ಕನ್ನಡದ ಟ್ಯಾಬೊಲಾಯ್ಡ್ ಮತ್ತು ಟೀವಿ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿರುವ ಪತ್ರಕರ್ತ ಲಕ್ಷ್ಮೀ ಸಾಗರ ಸ್ವಾಮಿ ಗೌಡ. ಕೆರೆತೊಣ್ಣೂರು ಬಳಿಯ ಲಕ್ಷ್ಮೀಸಾಗರವೆನ್ನುವ ಗ್ರಾಮದಲ್ಲಿ ಹುಟ್ಟಿ ಬೆಳೆದು, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಒಂದಷ್ಟು ದಿನ ರೈತ ಚಳವಳಿಯಲ್ಲೂ ಭಾಗಿಯಾಗಿ, ಆ ನಂತರ ಪೆನ್ನು ಹಿಡಿದು ಪತ್ರಿಕೋದ್ಯಮದ ಪಡಸಾಲೆಗೆ ಬಂದು ಕೂತವರು ಗೌಡ್ರು. ಕಳೆದ ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ಮಣ್ಣು ಹೊತ್ತಿದ್ದಾರೆ. ಗೌಡರು ಕನ್ನಡದಲ್ಲಿ ಶುರುವಾದ ಬಹುತೇಕ ಟೀವಿ ವಾಹಿನಿಗಳಲ್ಲಿ ಅಷ್ಟಿಷ್ಟು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒಂದು ಸಲಕ್ಕೆ ಎಲೆಕ್ಟ್ರಾನಿಕ್ ಮೀಡಿಯಾದ ತೆಕ್ಕೆಗೆ ಬಿದ್ದವರು, ಮತ್ತೆ ಮುದ್ರಣ ಮಾದ್ಯಮದತ್ತ ತಲೆಹಾಕೋದು ವಿರಳ. ಎರಡೂ ಕಡೆ ಬರವಣಿಗೆಯೇ ಪ್ರಧಾನ ಆಧ್ಯತೆಯಾದರೂ, ಈ ಟೀವಿ ಮೀಡಿಯಾದ ಒಳಸುಳಿಗಳು, ಅಲ್ಲಿನ ವಾತಾವರಣವೇ ಬೇರೆ.
ಬರೆದೇ ಬದುಕುತ್ತೇನೆ ಎನ್ನುವವರು, ಬರೆಯದೇ ಬದುಕಿಲ್ಲ ಅಂತಾ ನಂಬಿದವರು ನ್ಯೂಸ್ ಚಾನೆಲ್ಲುಗಳ ಹಿಡಿತಕ್ಕೆ ಸಿಕ್ಕಿಕೊಳ್ಳೋದಿಲ್ಲ. ಸ್ವಾಮಿಗೌಡರೂ ಹಾಗೇ. ಆಗಾಗ ವಾಹಿನಿಗಳು ಇವರನ್ನು ಕರೆದೊಯ್ದು, ಒಳ್ಳೇ ಪೋಸ್ಟು ಕೊಟ್ಟು ಕೂರಿಸುತ್ತವೆ. ಆದರೆ ಸ್ವಾಮಿಗಳು ಕಟ್ಟುಬಿಚ್ಚಿಕೊಂಡು ಮತ್ತೆ ಪ್ರಿಂಟ್ ಮೀಡಿಯಾದ ಬೌಂಡರಿಯೊಳಕ್ಕೆ ಧಾವಿಸುತ್ತಾರೆ. ಸ್ವಾಮಿಗೌಡರಿಗೆ ಪತ್ರಿಕೋದ್ಯಮದಲ್ಲಿ ಬ್ರಾಂಡ್ ಕ್ರಿಯೇಟ್ ಮಾಡಿಕೊಟ್ಟಿದ್ದು ಹಾಯ್ ಬೆಂಗಳೂರ್ ಪತ್ರಿಕೆ. ಏನೇ ಮುನಿಸು, ಮನಸ್ತಾಪಗಳಾದರೂ ರವಿಬೆಳಗೆರೆ ಸ್ವಾಮಿಗೌಡರನ್ನು ಯಾವತ್ತೂ ಬಿಟ್ಟುಕೊಡುತ್ತಿರಲಿಲ್ಲ.
ಕೆಲಸ ಬಿಟ್ಟು ಹೋದ್ರೂ ಮತ್ತೆ ಕರೆತಂದು ಗೌಡರನ್ನು ಬರೆಯಲು ಕೂರಿಸುತ್ತಿದ್ದರು. ಬೆಳಗೆರೆ ಸುಖಾಸುಮ್ಮನೇ ಯಾರನ್ನೂ ಹಚ್ಚಿಕೊಳ್ಳುವ, ನೆಚ್ಚಿಕೊಳ್ಳುವ ವ್ಯಕ್ತಿಯಾಗಿರಲಿಲ್ಲ. ಪ್ರತಿಭಾವಂತರು, ಸುದ್ದಿ ಹುಡುಕುವ ಛಾತಿ ಇರುವವರನ್ನು ಮಾತ್ರ ತಮ್ಮ ಕೋರ್ ಕಮಿಟಿಯಲ್ಲಿಟ್ಟುಕೊಳ್ಳುತ್ತಿದ್ದರು. ರವಿಬೆಳಗೆರೆ ತೀರಾ ಹುಷಾರಿಲ್ಲದೆ, ಹಾಸಿಗೆ ಹಿಡಿದ ಹೊತ್ತಲ್ಲಿ ಇಡೀ ಪತ್ರಿಕೆಯ ಜವಾಬ್ದಾರಿಯನ್ನು ಸ್ವಾಮಿಗೌಡರ ಹೆಗಲಿಗೇರಿಸಿದ್ದರು.
ಗೌಡರು, ಡಿಗ್ರಿ ಮುಗಿಸಿ, ಪತ್ರಿಕೋದ್ಯಮ ಸೇರಿದಮೇಲೂ ಅವರಾಡುವ ಮಾತಿನ ಭಾಷೆ-ಸೊಗಡು ಬದಲಾಗಿಲ್ಲ. ಪಕ್ಕಾ ಮಂಡ್ಯದ ಹಳ್ಳಿ ಸ್ಲಾಂಗ್ ನಲ್ಲಿ ಮಾತಾಡುವ ಗೌಡರ ಬರವಣಿಗೆಯ ಭಾಷೆಯೇ ಬೇರೆ. ರಾಜಕೀಯ, ಕ್ರೈಮು ಸೇರಿದಂತೆ ಯಾವುದೇ ಸಬ್ಜೆಕ್ಟನ್ನು ಇವರು ಬಲು ಆಕರ್ಷಕ ಮತ್ತು ತೀಕ್ಷ್ಣವಾಗಿ ಬರೆಯಬಲ್ಲರು. ಗೌಡರು ಇಷ್ಟು ದಿನದ ಬದುಕಿನಲ್ಲಿ ಮನುಷ್ಯ ಸಹಜವಾದ ಹಲವು ಯಡವಟ್ಟುಗಳನ್ನು ಮಾಡಿಕೊಂಡಿದ್ದಾರೆ. ಗೆದ್ದು ಸೋತಿದ್ದಾರೆ, ಸೋತು ಗೆದ್ದಿದ್ದಾರೆ. ಇನ್ನು ಬದುಕು ಮುಗಿದೇ ಹೋಯ್ತು ಎನ್ನುವ ಹಂತ ತಲುಪಿದಾಗ, ತಮ್ಮ ತಪ್ಪುಗಳನ್ನು ತಿದ್ದುಕೊಂಡು ಮತ್ತೆ ತಲೆಯೆತ್ತಿ ನಿಂತಿದ್ದಾರೆ.
ಹತ್ತು ಹಲವು ಸವಾಲುಗಳು, ನೂರೆಂಟು ಸಮಸ್ಯೆಗಳಿಗೆ ಎದೆಯೊಡ್ಡಿರುವ ಗೌಡ್ರು ಯಾವತ್ತೂ ತಮ್ಮ ಪ್ರಾಬ್ಲಮ್ಮುಗಳನ್ನು ಇತರರ ಮುಂದೆ ಹೇಳಿಕೊಂಡು ಸಿಂಪಥಿ ಗಿಟ್ಟಿಸಿಕೊಂಡವರಲ್ಲ. ಕಷ್ಟ ಅಂತಾ ಕೊಸರಾಡಿದವರಲ್ಲ. ಟೀಕೆಗಳು, ಹುಸಿ ಆರೋಪಗಳು ಉದುರಿದಾಗ ಹೆದರಿದವರೂ ಅಲ್ಲ. ಎಲ್ಲ ಶೋಧನೆಗಳನ್ನೂ ಮೀರಿ ಬೆಳೆದವರು.
ಹಾಯ್ ನಿಂದ ಕಾಲು ಹೊರಕ್ಕಿಟ್ಟು ತಮ್ಮದೇ ʻಹಿಮಾಗ್ನಿʼ ಎನ್ನುವ ಬಲಶಾಲಿ ಪತ್ರಿಕೆ ಕಟ್ಟಿದ್ದಾರೆ. ಸದ್ಯ ಕನ್ನಡದ ಟ್ಯಾಬೊಲಾಯ್ಡ್ ಪತ್ರಿಕಾ ವಲಯದಲ್ಲಿ ಇವತ್ತೇನಾದರೂ ಪತ್ರಿಕೆಯೊಂದು ಜೀವಂತವಾಗಿದೆ, ಗುಣಮಟ್ಟ ಕಾಯ್ದುಕೊಂಡಿದೆ ಅಂದರೆ ಅದು ಹಿಮಾಗ್ನಿ ಮಾತ್ರ. ಇದು ಹೊಗಳಿಕೆಯಲ್ಲ; ವಾಸ್ತವ!
ಲಕ್ಷ್ಮೀ ಸಾಗರ ಸ್ವಾಮಿಗೌಡರ ಬಗ್ಗೆ ಇಷ್ಟೆಲ್ಲಾ ಹೇಳಲೂ ಕಾರಣವಿದೆ. ಹಿಮಾಗ್ನಿ ಪತ್ರಿಕೆಯಲ್ಲಿ ಗೌಡರು ಗಾಡಿ ಜಾಡು ಎನ್ನುವ ಅಂಕಣವನ್ನು ಬರೆಯುತ್ತಾರೆ. ಸತತ ಇನ್ನೂರು ಸಂಚಿಕೆಗಳಲ್ಲಿ ಬರೆದ ಕೆಲವಾರು ಕಂತುಗಳನ್ನ ಆಯ್ದು, ಒಂದು ಗುಚ್ಛವಾಗಿಸಿದ್ದಾರೆ. ಗಾಡಿ ಜಾಡು ಹೆಸರಿನಲ್ಲೇ ಅದು ಪುಸ್ತಕ ರೂಪ ಪಡೆದಿದೆ. ಇತ್ತೀಚೆಗಷ್ಟೇ ಪ್ರೆಸ್ಕ್ಲಬ್ ಆಫ್ ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತ, ಈ ನಾಡು ಕಂಡ ಅಪ್ರತಿಮ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ, ಇತಿಹಾಸಕಾರ ಡಾ. ತಲಕಾಡು ಚಿಕ್ಕರಂಗೇಗೌಡ, ಸಂಶೋಧಕ, ಕವಿ ಡಾ. ವಡ್ಡಗೆರೆ ನಾಗರಾಜಯ್ಯ ಮುಂತಾದವರ ಸಮಕ್ಷಮದಲ್ಲಿ ಗಾಡಿ ಜಾಡು ಲೋಕಾರ್ಪಣೆಗೊಂಡಿದೆ.
ಲಕ್ಷ್ಮೀಸಾಗರ ಸ್ವಾಮಿ ಗೌಡರು ಈ ಹಿಂದೆ ʻಕೋಟೆ ಕಟ್ಟಿ ಮೆರೆದವರೆಲ್ಲಾ ಏನಾದರು?ʼ ಎನ್ನುವ ಪುಸ್ತಕ ಹೊರತಂದಿದ್ದರು. ಈಗ ʻಗಾಡಿ ಜಾಡುʼ ಪುಸ್ತಕ ರೂಪಕ್ಕಿಳಿದಿದೆ. ಮತ್ತಷ್ಟು ಬರೆಯುತ್ತಿರಿ ಗೌಡ್ರೇ… ಒಳ್ಳೇದಾಗ್ಲಿ ನಿಮಗೆ…!
ಅರುಣ್ ಕುಮಾರ್ ಜಿ
No Comment! Be the first one.