ಒಬ್ಬಲ್ಲಾ ಒಬ್ಬ ನಟನ ಜೊತೆ ಸದಾ ಕಾಲ ಹೆಸರು ತಳುಕು ಹಾಕಿಕೊಂಡಿರುವ ನಟಿಯೇನಾದರೂ ಇದ್ದರೆ ಅದು ಲಕ್ಷ್ಮಿ ರಾಯ್ ಎಂಬುದು ನಿಸ್ಸಂಶಯ. ಚಿತ್ರರಂಗಕ್ಕೆ ಬಂದು ಹದಿನೈದು ಸಂವತ್ಸರಗಳನ್ನ ಸವೆಸಿರುವ ಲಕ್ಷ್ಮಿ ರಾಯ್, ಈ ಕಾರಣದಿಂದಲೇ ಒಮ್ಮೊಮ್ಮೆ ರೇಜಿಗೀಡಾಗುತ್ತಾರಂತೆ.
‘ಸಿನಿಮಾ ಪ್ರವೇಶ ಮಾಡುವುದಕ್ಕೆ, ಅವಕಾಶ ಪಡೆಯುವುದಕ್ಕೆ ನನಗೆ ಸಮಸ್ಯೆಗಳೆದುರಾಗಲಿಲ್ಲ. ಆದರೆ ಅದನ್ನ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ ಆಗಿಬಿಡುತ್ತಿತ್ತು. ಯಾಕೆಂದರೆ ಆರಂಭಿಕ ದಿನಗಳಲ್ಲಿ ನನ್ನನ್ನ ದಿಕ್ಕು ತಪ್ಪಿಸುವುದಕ್ಕೆಂದೇ ಕೆಲವರು ಸಿದ್ಧವಾಗಿರುತ್ತಿದ್ದರು. ಅವರಿಂದಾಗಿಯೂ ನಾನು ವಿವಾದಗಳನ್ನ ಫೇಸ್ ಮಾಡಬೇಕಾಯ್ತು. ಈಗ ಹುಷಾರಾಗಿದ್ದೇನೆ’ ಎನ್ನುತ್ತಾರೆ ಲಕ್ಷ್ಮಿ ರಾಯ್.
ಯಾವ್ಯಾವ ನಟರ ಜೊತೆ ಲಕ್ಷ್ಮಿ ಅಭಿನಯಿಸುತ್ತಿದ್ದರೋ ಅವರೆಲ್ಲರ ಜೊತೆ ಲಕ್ಷ್ಮಿ ಡೇಟಿಂಗ್ ನಡೀತಿದೆ ಎಂಬ ಗುಲ್ಲುಗಳೆದ್ದು ಬಿಡುತ್ತವಂತೆ. ‘ಯಾರು ಇದನ್ನೆಲ್ಲಾ ಯಾಕಾಗಿ ಮಾಡುತ್ತಾರೋ ಗೊತ್ತಿಲ್ಲ. ಅಂತೂ ಈ ಸಮಸ್ಯೆ ನನ್ನನ್ನ ಮೊದಲಿನಿಂದಲೂ ಬಾಧಿಸಿದೆ. ಮೊದಲೆಲ್ಲಾ ಇಂಥ ಸುಳ್ಳು ಸುದ್ದಿಗಳಿಂದಾಗಿ ನನ್ನ ಕುಟುಂಬದವರೂ ಸೇರಿದಂತೆ ಎಲ್ಲರೂ ಸಂಕಟಪಡುತ್ತಿದ್ದೆವು. ಜನರ ಸ್ವಭಾವ ಅರ್ಥವಾಗುತ್ತಾ ಹೋದಂತೆಲ್ಲಾ ಈಗ ಇದನ್ನೊಂದು ನಾನ್ ಸೆನ್ಸ್ ಜೋಕ್ ಎಂದು ತಳ್ಳಿ ಹಾಕುತ್ತಿದ್ದೇವೆ’ ಎನ್ನುತ್ತಾರೆ ಲಕ್ಷ್ಮಿ.
ಸುಳ್ಲು ಸುದ್ದಿಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದಕ್ಕೆ ಅವರೊಂದು ಪ್ರಸಂಗವನ್ನೂ ನೆನಪಿಸಿಕೊಳ್ಳುತ್ತಾರೆ. ‘ಒಂದಿನ ನಾನು ಹುಳಿ ಹುಳಿ ಮಾವಿನಕಾಯಿ ತಿಂದದ್ದನ್ನ ನೋಡಿದ ಕೆಲವರು ‘ಲಕ್ಷ್ಮಿ ರಾಯ್ ಪ್ರೆಗ್ನೆಂಟಿರಬೇಕು’ ಎಂದು ಸುದ್ದಿ ಹಬ್ಬಿಸಿಬಿಟ್ಟಿದ್ದರು. ಅದಕ್ಕೆ ಇನ್ನೊಂದಷ್ಟು ಅಂತೆಕಂತೆಗಳು ಸೇರಿಕೊಂಡು ನನಗೇ ತಲೆ ತಿರುಗುವಷ್ಟು ಕಥೆ ಸೃಷ್ಟಿಯಾಗಿಬಿಟ್ಟಿತ್ತು. ಹೀಗೆಲ್ಲಾ ಹಬ್ಬಿಸುವವರು, ಅದನ್ನ ನಂಬುವವರು ಇಂಥವರನ್ನೆಲ್ಲಾ ನೋಡಿದರೆ ಮೈ ಬೆಂಕಿಯಾಗುತ್ತದೆ. ಇಂಥ ಕಿಡಿಗೇಡಿಗಳ ಸದ್ದಡಗಿಸುವುದಕ್ಕೆ ನಾನು ಕೋರ್ಟ್ ತನಕ ಬೇಕಾದರೂ ಹೋಗಿ ಫೈಟ್ ಮಾಡಬಲ್ಲೆ… ಹಾಗಂತ ನಿರ್ಧರಿಸಿಬಿಟ್ಟಿದ್ದೇನೆ’ ಎನ್ನುತ್ತಾರೆ ಲಕ್ಷ್ಮಿ ರಾಯ್.