ರಿಷಬ್ ಶೆಟ್ಟಿ ತಮ್ಮ ಸಿನಿಮಾಗಳನ್ನು ಜನರಿಗೆ ತಲುಪಿಸಲು ಈ ತನಕ ಯಾರೂ ಮಾಡದ ಸಾಹಸಗಳನ್ನೆಲ್ಲಾ ಮಾಡಿದ್ದಾರೆ; ಅದರಲ್ಲಿ ಗೆಲುವನ್ನೂ ಕಂಡಿದ್ದಾರೆ. ಈ ವಾರವಷ್ಟೇ ರಿಷಬ್ ತಮ್ಮ ನಿರ್ಮಾಣದ ಲಾಫಿಂಗ್ ಬುದ್ಧ ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಸಿನಿಮಾ ನೋಡಿದ ವಿಮರ್ಶಕರು ಕೂಡಾ ಒಂದು ಮಟ್ಟಕ್ಕೆ ಒಳ್ಳೇ ಮಾತುಗಳನ್ನೇ ಬರೆದಿದ್ದಾರೆ. ಆದರೆ ಸಿನಿಮಾ ಕಲೆಕ್ಷನ್ ಯಾಕೋ ಪಿಕಪ್ ಆಗುತ್ತಲೇ ಇಲ್ಲ. ಸೈಕಲ್ ಮೇಲೆ ಪೋಸ್ಟರ್ ಅಂಟಿಸಿಕೊಂಡು ತಿರುಗೋದರಿಂದ ಹಿಡಿದು ಒಂದಿಷ್ಟು ಪಬ್ಲಿಸಿಟಿ ಸ್ಟಾಟರ್ಜಿಗಳನ್ನು ಮಾಡಿದ್ದರು. ಆದರೂ ಈ ಸಿನಿಮಾ ರಿಲೀಸ್ ಆಗಿದೆ ಅನ್ನೋದು ಜನರಿಗೆ ತಲುಪಿದಂತೆ ಕಾಣುತ್ತಲೇ ಇಲ್ಲ!
ಸಿನಿಮಾ ಮಾಡಲು ಎಷ್ಟು ಬುದ್ದಿ ಉಪಯೋಗಿಸುತ್ತಿದ್ದರೋ, ಅದನ್ನು ಜನರಿಗೆ ಮುಟ್ಟಿಸಲು ಕೂಡಾ ಅಷ್ಟೇ ಪ್ರಮಾಣದ ಟ್ಯಾಲೆಂಟು ಬಳಸುತ್ತಿದ್ದವರು ರಿಷಬ್ ಮತ್ತು ಪ್ರಮೋದ್. ರಿಷಬ್ ಅಥವಾ ರಕ್ಷಿತ್ ಯಾರೇ ಸಿನಿಮಾ ಮಾಡಿದರೂ ಅದರ ಹಿಂದೆ ನಿಂತು ಪ್ರತಿಯೊಂದನ್ನೂ ನಿಭಾಯಿಸುತ್ತಿದ್ದವರು ಪ್ರಮೋದ್.
ಈ ಸಲ ಸ್ವತಃ ತಾವೇ ಹೀರೋ ಆಗಿ ನಟಿಸಿರೋ ಖುಷಿಯಲ್ಲಿ ಪ್ರಮೋದ್ ಮೈ ಮರೆತರಾ? ಅಥವಾ ಯಾರದ್ದೋ ಕೈಗೆ ಜವಾಬ್ದಾರಿ ವಹಿಸಿ ಸುಮ್ಮನಾಗಿಬಿಟ್ಟರಾ? ಏನು ಅಂತಾ ಗೊತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಲಾಫಿಂಗ್ ಬುದ್ಧ ಲವಲವಿಕೆ ತೋರುತ್ತಿಲ್ಲ. ಯಾವುದೋ ತಗಡು ಸಿನಿಮಾವೊಂದು ತೆರೆಗೆ ಬಂದು, ಕಲೆಕ್ಷನ್ ಮಾಡದೇ ಹೋದರೆ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಆದರೆ ಉತ್ತಮ ಕಂಟೆಂಟ್ ಇರುವ ಚಿತ್ರವೊಂದು ತೆರೆಗೆ ಬಂದಿರೋ ವಿಚಾರ ಕೂಡಾ ಜನರಿಗೆ ನೆಟ್ಟಗೆ ತಲುಪಿಲ್ಲ ಅಂದರೆ ಅದಕ್ಕಿಂತಾ ದುರಂತ ಬೇರೇನಿದೆ?
ರಿಷಬ್, ಪ್ರಮೋದ್ ಅಥವಾ ಬೇರೆ ಯಾರೇ ಆಗಲಿ, ತಮ್ಮ ಸಿನಿಮಾವನ್ನು ತಾವೇ ನಿಂತು ಸೂಕ್ತ ರೀತಿಯಲ್ಲಿ ಪ್ರಚಾರ ಕೊಡಿಸಿದರೆ ಮಾತ್ರ ಅದು ಪ್ರೇಕ್ಷಕರನ್ನು ಥೇಟರಿನ ತನಕ ಕರೆತರಲು ಸಾಧ್ಯ. ಈಗಲೂ ಕಾಲ ಮಿಂಚಿಲ್ಲ. ಖುದ್ದು ರಿಷಬ್ ಆಥವಾ ಪ್ರಮೋದ್ ʻಭೀಮʼನಂತೆ ಬೀದಿಗಿಳಿದು ನಿಲ್ಲಲಿ, ಪ್ರಣಯಸಖಿಯಂತೆ ಪ್ರಚಾರ ಮಾಡಲಿ, ಜನ ಥೇಟರಿಗೆ ಬಂದೇ ಬರುತ್ತಾರೆ. ಸಿನಿಮಾ ಗೆದ್ದೇ ಗೆಲ್ಲುತ್ತದೆ.!
ಏನೋ ಒಳ್ಳೇ ಸಿನಿಮಾಗೆ ಒಳ್ಳೇದಾಗಲಿ ಅಂತಾ ಹೇಳ್ತೀವಪ್ಪ. ಇದನ್ನು ಪಾಸಿಟೀವ್ ಆಗಿ ತೆಗೆದುಕೊಳ್ಳದೆ, ನಮ್ಮ ಮೀಡಿಯಾನೇ ಬ್ಲಾಕ್ ಮಾಡಿಸೋದು, ರಿಪೋರ್ಟು ಮಾಡಿಸೋ ವ್ಯರ್ಥ ಪ್ರಯತ್ನ ಮಾಡಿದರೆ ಏನು ತಾನೆ ಮಾಡಲು ಸಾಧ್ಯ?
No Comment! Be the first one.