ಕೊರೋನಾ, ಲಾಕ್ ಡೌನುಗಳ ಕಾರಣದಿಂದ ಜನ ಬಸವಳಿದಿದ್ದರು. ಓಟಿಟಿಯಲ್ಲಿ ಸಿನಿಮಾ ನೋಡುವ ವರ್ಗವೇ ಬೇರೆ. ಆದರೆ ಸಿನಿಮಾ ಉದ್ಯಮವನ್ನು ನಿಜವಾಗಿ ಪೋಷಿಸುವ, ಥೇಟರಿನಲ್ಲಷ್ಟೇ ಸಿನಿಮಾ ನೋಡುವ ಹೊಟೇಲ್ ಕಾರ್ಮಿಕರು, ಡ್ರೈವರ್ಗಳು ಮತ್ತು ಇನ್ನಿತರೆ ಶ್ರಮಿಕ ವರ್ಗ ಇದೆಯಲ್ಲಾ… ಅವರೆಲ್ಲಾ ಇಷ್ಟು ದಿನ ಕಾದಿದ್ದಕ್ಕೂ, ಅವರ ಮನತಣಿಸುವಂಥಾ ಸಿನಿಮಾವೊಂದು ಬಂದಿದೆ. ಅದು ಲಂಕೆ!

ಲೂಸ್ ಮಾದ ಯೋಗಿ ಅಭಿನಯದಲ್ಲಿ ಬಹುಕಾಲದ ನಂತರ ತೆರೆಗೆ ಬಂದ ಚಿತ್ರ ಕೂಡಾ ಇದಾಗಿದೆ. ಯೋಗಿಯನ್ನು ಜನ ಹೇಗೆ ನೋಡಲು ಬಯಸುತ್ತಿದ್ದರೋ, ಅದೇ ಪಾತ್ರವನ್ನು ಆಯ್ಕೆ ಮಾಡಿಕೊಂಡು ನಟಿಸಿದ್ದಾರೆ.

ಕೆಳಮಧ್ಯಮ  ವರ್ಗದ ಮಕ್ಕಳು ಒಳ್ಳೇ ದಾರಿಯಲ್ಲಿ ನಡೆಯಬೇಕು, ಉತ್ತಮ ಬದುಕು ರೂಪಿಸಿಕೊಳ್ಳಬೇಕು ಅಂತಾ ಎಷ್ಟೇ ಬಯಸಿದರೂ ಕೆಲವೊಮ್ಮೆ ಇಲ್ಲಿನ ವ್ಯವಸ್ಥೆ, ಪರಿಸ್ಥಿತಿಗಳು ಮಾಡಬಾರದ್ದನ್ನು ಮಾಡಿಸಿಬಿಡುತ್ತವೆ. ಬೇಡಬೇಡವೆಂದುಕೊಂಡರೂ ರಕ್ತ ಕೈಗಂಟುತ್ತದೆ.

ಲಂಕೆ ಸಿನಿಮಾದಲ್ಲಿ ಯೋಗಿಯ ಪಾಡೂ ಅದೇ ಆಗಿರುತ್ತದೆ. ತಲೆ ಹಿಡುಕ ಅಪ್ಪ, ಮೈಮಾರಿಯಾದರೂ ಸರಿ ಮಗನ ಬದುಕನ್ನು ಹಸನು ಮಾಡಬೇಕು ಅಂತಾ ಬಯಸುವ ತಾಯಿ. ಯಾರು ಎಷ್ಟೇ ಕನಸು ಕಂಡರೂ, ನಸೀಬು ಕೆಟ್ಟಾಗ ಎಲ್ಲವೂ ಉಲ್ಟಾ ಹೊಡೆದಿರುತ್ತದೆ. ತನ್ನ ಪಾಡಿಗೆ ತಾನು ಓದಿಕೊಂಡು, ಉಂಡು, ಆಡಿ, ಹೊದ್ದು ಮಲಗುವ ವಯಸ್ಸಿನಲ್ಲಿ ಆ ಹುಡುಗ ಜೈಲು ಪಾಲಾಗಿರುತ್ತಾನೆ. ಹೊರ ಬಂದಮೇಲಾದರೂ ಬದುಕು ಸರಿ ಹೋಗಬಹುದು ಅಂದುಕೊಂಡರೆ, ಇಲ್ಲಿನ ಜಗತ್ತು ಅಕ್ಷರಶಃ ನರಕವಾಗಿರುತ್ತದೆ.

ಪಾಪದ ಹೆಣ್ಣುಮಕ್ಕಳನ್ನು ವ್ಯಾಪಾರಕ್ಕಿಟ್ಟು ಕಸುಬಿಗೆ ತಳ್ಳುವ ಐನಾತಿಗಳು, ದುಷ್ಟ ಪೊಲೀಸ್ ವ್ಯವಸ್ಥೆ, ನೀಚ ಮಹಿಳೆ, ಲಫಂಗ ರಾಜಕಾರಣಿಗಳು, ಕಿಲಾಡಿ ಕಂಟ್ರಾಕ್ಟರುಗಳ ನಡುವೆ ಸಭ್ಯರು ಬಾಳ್ವೆ ನಡೆಸೋದು ಕಡುಗಷ್ಟವಾಗಿರುತ್ತದೆ. ಇವರನ್ನೆಲ್ಲಾ ಒಂದೇ ಏಟಿಗೆ ಮುಗಿಸಲು ಸಾಧ್ಯವಿಲ್ಲದೆ, ತಂತ್ರ ರೂಪಿಸಿ ಹಣಿಯಲು ಹೀರೋ ಮುಂದಾಗುತ್ತಾನೆ. ಪ್ರೇಯಸಿಯೂ ಜೊತೆಯಾಗುತ್ತಾಳೆ.

ಹೀಗೆ ಲಂಕೆಯ ಮೂಲಕ ಅನೇಕ ಎಲಿಮೆಂಟುಗಳು ಒಂದೆಡೆ ಸೇರಿವೆಯಾದರೂ, ವೇಶ್ಯಾವಾಟಿಕೆ ಅಡ್ಡ ಪ್ರಾಧಾನ್ಯತೆ ಪಡೆದಿದೆ. ನಟಿ ಕಾವ್ಯಾ ಶೆಟ್ಟಿ ಇಷ್ಟು ದಿನದ ಇಮೇಜನ್ನು ಪಕ್ಕಕ್ಕಿಟ್ಟು ಔಟ್ ಅಂಡ್ ಔಟ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ನಟ ಶರತ್ ಲೋಹಿತಾಶ್ವ ಕೂಡಾ ಇಲ್ಲಿ ಮಂಗಳಮುಖಿಯಾಗಿ ಅವತಾರವೆತ್ತಿದ್ದಾರೆ. ಕಾವ್ಯ ಶೆಟ್ಟಿ ಒಂದು ರೇಂಜಿಗೆ ರಮ್ಯಾ ಕೃಷ್ಣರನ್ನು ನೆನಪಿಸುವಂತೆ ನಟಿಸಿದ್ದಾರೆ. ಗಾಯತ್ರಿ ಜಯರಾಂ ಪಾತ್ರ ಚಿಕ್ಕದಾದರೂ ಘರ್ವಾಲಿ ಹೆಂಗಸಾಗಿ ಅಬ್ಬರಿಸಿ ಸದ್ದಡಗುತ್ತಾರೆ. ಎಸ್ತರ್ ನರೋನ್ಹಾ ಪಾತ್ರ ಮಾದಕವಾಗಿದ್ದರೂ, ಅಂತರಾಳದಲ್ಲಿ ಮನ ಕಲುಕುವಂತಿದೆ. ತಲೆಹಿಡುಕ ತಂದೆಯ ಪಾತ್ರದಲ್ಲಿ ನಟ ಸಂಚಾರಿ ವಿಜಯ್ ನಟನೆ ಅಮೋಘ. ಅವರ ಪಾಲಿನ ಕೊನೆಯ ದೃಶ್ಯದಲ್ಲಿ ನೆಲಕ್ಕುರುಳಿ ಪ್ರಾಣ ಬಿಡುವ ದೃಶ್ಯ ನೋಡುವಾಗ ʻನಿಜ ಬದುಕಿನಲ್ಲೂ ಸಂಚಾರಿ ಹೀಗೇ ಕೊನೆಯುಸಿರೆಳೆದರಾ?ʼ ಅನ್ನಿಸಿ ಸಂಕಟವಾಗುತ್ತದೆ.

ಲೂಸ್ ಮಾದ ಯೋಗಿ ಎಂದಿನಂತೆ ಸಹಜವಾಗಿ ನಟಿಸಿದ್ದಾರೆ. ಹೊಸ ಶೈಲಿಯಲ್ಲಿ ಕತ್ತಿ ಹಿಡಿದು ಕುತ್ತಿಗೆ ಸೀಳುವ ರೀತಿಯನ್ನು ಪರಿಚಯಿಸಿದ್ದಾರೆ. ನಾಯಕಿ ಕೃಷಿ ತಾಪಂಡ ನಟನೆ ಆಕೆಯ ನಡಿಗೆಗಿಂತಾ ಚೆಂದ. ಡುಪ್ಪುರುಡುಪ್ಪುರು ಅಂತಾ ಯೋಗಿ-ಕೃಷಿ  ಹೆಜ್ಜೆ ಹಾಕಿರೋದು ಮಜವಾಗಿದೆ. ಧನು ಮಾಸ್ಟರ್ ಸಂಯೋಜಿಸಿರುವ ಡ್ಯಾನ್ಸ್ ಸ್ಟೆಪ್ಪು ಸಖತ್ತಾಗಿದೆ. ಛಾಯಾಗ್ರಾಹಕ ರಮೇಶ್ ಬಾಬು ಇಡೀ ಸಿನಿಮಾವನ್ನು ಕಲರ್ ಫುಲ್ ಆಗಿ ತೋರಿಸಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಕೂಡಾ ಪಕ್ಕಾ ಕಮರ್ಷಿಯಲ್ ಪ್ಯಾಟ್ರನ್ ನಲ್ಲಿದೆ.

ನಿರ್ದೇಶಕ ರಾಮ್ ಅಪ್ಪಟ ಮನರಂಜನಾ ಸಿನಿಮಾದ ಮೂಲಕ ಜಗತ್ತಿಗೆ ಬೇಕಿರುವ ಸಂದೇಶಗಳನ್ನು ರವಾನಿಸಿದ್ದಾರೆ. ಲಂಗು ಲಗಾಮಿಲ್ಲದೆ ಮೆರೆಯುವ ದುಷ್ಟರನ್ನೆಲ್ಲಾ ಒಂದೆಡೆ ಸೇರಿಸಿ ದಹಿಸಿ ಅದಕ್ಕೆ ಲಂಕೆ ಅನ್ನೋ ಹೆಸರನ್ನಿಟ್ಟಿದ್ದಾರೆ. ಸಿನಿಮಾದಲ್ಲಿ ಒಂದಿಷ್ಟು ಹಸಿಬಿಸಿ ಸಂಭಾಷಣೆ ಇದೆ. ಇವತ್ತಿನ ಓಟಿಟಿ ಯುಗಕ್ಕೆ ಅದರ ಅನಿವಾರ್ಯತೆಯೂ ಇದೆಯೆನ್ನಿ. ಪ್ರಾಸದ ಸಂಭಾಷಣೆ ಕೆಲವೊಮ್ಮೆ ಸೀರಿಯಸ್ ದೃಶ್ಯದಲ್ಲೂ ನಗುವಂತೆ ಮಾಡುತ್ತದೆ ಅನ್ನೋದು ಸಿನಿಮಾದ ಮೈನಸ್ಸು!

ಏನೇ ಆಗಲಿ, ಕೊರೋನಾ ಸೃಷ್ಟಿಸಿರುವ ಈ ಕೆಟ್ಟ ಸಂದರ್ಭದಲ್ಲೂ ಯಾವುದಕ್ಕೂ ಕೊರತೆ ಮಾಡದೆ, ಸಿನಿಮಾ ಬಿಡುಗಡೆ ಮಾಡಿರುವ ರಾಮ್ ಪ್ರಸಾದ್ ಧೈರ್ಯ ಮೆಚ್ಚಲೇಬೇಕು. ಆ ಕಾರಣಕ್ಕಾದರೂ ಒಮ್ಮೆ ಲಂಕೆಯನ್ನು ನೋಡಿಬರಬಹುದು!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಇದು ರೆಡ್ ಅಂಡ್‌ ವೈಟ್ ಸಿನಿಮಾ!

Previous article

ಲಂಬೋದರನ ವಿವಾಹ….

Next article

You may also like

Comments

Leave a reply

Your email address will not be published.