ಹೊಸತನದ ಸುಳಿವಿನೊಂದಿಗೆ ಎಲ್ಲರನ್ನೂ ಆಕರ್ಷಿಸುತ್ತಾ ಕ್ರೇಜ್ ಸೃಷ್ಟಿಸಿದ್ದ ಚಿತ್ರ ಲಂಡನ್ನಲ್ಲಿ ಲಂಬೋದರ. ತಿಳಿಹಾಸ್ಯದೊಂದಿಗೇ ಗಂಭೀರವಾದ ಕಥೆಯನ್ನೂ ಹೇಳುವಂತಿರೋ ಈ ಚಿತ್ರವೀಗ ಬಿಡುಗಡೆಯಾಗಿದೆ. ದಿನಭವಿಷ್ಯವನ್ನೇ ನಂಬಿ ಹೊರಡುವವನ ದಿನಚರಿಯನ್ನು ತುಂಬ ಹಾಸ್ಯದೊಂದಿಗೆ ಹೇಳುತ್ತಲೇ, ಅದರ ಜೊತೆಜೊತೆಗೇ ಗಹನವಾದುದನ್ನೂ ಪ್ರೇಕ್ಷಕರಿಗೆ ಮುಟ್ಟಿಸುವ ಮೂಲಕ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ.
ಲಂಡನ್ ಸ್ಕ್ರೀನ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರವನ್ನು ದಿನಭವಿಷ್ಯ ನಂಬೋ ನಾಯಕನ ಸುತ್ತಾ ಮಜವಾಗಿ ಸುಳಿದಾಡುವಂತೆ ನಿರ್ದೇಶಕ ರಾಜ್ ಸೂರ್ಯ ಕಟ್ಟಿ ಕೊಟ್ಟಿದ್ದಾರೆ. ಲಂಬೋದರ ಈ ಭೂಮಿಗೆ ಕಣ್ತೆರೆದ ಘಳಿಗೆಯಿಂದಲೇ ನಿಧಾನಗತಿಯನ್ನು ತನ್ನದಾಗಿಸಿಕೊಂಡವನು. ಪ್ರತಿಯೊಂದನ್ನೂ ಸಾವಧಾನದಿಂದಲೇ ಮಾಡೋ ಈತನಿಗೆ ಬಾಲ್ಯದಲ್ಲಿಯೇ ಗಿಣಿಶಾಸ್ತ್ರ ಗಮನ ಸೆಳೆಯುತ್ತೆ. ಗಿಣಿ ಈತನಿಗೆ ಹೇಳಿದ ಭವಿಷ್ಯ ನಿಜವಾಗಿ ಬಿಡುತ್ತೆ. ಅಲ್ಲಿಂದಲೇ ಲಂಬೋದರನಿಗೆ ದಿನಭವಿಷ್ಯದ ಗೀಳು ಅಂಟಿಕೊಂಡು ಬಿಡುತ್ತೆ.
ಅಲ್ಲಿಂದಾಚೆಗೆ ದಿನಭವಿಷ್ಯವೆಂಬುದು ಲಂಬೋದರನ ಬದುಕಿನ ಭಾಗವಾಗುತ್ತೆ. ಪ್ರತೀ ನಿತ್ಯ ದಿನಭವಿಷ್ಯ ಓದಿ ಅದರ ಅನುಸಾರವಾಗಿಯೇ ಪ್ರತೀ ನಿತ್ಯ ಬದುಕು ಸಾಗಿಸುವಷ್ಟರಮಟ್ಟಿಗೆ ಆತ ಭವಿಷ್ಯಕ್ಕೆ ಅಡಿಕ್ಟ್ ಆಗ್ತಾನೆ. ಯಾರೋ ನೀ ಲಂಡನ್ನಲ್ಲಿ ಸೆಟಲ್ ಆಗ್ತೀಯ ಅಂದ ಭವಿಷ್ಯವನ್ನೂ ಆತ ಸೀರಿಯಸ್ ಆಗಿಯೇ ನಂಬುತ್ತಾನೆ. ಕಡೆಗೆ ಲಂಡನ್ನಿಗೂ ತೆರಳಿ, ಅಲ್ಲಿ ಹುಡುಗಿಯೊಬ್ಬಳೊಂದಿಗೆ ಲವ್ವಲ್ಲಿ ಬೀಳೋ ಲಂಬೋದರ ಯಡವಟ್ಟುಗಳು ಪ್ರೇಕ್ಷಕರನ್ನು ನಗಿಸಿ ಮುದ ನೀಡುತ್ತವೆ. ಆದರೆ ಅದೆಲ್ಲದರಾಚೆಗೆ ಲಂಬೋದರನಿಗೆ ಯಾಕೆ ಭಯೋತ್ಪಾದಕನೆಂಬ ಆರೋಪ ಮೆತ್ತಿಕೊಳ್ಳುತ್ತೆ? ಲಂಡನ್ನಿನಲ್ಲಿ ಲಂಬೋದರನ ಸ್ಥಿತಿ ಏನಾಗುತ್ತೆ ಅನ್ನೋದಕ್ಕೆಲ್ಲ ಮಜವಾದ ಉತ್ತರಗಳೇ ಚಿತ್ರದಲ್ಲಿವೆ.
ಅಚ್ಯುತ್ ಕುಮಾರ್, ಸಂಪತ್ ರಾಜ್, ಸಾಧು ಕೋಕಿಲಾ ಮುಂತಾದವರ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತವೆ. ನಾಯಕ ಸಂತೋಷ್, ನಾಯಕಿ ಶ್ರುತಿ ಪ್ರಕಾಶ್ ಚೆಂದಗೆ ನಟಿಸಿದ್ದಾರೆ. ಪ್ರಶಾಂತ್ ರಾಜಪ್ಪರ ಸಂಭಾಷಣೆ ಇಡೀ ಚಿತ್ರದ ಪ್ಲಸ್ ಪಾಯಿಂಟ್. ಒಂಚೂರು ಪ್ರಯತ್ನ ಪಟ್ಟರೆ ನಿರ್ದೇಶಕ ರಾಜ್ ಸೂರ್ಯ ನಿರ್ದೇಶಕರಾಗಿ ನೆಲೆಗೊಳ್ಳೋ ಲಕ್ಷಣಗಳನ್ನು ಲಂಡನ್ ಲಂಬೋದರ ಹೊಂದಿದ್ದಾನೆ!
No Comment! Be the first one.