ಕಳೆದ ಸೀಜನ್ನಿನ ಬಿಗ್ ಬಾಸ್ ಸ್ಪರ್ಧಿಯಾಗಿ ಕರ್ನಾಟಕಕ್ಕೆ ಪರಿಚಯವಾಗಿದ್ದವರು ಶ್ರುತಿ ಪ್ರಕಾಶ್. ಸಾಮಾನ್ಯವಾಗಿ ಹೊರ ಜಗತ್ತಿನಲ್ಲಿ ಒಳ್ಳೆ ಹೆಸರು ಮಾಡಿದ್ದವರೂ ಕೂಡಾ ಬಿಗ್ ಬಾಸ್ ಮನೆಯೊಳಗಿನ ವರ್ತನೆಗಳಿಂದ ಹೆಸರು ಕೆಡಿಸಿಕೊಂಡಿದ್ದಿದೆ. ಆದರೆ ಅದೆಂಥಾ ಸವಾಲುಗಳು ಬಂದರೂ ತಾವು ತಾವಾಗೇ ಉಳಿದ, ಸಹಜವಾದ ಮಾತು ವರ್ತನೆಗಳಿಂದ ಕನ್ನಡಿಗರ ಮನಗೆದ್ದಿದ್ದವರು ಶ್ರುತಿ ಪ್ರಕಾಶ್. ಇವರು ಲಂಡನ್ನಲ್ಲಿ ಲಂಬೋದರ ಚಿತ್ರದ ಮೂಲಕವೇ ಕನ್ನಡದಲ್ಲಿ ನಾಯಕಿಯಾಗಿ ನೆಲೆಯೂರಿ ನಿಲ್ಲುವ ಕಾತರದಿಂದಿದ್ದಾರೆ.
ಶ್ರುತಿ ಪ್ರಕಾಶ್ ಬೆಳಗಾವಿ ಮೂಲದ ಕನ್ನಡತಿ. ಅವರ ಕುಟುಂಬದ ಬೇರುಗಳಿರೋದು ಅಲ್ಲಿಯೇ. ವಿಶೇಷ ಅಂದರೆ ಅವರು ನಟಿಯಾಗೋ ತಮ್ಮ ಕನಸನ್ನು ಆರಂಭಿಕವಾಗಿ ನನಸು ಮಾಡಿಕೊಂಡಿದ್ದ ಮುಂಬೈ ಮೂಲಕ. ಹಿಂದಿಯ ಹಲವಾರು ಜನಪ್ರಿಯವಾದ ಸೀರಿಯಲ್ಲುಗಳ ಮೂಲಕ ಪ್ರಸಿದ್ಧಿ ಪಡೆದಿದ್ದವರು ಶ್ರುತಿ. ಅಲ್ಲಿ ಅವರು ಹಲವಾರು ಮ್ಯೂಸಿಕ್ ಆಲ್ಬಂ ಮೂಲಕ ಸೃಷ್ಟಿಸಿದ್ದ ಕ್ರೇಜ್ ಎಂಥವರೂ ಅಚ್ಚರಿಯಾಗುವಂತಿದೆ. ಹಾಗೆ ಹಿಂದಿಯಲ್ಲಿ ಫೇಮಸ್ ಆಗಿದ್ದ ಅವರನ್ನು ಕನ್ನಡತನವೆಂಬುದು ಕೈ ಬೀಸಿ ಕರೆಯುತ್ತಿತ್ತು. ತಮ್ಮ ತಾಯ್ನಾಡಿನ ಜನರನ್ನು ಸಿನಿಮಾ ನಾಯಕಿಯಾಗಿ ಎದುರುಗೊಳ್ಳಬೇಕೆಂಬ ಆಸೆ ಸದಾ ಸುತ್ತಿಕೊಳ್ಳುತ್ತಲೇ ಇತ್ತು.
ಬಹುಶಃ ಶ್ರುತಿ ಪ್ರಯತ್ನಿಸಿದ್ದರೆ ಯಾವುದಾದರೂ ಒಂದು ಸಿನಿಮಾ ನಾಯಕಿಯಾಗಿ ಬರೋದು ದೊಡ್ಡ ವಿಷಯವೇನೂ ಆಗಿರಲಿಲ್ಲ. ಆದರೆ ಪರಭಾಷಾ ನಟಿ ಎಂಬ ಹಣೆಪಟ್ಟಿಯೊಂದಿಗೆ ತಮ್ಮದೇ ಜನರನ್ನು ಎದುರುಗೊಳ್ಳೋದು ಅವರಿಗೆ ಇಷ್ಟವಿರಲಿಲ್ಲ. ಮೊದಲು ತನ್ನ ನೆಲದ ಜನರಿಗೆ ಪರಿಚಯವಾಗಿ, ಹತ್ತಿರಾಗಿ ಆ ನಂತರದಲ್ಲಿ ನಾಯಕಿಯಾಗಿ ಎಂಟ್ರಿ ಕೊಡಬೇಕು ಅನ್ನೋ ಹಂಬಲ ಅವರದ್ದಾಗಿತ್ತು. ಅದಕ್ಕೆ ಸೂಕ್ತ ಪ್ಲಾಟ್ಫಾರ್ಮಿನಂತೆ ಕಂಡಿದ್ದು ಜನಪ್ರಿಯ ಬಿಗ್ ಬಾಸ್ ಶೋ. ಈ ಶೋಗೆ ಎಂಟ್ರಿ ಕೊಟ್ಟ ಶ್ರುತಿ ಸಹಜವಾದ ನಡವಳಿಕೆಯಿಂದ ಕನ್ನಡಿಗರೆಲ್ಲರ ಮನಗೆದ್ದರು. ಇಲ್ಲಿನ ಮನೆಮಗಳಾಗಿ ಸ್ಥಾನ ಗಿಟ್ಟಿಸಿಕೊಂಡರು.
ಹೀಗೆ ಬಿಗ್ ಬಾಸ್ ಶೋನಿಂದ ಹೊರ ಬಂದ ಕೂಡಲೇ ಅವರ ಮುಂದೆ ಅವಕಾಶಗಳು ಸಾಲುಗಟ್ಟಿ ನಿಂತಿದ್ದವು. ಆದರೆ ಅವರಿಗೆ ತುಂಬಾ ಇಷ್ಟವಾಗಿದ್ದು ರಾಜ್ ಸೂರ್ಯ ಹೇಳಿದ ಲಂಡನ್ ನಲ್ಲಿ ಲಂಬೋದರ ಚಿತ್ರದ ಕಥೆ. ಇದರಲ್ಲಿ ಅವರದ್ದು ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಪರಾಮರ್ಶಿಸಿ ಮುಂದಡಿ ಇಡುವ ಪ್ರಾಕ್ಟಿಕಲ್ ಹುಡುಗಿಯ ಪಾತ್ರ. ಅಪ್ಪಟ ಕನ್ನಡತಿಯಾಗಿಯೇ ಸಿನಿಮಾದುದ್ದಕ್ಕೂ ಅವರು ಕಾಣಿಸಿಕೊಂಡಿದ್ದಾರಂತೆ. ಗಂಭೀರ ಸ್ವಭಾವದ ಜೊತೆಗೆ ಹಾಸ್ಯದ ಶೇಡೂ ಇರುವ ಬಬ್ಲಿ ಪಾತ್ರ ಅವರದ್ದಂತೆ.
ಲಂಡನ್ ನಲ್ಲಿ ಲಂಬೋದರ ಚಿತ್ರದ ಕಾರಣದಿಂದಲೇ ಅವರ ಮುಂದೆ ಸಾಕಷ್ಟು ಅವಕಾಶಗಳು ಬಂದಿವೆ. ಹಿಂದಿಯಲ್ಲಿ ಸೀರಿಯಲ್ಲುಗಳ ಆಫರುಗಳೂ ಇದ್ದಾವೆ. ಆದರೆ ಸೀರಿಯಲ್ಲುಗಳಿಗೆ ಕಮಿಟ್ ಆದರೆ ಅಲ್ಲೇ ಕಳೆದು ಹೋಗಬೇಕಾಗುತ್ತದೆ ಎಂಬ ಕಾರಣದಿಂದ ಅವರದಕ್ಕೆ ಒಪ್ಪಿಕೊಳ್ಳುತ್ತಿಲ್ಲವಂತೆ. ಇನ್ನುಳಿದಂತೆ ಒಂದಷ್ಟು ಹಿಂದಿ ವೆಬ್ ಸೀರಿಸ್ ಗಳಲ್ಲಿಯೂ ಶ್ರುತಿ ನಟಿಸುತ್ತಿದ್ದಾರೆ. ಆದರೆ ಅವರ ಪ್ರಧಾನ ಕನಸು ಕನ್ನಡದಲ್ಲಿಯೇ ನಾಯಕಿಯಾಗಿ ನೆಲೆಯೂರಿ ನಿಲ್ಲುವುದು. ಅವರನ್ನು ಬಿಗ್ ಬಾಸ್ ಶೋ ಮೂಲಕವೇ ಒಪ್ಪಿಕೊಂಡಿರೋ ಕನ್ನಡದ ಜನತೆ ನಾಯಕಿಯಾಗಿಯೂ ಇಲ್ಲಿಯೇ ಉಳಿಯುವಂತೆ ಮಾಡೋದರಲ್ಲಿ ಸಂದೇಹವೇನಿಲ್ಲ.
No Comment! Be the first one.