ಲಂಗೋಟಿ ಮ್ಯಾನ್ ಸಿನಿಮಾದ ಮೂಲಕ ನಾಯಕನಟನಾಗಿ ಬಣ್ಣ ಹಚ್ಚಿರುವ ಹುಡುಗ ಆಕಾಶ್ ರಾಂಬೋ. ಮೈಮೇಲೆ ಬಟ್ಟೆಯಿದ್ದೂ, ಕ್ಯಾಮೆರಾ ಮುಂದೆ ನಟಿಸೋದು ಕಷ್ಟ. ಆದರೆ, ಬರೀ ತುಂಡು ಲಂಗೋಟಿ ಕಟ್ಟಿಕೊಂಡು ನೂರಾರು ಜನರ ನಡುವೆ ನಟಿಸೋದು ಸುಮ್ಮನೆ ಮಾತಲ್ಲ. ಆದರೆ ಆಕಾಶ್ ನಾಚಿಕೆ ಗೀಚಿಕೆಗಳನ್ನೆಲ್ಲಾ ಕಿತ್ತೆಸೆದು ಬೋಲ್ಡ್ ಆಗಿ ನಟಿಸಿದ್ದಾರೆ. ಆಕಾಶ್ ಮಾತಾಡುತ್ತಿದ್ದರೆ, ಈತ ಹೊಸಬ ಅಂತಾ ಯಾವ ಕೋನದಲ್ಲೂ ಅನ್ನಿಸೋದಿಲ್ಲ. ತನ್ನ ಮನಸ್ಸಿನಲ್ಲಿರೋದನ್ನೆಲ್ಲಾ ಯಾವ ಮುಲಾಜು, ಅಂಜಿಕೆಗಳಿಲ್ಲದೆ ಪಟಪಟ ಅಂತಾ ಮುಕ್ತ ಮನಸ್ಸಿನಿಂದ ಮಾತಾಡುವ ಆಕಾಶ್ ಗೆ ಹೀರೋ ಆಗಿ ನಿಲ್ಲಲು ಬೇಕಾದ ಎಲ್ಲ ಅರ್ಹತೆಯೂ ಇದೆ. ಸಹಜವಾದ ಮಾತುಗಾರಿಕೆ, ಫಿಸಿಕ್ಕು, ಒಂದೊಳ್ಳೆ ವಾಯ್ಸು… ಎಲ್ಲವೂ ಇರುವ ಆಕಾಶ್ ಪಾಲಿಗೆ ಲಂಗೋಟಿ ಕೈ ಹಿಡಿಯಬೇಕಿದೆ. ಖ್ಯಾತ ಹಾಸ್ಯ ಕಲಾವಿದ ತರಂಗ ವಿಶ್ವ, ಹಿರಿಯ ನಿರ್ದೇಶಕ ದಿ. ಕೆ.ವಿ.ಜಯರಾಮ್ ಮುಂತಾದವರೆಲ್ಲಾ ಆಕಾಶ್ ಗೆ ಹತ್ತಿರದ ನೆಂಟರು. ಈ ಹಿಂದೆ ಕೆ.ಜಿ.ಎಫ್. ಚಿತ್ರದ ಛಾಯಾಗ್ರಾಹಕ ಭುವನ್ ಅವರ ತಂಡದಲ್ಲಿ ಕೆಲಸ ಮಾಡಿದ ಅನುಭವ ಕೂಡಾ ಆಕಾಶ್ ಅವರಿಗಿದೆ. ಇಂಥ ಆಕಾಶ್ ತನ್ನ ಹಿನ್ನೆಲೆ ಮತ್ತು ಲಂಗೋಟಿ ಮ್ಯಾನ್ ಚಿತ್ರದ ಅನುಭವವನ್ನು ಬಿಚ್ಚಿಟ್ಟಿದ್ದು ಹೀಗೆ..
ಮಿಸ್ಟರ್ ರಾಣಿ ಎನ್ನುವ ಸಿನಿಮಾದಲ್ಲಿ ನನಗೆ ಛಾನ್ಸ್ ಸಿಕ್ಕಿತ್ತು. ಮಧು ಅಂತಾ ಅದರ ಡೈರೆಕ್ಟರ್. ಅದರಲ್ಲಿ ನನ್ನದು ಹುಡುಗಿ ಕ್ಯಾರೆಕ್ಟರು. ಹುಡುಗಿ ಥರಾ ಡ್ರೆಸ್ ಹಾಕಿ, ಹೆಣ್ಣುಮಕ್ಕಳ ಹಾವಭಾವಗಳನ್ನೆಲ್ಲಾ ಕಲಿತು ಕ್ಯಾಮೆರಾ ಮುಂದೆ ನಿಲ್ಲಲು ರೆಡಿಯಾಗಿಬಿಟ್ಟಿದ್ದೆ. ಅನ್ ಫಾರ್ಚುನೇಟ್ ಆ ಪ್ರಾಜೆಕ್ಟ್ ನನ್ನ ಪಾಲಿಗೆ ಮಿಸ್ ಆಯಿತು. ಆದರೆ ಆ ಸಿನಿಮಾ ಈಗ ರೆಡಿಯಾಗಿದೆ. ಆ ತಂಡಕ್ಕೂ ಒಳ್ಳೇದಾಗ್ಲಿ. ಆ ಸಿನಿಮಾದಲ್ಲಿ ನಾನು ನಟಿಸಲು ಆಗಲಿಲ್ಲವಲ್ಲಾ ಅಂದುಕೊಳ್ಳೋ ಹೊತ್ತಿಗೆ ನನಗೆ ಡೈರೆಕ್ಟರ್ ಸಂಜೋತಾ ಅವರ ಪರಿಚಯವಾಯಿತು. ಕರ್ವ ಸಿನಿಮಾದ ನಿರ್ಮಾಪಕರಾದ ಕೃಷ್ಣ ಚೈತನ್ಯ ಸರ್ ಮೂಲಕ ನನಗೆ ಮೇಡಂ ಪರಿಚಯವಾಯಿತು. ಆ ಮೂಲಕ ನಾನು ಲಂಗೋಟಿ ಮ್ಯಾನ್ ಚಿತ್ರದ ಭಾಗವಾಗಿದ್ದೀನಿ. ನಾನು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನ ಗಿರಿನಗರ ಏರಿಯಾದಲ್ಲಿ. ನನ್ನ ತಂದೆ ಫೈನಾನ್ಸು, ರಿಯಲ್ ಎಸ್ಟೇಟು ಅಂತೆಲ್ಲಾ ಬ್ಯುಸಿನೆಸ್ ಮಾಡಿಕೊಂಡು ಬ್ಯುಸಿಯಾಗಿರ್ತಾರೆ. ನಮ್ಮಪ್ಪಂಗೆ ಬೇಜಾನ್ ಹಿಸ್ಟರಿ ಇದೆ. ಆ ಕಾರಣಕ್ಕೆ ಅವರಿಗೆ ಅವರ ಸುತ್ತಮುತ್ತಲಿನವರು ರ್ಯಾಂಬೋ ಎನ್ನುವ ಅಡ್ಡ ಹೆಸರಿಟ್ಟಿದ್ದಾರೆ. ನಮ್ಮಪ್ಪ ತಮ್ಮ ಕಾರಿನ ಮೇಲೆ ಕೂಡಾ ರ್ಯಾಂಬೋ ಅಂತಾ ಬರೆಸಿದ್ದರು. ಅಪ್ಪನ ಸ್ನೇಹಿತರೆಲ್ಲಾ ರ್ಯಾಂಬೋ ಮಗ ಜೂನಿಯರ್ ರ್ಯಾಂಬೋ ಅಂತೆಲ್ಲಾ ಅನ್ನೋರು. ಈ ಕಾರಣಕ್ಕೋ ಏನೋ ನನಗೆ ಚಿಕ್ಕ ವಯಸ್ಸಿಂದಲೂ ರ್ಯಾಂಬೋ ಎನ್ನುವ ಹೆಸರಿನ ಮೇಲೆ ವಿಪರೀತ ವ್ಯಾಮೋಹ ಇತ್ತು. ಹಾಗೆ ನೋಡಿದರೆ ನಮ್ಮ ಕಡೆಯೆಲ್ಲಾ ಹೆಸರಿನ ಜೊತೆಗೆ ಗೌಡ ಅಂತಾ ಇಟ್ಟುಕೊಳ್ಳುತ್ತಾರೆ. ನನಗೆ ಯಾವುದೇ ಜಾತಿ ಅಥವಾ ಕುಲಸೂಚಕ ಪದವನ್ನು ಹೆಸರಿನ ಜೊತೆಗೆ ಗುರುತಿಸಿಕೊಳ್ಳೋದು ಇಷ್ಟವಿಲ್ಲ. ಈ ಕಾರಣಕ್ಕೆ ಆಕಾಶ್ ಎನ್ನುವ ನನ್ನ ಹೆಸರಿನ ಜೊತೆಗೆ ನನ್ನ ರಾಂಬೋ ಸೇರಿಸಿಕೊಂಡಿದ್ದೇನೆ.
ಮೊದಲ ಸಿನಿಮಾದಲ್ಲೇ ನನಗೆ ವರ್ಸಟೈಲ್ ನಟನಾಗಿ ಗುರುತಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಅಳು, ನಗು, ಕೋಪ, ತಾಪ ಎಲ್ಲವೂ ಇರುವಂತಾ ಪಾತ್ರವಿದು. ತೀರ್ಥಕುಮಾರ ಎನ್ನುವ ಪಾತ್ರದ ಕಲ್ಪನೆಯೇ ವಿಭಿನ್ನವಾಗಿದೆ. ಅವನ ಬದುಕಿನ ಸುತ್ತಲೂ ಅನೇಕ ಸಂಕಟಗಳು ಏರ್ಪಡುತ್ತಿರುತ್ತವೆ. ಆದರೆ, ಅದು ನೋಡುಗರಿಗೆ ತಮಾಷೆಯಂತೆ ಕಾಣುತ್ತಾ ಸಾಗುತ್ತದೆ. ತಾತ ಮತ್ತು ಮೊಮ್ಮಗನ ನಡುವೆ ನಡೆಯುವ ಪ್ರಸಂಗಗಳು ನೋಡುಗರಿಗೆ ವಿಪರೀತ ನಗು ತರಿಸುತ್ತದೆ. ನನಗೆ ಚಿಕ್ಕ ವಯಸ್ಸಿನಿಂದಲೂ ತುಂಬಾ ದುಬಾರಿ ಅಂಡರ್ ವೇರ್ ಹಾಕಬೇಕು ಅಂತಾ ಕಾದಿರುತ್ತೀನಿ. ಮಾತ್ರವಲ್ಲ, ನಾನು ಲಂಗೋಟಿ ಹಾಕ್ತೀನಿ ಅನ್ನೋದು ಯಾರಿಗೂ ಗೊತ್ತಾಗಬಾರದು ಅಂತಾ ಬಯಸಿರುತ್ತೀನಿ.
ಲಂಗೋಟಿ ಮ್ಯಾನ್ ಮೂಲಕ ಇಂಡಸ್ಟ್ರಿಯಲ್ಲಿ ನನಗೆ ಒಂದೊಳ್ಳೆ ಸ್ಟೇಜ್ ಸಿಕ್ಕಿದೆ ಅನ್ನೋದನ್ನು ನಾನು ನಂಬಿದ್ದೀನಿ. ʻಹೊಸ ಹುಡುಗನನ್ನು ಯಾಕೆ ಹಾಕೊಂಡಿದ್ದೀರ? ಅವನಿಗೆ ಇನ್ನೂ ಆಕ್ಟಿಂಗ್ ಬರಲ್ಲ… ನೋಡಲು ಸುಮಾರಾಗಿದ್ದಾನೆʼ ಎಂಬಿತ್ಯಾದಿಯಾಗಿ ಮಾತಾಡಿದವರೆಲ್ಲಾ ಇದ್ದಾರೆ. ಅವೆಲ್ಲವನ್ನೂ ಮೀರಿ ಸಂಜೋತಾ ಮತ್ತು ಅವರ ಪತಿ ಪ್ರಶಾಂತ್ ಅವರು ನನ್ನನ್ನೇ ಆಯ್ಕೆ ಮಾಡಿಕೊಂಡರು. ಕಾಲೆಳೆದವರ ಬಗ್ಗೆ ನಾನು ಯಾವತ್ತೂ ಬೇಸರ ಮಾಡಿಕೊಳ್ಳೋದಿಲ್ಲ. ಯಾಕೆಂದರೆ, ನನಗೆ ಅವರಿಂದ ತುಂಬಾನೇ ಅನುಕೂಲವಾಗಿದೆ. ನನ್ನನ್ನು ನಾನು ತಿದ್ದಿಕೊಳ್ಳಲು ಸಹಾಯ ಮಾಡಿದೆ..
No Comment! Be the first one.