆಗೆ ಬರಬೇಕಿದ್ದ ಕುಷ್ಕ ಹಾಗೇ ಉಳಿದುಕೊಳ್ಳುವಂತಾಯಿತು. ಈಗ ಪರಿಸ್ಥಿತಿ ಸಹಜತೆಯತ್ತ ಬರುತ್ತಲೇ ಕುಷ್ಕ ತೆರೆಗೆ ಬಂದಿದೆ.
ಶೀರ್ಷಿಕೆಯಂತೇ ಕುಷ್ಕ ಸಿನಿಮಾದ ಕಂಟೆಂಟ್ ನಲ್ಲೂ ಹೊಸತನವಿದೆ. ಈ ಸಿನಿಮಾವನ್ನು ವಿಕ್ರಂ ಯೋಗಾನಂದ್ ನಿರ್ದೇಶಿಸಿದ್ದಾರೆ. ಐರಾ ಸಿನಿಮಾದ ನಿಹಾಲ್ ಚಿತ್ರವನ್ನು ರಿಲೀಸ್ ಮಾಡಿದ್ದಾರೆ.
ನಾಯಕನಟ ಚಂದನ್ ಗೌಡ ಹೀಗಂದರು…
ಒಂದೇ ಸಿನಿಮಾದಲ್ಲಿ ಇದ್ದರೂ, ಗುರುಪ್ರಸಾದ್ ಅವರ ಜೊತೆಗೆ ನಟಿಸಲು ಅವಕಾಶ ಸಿಕ್ಕಿಲ್ಲ ಎನ್ನುವ ಬೇಸರವಿದೆ. ಮೊದಲ ದಿನದ ಶೋ ನೋಡುವಾಗಲೂ ತೆರೆ ಮೇಲೆ ನನ್ನನ್ನು ನಾನು ನೋಡಿಕೊಂಡಿದ್ದಕ್ಕಿಂತಾ, ಗುರುಪ್ರಸಾದ್ ಅವರ ನಟನೆಯನ್ನು ನೋಡಿ ಹೆಚ್ಚು ಎಂಜಾಯ್ ಮಾಡಿದ್ದೇನೆ. ಧಾರಾವಾಹಿಯಿಂದ ಬಂದು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಇದೇ ವರ್ಷ ಇನ್ನೂ ನಾಲ್ಕು ಸಿನಿಮಾಗಳು ಬಿಡುಗಡೆಯಾಗಲಿವೆ. ಅದರ ಆರಂಭವಾಗಿ ಕುಷ್ಕ ತೆರೆಗೆ ಬಂದಿದೆ. ಜನ ನೋಡಿ ಇಷ್ಟ ಪಡುತ್ತಿದ್ದಾರೆ. ಯಾವ ಅಬ್ಬರ ಆಡಂಬರವಿಲ್ಲದ ಪಾತ್ರ ತುಂಬಾ ಖುಷಿ ಕೊಟ್ಟಿದೆ. ಸಿನಿಮಾ ಇನ್ನೂ ಹೆಚ್ಚು ಜನಕ್ಕೆ ಮುಟ್ಟಲು ಸಾಧ್ಯವಾಗಿಲ್ಲ ಅನ್ನೋ ಬೇಸರವಿದೆ. ಇನ್ನಾದರೂ ಜನ ನಮ್ಮ ಸಿನಿಮಾವನ್ನು ಕೈ ಹಿಡಿಯಲಿದ್ದಾರೆ ಎನ್ನುವ ನಂಬಿಕೆಯೂ ಇದೆ.
ಐರಾ ನಿಹಾಲ್
ಕಳೆದ ವರ್ಷ ಮಾರ್ಚ್ ನಲ್ಲಿ ಕುಷ್ಕ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಅದಕ್ಕೆ ಅವಕಾಶ ನೀಡಲಿಲ್ಲ. ನಮ್ಮ ಐರಾ ಸಿನಿಮಾಸ್ ಸಹನಿರ್ಮಾಣ ಮತ್ತು ವಿತರಣೆ ಮಾಡಿರುವ ಮೊದಲ ಸಿನಿಮಾ ಇದು.
ವಿಕ್ರಂ ಯೋಗಾನಂದ್ ಮನವಿ
ಸಾಕಷ್ಟು ಕನಸಿಟ್ಟುಕೊಂಡು ಹೊಸದೊಂದು ಪ್ರಯತ್ನ ಮಾಡಿದ್ದೇವೆ. ಒಳ್ಳೆ ಪ್ರಯತ್ನವನ್ನು ಯಾವತ್ತೂ ಯಾರೂ ಕೈ ಬಿಡೋದಿಲ್ಲ ಎನ್ನುವ ನಂಬಿಕೆಯಿಂದ ಸಿನಿಮಾವನ್ನು ತೆರೆಗೆ ತಂದಿದ್ದೇವೆ. ನೋಡಿದ ಪ್ರತಿಯೊಬ್ಬರೂ ಕುಷ್ಕವನ್ನು ಅಪಾರವಾಗಿ ಇಷ್ಟ ಪಡುತ್ತಿದ್ದಾರೆ. ಜನರ ಮೌತ್ ಟಾಕ್ ನಿಂದಷ್ಟ ನಮ್ಮ ಚಿತ್ರ ಥಿಯೇಟರಿನಲ್ಲಿ ನಿಲ್ಲಲು ಸಾಧ್ಯ. ಸಾಧ್ಯವಾದಷ್ಟೂ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಖಂಡಿತಾ ನಿಮಗಿಷ್ಟವಾಗಲಿದೆ…
Leave a Reply
You must be logged in to post a comment.