ಸಿಂಪಲ್ ಸುನಿ ಗರಡಿಯಲ್ಲಿ ಪಳಗಿಕೊಂಡಿರುವ ರಾಜ್ ಸೂರ್ಯ ನಿರ್ದೇಶನದ ಮೊದಲ ಚಿತ್ರ ಲಂಡನ್ ನಲ್ಲಿ ಲಂಬೋದರ. ಈಗಾಗಲೇ ಪ್ರೇಕ್ಷಕರ ಚಿತ್ತ ಸೆಳೆದುಕೊಂಡಿರೋ ಈ ಚಿತ್ರ ಇದೇ ಮಾರ್ಚ್ ೨೯ರಂದು ಬಿಡುಗಡೆಗೊಳ್ಳಲಿದೆ. ಬಿಡುಗಡೆಗೆ ಇನ್ನೇನು ವಾರವಿರುವಾಗಲೇ ಟ್ರೈಲರ್ ಮತ್ತು ಆಡಿಯೋ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಾಗಿದೆ!
ವಿಶೇಷವೆಂದರೆ ಇದೀಗ ಬೆಲ್ ಬಾಟಮ್ ಯಶಸ್ಸಿನ ಖುಷಿಯಲ್ಲಿರುವ ನಿರ್ದೇಶಕ, ನಟ ರಿಷಬ್ ಶೆಟ್ಟಿ ಆಡಿಯೋ ಮತ್ತು ಟ್ರೈಲರ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ನಾಳೆ ಸಂಜೆ ಹಾಡುಗಳು ಮತ್ತು ಟ್ರೈಲರ್ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿವೆ… ಎಷಬ್ ಶೆಟ್ಟಿ ಲಂಡನ್ ಲಂಬೋದರನಿಗೆ ಸಾಥ್ ನೀಡಲು ಕಾರಣವಾಗಿರೋ ಸಂಗತಿಯೇ ಮಜವಾಗಿದೆ. ನಿರ್ದೇಶಕ ರಾಜ್ ಸೂರ್ಯ ಬಿಡುಗಡೆಗೆ ಮುನ್ನವೇ ಸ್ಪೆಷಲ್ ಶೋ ಆಯೋಜಿಸಿದ್ದರು. ಅದರ ಭಾಗವಾಗಿ ಈ ಚಿತ್ರ ನೋಡಿದ ರಿಷಬ್ ಶೆಟ್ಟಿ ತುಂಬಾ ಖುಷಿಗೊಂಡಿದ್ದರಂತೆ. ಅದೇ ಖುಷಿಯಲ್ಲಿ ಒಂದೊಳ್ಳೆ ಚಿತ್ರಕ್ಕೆ ಸಾಥ್ ನೀಡೋ ಉದ್ದೇಶದಿಂದ ಟ್ರೈಲರ್ ಬಿಡುಗಡೆ ಮಾಡಲು ಮುಂದಾಗಿದ್ದಾರಂತೆ.
ರಾಜ್ ಸೂರ್ಯ ವಿಭಿನ್ನವಾಗಿಯೇ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರಂತೆ. ಕಥೆಯ ಒಂದು ಎಳೆ ಎಲ್ಲ ಪಾತ್ರಗಳನ್ನು ಲಂಡನ್ನಿಗೆ ರವಾನಿಸುತ್ತದೆಯಂತೆ. ಆದ್ದರಿಂದ ಶೇಖಡಾ ಅರವತ್ರಷ್ಟು ಭಾಗದ ಚಿತ್ರೀಕರಣವನ್ನು ಲಂಡನ್‌ನಲ್ಲಿಯೇ ನಡೆಸಲಾಗಿದೆಯಂತೆ. ಸಿಂಪಲ್ ಸುನಿ ಮತ್ತು ಜಯಂತ್ ಕಾಯ್ಕಿಣಿ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಅದಕ್ಕೆ ಪ್ರಣವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ದೂರಿ ತಾರಾಗಣ, ಬೆರಗಾಗಿಸೋ ಪಾತ್ರಗಳನ್ನು ಈ ಚಿತ್ರ ಒಳಗೊಂಡಿದೆಯಂತೆ.
No Comment! Be the first one.