ಕನ್ನಡದ ಸಿನಿಮಾವೊಂದು ಮೊಟ್ಟ ಮೊದಲ ಬಾರಿಗೆ ನೇರವಾಗಿ ಓಟಿಟಿಯಲ್ಲಿ ರಿಲೀಸಾಗಿದೆ. ಅದೂ ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ. ಬ್ಯಾನರಿನಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ಅಮೆಜ಼ಾನ್ ಪ್ರೈಮ್ ನಲ್ಲಿ ಲಭ್ಯವಿರುವ ಈ ಚಿತ್ರದಲ್ಲಿ ಕನ್ನಡದ ಕಮರ್ಷಿಯಲ್ ಹೀರೋ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಈ ಸಿನಿಮಾದ ಮೂಲಕ ನಟನೆಗಿಳಿದಿದ್ದಾರೆ ಅನ್ನೋದೂ ಸೇರಿ ನಾನಾ ಕಾರಣಗಳಿಗಾಗಿ ಕುತೂಹಲ ಮೂಡಿಸಿತ್ತು. ಈ ಸಿನಿಮಾ ಹೇಗೆ ಮೂಡಿಬಂದಿರಬಹುದು? ರಾಗಿಣಿ ಪ್ರಜ್ವಲ್ ನಟನೆ ಹೇಗಿರಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇದೀಗ ʻಲಾʼ ಉತ್ತರ ನೀಡಿದೆ.

ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರ ಮೂಲಕ ಕಥೆ ಆರಂಭವಾಗುತ್ತದೆ. ಸ್ವತಃ ವಕೀಲೆಯಾದ ನಾಯಕಿ ಈ ಕ್ರೌರ್ಯದ ವಿರುದ್ಧ ತಾನೇ ಹೋರಾಡಲು ಮುಂದಾಗುತ್ತಾಳೆ. ತನಿಖಾಧಿಕಾರಿಯೊಬ್ಬರು ಎಂಟ್ರಿ ಕೊಡುತ್ತಾರೆ. ಕೋರ್ಟ್ ಹಾಲ್ನಲ್ಲಿ ವಾದ ವಿವಾದಗಳು ಶುರುವಾಗುತ್ತವೆ. ಎಲ್ಲವೂ ಒಂದು ಹಂತಕ್ಕೆ ಬಂತು ಅನ್ನುವಷ್ಟರಲ್ಲಿ ಗೊತ್ತಾಗೋದು ಅಸಲಿಗೆ ಈ ಅತ್ಯಾಚಾರ ನಡೆದೇ ಇರೋದಿಲ್ಲ. ಸಾಕ್ಷಿ ಆಧಾರಗಳಿಲ್ಲದೆ ಮುಚ್ಚಿಹೋದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸೇಡು ತೀರಿಸಿಕೊಳ್ಳಲು ನಾಯಕಿ ಸಾಕ್ಷಿಗಳನ್ನು ಸೃಷ್ಟಿಸಿ ಅಪರಾಧಿಗಳನ್ನು ಹಳ್ಳಕ್ಕೆ ಬೀಳಿಸುತ್ತಾಳೆ. ತೀರಾ ಇತ್ತೀಚೆಗೆ ಅಮೆಜ಼ಾನ್ನಲ್ಲೇ ರಿಲೀಸ್ ಆದ ಪೊನ್ ಮಗಳ್ ವಂದಾಳ್ ಚಿತ್ರದ ಕಥೆಯ ಎಳೆಗೂ ʻಲಾʼಗೂ ಒಂದಿಷ್ಟು ಸಾಮ್ಯತೆ ಇದೆ.

ಕಳೆದ ವರ್ಷ ಕನ್ನಡದಲ್ಲೇ ತೆರೆಗೆ ಬಂದಿದ್ದ ರಂಗನಾಯಕಿ ಚಿತ್ರ ಕೂಡಾ ಅತ್ಯಾಚಾರದಂಥಾ ಹೀನ ಕೃತ್ಯದ ಕುರಿತಾಗಿಯೇ ಇತ್ತು. ದಯಾಳ್ ಪದ್ಮನಾಭನ್ ನಿರ್ದೇಶನದ ಆ ಸಿನಿಮಾ ಕಡಿಮೆ ಬಜೆಟ್ಟು, ಕೆಲವೇ ಕಲಾವಿದರಿದ್ದರೂ ಅಚ್ಚುಕಟ್ಟಾಗಿ ಮೂಡಿಬಂದಿತ್ತು. ಈ ಚಿತ್ರಕ್ಕೆ ಹೋಲಿಸಿದರೆ ʻಲಾʼದಲ್ಲಿ ಏನೇನೂ ಇಲ್ಲ. ಹಿರಿಯ ಕಲಾವಿದರು, ತಾಂತ್ರಿಕತೆ ಎಲ್ಲವೂ ಇದ್ದೂ ʻಲಾʼ ಸವಕಲು ಸವಕಲಾಗಿ ಕಾಣಿಸುತ್ತದೆ. ಆಯ್ಕೆ ಮಾಡಿಕೊಂಡಿರುವ ಸಬ್ಜೆಕ್ಟನ್ನು ದೃಶ್ಯ ರೂಪದಲ್ಲಿ ಕಟ್ಟಿಕೊಡುವಲ್ಲಿ ನಿರ್ದೇಶಕ ರಘು ಅಕ್ಷರಶಃ ಅಸಮರ್ಥರಾಗಿದ್ದಾರೆ. ಒಂದೊಳ್ಳೆ ಸಿನಿಮಾ ಮಾಡಲು ಬೇಕಾದ ಸರಕೆಲ್ಲವೂ ಇದ್ದೂ ಅದು ಮನಮುಟ್ಟದೇ ಹೋಗಿರುವುದು ನಿರ್ದೇಶಕರ ವೈಫಲ್ಯವಲ್ಲದೇ ಮತ್ತೇನೂ ಅಲ್ಲ. ಬಹುಶಃ ಈ ಕಾರಣಕ್ಕೇ ನಿರ್ಮಾಪಕ ಪುನೀತ್ ರಾಜ್ ಕುಮಾರ್ ʻಲಾʼವನ್ನು ಓಟಿಟಿಗೆ ಮಾರಿ ಕೈ ತೊಳೆದುಕೊಂಡಿರಬೇಕು.

ಇನ್ನು ಮೊದಲ ಬಾರಿಗೆ ನಾಯಕಿಯಾಗಿ ನಟಿಸಿರುವ ರಾಗಿಣಿ ಪ್ರಜ್ವಲ್ ಇನ್ನೊಂಚೂರು ಶ್ರಮ ಹಾಕಿ, ಭಾವನೆಗಳನ್ನು ಹೊಮ್ಮಿಸಿ ನಟಿಸಬೇಕಿತ್ತು. ಇಡೀ ಸಿನಿಮಾವನ್ನು ಸಹ್ಯವಾಗಿಸಿರುವುದು ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಲೆ, ಅವಿನಾಶ್, ನಟರಂಗ ರಾಜೇಶ್ ನಟನೆ. ಎಲ್ಲರಿಗೂ ನಟನೆಯನ್ನು ಹೇಳಿಕೊಡಬೇಕಿದ್ದ ಮಂಡ್ಯ ರಮೇಶ್ ಈ ಸಿನಿಮಾದಲ್ಲಿ ಅದ್ಯಾಕೆ ಇಷ್ಟು ಕೆಟ್ಟದಾಗಿ ನಟಿಸಿದ್ದಾರೋ ಗೊತ್ತಿಲ್ಲ. ಅವರ ವಿಲಕ್ಷಣ ನಗು, ಅತಿಯಾದ ಬಾಡಿ ಲಾಂಗ್ವೇಜು ನೋಡುಗರ ಮನಸ್ಸಿಗೆ ನವೆ ಹುಟ್ಟಿಸುತ್ತದೆ. ಪುಣ್ಯಕ್ಕೆ ಈ ಚಿತ್ರ ಓಟಿಟಿಯಲ್ಲಿರೋದರಿಂದ ಆಸಕ್ತಿ ಇದ್ದವರು ಒಮ್ಮೆ ನೋಡಿ ಸುಮ್ಮನಾಗಬಹುದಷ್ಟೇ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮಹಾನಾಯಕನ ಕುರಿತು…

Previous article

I Quit!! Goodbye to the fucking world and Depression ..!..

Next article

You may also like

Comments

Leave a reply

Your email address will not be published.