ಕನ್ನಡ ಚಿತ್ರರಂಗಕ್ಕೆ ಹೊಸಾ ಪ್ರತಿಭೆಗಳು, ಹೊಸಾ ಆಲೋಚನೆಗಳು ಸದಾ ಹರಿದು ಬರುತ್ತಲೇ ಇರುತ್ತವೆ. ಆ ಜಾಡಿನಲ್ಲಿರುವ ಸಿದ್ಧಸೂತ್ರವನ್ನು ಮೀರಿದ ಗಟ್ಟಿತನದ ಪ್ರಯತ್ನಗಳು ತನ್ನಿಂದ ತಾನೇ ಗಮನ ಸೆಳೆಯುತ್ತವೆ. ಹಾಗೆಯೇ ಸದ್ಯ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡು ಬಿಡುಗಡೆಗೆ ಸಜ್ಜಾಗಿ ನಿಂತಿರೋ ಚಿತ್ರ ‘ಅಟ್ಟಯ್ಯ v/s ಹಂದಿ ಕಾಯೋಳು’ ಚಿತ್ರ. ಈ ಚಿತ್ರದ ಮೂಲಕ ಲೋಕೇಂದ್ರ ಸೂರ್ಯ ಎಂಬ ನವ ಪ್ರತಿಭೆಯೂ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದಾರೆ.
ಹೆಸರಲ್ಲಿಯೇ ವಿಭಿನ್ನವಾದುದೇನನ್ನೋ ಧ್ವನಿಸುತ್ತಿರೋ ಈ ಚಿತ್ರ ಲೋಕೇಂದ್ರರ ಅದೆಷ್ಟೋ ವರ್ಷಗಳ ತಪನೆಯ ಫಲ. ಮೂಲತಃ ಆಕ್ರೇಸ್ಟ್ರಾ ಗಾಯಕರಾಗಿರೋ ಲೋಕೇಂದ್ರ ಆ ವಲಯದಲ್ಲಿ ಜ್ಯೂನಿಯರ್ ಉಪೇಂದ್ರ ಎಂದೇ ಖ್ಯಾತಿ ಪಡೆದಿರುವವರು. ಉಪ್ಪಿಯ ಓಂ ಚಿತ್ರವನ್ನು ಕಣ್ತುಂಬಿಕೊಂಡ ನಂತರ ತಮ್ಮೊಳಗಿನ ಸಿನಿಮಾ ಕನಸಿಗೆ ಓಂಕಾರ ಬರೆದುಕೊಂಡ ಅವರು ಆ ಬಳಿಕ ಬದುಕು ಎತ್ತ ಹೊಯ್ದಾಡಿಸಿದರೂ ತಮ್ಮ ಗುರಿಯ ಬಿಂದುವಿನಿಂದ ಹಿಂದೆ ಸರಿಯದ ಛಲಗಾರ ಲೋಕೇಂದ್ರ.
ಅಟ್ಟಯ್ಯ v/s ಹಂದಿ ಕಾಯೋಳು ಎಂಬ ಚಿತ್ರವೂ ಕೂಡಾ ಲೋಕೇಂದ್ರರೊಳಗಿನ ಸೂಕ್ಷ್ಮವಂತಿಕೆಯ ಮೂಸೆಯಲ್ಲರಳಿದ ಕನಸಿನಂಥಾದ್ದು. ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ ಸತ್ಯ ಕಥೆಯೊಂದನ್ನು ಕೇಳಿದ್ದ ಲೋಕೇಂದ್ರ ಆ ಗುಂಗಿನಿಂದ ಹೊರ ಬರಲು ವಾರಗಳ ಕಾಲ ತೆಗೆದುಕೊಂಡಿದ್ದರಂತೆ. ಹಾಗೆ ಬಿಟ್ಟೂ ಬಿಡದೆ ಕಾಡಿದ ಅಪರೂಪದ ಕಥೆಯನ್ನೇ ಸಿನಿಮಾವಾಗಿಸೋ ಹಠಕ್ಕೆ ಬಿದ್ದ ಲೋಕೇಂದ್ರ, ಇದರ ಅಸಲೀ ಕಥೆಯೇನೆಂಬ ಸುಳಿವನ್ನು ಕಿಂಚಿತ್ತೂ ಬಿಟ್ಟುಕೊಟ್ಟಿಲ್ಲ. ತನ್ನನ್ನು ವಾರಗಳ ಕಾಲ ಆವರಿಸಿಕೊಂಡು ಕಾಡಿದ ಈ ಕಥೆ ಸಿನಿಮಾ ರೂಪದಲ್ಲಿ ಎರಡು ತಾಸುಗಳ ಕಾಲಾವಧಿಯ ತುಂಬಾ ಪ್ರೇಕ್ಷಕರನ್ನು ಕಾಡದಿರುತ್ತದಾ ಎಂಬ ತರ್ಕ ಅವರದ್ದು.
ಲೋಕೇಂದ್ರ ಅಟ್ಟಯ್ಯ v/s ಹಂದಿ ಕಾಯೋಳು ಚಿತ್ರದ ಕಥಾ ಹಂದರವನ್ನು ಗೌಪ್ಯವಾಗಿಟ್ಟಿದ್ದರೂ ಕೂಡಾ ಅದು ಬದುಕಿಗೆ ಹತ್ತಿರಾದ, ಲೋಕನಿಂದಿತ ಜೀವಗಳ ಒಡಲ ತುಡಿತ ಹೊಂದಿರೋ ಕಥೆ ಎಂಬುದು ಪಕ್ಕಾ. ತಿಂಗಳ ಹಿಂದೆ ಅವರು ಈ ಚಿತ್ರದ ಆಡಿಯೋ ಮತ್ತು ಟೀಸರ್ ಅನಾವರಣಗೊಳಿಸಿ ಅದೇ ವೇದಿಕೆಯಲ್ಲಿ ತಾವು ಬರೆದ ಆಕಾಶ ಬುಟ್ಟಿ ಕಾದಂಬರಿಯನ್ನೂ ಬಿಡುಗಡೆಗೊಳಿಸಿದ್ದರು. ಅವರನ್ನು ಹತ್ತಿರದಿಂದ ಬಲ್ಲವರಿಗೆ, ಅವರ ಸಾಹಿತ್ಯ ಕೃಷಿಯ ಪರಿಚಯ ಇರುವವರಿಗೆ ಆ ವಿಚಾರದಲ್ಲಿ ಯಾವ ಅನುಮಾನವೂ ಉಳಿಯುವುದಿಲ್ಲ. ಯಾಕೆಂದರೆ ಲೋಕೇಂದ್ರ ಬರೆದಿರೋ ಆಕಾಶ ಬುಟ್ಟಿಯೆಂಬ ಕಾದಂಬರಿಯ ಕಥಾ ವಸ್ತುವೇ ಅಂಥಾದ್ದಿದೆ.
ಬೆಂಗಳೂರಿನ ಮಲ್ಲತ್ತಹಳ್ಳಿಯ ರೈಪಾಪಿ ಕುಟುಂಬದಿಂದ ಬಂದವರು ಲೋಕೇಂದ್ರ. ಬೆಳೆದ ಬೆಂಗಳೂರು ನಗರ ಎದೆ ಮೇಲೇ ಬಂದಂತಾಗಿ ಬೆಚ್ಚಿಬಿದ್ದ ಬೆಂಗಳೂರಿನ ಆಸುಪಾಸಿನ ಹಳ್ಳಿಗರಿದ್ದಾರಲ್ಲಾ? ಅದೇ ತಲ್ಲಣಗಳನ್ನು ಮೈ ಮನಸುಗಳಿಗೆ ತುಂಬಿಕೊಂಡು ಅದನ್ನೇ ತಮ್ಮ ಹಾಡಿನ ಧ್ವನಿಯಾಗಿಸಿಕೊಂಡವರು, ಬರವಣಿಗೆಯ ಕಸುವಾಗಿಸಿಕೊಂಡವರು ಲೋಕೇಂದ್ರ. ಬೆಂಗಳೂರಿಗೆ ಸೇರಿದ ಹಳ್ಳಿ ಹುಡುಗ ಲೋಕೇಂದ್ರಗೆ ಈ ನಗರಕ್ಕೆ ಬದುಕು ಅರಸಿ ಬರೋ ಪ್ರತೀ ಜೀವಗಳ ಅನಾಥ ಪ್ರಜ್ಞೆಗೆ ಕಣ್ಣಾಗೋ ಸೂಕ್ಷ್ಮತೆಯಿದೆ. ಇಲ್ಲಿನ ಸಮುದ್ರದಂಥಾ ಜನಸಾಗರದಲ್ಲಿ ನಿಂತ ನಾನಾ ಥರದ ಬದುಕುಗಳ ಜಾಡು ಹಿಡಿಯುವ ಸಂವೇದನೆಯೂ ಇದೆ. ಅವರು ನಿರ್ದೇಶನ ಮಾಡಿರುವ ಅಟ್ಟಯ್ಯ v/s ಹಂದಿ ಕಾಯೋಳು ಚಿತ್ರ ಮುಖ್ಯವಾಗೋದು ಈ ಕಾರಣದಿಂದಲೇ.
ಬೆಂಗಳೂರೆಂಬ ರಾಕ್ಷಸ ನಗರಿ ಲೋಕೇಂದ್ರ ಹುಟ್ಟಿ ಬೆಳೆದ ಊರನ್ನು, ಹಿರೀಕರು ಉತ್ತಿ ಬೆಳೆದ ಹೊಲಗಳನ್ನು ಅಕ್ಷರಶಃ ನುಂಗಿ ನಗುತ್ತಿದೆ. ಆದರೂ ಹಳ್ಳಿ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಂಡಿರೋ ಅವರು ಗಾಂಧಿನಗರದ ಹೊರಗಿದ್ದುಕೊಂಡೇ ಚಿತ್ರ ನಿರ್ದೇಶನ ಮಾಡಬೇಕಂದುಕೊಂಡು ಅದರಲ್ಲಿ ಗೆಲುವು ಕಂಡಿರೋ ಸಾಹಸಿ. ಸೂಪರ್ ಸ್ಟಾರ್ ರಜನೀಕಾಂತ್ರಂಥವರೇ ನಟಿಸಬಹುದಾದಂಥಾ ಕಥೆಯನ್ನೂ ರೆಡಿ ಮಾಡಿಟ್ಟುಕೊಂಡಿರೋ ಉತ್ಸಾಹಿ. ಈ ಚಿತ್ರಕ್ಕೆ ಅಟ್ಟಯ್ಯ v/s ಹಂದಿ ಕಾಯೋಳು ಎಂಬ ಹೆಸರಿಟ್ಟಿದ್ದಕ್ಕೂ ಅವರಲ್ಲಿ ನಿಖರವಾದ ಕಾರಣಗಳಿವೆ. ತಮ್ಮ ಆಸುಪಾಸಿನವರೇ ಈ ಟೈಟಲ್ಲಿನ ಬಗ್ಗೆ ಅಸಮಾಧಾನ ಹೊಂದಿದ್ದರೂ ಲೋಕೇಂದ್ರರಿಗೆ ಆ ಬಗ್ಗೆ ಸಮಾಧಾನವಿದೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿಯೇ ವಿಭಿನ್ನವಾದ ಛಾಪೊಂದನ್ನು ಮೂಡಿಸುತ್ತದೆ ಎಂಬ ನಂಬಿಕೆಯೂ ಇದೆ.
ಒಟ್ಟಾರೆಯಾಗಿ ಆಕ್ರೇಸ್ಟ್ರಾಗಳಲ್ಲಿ ಹಾಡಿಕೊಂಡು, ಸಾಹಿತ್ಯದ ಗುಂಗಿಗೆ ಬಿದ್ದಿದ್ದ ಸಂವೇದನಾಶೀಲ ಹುಡುಗ ಲೋಕೇಂದ್ರ ಈಗ ನಿರ್ದೇಶಕರಾಗಿದ್ದಾರೆ. ಅವರ ಚೊಚ್ಚಲ ಚಿತ್ರ ಅಟ್ಟಯ್ಯ v/s ಹಂದಿ ಕಾಯೋಳು ಬಿಡುಗಡೆಗೆ ಸಜ್ಜುಗೊಂಡಿದೆ. ಅವರ ಕಡೆಯಿಂದ ಇನ್ನಷ್ಟು ಭಿನ್ನ ಜಾಡಿನ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಜಮೆಯಾಗಿ, ಪ್ರೇಕ್ಷಕರ ಮನಸಲ್ಲುಳಿಯುವಂತಾಗಲಿ…
#
No Comment! Be the first one.