ಗ್ರೇಟ್ ಬ್ರೋಸ್ ಪಿಕ್ಚರ‍್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಸಿನಿಮಾ ‘ಲೆಗಸಿ’. ಯೋಗರಾಜ ಭಟ್ಟರ ಪಂಚತಂತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸಿರುವ ವಿಹಾನ್ ಅವರ ಹೊಸ ಚಿತ್ರ ಇದಾಗಿದೆ. ಸುಭಾಷ್ ಚಂದ್ರ ನಿರ್ದೇಶನದ ಮೊದಲ ಸಿನಿಮಾ ‘ಲೆಗಸಿ’ಗೆ ಜಾಗ್ವಾರ್ ಚಿತ್ರದ ನಟಿ ದೀಪ್ತಿ ಸತಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಹೀರೋ ಆಗಿ ಲಾಂಚ್ ಆದ ಜಾಗ್ವಾರ್ ಚಿತ್ರದ ಮೂಲಕ ಬೆಳಕಿಗೆ ಬಂದವರು ದೀಪ್ತಿ ಸತಿ. ಆನಂತರದ ದಿನಗಳಲ್ಲಿ ಎಲ್ಲಿ ಮರೆಯಾದರು? ಅಂತಾ ಜನ ಪ್ರಶ್ನಿಸುವ ಹೊತ್ತಿಗೇ ‘ಲೆಗಸಿ’ಯಲ್ಲಿ ಹಾಜರಾಗಿದ್ದಾರೆ.

ಇತ್ತೀಚಿಗಷ್ಟೇ ಮುಹೂರ್ತ ನೆರವೇರಿಸಿಕೊಂಡಿರುವ ಲೆಗಸಿ ತಂಡ ಜನವರಿ ಮೂರನೇ ತಾರೀಖಿನಿಂದ ಶೂಟಿಂಗ್ ಆರಂಭಿಸಿ ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ, ಹಾಗೂ ರಾಮನಗರದ ಸುತ್ತಮುತ್ತ ಚಿತ್ರೀಕರಣ ನಡೆಸುವ ಪ್ಲಾನ್ ಚಿತ್ರತಂಡಕ್ಕಿದೆ. ೧೯೯೦ರಿಂದ ೨೦೧೯ರವರೆಗೆ ನಡೆಯುವ ಬರಹಗಾರನೊಬ್ಬನ ಜೀವನ ಹಾಗೂ ಆತನ ಮುಂದಿನ ಪೀಳಿಗೆ ಸಮಾಜವನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಆಕ್ಷನ್, ಥ್ರಿಲ್ಲರ್ ಕಥೆಯ ಮೂಲಕ ನಿರ್ದೇಶಕರು ಹೇಳಲಿದ್ದಾರೆ. ಪ್ರೀತಿಯ ಜೊತೆ ತಂದೆ-ಮಗನ ಸೆಂಟಿಮೆಂಟ್ ಕಥೆ ಕೂಡ ಈ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ದೀಪ್ತಿ ಸತಿ ಅವರ ಪಾತ್ರ ಏನು? ಲೆಗಸಿಯೊಳಗೆ ಇನ್ನೂ ಏನೇನಿದೆ ಎಂಬಿತ್ಯಾದಿ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

ವಿಹಾನ್ ಮತ್ತು ದೀಪ್ತಿ ಜೋಡಿಯಾಗಿರುವ ಲೆಗಸಿ ಚಿತ್ರಕ್ಕೆ ಸುರೇಶ್ ರಾಜ್ ಸಂಗೀತ, ಸುಂದರ್ ಪಿ ಛಾಯಾಗ್ರಹಣ, ಶಿವ-ಪ್ರೇಮ್ ಸಾಹಸ, ಸುನಿಲ್ ಎಸ್.ಎಲ್.ಆರ್. ಸಂಕಲನ, ಜಯಂತ್ ಕಾಯ್ಕಿಣಿ ಮತ್ತು ಡಾ. ವಿ. ನಾಗೇಂದ್ರಪ್ರಸಾದ್ ಅವರ ಗೀತಸಾಹಿತ್ಯವಿದೆ. ಚಾಲೆಂಜಿಂಗ್‌ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ಎಂ.ಸುಭಾಷ್‌ಚಂದ್ರ ‘ಲೆಗಸಿ’ಯ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ನಟ ದರ್ಶನ್‌ರ ಅಫಿಷಿಯಲ್ ಫ್ಯಾನ್‌ಪೇಜ್ ಡಿ ಕಂಪನಿಯ ಅಡ್ಮಿನ್ ಆಗಿ ಸಹಾ ಸುಭಾಷ್ ಚಂದ್ರ ಕಳೆದ ಒಂಬತ್ತು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಸ್ವತಃ ದರ್ಶನ್ ಅವರೇ ಸುಭಾಷ್‌ರ ಆಸಕ್ತಿಯನ್ನು ಕಂಡು ಕುರುಕ್ಷೇತ್ರ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಒದಗಿಸಿಕೊಟ್ಟಿದ್ದರು.

ಸಾಕಷ್ಟು ಕನಸುಗಳನ್ನು ಹೊಂದಿರುವ ಯುವ ನಿರ್ದೇಶಕ ಸುಭಾಷ್ ಚಂದ್ರ ಅವರಿಗೆ ಗೆಲುವು ದಕ್ಕಲಿ ಅಂತಾ ಹಾರೈಸೋಣ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ZEE ಕಾಮಿಡಿ ಅವಾರ್ಡ್ಸ್ 2020

Previous article

ಗುಳೇದಗುಡ್ಡದ ಹುಡುಗಿ ಜೊತೆ ಮದುವೆ ಮಾಡ್ರಿ!

Next article

You may also like

Comments

Leave a reply

Your email address will not be published. Required fields are marked *