ಬಹುಮುಖ ವ್ಯಕ್ತಿತ್ವದ ಪತ್ರಕರ್ತ, ಲೇಖಕ, ಕತೆಗಾರ ಪಿ.ಲಂಕೇಶ್ ಸಿನಿಮಾರಂಗದಲ್ಲೂ ಛಾಪು ಮೂಡಿಸಿದವರು. ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿದ ಅವರು ಹೊಸ ಅಲೆಯ ಚಿತ್ರಗಳಿಗೆ ತಿರುವು ನೀಡಿದ ‘ಸಂಸ್ಕಾರ’ದ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇಂದು (ಮಾ 8) ಅವರ ಜನ್ಮದಿನ. ಲಂಕೇಶರ ಸಿನಿಮಾ ಒಡನಾಟದ ಲೇಖನ ಇಲ್ಲಿದೆ.
——————————–
ಶಶಿಧರ ಚಿತ್ರದುರ್ಗ
ಕನ್ನಡ ಪತ್ರಿಕೋಧ್ಯಮಕ್ಕೆ ಹೊಸತೊಂದು ಆಯಾಮ ನೀಡಿದ ಪಿ.ಲಂಕೇಶ್ ಶ್ರೇಷ್ಠ ಲೇಖಕ. ಅವರ ನಾಟಕಗಳು ರಂಗದ ಮೇಲೆ ಬಹು ಜನಪ್ರಿಯವಾಗಿವೆ. ತಮ್ಮ ಬರಹಗಳನ್ನು ಸ್ಬತಃ ಲಂಕೇಶ್ ಬೆಳ್ಳಿತೆರೆಗೆ ಅಳವಡಿಸಿದ್ದಾರೆ.. ಸಿದ್ಧಸೂತ್ರಗಳನ್ನು ಮೀರಿ ತಮ್ಮದೇ ಆದ ಶೈಲಿಯಲ್ಲಿ ಅವರು ಸಿನಿಮಾಗಳನ್ನು ನಿರ್ದೇಶಿಸಿದರು. ಹಾಗಾಗಿ ಅವರ ನಿರ್ದೇಶನದ ನಾಲ್ಕೂ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ‘ಪಲ್ಲವಿ’ (1976)ಚಿತ್ರದೊಂದಿಗೆ ಅವರ ನಿರ್ದೇಶನದ ಅಭಿಯಾನ ಆರಂಭವಾಯ್ತು. ಇಲ್ಲಿ ಅವರು ನಗರ ಬದುಕಿನ ಏಳುಬೀಳುಗಳನ್ನು ಚಿತ್ರಿಸಿದ್ದರು. ಟಿ.ಎನ್.ಸೀತಾರಾಂ, ವಿಮಲಾ ನಾಯ್ಡು, ಪರ್ವತವಾಣಿ ಅವರೊಂದಿಗೆ ಲಂಕೇಶ್ ಕೂಡ ಚಿತ್ರದಲ್ಲಿ ಪಾತ್ರವೊಂದನ್ನು
ನಿರ್ವಹಿಸಿದ್ದರು. ರಾಜೀವ್ ತಾರಾನಾಥ್ ಸಂಗೀತ ಸಂಯೋಜಿಸಿದ್ದ ಈ ಸಿನಿಮಾ ಅತ್ಯುತ್ತಮ ಚಿತ್ರ ಮತ್ತು ನಿರ್ದೇಶನ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ಪಾತ್ರವಾಯ್ತು. ನಾಲ್ಕು ((ಅತ್ಯುತ್ತಮ ಚಿತ್ರ, ಸಂಗೀತ, ಚಿತ್ರಕಥೆ, ಸಂಭಾಷಣೆ) ರಾಜ್ಯಪ್ರಶಸ್ತಿಗಳೂ ಸಂದವು. ಮುಂದೆ ಲಂಕೇಶ್ ನಿರ್ದೇಶಿಸಿದ ‘ಅನುರೂಪ’ (1977) ಮತ್ತು ‘ಖಂಡವಿದೆಕೋ ಮಾಂಸವಿದೆಕೋ’ (1979) ಚಿತ್ರಗಳು ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾದವು. ಈ ಎರಡೂ ಸಿನಿಮಾಗಳಿಗೆ ರಾಜೀವ್ ತಾರಾನಾಥ್ ಅವರದ್ದೇಸಂಗೀತವಿತ್ತು. ಅವರ ನಿರ್ದೇಶನದ ನಾಲ್ಕನೇ ಸಿನಿಮಾ ‘ಎಲ್ಲಿಂದಲೋ ಬಂದವರು’ ಗ್ರಾಮೀಣ ಸೊಗಡಿನ ಕಥಾವಸ್ತುವಿನ ಪ್ರಯೋಗ. ಸುರೇಶ್ ಹೆಬ್ಳೀಕರ್, ಲೋಕೇಶ್, ವಿಮಲಾ ನಾಯ್ಡು ಚಿತ್ರದ ಪ್ರಮುಖ ಕಲಾವಿದರು. ಲಂಕೇಶ್ ರಚನೆಗೆ ವಿಜಯ ಭಾಸ್ಕರ್ ಸಂಗೀತ ಸಂಯೋಜಿಸಿರುವ ಈ ಸಿನಿಮಾ ಹಾಡುಗಳು ಇಂದಿಗೂ ಅದೇ ಜನಪ್ರಿಯತೆ ಉಳಿಸಿಕೊಂಡಿವೆ.
ಪಟ್ಟಾಭಿರಾಮರೆಡ್ಡಿ ನಿರ್ದೇಶನದ ‘ಸಂಸ್ಕಾರ’ (1970) ಕನ್ನಡದ ಹೊಸ ಅಲೆಯ ಸಿನಿಮಾಗಳಿಗೆ ಮುನ್ನುಡಿ ಬರೆದ ಪ್ರಯೋಗ. ಸಾಹಿತಿ ಯು.ಆರ್.ಅನಂತಮೂರ್ತಿ ಕೃತಿಯನ್ನು ಆಧರಿಸಿದ ಚಿತ್ರದ ಪ್ರಮುಖ ಪಾತ್ರಗಳ¯್ಲÉೂಂದಾದ ‘ನಾರಾಯಣಪ್ಪ’ನಾಗಿ ಲಂಕೇಶ್ ಕಾಣಿಸಿಕೊಂಡಿದ್ದರು. ಲಂಕೇಶ್ ಕೃತಿ ‘ಅಕ್ಕ’ ಆಧರಿಸಿ ಅವರ ಪುತ್ರಿ ಕವಿತಾ ಲಂಕೇಶ್ ‘ದೇವೀರಿ’ (1999) ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾ ಅತ್ಯುತ್ತಮ ಸಿನಿಮಾ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿತ್ತು. ಸಿನಿಮಾರಂಗದ ಬಗ್ಗೆ, ವಿಶೇಷವಾಗಿ ಹಾಲಿವುಡ್ ಸಿನಿಮಾಗಳ ಬಗ್ಗೆ ಲಂಕೇಶ್ ತುಂಬಾ ಆಸ್ಥೆಯಿಂದ ಬರೆಯುತ್ತಿದ್ದರು.
No Comment! Be the first one.