ಅವನ ಅಪ್ಪ ಸಾಯುವ ಮೊದಲು ಭಾಷೆ ತೆಗೆದುಕೊಂಡಿರುತ್ತಾನೆ. ʻಇಷ್ಟು ದಿನ ನಾನು ನನ್ನ ತಂದೆಯ ಸಂಪ್ರದಾಯ, ನಿಯಮಗಳನ್ನು ಪಾಲಿಸಿದ್ದೇನೆ. ಇನ್ನು ಮುಂದೆ ನೀನು ಅದನ್ನು ಮುಂದುವರೆಸುʼ ಎನ್ನುವಂತೆ. ಅದೇನೆಂದರೆ, ತನ್ನೊಟ್ಟಿಗೆ ಪೌರೋಹಿತ್ಯ ಮಾಡುವ ಮೊಮ್ಮಗ ಲಂಗೋಟಿಯನ್ನು ಬಿಟ್ಟು ಅಂಡರ್ವೇರ್ ತೊಡಬಾರದು ಅನ್ನೋದು ತಾತನ ಕಟ್ಟಪ್ಪಣೆ. ಇವನಿಗೋ ವಿಶ್ವದ ಟಾಪ್ ಬ್ರಾಂಡ್ ಅಂಡರ್ವೇರ್ ತೊಡೋದೇ ಜೀವನದ ಮಹದಾಸೆ. ಬುದ್ದಿ ಬಂದಾಗಿನಿಂದ ತೀರ್ಥಕುಮಾರನ ಪಾಲಿಗೆ ಲಂಗೋಟಿ ಅನ್ನೋದು ವಿಧವಿಧವಾಗಿ ಕಾಡಿರುತ್ತೆ; ಕೀಳರಿಮೆಗೆ ದೂಡಿರುತ್ತದೆ. ಸ್ನೇಹಿತರೆಲ್ಲಾ ಈಜಲು ಹೋದರೆ ಈತ ಮಾತ್ರ ದೂರವೇ ಉಳಿಯಬೇಕು, ಒಂದಕ್ಕೆ ಹೋಗಬೇಕೆಂದರೂ ಒಂದು ಕಿಲೋಮೀಟರು ದೂರ ಹೋಗಬೇಕು. ಈ ಎಲ್ಲ ಕಾರಣಗಳಿಂದ ʻತಾತ ಯಾವತ್ತಾದರೂ ಹೊಗೆ ಹಾಕಿಸಿಕೊಂಡರೆ ಸಾಕು. ನಾನು ಅಂಡರ್ ವೇರ್ ತೊಡಬಹುದುʼ ಅಂದುಕೊಂಡಿರುತ್ತಾನೆ. ಇಂಥಾ ತೀರ್ಥಕುಮಾರನ ಪಾಲಿಗೆ ಪ್ಯಾಂಟಿನ ಒಳಗೆ ಹಾಕಿಕೊಳ್ಳುವ ಚೆಡ್ಡಿ ಅಕ್ಷರಶಃ ವಿಲನ್ ಥರ ಕಾಡಲು ಶುರು ಮಾಡುತ್ತದೆ. ತಾನು ಮಾಡದ ತಪ್ಪಿಗಾಗಿ ವಂಚಕ, ಸುಳ್ಳ, ಅತ್ಯಾಚಾರಿ ಅನ್ನೋದಷ್ಟೇ ಅಲ್ಲ ಕೊಲೆ ಆರೋಪ ಕೂಡಾ ಈತನ ನೆತ್ತಿಗೆ ಅಂಟಿಕೊಳ್ಳುತ್ತದೆ. ಇವೆಲ್ಲದರಿಂದ ತೀರ್ಥಕುಮಾರ ಪಾರಾಗುವುದು ಹೇಗೆ? ಕಾಚಾ ಸೃಷ್ಟಿಸುವ ಅವಾಂತರದಿಂದ ಹೇಗೆ ಕಂಗಾಲಾಗುತ್ತಾನೆ? ಅನ್ನೋದು ʻಲಂಗೋಟಿ ಮ್ಯಾನ್ʼ ಚಿತ್ರದ ಪ್ರಧಾನ ಅಂಶ.
ಹಾಗಂತ ಇದು ಬರಿಯ ಲಂಗೋಟಿಯ ಸುತ್ತ ಬೆಸೆದುಕೊಂಡ ಕಥೆಯಲ್ಲ. ಇವತ್ತಿನ ಪೀಳಿಗೆಯವರಿಗೆ ವಿಪರೀತ ʻಬ್ರಾಂಡ್ ಹುಚ್ಚುʼ ಅಮರಿಕೊಂಡಿದೆ. ಮೈಮೇಲೆ ಹಾಕುವ ಶರ್ಟು, ಪ್ಯಾಂಟು ಮಾತ್ರವಲ್ಲ ಒಳಗೆ ಹಾಕುವ ಕಾಚಾ ಕೂಡಾ ಇಂಥದ್ದೇ ಬ್ರಾಂಡು ಇರಬೇಕು ಅಂತಾ ಬಯಸುತ್ತಾರೆ. ಮಧ್ಯಮ ವರ್ಗದ ಜನ ಏನೇ ತಿಪ್ಪರಲಾಗ ಹಾಕಿದರೂ, ತಮ್ಮ ಸಂಪಾದನೆಯಲ್ಲಿ ಈ ಅಂತಾರಾಷ್ಟ್ರೀಯ ಬ್ರಾಂಡಿನ ಉಡುಪುಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸೋದು ಕಷ್ಟಸಾಧ್ಯ. ಮಿಡಲ್ ಕ್ಲಾಸಿನ ಜನರ ಈ ಬಯಕೆಯನ್ನು ಈಡೇರಿಸಲೆಂದೇ ಬ್ರಾಂಡ್ ಹೆಸರಿನಲ್ಲಿ ಫಸ್ಟ್ ಕಾಪಿ ಮಾಡಿ ಮಾರುವ ಮಾಫಿಯಾ ದೊಡ್ಡಮಟ್ಟದಲ್ಲಿ ತಲೆಯೆತ್ತಿ ನಿಂತಿದೆ. ಟಾಪ್ ಬ್ರಾಂಡ್ಗಳನ್ನು ನಕಲಿ ಮಾಡಲು ಜೀವಕ್ಕೆ ಮಾರಕವಾದ, ಪರಿಸರವಿರೋಧಿ ಕೆಮಿಕಲ್ಲುಗಳನ್ನು ಬಳಸಲಾಗುತ್ತಿದೆ. ಹೀಗೆ ತಯಾರಿಸಿದ ನಕಲಿ ಬ್ರಾಂಡ್ ಬಟ್ಟೆಗಳು ಕೂಡಾ ವ್ಯವಸ್ಥಿತವಾಗಿ ಸರಬರಾಜಾಗಿ ಜನರ ಕೈ ಸೇರುತ್ತಿದೆ. ಬಟ್ಟೆ ಮಾಫಿಯಾಗೆ ಸಂಬಂಧಿಸಿದ ಯಾರಿಗೂ ಗೊತ್ತಾಗದ ಅನೇಕ ವಿಚಾರಗಳು ʻಲಂಗೋಟಿʼಯ ಮೂಲಕ ಅನಾವರಣಗೊಂಡಿದೆ. ಇಷ್ಟಕ್ಕೂ ಲಂಗೋಟಿ ಆರೋಗ್ಯದ ದೃಷ್ಟಿಯಿಂದಲೂ ಎಷ್ಟು ಉತ್ತಮ, ಬಿಗಿಯಾದ ಒಳ ಉಡುಪುಗಳಿಂದ ಏನೆಲ್ಲಾ ಯಡವಟ್ಟುಗಳಾಗುತ್ತವೆ ಎನ್ನುವ ವಿಚಾರಗಳನ್ನೂ ಸೂಚ್ಯವಾಗಿ ಇಲ್ಲಿ ಹೇಳಲಾಗಿದೆ.
ಬರಿಯ ಬಟ್ಟೆ, ಲಂಗೋಟಿಯನ್ನು ಹೊರತುಪಡಿಸಿ ತುಂಬಾ ಗಂಭೀರ ಮತ್ತು ಭಯಾನಕವ ವಿಚಾರವೊಂದನ್ನು ಈ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ. ʻಸೂಕ್ಷ್ಮ ಮನಸ್ಸಿನ ವ್ಯಕ್ತಿಗಾದ ಅವಮಾನ ಅವನ ಆಳದಲ್ಲಿ ಕಿಚ್ಚು ಹತ್ತಿಸಿ ಸುಡತೊಡಗುತ್ತದೆʼ ಅಂತಾ ಪಿ. ಲಂಕೇಶ್ ಹೇಳುತ್ತಾರೆ. ಹಾಗೆಯೇ ಇಲ್ಲಿ ಬಟ್ಟೆಯ ವಿಚಾರವಾಗಿ ನಡೆದ ಘಟನೆಯೊಂದು ಮುಂದೊಂದು ದಿನದ ಭಯಾನಕ ಕ್ರೈಮ್ ನಡೆಯಲು ಕಾರಣವಾಗಿರುತ್ತದೆ. ಒಂದು ಕಡೆ ಚಿತ್ರದ ಹೀರೋ ಲಂಗೋಟಿ ವಿಚಾರಕ್ಕೆ ಅವಮಾನ ಎದುರಿಸಿದರೆ, ಮತ್ತೊಂದು ಘಟನೆ ಯಾರೂ ಊಹಿಸದ ತಿರುವು ಪಡೆದಿರುತ್ತದೆ. ಅದೇನು ಅನ್ನೋದು ತಿಳಿದುಕೊಳ್ಳಲು ಸಿನಿಮಾದ ಅಂತ್ಯದ ತನಕ ತೀರಾ ತಾಳ್ಮೆ ವಹಿಸಿ ಕಾಯಬೇಕು!
ಸಿನಿಮಾದ ಮೊದಲ ಭಾಗದಲ್ಲಿ ನಡೆಯುವ ಘಟನಾವಳಿಗಳೇ ಪ್ರೇಕ್ಷಕರ ದೃಷ್ಟಿಯಲ್ಲಿ ತಮಾಷೆಯಂತೆ ಕಾಣುತ್ತದೆ. ದ್ವಿತೀಯ ಭಾಗದಲ್ಲಿ ಕಥೆ ಗಟ್ಟಿಯಾಗುತ್ತಾ ಸಾಗುತ್ತದೆ. ವಿಸ್ತೃತವಾದ ವಿಚಾರಗಳನ್ನು ಹೆಕ್ಕಿರುವುದರಿಂದಲೋ ಏನೋ ನಿರ್ದೇಶಕಿ ಸಂಜೋತಾ ತಾವು ರಿಸರ್ಚು ಮಾಡಿದ ಎಲ್ಲವನ್ನೂ ಒಂದೇ ಗುಕ್ಕಿನಲ್ಲಿ ಹೇಳಿಬಿಡುವ, ಒಂದೇ ಏಟಿಗೆ ಪ್ರೇಕ್ಷಕರಿಗೆ ದಾಟಿಸುವ ಪ್ರಯತ್ನ ಮಾಡಿದ್ದಾರೆ. ಬಹುಶಃ ಅದು ನೋಡುಗರ ಪಾಲಿಗೆ ಅತಿ ಭಾರವಾಗುತ್ತದೆ. ಮಜಾ ಕೊಡಬೇಕಿದ್ದ ಲಂಗೋಟಿ ಅಲ್ಲಲ್ಲಿ ಲಗಾಮು ಕಳೆದುಕೊಂಡಂತಾಗುತ್ತದೆ. ಈ ಚಿತ್ರಕ್ಕೆ ಬೇರೆಯದ್ದೇ ರೀತಿಯ ಎಡಿಟಿಂಗ್ ಪ್ಯಾಟರ್ನ್ ಬಳಸಬಹುದಿತ್ತಾ ಅಂತಲೂ ಅನ್ನಿಸುತ್ತದೆ. ಸೌಂಡ್ ಮಿಕ್ಸಿಂಗ್ನಲ್ಲಾಗಿರುವ ತಾಂತ್ರಿಕ ದೋಷ ವಿಪರೀತ ಕಿರಿಕಿರಿ ಮಾಡುತ್ತದೆ.
ಇವೆಲ್ಲವನ್ನೂ ಹೊರತುಪಡಿಸಿ ʻಲಂಗೋಟಿ ಮ್ಯಾನ್ʼ ಒಳ್ಳೆ ಪ್ರಯತ್ನ ಅನ್ನಿಸಿಕೊಳ್ಳಲು ಸಾಕಷ್ಟು ಕಾರಣಗಳಿವೆ. ನಾಯಕ ನಟನಾಗಿ ಆಕಾಶ್ ರ್ಯಾಂಬೋ ಮೊದಲ ಸಿನಿಮಾಗೇ ಅತ್ಯುತ್ತಮವಾಗಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾರೆ. ಅಸಲಿಗೆ, ಆಕಾಶ್ ಹೊಸಬ ಅಂತಾ ಎಲ್ಲೂ ಅನ್ನಿಸೋದೇ ಇಲ್ಲ. ನಾಯಕಿಯ ನಟನೆ ಸಪ್ಪೆ ಸಪ್ಪೆ. ಸಿನಿಮಾದ ಕೊನೆಯಲ್ಲಿ ಸಂಹಿತಾ ವಿನ್ಯಾ ಮತ್ತು ಹುಲಿ ಕಾರ್ತಿಕ್ ಅವರ ಪಾತ್ರಗಳು ಎದ್ದು ನಿಲ್ಲುತ್ತವೆ. ತಾತನಾಗಿ ಅಭಿನಯಿಸಿರುವ ಹಿರಿಯರು ಚಾರು ಹಾಸನ್ ರನ್ನು ನೆನಪಿಸುತ್ತಾರೆ. ಆಟೋ ನಾಗರಾಜ್ ಇಲ್ಲಿ ಹೆಚ್ಚು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಚೆಂದಗೆ ಅಭಿನಯಿಸಿದ್ದಾರೆ. ಸಾಯಿ ಪವನ್ ಕೂಡಾ ಇಷ್ಟವಾಗುತ್ತಾರೆ. ನಿರ್ದೇಶಕಿ ಸಂಜೋತಾ ಲಂಗೋಟಿಯ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಬೋಲ್ಡ್ ವಿಚಾರಗಳನ್ನು ಕಟ್ಟಿಕೊಟ್ಟಿರುವುದು ಮೆಚ್ಚುವಂಥದ್ದು. ರವಿವರ್ಮ ಛಾಯಾಗ್ರಹಣದಲ್ಲಿ ಗುಣಮಟ್ಟವಿದೆ.
ಉಳಿದಂತೆ, ಮನರಂಜನೆಯ ಜೊತೆಗೆ ಒಂದಿಷ್ಟು ಹೊಸಾ ವಿಚಾರಗಳನ್ನು ತಿಳಿದುಕೊಳ್ಳುವ ಮನಸ್ಸಿದ್ದವರು ಖಂಡಿತಾ ʻಲಂಗೋಟಿ ಮ್ಯಾನ್ʼ ನೋಡಬಹುದು!
No Comment! Be the first one.