ಪಿ.ವಿ.ಎಸ್. ಗುರುಪ್ರಸಾದ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಝಾನ್ಸಿ ಚಿತ್ರದ ಧ್ವನಿಸುರಳಿ ಸಮಾರಂಭ ಇತ್ತೀಚಿಗೆ ನೆರವೇರಿತು. ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಝಾನ್ಸಿ ಚಿತ್ರದಲ್ಲಿ ಕಲ್ಪನಾ ಖ್ಯಾತಿಯ ಲಕ್ಷ್ಮಿ ರೈ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಧ್ವನಿ ಸುರಳಿ ಕಾರ್ಯಕ್ರಮದಲ್ಲಿ ಲಕ್ಷ್ಮೀರೈ ಮಾತನಾಡಿ, “ಇದೊಂದು ಆ್ಯಕ್ಷನ್ ಚಿತ್ರವಾಗಿರುವುದರಿಂದ ಈ ಚಿತ್ರಕ್ಕಾಗಿ ಮಾರ್ಷಲ್ ಆರ್ಟ್ ತರಬೇತಿ ಪಡೆದು ಸಾಹಸ ಸನ್ನಿವೇಶದಲ್ಲಿ ಪಾಲ್ಗೊಂಡಿದ್ದೇನೆ. ಐಪಿಎಸ್ ಆಫೀಸರ್ ಆಗಿ ಕಾಣಿಸಿಕೊಂಡಿರುವ ನಾನು ಆರು ಫೈಟ್ ಒಂದು ಚೇಸಿಂಗ್ ದೃಶ್ಯದಲ್ಲಿ ಯಾವುದೇ ಪೆಟ್ಟು ಮಾಡಿಕೊಳ್ಳದೆ ನಟಿಸಿದ್ದೇನೆ” ಎಂದು ಸಂತಸದಿಂದಲೇ ಹೇಳಿಕೊಂಡರು.
ಝಾನ್ಸಿ ಚಿತ್ರದಲ್ಲಿ ಶ್ರೀಜಿತ್ ನಾಯಕನಾಗಿ ನಟಿಸಿದ್ದರೆ, ಖಳನಾಯಕರಾಗಿ ರವಿ ಕಾಳೆ, ವಿ. ಆರ್ಯನ್, ಮುಖೇಶ್ ತಿವಾರಿ ಹಾಗೂ ತಂಗಿಯ ಪಾತ್ರದಲ್ಲಿ ಇಳಾ ಅಭಿನಯಿಸಿದ್ದಾರೆ. ವಿಶೇಷವೆಂದರೆ ಬಾಲಿವುಡ್ ಚಿತ್ರಗಳನ್ನು ನಿರ್ಮಿಸುವ ಮೂಲಕ ನಿರ್ಮಾಣ ವಲಯದಲ್ಲಿ ಪಳಗಿರುವ ರಾಜೇಶ್ ಕುಮಾರ್, ಕಮಲ್ ಬೋಹ್ರಾ ಮೊದಲ ಬಾರಿಗೆ ಕನ್ನಡ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.