ರೋಜ್ಹಿ ಕ್ಯಾಜೀ

ಮಾರುಕಟ್ಟೆಯ ವ್ಯಾಪ್ತಿಯನ್ನು ಮೀರಿ ಕೋಟಿಕೋಟಿ ಹಣ-ವರ್ಷಗಳಿಗೆ ಲೆಕ್ಕ ಇಡದೆ ಸಿನಿಮಾ ಮಾಡಿ ಗೆದ್ದವರು ಪ್ರಶಾಂತ್ ನೀಲ್. ಈಗ ಬರುತ್ತಿರುವ ಹೊಸ ನಿರ್ದೇಶಕರೆಲ್ಲಾ ಪ್ರಶಾಂತ್ ನೀಲ್ ಅನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳೋದನ್ನು ಬಿಟ್ಟು ಪೂರ್ತಿ ಆವಾಹಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್ ನೀಲ್ ಆದರೆ ಹುಟ್ಟಾ ಶ್ರೀಮಂತ. ಸಿನಿಮಾದಿಂದಲೇ ದುಡೀಬೇಕು ಅನ್ನೋ ಯಾವ ದರ್ದೂ ಅವರಿಗಿರಲಿಲ್ಲ ಮತ್ತು ಇಲ್ಲ. ಒಂದು ವೇಳೆ ಹಣ ಹೂಡಿದ ನಿರ್ಮಾಪಕ ನನಗೆ ಭಾರ ಹೊರಲು ಸಾಧ್ಯವಿಲ್ಲ ಅಂತಾ ಕೈಚೆಲ್ಲಿ ಕುಂತರೆ ʻನಾನೇ ಮುಂದುವರೆಸಿಕೊಳ್ತೀನಿ. ನೀವು ಖರ್ಚು ಮಾಡಿರೋ ದುಡ್ಡನ್ನು ವಾಪಾಸು ತಗೊಂಡೋಗಿʼ ಅಂತಾ ಬಡ್ಡಿ ಸಮೇತ ಚೆಕ್ಕು ಬರೆದುಕೊಡುವ ಪೈಕಿ. ಅದಕ್ಕೆ ಉದಾಹರಣೆಯೂ ಇದೆ. ಆದರೆ ಕೆಲವು ನಿರ್ದೇಶಕರಿಗೆ ನಿರ್ಮಾಪಕರು ಕೈ ಬಿಟ್ಟರೆ ಚಿತ್ರಾನ್ನಕ್ಕೂ ತತ್ತರಿಸುವಂಥಾ ಪರಿಸ್ಥಿತಿಯಿರುತ್ತದೆ. ಆದರೆ ಸಿನಿಮಾ ಅಂತಾ ಶುರುವಾದ ಮೇಲೆ ಯದ್ವಾತದ್ವಾ ಖರ್ಚು ಮಾಡಿಸಿ ನಿರ್ಮಾಪಕರ ಜೇಬು ಹರಿದುಹಾಕಿಬಿಡುತ್ತಾರೆ…

ನಿರ್ದೇಶಕರ ಅಜಾಗರೂಕತೆ, ಸರಿಯಾದ ಪ್ಲಾನಿಂಗುಗಳಿಲ್ಲದೆ ಅರ್ಧಂಬರ್ಧಕ್ಕೆ ನಿಂತಿರುವ ಸಾಕಷ್ಟು ಸಿನಿಮಾಗಳು ಲೆಕ್ಕಕ್ಕೆ ಸಿಗುತ್ತಿವೆ. ಅಂಥವುಗಳ ಪಟ್ಟಿಗೆ ಸದ್ಯಕ್ಕೆ ಲೂಸ್ ಮಾದ ನಟಿಸುತ್ತಿರುವ ರೋಜಿ ಕೂಡಾ ಸೇರಿಕೊಂಡಂತಿದೆ.

ಲೂಸ್ ಮಾದ ಯೋಗಿಗೆ ಇರುವ ಮಾರ್ಕೆಟ್ಟನ್ನು ಮೀರಿ ಖರ್ಚಾಗುತ್ತಿರುವ ಸಿನಿಮಾ ರೋಜಿ. ಈ ಹಿಂದೆ ಹೆಡ್ ಬುಷ್ ಚಿತ್ರ ಮಾಡಿದ್ದ ಶೂನ್ಯ ರೋಜಿಯ ನಿರ್ದೇಶಕ. ಒಂದೋ ಎರಡೋ ಷೆಡ್ಯೂಲ್ ಮುಗಿಸಿರುವ ರೋಜಿಯ ಬಜೆಟ್ಡು ಅದಾಗಲೇ ಐದಾರು ಕೋಟಿ ಮೀರಿದೆಯಂತೆ. ಹೆಡ್ ಬುಷ್ ಸಿನಿಮಾದ ಆಧಾರದಲ್ಲೇ ನೋಡಿದರೆ ಶೂನ್ಯ ಹೆಸರಿಗೆ ತಕ್ಕಂತೆ ಸೊನ್ನೆಯೇನಲ್ಲ. ಒಂದು ಮಟ್ಟಿಗೆ ಸಿನಿಮಾ ಕಲಿತಿದ್ದಾರೆ ನಿಜ. ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಲೇ ತೆಲುಗು ಡೈರೆಕ್ಟರ್ ಪೂರಿ ಜಗನ್ನಾಥ್ ಜೊತೆಗೆ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಹಾಗಂತಾ ಪೂರಿಯನ್ನೇ ಅನುಕರಿಸಲು ಹೋದರೆ ಕನ್ನಡದ ನಿರ್ಮಾಪಕರು ಸೀದು ಕರಕಲಾಗಿಬಿಡುತ್ತಾರೆ.

ವಿಚಾರ ಇಷ್ಟೇ. ಶೂನ್ಯ ರೋಜಿ ಸಿನಿಮಾಗೆ ವಿಪರೀತ ಖರ್ಚು ಮಾಡಿಸುತ್ತಿದ್ದಾರಂತೆ. ಮಧ್ಯಾಹ್ನ ಎರಡು ಗಂಟೆ ಕಾಲ್ ಶೀಟ್ ಗೆ ಕರೆಸಿ, ಚೆನ್ನೈನಿಂದ ಬರಬೇಕಿದ್ದ ಅದ್ಯಾವುದೋ ಲೆನ್ಸು ಬರೋದು ತಡವಾಯ್ತು ಅಂತಾ ಮಧ್ಯ ರಾತ್ರಿಯಾದರೂ ಶಾಟ್ ತೆಗೆಯದೇ ಕಾಯುತ್ತಾ, ಸೆಟ್ಟಲ್ಲಿದ್ದ ನೂರಾರು ಜನರನ್ನೂ ಕಾಯಿಸಿದ್ದರಂತೆ. ನಡುರಾತ್ರಿ ಲೆನ್ಸ್ ಬಂದು ಇಳಿದಮೇಲೇ ಶೂಟಿಂಗು ಶುರು ಮಾಡಿದ್ದಂತೆ. ಇನ್ನು ಸಿನಿಮಾಗೆ ಸಾವಿರಾರು ಜನ ಜೂನಿಯರ್ ಆರ್ಟಿಸ್ಟುಗಳು, ದುಬಾರಿ ಯೂನಿಟ್ಟುಗಳನ್ನಿಟ್ಟುಕೊಂಡು ವಿಪರೀತ ನಿಧಾನವಾಗಿ ಶೂಟ್ ಮಾಡ್ತಾರಂತೆ… ಹೀಗೆ ಶೂನ್ಯನ ಬಗ್ಗೆ ಹಲವು ಬಗೆಯ ಅಂತೆ ಕಂತೆಗಳು ಕೇಳಿಬರುತ್ತಿವೆ. ಇವೆಲ್ಲದರ ಪ್ರತಿಫಲವಾಗಿ ನಿರ್ಮಾಪಕರು ಯಾವಾಗ ದುಡ್ಡು ರೆಡಿಯಾಗತ್ತೋ ಆಗ ಶೂಟಿಂಗ್ ಪುನರಾರಂಭಿಸುತ್ತೀನಿ ಅಂತಾ ಸುಮ್ಮನಾಗಿದ್ದಾರಂತೆ.

ಹಾಗೆ ನೋಡಿದರೆ ರೋಜಿ ಚಿತ್ರವನ್ನು ನಿರ್ಮಿಸಲು ಬಂದಿರುವ ರಾಜೇಶ್ ಮತ್ತು ವಿನೋದ್ ಸಹೋದರರು ನಿಜಕ್ಕೂ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ಪ್ಯಾಶನ್ ಇಟ್ಟುಕೊಂಡವರು. ಬಟ್ಟೆ ಉದ್ಯಮವನ್ನೇನೋ ನಡೆಸಿಕೊಂಡು ನೆಮ್ಮದಿಯಾಗಿದ್ದವರು ಸಿನಿಮಾದ ಮೇಲಿನ ಪ್ರೀತಿಯಿಂದ ಇಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅದು ಅನವಶ್ಯಕವಾಗಿ ಪೋಲಾದರೆ, ಎಷ್ಟೇ ಶ್ರೀಮಂತನಾದರೂ ತಡೆದುಕೊಳ್ಳೋದು ಕಷ್ಟ.

ಸಿನಿಮಾ ಪತ್ರಿಕಾಗೋಷ್ಟಿಗೆ ಚೆಡ್ಡಿ ಹಾಕಿಕೊಂಡು ಬಂದು ಕೂತು ʻನಾನು ಇರೋದೇ ಹೀಗೆ. ಎಲ್ಲಾ ಪ್ರೆಸ್ ಮೀಟುಗಳಿಗೂ ಇದೇ ಥರಾ ಚೆಡ್ಡಿ ಹಾಕೊಂಡೇ ಬರ್ತೀನಿʼ ಅಂತಾ ದರ್ಪ ತೋರುವ ಶೂನ್ಯ ನಿರ್ಮಾಪಕರಿಗೆ ಅದೇ ಚೆಡ್ಡಿ ಹಾಕಿಸಿ ನಡು ರಸ್ತೆಯಲ್ಲಿ ನಿಲ್ಲಿಸದಿದ್ದರೆ ಸಾಕು!

Comments

Leave a Reply