ಅಕ್ಷರಗಳನ್ನೇ ನಂಬಿ ಬದುಕುತ್ತಿರೋ ದೇಶಾದ್ರಿ ಹೊಸ್ಮನೆ ಮತ್ತು ವಿಜಯ್ ಭರಮಸಾಗರ ಈಗ ಒಟ್ಟಿಗೇ ಸೇರಿ ಸಿನಿ ಲಹರಿ ಹೆಸರಿನ ವೆಬ್ ಪೋರ್ಟಲ್ ಮತ್ತು ಯೂ ಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.
ಉಷಾಕಿರಣ, ವಿಜಯಕರ್ನಾಟಕ, ಈ ಸಂಜೆ, ಅರಗಿಣಿಯಂತಾ ಪತ್ರಿಕೆಗಳ ಸಿನಿಮಾ ವರದಿಗಾರನಾಗಿ ದುಡಿದವರು ವಿಜಯ್ ಭರಮಸಾಗರ. ಅದರ ಜೊತೆ ಜೊತೆಗೇ ಸಿನಿಮಾ ಹಾಡು, ಸಂಭಾಷಣೆಗಳನ್ನು ಬರೆಯುತ್ತಾ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ತಮ್ಮ ವೃತ್ತಿಯ ಒತ್ತಡದ ನಡುವೆಯೂ ಅಪಾರವಾದ ಸಿನಿಮಾ ಪ್ರೇಮ ಹೊಂದಿರೋ ವಿಜಯ್ ಭಾರತೀಪುರ ಕ್ರಾಸ್ ಎಂಬ ಕಿರುಚಿತ್ರವೊಂದನ್ನು ರೂಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಪತ್ರಿಕೋದ್ಯಮ ಮತ್ತು ಚಿತ್ರರಂಗದಲ್ಲಿ ಏಕಕಾಲದಲ್ಲಿ ಸಕ್ರಿಯರಾಗಿರುವ ವಿಜಯ್ ಅವರ ಯೋಜನೆಗಳು ಮತ್ತಷ್ಟು ವಿಸ್ತಾರಗೊಂಡಿವೆ.
ಪತ್ರಕರ್ತರ ವಲಯದಲ್ಲಿ ದೇಶಾದ್ರಿ ಅಂತಲೇ ಹೆಸರಾಗಿರೋ ದೇಶಾದ್ರಿ ಹೊಸ್ಮನೆ ಕೂಡಾ ಪತ್ರಿಕೋದ್ಯಮದಲ್ಲಿ ಶ್ರಮದಿಂದ ಕೃಷಿ ನಡೆಸಿದ್ದಾರೆ. ದಮನಿತ ಸಮುದಾಯದೆಡೆಗಿನ ಪ್ರಾಮಾಣಿಕ ಕಾಳಜಿ, ಅವರಿಗಾಗಿನ ಹೋರಾಟಗಳ ಜೊತೆಗೇ ಈಗ್ಗೆ ಎರಡು ದಶಕಗಳಿಂದ ಪತ್ರಕರ್ತರಾಗಿರೋ ದೇಶಾದ್ರಿ ಜರ್ನಲಿಸಮ್ಮಿನ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ದಟ್ಟ ಮಲೆನಾಡಿನ ವಾತಾವರಣದಲ್ಲಿ ಬೆಳೆದ ದೇಶಾದ್ರಿ ಹೊಸ್ಮನೆ ಏಕಾಏಕಿ ಫೇಮಸ್ಸಾಗಿ ಬಿಡಬೇಕು ಎಂಬಂಥಾ ಹುಕಿಯಿಂದ ಬಂದವರಲ್ಲ. ನೊಂದ ಅಷ್ಟೂ ಜೀವಗಳ ಒಡಲ ಕುದಿಯನ್ನು ಎದೆಯೊಳಗಿಟ್ಟುಕೊಂಡೇ ಅಕ್ಷರ ಜಗತ್ತಿಗೆ ಅಡಿಯಿರಿಸಿದ ದೇಶಾದ್ರಿ ಆ ಕಾರಣದಿಂದಲೇ ಗಟ್ಟಿತನ ಹೊಂದಿರೋ ಬರಹಗಾರನಾಗಿ, ಕ್ರಿಯಾಶೀಲ ಪತ್ರಕರ್ತನಾಗಿ ನೆಲೆ ಕಂಡುಕೊಂಡಿದ್ದಾರೆ.
ಶಿವಮೊಗ್ಗದ ಎಚ್ಚರಿಗೆ ಪತ್ರಿಕೆಯಿಂದ ಬರವಣಿಗೆ ಆರಂಭಿಸಿ, ಮರಳುಮಾಫಿಯಾ, ಶಿವಮೊಗ್ಗ ರೌಡಿಗಳ ಹಾವಳಿಗಳ ಬಗ್ಗೆ ʻಕ್ರಾಂತಿದೀಪʼದಲ್ಲಿ ತನಿಖಾ ವರದಿಗಳನ್ನು ಬರೆದು, ಆ ಕಾರಣಕ್ಕೇ ಪಡಬಾರದ ಕಷ್ಟ ಪಟ್ಟಿದ್ದರು. ನಂತರ ಬೆಂಗಳೂರಿಗೆ ಬಂದು ಲಂಕೇಶ್, ಕರುನಾಡ ಸಂಜೆ, ಈ ಸಂಜೆ, ಉದಯ, ಈಟಿವಿ, ಜನಶ್ರೀಗಳಲ್ಲೆಲ್ಲಾ ದುಡಿದು ಕನ್ನಡಪ್ರಭ ಪತ್ರಿಕೆಯಲ್ಲಿ ಹೆಚ್ಚುಕಾಲ ನೆಲೆನಿಂತವರು ದೇಶಾದ್ರಿ. ಅಗಾಧವಾದ ಓದು, ಸ್ವತಂತ್ರವಾದ ಚಿಂತನೆ, ದಮನಿತರೆಡೆಗಿನ ಕಾಳಜಿ ಮತ್ತು ಭಾವುಕ ವ್ಯಕ್ತಿತ್ವದ ಮೂಲಕವೇ ಅಕ್ಷರ ಹೊಸೆಯುತ್ತಾ ಅಖಂಡ ಎರಡು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜಕೀಯ, ಸಿನಿಮಾವೂ ಸೇರಿದಂತೆ ಎಲ್ಲ ವಿಚಾರಗಳನ್ನೂ ಲೀಲಾಜಾಲವಾಗಿ ಬರೆಯಬಲ್ಲ ಕೆಲವೇ ಕೆಲ ಪತ್ರಕರ್ತರ ಸಾಲಿನಲ್ಲಿ ದೇಶಾದ್ರಿ ಕೂಡಾ ಒಬ್ಬರು. ಅಕ್ಷರಗಳನ್ನೇ ನಂಬಿ ಬದುಕುತ್ತಿರೋ ದೇಶಾದ್ರಿ ಹೊಸ್ಮನೆ ಮತ್ತು ವಿಜಯ್ ಭರಮಸಾಗರ ಈಗ ಒಟ್ಟಿಗೇ ಸೇರಿ ಸಿನಿ ಲಹರಿ ಹೆಸರಿನ ವೆಬ್ ಪೋರ್ಟಲ್ ಮತ್ತು ಯೂ ಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಸಿನಿಮಾ ರಂಗದ ಗಂಧ ಗಾಳಿ ಗೊತ್ತಿಲ್ಲದ ಎಷ್ಟೋ ಜನ ಇತ್ತೀಚೆಗೆ ಪೋರ್ಟಲ್ಲುಗಳನ್ನಾರಂಭಿಸಿ ಆನ್ ಲೈನ್ ಓದುಗರಿಗೆ ʻಶಾಕ್ʼ ಟ್ರೀಟ್ ಮೆಂಟ್ ನೀಡುತ್ತಿದ್ದಾರೆ. ಎರಡೇ ಸಾಲು ಬರೆದು ಫೇಸ್ ಬುಕ್ಕಲ್ಲಿ ಪೋಸ್ಟ್ ಮಾಡುವವರೂ ಪತ್ರಕರ್ತರಾಗಿಹೋಗಿದ್ದಾರೆ.
ಇವೆಲ್ಲಾ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗಕ್ಕಷ್ಟೇ ಮೀಸಲಾದ, ಪಾಸಿಟೀವ್ ವಿಚಾರಗಳನ್ನು ಮಾತ್ರ ನೀಡುವ ಆನ್ ಲೈನ್ ಪತ್ರಿಕೆ ಮತ್ತು ಚಾನೆಲ್ಲಿನ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ದೇಶಾದ್ರಿ ಮತ್ತು ವಿಜಿ ಇಬ್ಬರ ಹತ್ತಾರು ವರ್ಷಗಳ ಅನುಭವ, ಬರವಣಿಗೆ ಚಿತ್ರರಂಗದ ಬೆಳವಣಿಗೆಗೆ ಕಾರಣವಾಗುತ್ತಲೇ ಓದುಗರ ಒಲವು ಪಡೆಯಲಿ. ಈ ಮೂಲಕ ತಮ್ಮ ಕನಸಿನ ಹಾದಿಯಲ್ಲಿ ಒಂದು ವಿಶ್ವಾಸದ ಹೆಜ್ಜೆ ಇಟ್ಟಿರೋ ಭರಮಸಾಗರ ಮತ್ತು ದೇಶಾದ್ರಿಗೆ ಭರಪೂರವಾದ ಯಶಸ್ಸು ಸಿಗಲಿ, ಅವರ ಕನಸುಗಳೆಲ್ಲವೂ ಕೈಗೂಡಲಿ…
No Comment! Be the first one.