ಕನ್ನಡ ಚಿತ್ರರಂಗದ ಹಿರಿಯರನೇಕರು ಒಬ್ಬರ ಹಿಂದೊಬ್ಬರಂತೆ ಎದ್ದು ಹೋಗುತ್ತಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿ ತಿಂಗಳಾಗುತ್ತಲೇ ಹಿರಿಯ ನಟ ಅಂಕಲ್ ಲೋಕನಾಥ್ ನಿರ್ಗಮಿಸಿದ್ದಾರೆ. ವಯೋಸಹಜ ಕಾಯಿಲೆಗಳಿದ್ದರೂ ಸದಾ ಸಿನಿಮಾ ಸಂಪರ್ಕದಲ್ಲಿದ್ದ, ಸಮಾರಂಭಗಳಿಗೆ ಉತ್ಸಾಹದಿಂದಲೇ ಹಾಜರಾಗುತ್ತಿದ್ದ ಲೋಕನಾಥ್ ಎಲ್ಲರ ಪ್ರೀತಿ ಪಾತ್ರರಾಗಿದ್ದವರು. ದಶಗಳ ಸಿನಿಮಾ ನಂಟಿನಲ್ಲಿ ಥರ ಥರದ ಪಾತ್ರಗಳಿಂದ ಚಿರಪರಿಚಿತರಾಗಿದ್ದ ಅವರಿನ್ನು ನೆನಪು ಮಾತ್ರ…
ಅವರಿಗೆ ತೊಂಭತ್ತು ವರ್ಷವಾಗಿತ್ತು. ಆದರೆ ವಯೋ ಸಹಜವಾದ ಬಳಲಿಕೆ ಬಿಟ್ಟರೆ ಯುವಕರಿಗೂ ಸ್ಫೂರ್ತಿಯಾಗುವಂಥಾ ಲವಲವಿಕೆ ಅವರ ವ್ಯಕ್ತಿತ್ವದ ಪ್ರಧಾನ ಆಕರ್ಷಣೆಯಾಗಿತ್ತು. ಬಹುಶಃ ಬೇರೆಯವರಾಗಿದ್ದರೆ ಚಿತ್ರರಂಗದ ಸಂಪರ್ಕವನ್ನೇ ಕಡಿದುಕೊಂಡು ತಾವಾಯಿತು ತಮ್ಮ ಮನೆಯಾಯಿತು ಅಂತಿರುತ್ತಿದ್ದರೇನೋ. ಆದರೆ ವಯಸ್ಸಿನ ಬಳುವಳಿಯಂಥಾ ಕಾಯಿಲೆಗಳು ಹಿಂಡುತ್ತಿದ್ದರೂ ಚಿತ್ರರಂಗದ ಬೆಳವಣಿಗೆಗಳ ಬಗ್ಗೆ ಅವರಲ್ಲಿ ಸದಾ ಒಂದು ಕುತೂಹಲವಿತ್ತು. ಹೊಸಬರ ಪ್ರಯತ್ನಗಳ ಬಗ್ಗೆ, ಚಿತ್ರರಂಗದ ಬೆಳವಣಿಗೆಗಳ ಬಗ್ಗೆಯೂ ಸದಾ ತಿಳಿದುಕೊಳ್ಳುತ್ತಿದ್ದ ಅವರು ಇಂದು ತಮ್ಮ ಸ್ವಗೃಹದಲ್ಲಿಯೇ ಮರಣ ಹೊಂದಿದ್ದಾರೆ.
ಲೋಕನಾಥ್ ನಟಿಸಿರೋ ಚಿತ್ರಗಳು, ನಿರ್ವಹಿಸಿರೋ ಪಾತ್ರಗಳು ವೈವಿಧ್ಯಮ. ೧೯೨೭ರಲ್ಲಿ ಹನುಮಂತಪ್ಪ ಮತ್ತು ಗೌರಮ್ಮನ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿದ್ದ ಲೋಕನಾಥ್ ಮಡಿವಂತಿಕೆಯ ವಾತಾವರಣವನ್ನು ಹಿಮ್ಮೆಟ್ಟಿಸಿ ಬಣ್ಣ ಹಚ್ಚಿದ್ದೇ ಒಂದು ರೋಚಕ ಕಥೆ. ಆ ಕಾಲಕ್ಕೇ ಅವರು ಎಂಜಿನೀರಿಂಗ್ ಪದವಿ ಪಡೆದಿದ್ದವರು. ತೀರಾ ಸಣ್ಣ ವಯಸ್ಸಿನಲ್ಲಿಯೇ ವ್ಯಾಪಾರ ವಹಿಉವಾಟನ್ನೂ ಆರಂಭಿಸಿದ್ದ ಅಮೃತಸರ, ಬನಾರಸ್ ಮುಂತಾದ ಪ್ರದೇಶಗಳಲ್ಲಿ ಓಡಾಡುತ್ತಿದ್ದರು. ಇದೇ ಸಂದರ್ಭದಲ್ಲಿ ವ್ಯಾಯಾಮ ಕಲಿಯೋ ಉದ್ದೇಶದಿಂದ ಜಿ ವಿ ಅಯ್ಯರ್ ಬಳಿ ಸೇರಿಕೊಂಡಿದ್ದರು. ಲೋಕನಾಥ್ ಅವರ ವಿಶಿಷ್ಟ ಕಂಠವನ್ನು ರಂಗಭೂಮಿಗೂ ಪರಿಚಯಿಸಿದ್ದರು.
ಲೋಕನಾಥ್ ಅವರದ್ದು ವಿಪರೀತ ಸಂಪ್ರದಾಯಸ್ಥ ಕುಟುಂಬ. ಈ ವಿ ಅಯ್ಯರ್ ಉತ್ತೇಜನದಿಂದ ರಂಗಭೂಮಿಯತ್ತ ಆಷರ್ಶಿತರಾಗಿದ್ದವರಿಗೆ ಹೆತ್ತವರಿಂದಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೂ ೧೯೫೨ರಲ್ಲಿ ಕಲಾವಿದರು ಎಂಬ ತಂಡ ಸೇರಿಕೊಂಡ ಲೋಕನಾಥ್ ನಾಟಕ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಹಾಗೆ ಮುಂದುವರೆದ ಅವರು ಬಂಡವಾಳವಿಲ್ಲದ ಬಡಾಯಿ ಎಂಬ ನಾಟಕದ ಮೂಲಕವೇ ನಟನಾಗಿ ಪರಿಚಯವಾಗಿದ್ದರು. ಆ ಬಳಿಕ ರಕ್ತಾಕ್ಷಿ, ವಿಗಡ ವಿಕ್ರಮರಾಯ, ಬಿರುದಂತೆಂಬರ ಗಂಡ ಮುಂತಾದ ಅನೇಕ ನಾಟಕಗಳಲ್ಲಿ ಯಶಸ್ವಿಯಾಗಿಯೇ ಪ್ರಾತ್ರಗಳಿಗೆ ಜೀವ ತುಂಬಿದ್ದರು.
ಇಂಥಾ ಗಟ್ಟಿಯಾದ ರಂಗಭೂಮಿ ಅನುಭವದೊಂದಿಗೇ ಲೋಕನಾಥ್ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದರು. ಗೆಜ್ಜೆಪೂಜೆ, ಬಂಗಾರದ ಮನುಷ್ಯ ಸೇರಿದಂತೆ ಆರುನೂರ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. ಅವು ಇಷ್ಟೊಂದು ಚಿತ್ರಗಳಲ್ಲಿ ನಿರ್ವಹಿಸಿರೋ ಪ್ರತೀ ಪಾತ್ರಗಳೂ ಕೂಡಾ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದವು. ಭೂತಯ್ಯನ ಮಗ ಅಯ್ಯು ಮುಂತಾದ ಚಿತ್ರಗಳ ಪಾತ್ರಗಳ ಮೂಲಕವೇ ಅವರು ಗುರುತಾದರು. ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯ, ಶರಪಂಜರ, ನಾಗರಹಾವು, ಹೇಮಾವತಿ, ಬಂಗಾರದ ಪಂಜರ, ಹೃದಯ ಸಂಗಮ, ಕೃಷ್ಣ ರುಕ್ಮಿಣಿ ಸತ್ಯಭಾಮ, ಭಾಗ್ಯಜ್ಯೋತಿ, ಕೂಡಿ ಬಾಳೋಣ, ಮಿಂಚಿನ ಓಟ, ಹೊಸ ನೀರು, ಮನೆ ಮನೆ ಕಥೆ, ಒಲವಿನ ಆಸರೆ ಹೀಗೆ ಅವರು ನಟಿಸಿರೋ ಚಿತ್ರಗಳು ಇಂದಿಗೂ ಕನ್ನಡಿಗರ ಮನದಲ್ಲಿ ಹಸಿರಾಗಿವೆ.
ರಂಗಭೂಮಿಯಲ್ಲಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದವರು ಲೋಕನಾಥ್. ಚಿತ್ರರಂಗದಲ್ಲಿಯೂ ಗಟ್ಟಿಯಾಗಿ ನೆಲೆನಿಲ್ಲುವ ಕಸುವು ಅವರಿಗೆ ಸಿಕ್ಕಿದ್ದದ್ದೂ ರಂಗಭೂಮಿಯಿಂದಲೇ. ಅದೇನೇ ಕೀರ್ತಿ ಬಂದರೂ ಮೆರೆಯದೆ, ಯಾವ ಹಂತದಲ್ಲಿಯೂ ಶಿಸ್ತು ತಪ್ಪದೇ ಬದುಕಿದ್ದ ಅವರು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದವರು. ಲೋಕನಾಥ್ ಎಂಬ ಹಿರಿಯ ಚೇತನ ಮರೆಯಾಗಿದೆ. ಆದರೆ ಅವರು ಚಿತ್ರಪ್ರೇಮಿಗಳ ಮನಸಲ್ಲಿ ಸದಾ ಜೀವಂತವಾಗಿರುತ್ತಾರೆ.
#
No Comment! Be the first one.