ರಾಜ್ ಸೂರ್ಯ ನಿರ್ದೇಶನದ ಲಂಡನ್ ನಲ್ಲಿ ಲಂಬೋದರ ಚಿತ್ರ ಇದೇ ತಿಂಗಳ ಇಪ್ಪತ್ತೊಂಬತ್ತರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಂತೋಷ್ ಮತ್ತು ಶ್ರುತಿ ಪ್ರಕಾಶ್ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರ ಟ್ರೈಲರ್, ಪ್ರೋಮೋ ಮತ್ತು ಹಾಡುಗಳ ಮೂಲಕವೇ ಗಟ್ಟಿಯಾದ ಭರವಸೆ ಹುಟ್ಟು ಹಾಕಿದೆ. ಇದೊಂದು ಹಾಸ್ಯಪ್ರಧಾನವಾದ ಸಂಪೂರ್ಣ ಮನೋರಂಜನಾತ್ಮಕ ಸಿನಿಮಾ ಅನ್ನೋ ಸುಳಿವೂ ಕೂಡಾ ಜಾಹೀರಾಗಿದೆ.
ಆದರೆ ಇದೆಲ್ಲವನ್ನೂ ಮೀರಿದ ಒಂದಷ್ಟು ವಿಶೇಷ ಸಂಗತಿಗಳನ್ನು ನಿರ್ದೇಶಕ ರಾಜ್ ಸೂರ್ಯ ಬಿಚ್ಚಿಡುತ್ತಾರೆ. ಅದರ ಪ್ರಕಾರವಾಗಿ ಹೇಳೋದಾದರೆ ಕಥೆಯೇ ಈ ಚಿತ್ರದ ನಿಜವಾದ ಜೀವಾಳ!
ಸಾಮಾನ್ಯವಾಗಿ ಹಾಸ್ಯವೇ ಪ್ರಧಾನವಾಗಿರೋ ಚಿತ್ರಗಳಲ್ಲಿ ಕಥೆಗೆ ಹೇಳಿಕೊಳ್ಳುವಂಥಾ ಪ್ರಾಧಾನ್ಯತೆ ಕೊಟ್ಟಿರೋದಿಲ್ಲ. ಆದರೆ, ರಾಜ್ ಸೂರ್ಯ ಒಂದು ಗಟ್ಟಿಯಾದ ಕಥೆ ರೆಡಿ ಮಾಡಿಕೊಂಡೇ ಈ ಚಿತ್ರವನ್ನ ರೂಪಿಸಿದ್ದಾರೆ. ಹಾಗಂತ ಅದೆಷ್ಟೇ ಗಹನವಾದ ಕಥೆಯನ್ನೇ ಆದರೂ ಗಂಭೀರವಾಗಿ ಹೇಳಿದರೆ ಸಿನಿಮಾವಾಗಿ ಸಾರ ಕಳೆದುಕೊಳ್ಳುತ್ತೆ. ಆದ್ದರಿಂದಲೇ ಇಡೀ ಕಥೆಗೆ ಅವರು ಪಕ್ಕಾ ಕಮರ್ಶಿಯಲ್ ಎಲಿಮೆಂಟುಗಳನ್ನು ಸೇರಿಸಿದ್ದರು. ಕಡೆಗೆ ಹಾಸ್ಯದ ಮೂಲಕವೇ ಗಹನವಾದ ಕಥೆಯನ್ನು ಪ್ರೇಕ್ಷಕರಿಗೆ ದಾಟಿಸುವ ಕ್ರಮವನ್ನೂ ಕಂಡುಕೊಂಡಿದ್ದರು.
ಈ ಸಿನಿಮಾದ ಕಥೆಗಾಗಿ ರಾಜ್ ಸೂರ್ಯ ಸಾಕಷ್ಟು ಗ್ರೌಂಡ್ ವರ್ಕ್ ಮಾಡಿದ್ದಾರಂತೆ. ಪ್ರತೀ ಪಾತ್ರಗಳನ್ನೂ ಕೂಡಾ ಒಂದಲ್ಲಾ ಒಂದು ಥರದಲ್ಲಿ ಕಾಡುವಂತೆ ಕಟ್ಟಿ ಕೊಟ್ಟಿದ್ದಾರಂತೆ. ಈ ಚಿತ್ರಕ್ಕೆ ಲಂಡನ್ ನಲ್ಲಿ ಒಲಂಬೋದರ ಅನ್ನೋ ಹೆಸರು ಯಾಕೆ ಬಂತೆಂಬುದರಿಂದ ಮೊದಲ್ಗೊಂಡು ಇನ್ನೂ ಒಂದಷ್ಟು ವಿಚಾರಗಳನ್ನು ನಿರ್ದೇಶಕರು ಗೌಪ್ಯವಾಗಿಟ್ಟಿದ್ದಾರೆ. ಅದು ಪ್ರೇಕ್ಷಕರಿಗೆ ಲಂಬೋದರನ ಸರ್ ಪ್ರೈಸ್. ಅದೇನನ್ನೋದು ಇದೇ ತಿಂಗಳ ಕಡೆಯಲ್ಲಿ ಬಯಲಾಗಲಿದೆ.