ಪಾಸಿಟಿವ್ ಚಿಂತನೆಗಳಿದ್ದರೆ ಎಲ್ಲವೂ ಒಳ್ಳೆಯದ್ದೇ ಆಗುತ್ತದೆ ಅನ್ನೋದು ಲೋಕಾರೂಢಿ ಮಾತು. ಈ ಮಾತಿಗೆ ಅನ್ವರ್ಥದಂತೆ ಇಲ್ಲೊಂದು ಚಿತ್ರತಂಡ ಕೊರೋನಾದಂತಾ ನೆಗೆಟಿವ್ ಕಾಲದಲ್ಲೂ ಶುದ್ಧ ಪ್ರೀತಿಯಿಟ್ಟು, ಅಚ್ಚುಕಟ್ಟಾದ ಸಿನಿಮಾವೊಂದನ್ನು ರೂಪಿಸಿದೆ. ಗುಡ್ ವ್ಹೀಲ್ ಪ್ರೊಡಕ್ಷನ್ ಸಂಸ್ಥೆಯ ಮಂಜುನಾಥ ಗೌಡ ನಿರ್ಮಿಸಿ, ಶ್ರೀ ರಾಜ್ ನಿರ್ದೇಶಿಸಿರುವ ಈ ಚಿತ್ರದ ಹೆಸರು ಲಾಂಗ್ ಡ್ರೈವ್!
ಕೋವಿಡ್-೧೯ ಕಾರಣಕ್ಕೆ ಇಡೀ ಜಗತ್ತು ಬೆಚ್ಚಿಬಿದ್ದಿತ್ತು. ಲಾಕ್ ಡೌನ್ ಘೋಷಣೆಯಾಗಿದ್ದ ಕಾರಣ ಪ್ರತಿಯೊಬ್ಬರೂ ಮನೆಯಲ್ಲೇ ಅಡಗಿ ಕೂರಬೇಕಾದ ಸಂದಿಗ್ಧದ ದಿನಗಳವು. ಈ ಹೊತ್ತಿನಲ್ಲಿ ನಿರ್ದೇಶಕ ಶ್ರೀರಾಜ್ ಗೆ ನಿರ್ಮಾಪಕ ಮಂಜುನಾಥ ಗೌಡ ಕರೆ ಮಾಡುತ್ತಾರೆ. ಸಿನಿಮಾ ಮಾಡೋದರ ಬಗ್ಗೆ ಡಿಸ್ಕಸ್ ಮಾಡೋಣ ಬನ್ನಿ ಎನ್ನುತ್ತಾರೆ. ಕಥೆ ಸ್ವತಃ ಮಂಜುನಾಥ ಗೌಡರೇ ಹೇಳುತ್ತಾರೆ. ಶ್ರೀ ರಾಜ್ ಅವರಿಗೆ ನಿರ್ಮಾಪಕರು ಹೇಳಿದ ಕಥೆ ಚೆಂದ ಇದೆ… ಒಂದೊಳ್ಳೆ ಸಿನಿಮಾ ಮಾಡಬಹುದು ಎನ್ನುವ ಉತ್ಸಾಹ ಮೂಡುತ್ತದೆ. ಆ ಕೂಡಲೇ ಸ್ಕ್ರೀನ್ ಪ್ಲೇ ಬಗ್ಗೆ ಚರ್ಚೆ ಆರಂಭಿಸುತ್ತಾರೆ. ಹೊರಗೆ ಹೋಗಲೂ ಹೆದರುವ ಪರಿಸ್ಥಿತಿಯಲ್ಲೂ ಧೈರ್ಯ ಮಾಡಿದ ಶ್ರೀ ರಾಜ್ ಶ್ರೀನಗರದಲ್ಲಿರುವ ತಮ್ಮ ಮನೆಯಿಂದ ಪಕ್ಕದ ಶ್ರೀನಿವಾಸ ನಗರ ಏರಿಯಾಕ್ಕೆ ಪ್ರತಿ ದಿನ ನಡೆದೇ ಹೋಗಿ ನಿರ್ಮಾಪಕರೊಂದಿಗೆ ಕೂತು ಚಿತ್ರಕತೆ ಹೆಣೆಯುವ ಕೆಲಸ ಶುರು ಮಾಡುತ್ತಾರೆ. ಇವರೊಟ್ಟಿಗೆ ಛಾಯಾಗ್ರಾಹಕ ಕಿಟ್ಟಿ ಕೌಶಿಕ್ ಕೂಡಾ ಜೊತೆಯಾಗುತ್ತಾರೆ. ಪ್ರತಿ ದಿನ ಮೂರೂ ಜನ ಒಂದೆಡೆ ಸೇರಿ, ಲಾಕ್ ಡೌನ್ ಟೈಮಲ್ಲೇ ಸ್ಕ್ರಿಪ್ಟ್ ಫೈನಲ್ ಮಾಡಿಕೊಳ್ಳುತ್ತಾರೆ.
ಈಗ ಹೀರೋ ಜಾಗಕ್ಕೆ ಯಾರನ್ನು ಕರೆತರುವುದು ಅಂತಾ ಯೋಚಿಸಿ, ಹೊಸಬರ ಆಯ್ಕೆಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಣೆ ಹೊರಡಿಸುತ್ತಾರೆ. ದಂಡಿದಂಡಿ ಫೋಟೋಗಳು ಇನ್ ಬಾಕ್ಸಿಗೆ ಬಂದು ಬೀಳುತ್ತವೆ. ಅವುಗಳಲ್ಲಿ ಬಹುತೇಕ ಕಳಪೆ, ಅಲ್ಲೋ ಇಲ್ಲೋ ಓಕೆಓಕೆ ಎನ್ನುವಂತಾ ಮುಖಗಳಿರುತ್ತವೆ. ಆದರೆ, ನಿರ್ಮಾಪಕ, ನಿರ್ದೇಶಕರಿಗೆ ಯಾರೂ ಒಪ್ಪಿಗೆಯಾಗುವುದಿಲ್ಲ. ಅದೇ ಸಂದರ್ಭದಲ್ಲಿ ಹಿಂದೊಮ್ಮೆ ತಮ್ಮ ಮೆಸೆಂಜರಿಗೆ ಫೋಟೋಗಳನ್ನು ಕಳಿಸಿ, ಪಾತ್ರ ಇದ್ದರೆ ಹೇಳಿ ಎಂದಿದ್ದ ಅರ್ಜುನ್ ಯೋಗೇಶ್ ಡೈರೆಕ್ಟರ್ ಶ್ರೀರಾಜ್ʼಗೆ ನೆನಪಾಗುತ್ತಾರೆ. ಸಂಪರ್ಕಿಸಿ ಹೀರೋ ಪಾತ್ರಕ್ಕೆ ಫಿಕ್ಸ್ ಮಾಡುತ್ತಾರೆ. ಅರ್ಜುನ್ ಯೋಗಿ ಚಿತ್ರರಂಗಕ್ಕೆ ತೀರಾ ಹೊಸಬರೇನೂ ಅಲ್ಲ. ಈಗಾಗಲೇ ತೆರೆಗೆ ಬಂದು ಒಳ್ಳೆ ಹೆಸರು ಮಾಡಿರುವ ನನ್ನ ಪ್ರಕಾರ, ಬಿಡುಗಡೆಗೆ ತಯಾರಾಗಿ ಕುತೂಹಲ ಮೂಡಿಸಿರುವ ಚೇಜ಼್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀರೋ ಆಗಲು ಬೇಕಿರುವ ಎಲ್ಲ ಅರ್ಹತೆ ಹೊಂದಿರುವ ಅರ್ಜುನ್ ಗೆ ಲಾಂಗ್ ಡ್ರೈವ್ ನಲ್ಲಿ ಹೇಳಿಮಾಡಿಸಿದಂತಾ ಪಾತ್ರ ದಕ್ಕಿದೆ.
ಇನ್ನು ನಾಯಕಿ ಮತ್ತು ಮತ್ತೊಂದು ಪ್ರಮುಖ ಪಾತ್ರಕ್ಕಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳೋದು ಅಂತಾ ಹುಡುಕಾಡುವ ಹೊತ್ತಿನಲ್ಲಿ ಸಾಕಷ್ಟು ಹುಡುಗಿಯರು ಬಂದು ಭೇಟಿ ಮಾಡುತ್ತಾರೆ. ಬಂದವರಲ್ಲಿ ಅನೇಕರು, ಪಾತ್ರ ಹೇಗಿದೆ? ಕಥೆ ಏನು? ಅಂತಾ ತಲೆ ಕೆಡಿಸಿಕೊಳ್ಳದೆ, ʻಎಷ್ಟು ಕೊಡ್ತೀರಾʼ ಅನ್ನೋದರ ಬಗ್ಗೆಯೇ ಗಮನ ನೀಡಿದ್ದರಂತೆ. ನಮ್ಮ ಸಿನಿಮಾದಲ್ಲಿ ನಟಿಸುವ ಕಲಾವಿದರು ಹಣಕ್ಕಿಂತಾ, ಪಾತ್ರಕ್ಕೆ ಬೆಲೆ ಕೊಡಬೇಕು. ಆರಂಭದಲ್ಲೇ ದುಡ್ಡಿನ ಲೆಕ್ಕ ಹಾಕುವವರು ಮುಂದೆ ಕಥೆಯೊಂದಿಗೆ ಹೇಗೆ ಬೆರೆಯುತ್ತಾರೋ ಅಂತಂದುಕೊಂಡು ಸುಮ್ಮನಾಗುತ್ತಾರೆ. ಆ ಸಮಯದಲ್ಲೇ ಸೀತಾ ವಲ್ಲಭ ಧಾರಾವಾಹಿಯಲ್ಲಿ ನಟಿಸುತ್ತಿರುವ ಸುಪ್ರಿತಾ ಸತ್ಯನಾರಾಯಣ್ ಕಣ್ಣಿಗೆ ಬೀಳಲಾಗಿ, ಕರೆದು ಕತೆ ಹೇಳುತ್ತಿದ್ದಂತೇ ಪ್ರೀತಿಯಿಂದ ಪಾತ್ರವನ್ನು ಒಪ್ಪಿದರಂತೆ. ಮತ್ತೊಂದು ಪಾತ್ರಕ್ಕಾಗಿ ಸಂಘರ್ಷ ಸೀರಿಯಲ್ಲಿನಲ್ಲಿ ಲೀಡ್ ರೋಲ್ ನಿಭಾಯಿಸುತ್ತಿರುವ ತೇಜಸ್ವಿನಿ ಶೇಖರ್ ಆಯ್ಕೆಯಾದರಂತೆ.
ಹೀಗೆ ಒಬ್ಬೊಬ್ಬರಾಗಿ ಚಿತ್ರತಂಡ ಸೇರುವ ಮೂಲಕ ʻಲಾಂಗ್ ಡ್ರೈವ್ʼನ ಚೆಂದದ ಜರ್ನಿ ಆರಂಭವಾಗಿತ್ತು. ಪವನ್ ರಮೀಶೆಟ್ಟಿ ಸಂಕಲನ, ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆಯ ಜವಾಬ್ದಾರಿ ವಹಿಸಿಕೊಂಡರು. ಇನ್ನೂ ಲಾಕ್ ಡೌನ್ ಪ್ರಕ್ರಿಯೆ ಮುಗಿಯುವ ಹೊತ್ತಿಗಾಗಲೇ ತಂಡದ ರಚನೆಯಾಗಿತ್ತು. ಪ್ರೀಪ್ರೊಡಕ್ಷನ್ ಕಾರ್ಯ ಮುಗಿದಿತ್ತು. ಕೊರೋನಾ ಕಾರಣಕ್ಕೇ ಹೇರಲಾಗಿದ್ದ ದಿಗ್ಬಂಧನ ಸಡಿಲಗೊಳ್ಳುತ್ತಿದ್ದಂತೇ ಚಿತ್ರೀಕರಣ ಕೂಡಾ ಆರಂಭವಾಯಿತು. ಅಂದುಕೊಂಡಂತೆಯೇ ಈಗ ಸಿನಿಮಾ ಶೂಟಿಂಗ್ ಕೂಡಾ ಕಂಪ್ಲೀಟ್ ಮಾಡಿದ್ದಾರೆ. ನಾಲ್ಕು ಪ್ರಧಾನ ಪಾತ್ರಗಳ ಸುತ್ತ ʻಲಾಂಗ್ ಡ್ರೈವ್ʼನ ಬ್ಯೂಟಿಫುಲ್ ಲವ್ ಸ್ಟೋರಿ ತೆರೆದುಕೊಳ್ಳುತ್ತದೆ. ನಮ್ಮ ಸುತ್ತಲ ವಾತಾವರಣದಲ್ಲಿ ಘಟಿಸುವ, ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಕತೆ ಈ ಚಿತ್ರದಲ್ಲಿ ಅಡಕಗೊಂಡಿದೆ.
ಸಿನಿಮಾವನ್ನು ಅಪಾರವಾಗಿ ಪ್ರೀತಿಸುವ ಮಂಜುನಾಥ್ ಗೌಡ ಅವರು ಚಿತ್ರಕ್ಕೆ ಕಥೆ ನೀಡಿರುವುದರ ಜೊತೆ ನಿರ್ಮಾಣವನ್ನೂ ಮಾಡಿದ್ದಾರೆ. ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಚಾಂಪಿಯನ್ ಶಿಪ್’ಗಳಲ್ಲಿ ಗೆದ್ದಿರುವ ಮತ್ತು ಸ್ನೇಹಿತರ ವಲಯದಲ್ಲಿ ಜಿಮ್ ಕೀರ್ತಿ ಎಂದೇ ಹೆಸರಾಗಿರುವ ಕೀರ್ತಿ ಗೌಡ ʻಲಾಂಗ್ ಡ್ರೈವ್ʼಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ನಿರ್ಮಾಣದ ಮೇಲ್ವಿಚಾರಣೆಯ ಜೊತೆಗೆ ಚೆಂದದ ಒಂದು ಪಾತ್ರದಲ್ಲೂ ಜಿಮ್ ಕೀರ್ತಿ ಕಾಣಿಸಿಕೊಂಡಿದ್ದಾರೆ.
ಶ್ರೀವತ್ಸ ಶಿಷ್ಯ ಶ್ರೀರಾಜ್ ಡೈರೆಕ್ಟರ್: ನಿರ್ದೇಶಕ ಶ್ರೀರಾಜ್ ಏಕಾಏಕಿ ಚಿತ್ರರಂಗಕ್ಕೆ ಬಂದವರಲ್ಲ. ಏಳನೇ ಕ್ಲಾಸಿನಲ್ಲಿದ್ದಾಗಲೇ ಸಿನಿಮಾರಂಗಕ್ಕೆ ಬರಬೇಕು ಅಂತಾ ಕನಸು ಕಂಡವರು. ಅಪ್ಪನ ಗದರಿಕೆಗೆ ಹೆದರಿ ಸುಮ್ಮನಿದ್ದ ಶ್ರೀರಾಜ್ ಗೆ ಸಿನಿಮಾದ ಸೆಳೆತ ವಿಪರೀತವಾಗಿತ್ತು. ಪಿಯುಸಿ ಓದುವ ಹೊತ್ತಿಗೆ ತಂದೆ ತೀರಿಕೊಂಡರು. ಅದಾದ ನಂತರ ಮನೆಯವರ ಒತ್ತಾಯದ ಕಾರಣಕ್ಕೆ ಕಾಲೇಜಿಗೆ ಹೋಗುತ್ತಿದ್ದರು. ಅದೊಂದು ದಿನ ಅಮ್ಮನ ಮುಂದೆ ನಿಂತು ನಾನು ಬೇರೆ ಕೆಲಸಕ್ಕೆ ಸೇರೋದು ಕಷ್ಟ. ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ನೆಲೆನಿಲ್ಲಬೇಕು ಅಂತಾ ನೇರವಾಗಿ ಹೇಳಿದ್ದರು. ಮಗನ ಮಾತು ಕೇಳಿದ ತಾಯಿ ನಿನ್ನಿಷ್ಟದಂತೆ ಮಾಡು ಅಂತಾ ಹರಸಿದ್ದರು. ಆ ನಂತರ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ನಡೆಸುತ್ತಿದ್ದ ಡೈರೆಕ್ಷನ್ ಕೋರ್ಸಿಗೆ ಸೇರಿದರು. ಜೋಸೈಮನ್, ತಿಪಟೂರು ರಘು, ಸಾಯಿಪ್ರಕಾಶ್ ಮುಂತಾದವರು ಬಂದು ಅಲ್ಲಿ ಪಾಠ ಮಾಡುತ್ತಿದ್ದರು. ಬಹುತೇಕ ಥಿಯರಿಗೇ ಮೀಸಲಾಗಿದ್ದ ಕೋರ್ಸು ಕಂಪ್ಲೀಟೂ ಆಗಿತ್ತು. ಇನ್ನು ಕೆಲಸಕ್ಕೆ ಯಾರ ಬಳಿಯಾದರೂ ಸೇರಬೇಕು ಅಂತಾ ಯೋಚಿಸುತ್ತಿದ್ದ ಹೊತ್ತಿಗೇ ತಮ್ಮ ಆತ್ಮೀಯರಾಗಿದ್ದ ಶಿವಣ್ಣ ಎನ್ನುವವರ ಬೆನ್ನು ಬಿದ್ದು, ಕಾಡಿ ಬೇಡಿ ಹೋಗಿ ನಿಂತಿದ್ದು ರವಿ ಶ್ರೀವತ್ಸ ಎನ್ನುವ ದೈತ್ಯ ನಿರ್ದೇಶಕನ ಮುಂದೆ. ಶ್ರೀವತ್ಸ ಅಷ್ಟು ಸುಲಭಕ್ಕೆ ಯಾರನ್ನೂ ಶಿಷ್ಯರನ್ನಾಗಿ ಸ್ವೀಕರಿಸುವ ವ್ಯಕ್ತಿಯಲ್ಲ. ʻಅಣ್ಣಾ ನೀವೇನೇ ಕೆಲಸ ಹೇಳಿದರೂ ಮಾಡ್ತೀನಿʼ ಅಂತಾ ಗೋಗರೆದ ನಂತರ ಅದೊಂದು ದಿನ ʻಓಕೆʼ ಅಂದಿದ್ದರು. ಅಲ್ಲಿಂದ ಶುರುವಾದ ಕಲಿಕೆ ಹತ್ತು ವರ್ಷಗಳ ಕಾಲ ಮುಂದುವರೆಯಿತು. ರವಿ ಶ್ರೀವತ್ಸ, ಶ್ರೀರಾಜ್ ಅವರನ್ನು ಅಸಿಸ್ಟೆಂಟ್ ಡೈರೆಕ್ಟರ್ ಅಂತಷ್ಟೇ ನೋಡಲಿಲ್ಲ, ಸ್ವಂತ ತಮ್ಮನಂತೆ ಸಲುಹಿದರು. ನಾನು ಬೇರೆ ಡೈರೆಕ್ಟರುಗಳ ಥರಾ ಅಲ್ಲ. ನಿನಗೆ ಸಿನಿಮಾದ ಬಗ್ಗೇ ಏನೇ ಡೌಟಿದ್ದರೂ ಕೇಳು ಎನ್ನುತ್ತಾ ಶ್ರೀರಾಜ್ ಅವರನ್ನು ಪೂರ್ಣ ಪ್ರಮಾಣದಲ್ಲಿ ನಿರ್ದೇಶನ ಮಾಡುವಷ್ಟರ ಮಟ್ಟಿಗೆ ತಯಾರು ಮಾಡಿದರು. ರವಿ ಅವರೊಟ್ಟಿಗಿದ್ದಾಗಲೇ ಹಿರಿಯ ನಿರ್ದೇಶಕ ಕೆ.ವಿ. ರಾಜು ಅವರ ಒಡನಾಟವೂ ಬೆಳೆದಿತ್ತು. ಅದೊಂದು ದಿನ ರವಿ ಶ್ರೀವತ್ಸ ಕರೆದು ʻನೀನಿನ್ನು ನನ್ನ ಸಹಾಯಕನಾಗಿ ಉಳಿಯಬೇಡ. ಹೊರಗೆ ಹೋಗಿ ದುಡಿಮೆ ಶುರು ಮಾಡು. ಸ್ವತಂತ್ರ ನಿರ್ದೇಶಕನಾಗುವ ಎಲ್ಲ ಅರ್ಹತೆಯೂ ನಿನಗಿದೆʼ ಎಂದಿದ್ದರು. ಅಲ್ಲಿಂದ ರೆಕ್ಕೆ ಬಡಿಯಲು ಶುರು ಮಾಡಿದ ಶ್ರೀ ರಾಜ್ ಮೊದಲಿಗೆ ರೈಟರ್ ಆಗಿ ಗುರುತಿಸಿಕೊಂಡರು.
ಅಶ್ವಿನ್ ರಾವ್ ಪಲ್ಲಕ್ಕಿಯವರ ಕ್ಯೂರಿಯಸ್ ಕೇಸಸ್ ಆಫ್ ಎದೆ ಬಡಿತ, ರಾಜ್ ಚರಣ್ ನಟಿಸಿದ್ದ ರತ್ನ ಮಂಜರಿ, ವಿನೋದ್ ಪ್ರಭಾಕರ್ ನಟನೆಯ ಗ್ಯಾಂಬ್ಲರ್ ಸೇರಿದಂತೆ ಒಂದಷ್ಟು ಸಿನಿಮಾಗೆ ಡೈಲಾಗ್ ಬರೆದರು. ನಿರ್ದೇಶನ ವಿಭಾಗದಲ್ಲಿ ದುಡಿದರು. ಬಹುಶಃ ಶ್ರೀರಾಜ್ ಅವರ ಕೆಲಸದ ರೀತಿ, ಶ್ರದ್ಧೆ, ಚುರುಕುತನ, ಕ್ರಿಯಾಶೀಲತೆಗಳನ್ನೆಲ್ಲಾ ದೂರದಿಂದಲೇ ಗಮನಿಸುತ್ತಿದ್ದ ನಿರ್ಮಾಪಕ ಮಂಜುನಾಥ್ ಗೌಡರು, ತಾವೇ ಕತೆ ನೀಡಿ ನಿರ್ದೇಶನದ ಅವಕಾಶ ನೀಡಿದ್ದಾರೆ. ಸಿನಿಮಾದ ಬಗ್ಗೆ ಏನೇನೂ ತಿಳಿದುಕೊಳ್ಳದೆ, ಕ್ಲಾಪ್ ಬೋರ್ಡನ್ನೂ ನೆಟ್ಟಗೆ ಹಿಡಿಯಲು ಬಾರದ ಮಂದಿ ಏಕಾಏಕಿ ನಿರ್ದೇಶನಕ್ಕಿಳಿಯುವ ದುರಂತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಇಂಥವುಗಳ ನಡುವೆ ತಾಳ್ಮೆಯಿಂದ ಹತ್ತಾರು ವರ್ಷ ಕಾದು, ಕೆಲಸ ಕಲಿತು, ಗುರುತಿಸಿಕೊಂಡು ಅವಕಾಶ ಪಡೆದಿರುವ ಶ್ರೀರಾಜ್ ಕನಸಿಟ್ಟು ಸಿನಿಮಾ ಪೂರ್ತಿ ಮಾಡಿದ್ದಾರೆ. ಇವರು ಕೇಳಿದ ಯಾವುದನ್ನೂ ಇಲ್ಲ ಅನ್ನದ ಮಂಜುನಾಥ ಗೌಡರು ಎಲ್ಲವನ್ನೂ ಒದಗಿಸಿ, ಚೆಂದನೆಯ ಸಿನಿಮಾ ಜೀವ ಪಡೆಯಲು ಕಾರಣರಾಗಿದ್ದಾರೆ. ಲಾಂಗ್ ಡ್ರೈವ್ ಬಗ್ಗೆ ಇನ್ನೂ ಸಾಕಷ್ಟು ಕೌತುಕದ ವಿಚಾರಗಳಿದ್ದು, ಇನ್ಮುಂದೆ ಅವುಗಳೆಲ್ಲಾ ಒಂದೊಂದೇ ಅನಾವರಣಗೊಳ್ಳಲಿದೆ….