ಸೆಲೆಬ್ರೆಟಿಗಳು ಸಮಾಜಸೇವೆಯಲ್ಲಿ ಗುರುತಿಸಿಕೊಂಡು ಸಂಬಂಧಪಟ್ಟವರಿಗೆ ಕೈಲಾದ ಸೇವೆಯನ್ನು ಒದಗಿಸುವುದು ಈಗೀಗ ಹೆಚ್ಚು ಹಾಗೂ ಮಾದರಿ ಕೂಡ. ಈಗಾಗಲೇ ಕನ್ನಡವೂ ಸೇರಿದಂತೆ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳ ಇಂಡಸ್ಟ್ರಿಗಳ ಸೆಲೆಬ್ರೆಟಿಗಳು ಅದೇ ದಾರಿಯಲ್ಲಿದ್ದಾರೆ. ಕನ್ನಡದ ನಟನೊಬ್ಬನೂ ಕೂಡ ಈಗ ಅದೇ ದಾರಿಯಲ್ಲಿದ್ದಾರೆ. ನಟ ನೀನಾಸಂ ಸತೀಶ್ ಸಮಾಜ ಸೇವೆಯತ್ತ ಮುಖಮಾಡಿದ್ದಾರೆ. ಹಾಗಂತ ಅವ್ರು ಚಿತ್ರರಂಗ ಬಿಟ್ಟಿಲ್ಲ. ಚಿತ್ರರಂಗದಲ್ಲಿ ತಮ್ಮ ಸಕ್ಸಸ್‌ಫುಲ್ ಜರ್ನಿ ಜೊತೆ ಜೊತೆಗೇ ಸಮಾಜಸೇವೆ ಕಾರ್ಯಕ್ಕೆ ಮುಂದಾಗಿದ್ದಾರೆ. ‘ಸತ್ಯಪಥ’ ಅನ್ನೋ ಹೆಸರಲ್ಲಿ ಟ್ರಸ್ಟ್ ಶುರು ಮಾಡಿದ್ದು ಈ ವಿಷಯವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಹಂಚಿಕೊಂಡಿದ್ದಾರೆ.
“ನಾನು ಅಂದುಕೊಂಡ ಕೆಲವೊಂದು ಸಮಾಜ ಸೇವೆಗಳನ್ನು ಮಾಡಲು’ “ಸತ್ಯಪಥ” ಎಂಬ ಹೆಸರಿನಲ್ಲಿ ಟ್ರಸ್ಟ್ ರಿಜಿಸ್ಟರ್ ಮಾಡಿಸಿದ್ದೇವೆ. ಕಾನೂನು ತೊಡಕುಗಳಿಂದ ಸ್ವಲ್ಪ ವಿಳಂಬವಾಯಿತು. ಇನ್ನು ಮುಂದೆ ನಮ್ಮ ಸಾಮಾಜಿಕ ಕೆಲಸಗಳು ಮುಂದುವರೆಯಲಿದೆ ನಿಮ್ಮ ಬೆಂಬಲವಿರಲಿ” ಎಂದು ಸತೀಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಯೋಗ್ಯ, ಚಂಬಲ್ ಸಿನಿಮಾಗಳ ಸಕ್ಸಸ್‌ನಲ್ಲಿರುವ ಸತೀಶ್ ಸದ್ಯ ಬ್ರಹ್ಮಚಾರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಚಂದ್ರ ಮೋಹನ್ ನಿರ್ದೇಶನ ಮಾಡುತ್ತಿದ್ದಾರೆ. ಸತೀಶ್ ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ.